ಶಿಕ್ಷಕರೇ, ಸ್ವಾತಂತ್ರ್ಯೋತ್ಸವದಂದು ಮಕ್ಕಳಿಗೆ ಯಾವ ಸ್ಪರ್ಧೆ ಏರ್ಪಡಿಸಬಹುದೆಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಒಂದಿಷ್ಟು ಐಡಿಯಾಗಳು
Aug 13, 2024 05:53 PM IST
ಶಿಕ್ಷಕರು ಶಾಲೆಯಲ್ಲಿ ಏನೆಲ್ಲ ಚಟುವಟಿಕೆಗಳನ್ನು ಮಕ್ಕಳಿಗಾಗಿ ಆಯೋಜಿಸಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ.
ಸ್ವಾತಂತ್ರ್ಯ ದಿನಾಚರಣೆಯಂದು ಕೇವಲ ಧ್ವಜಾರೋಹಣ ಮಾಡಿದರೆ ಸಾಲದು. ಜೊತೆಯಲ್ಲಿ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸ ಹಾಗೂ ಮಹತ್ವದ ಬಗ್ಗೆಯೂ ತಿಳಿಸಿಕೊಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಶಾಲೆಯಲ್ಲಿ ಏನೆಲ್ಲಾ ಚಟುವಟಿಕೆಗಳನ್ನು ಮಕ್ಕಳಿಗಾಗಿ ಆಯೋಜಿಸಬಹುದು ಎಂಬ ಮಾಹಿತಿ ಇಲ್ಲಿದೆ.
ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಒಂದಾದ ಭಾರತವು ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ. ಈ ವರ್ಷ ಭಾರತವು 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಈ ದಿನದಂದು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ನಮ್ಮ ಪೂರ್ವಜರು ಮಾಡಿದ ತ್ಯಾಗ - ಬಲಿದಾನಗಳನ್ನು ನೆನೆಯುವಂತಹ ದಿನ. ಶಾಲೆಗಳಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಆ ಸ್ಪರ್ಧೆಗಳ ಭಾಗವಹಿಸುವ ಮೂಲಕ ಮಕ್ಕಳು ದೇಶದ ಇತಿಹಾಸದ ಬಗ್ಗೆ ಹೆಚ್ಚು ತಿಳಿದುಕೊಳ್ಳಲಿ ಎಂಬ ಉದ್ದೇಶವಿರುತ್ತದೆ. ನೀವು ಕೂಡ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಏನೆಲ್ಲ ಸ್ಪರ್ಧೆ ಅಥವಾ ಚಟುವಟಿಕೆಗಳನ್ನು ಇಡಬಹುದು ಎಂದು ಯೋಚಿಸುತ್ತಿದ್ದರೆ ಇಲ್ಲೊಂದಿಷ್ಟು ಐಡಿಯಾಗಳಿವೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯಂದು ನಿಮ್ಮ ಪುಟಾಣಿ ಈ ಥರ ಕಾಣಿಸಿಕೊಂಡರೆ ಚಂದ; ಭಾರತದ ದೇಶಭಕ್ತರ ವೇಷ ಹಾಕಲು ಇಲ್ಲಿದೆ ಐಡಿಯಾ -Fancy Dress Ideas
ಚಿತ್ರಕಲೆ ಸ್ಪರ್ಧೆ: ಈ ಸ್ಫರ್ಧೆಯಲ್ಲಿ ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುವ ಜೊತೆಯಲ್ಲಿ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆ ಎಂದರೆ ಏನೆಲ್ಲ ಕಲ್ಪನೆ ಇದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ ವಿಷಯಗಳನ್ನೇ ಚಿತ್ರಕಲೆ ಸ್ಪರ್ಧೆಗೆ ನೀಡುವ ಮೂಲಕ ಮಕ್ಕಳಲ್ಲಿ ದೇಶಭಕ್ತಿಯ ಭಾವನೆಗಳನ್ನು ಹೆಚ್ಚಿಸಬಹುದಾಗಿದೆ.
ದೇಶಭಕ್ತಿ ಕಿರು ನಾಟಕಗಳು: ಸ್ವಾತಂತ್ರ್ಯ ದಿನಾಚರಣೆಗೆ ಹೆಚ್ಚು ಅರ್ಥವನ್ನು ನೀಡುವ ಕಾರ್ಯವನ್ನು ಈ ಚಟುವಟಿಕೆ ಮಾಡುತ್ತದೆ. ದೇಶಪ್ರೇಮವನ್ನು ಪ್ರದರ್ಶಿಸಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ವಿಷಯಗಳನ್ನಿಟ್ಟು ನಾಟಕ ಮಾಡಿಸುವ ಮೂಲಕ ಮಕ್ಕಳಿಗೆ ನಮ್ಮ ಪೂರ್ವಜರ ತ್ಯಾಗ ಬಲಿದಾನಗಳ ಬಗ್ಗೆ ತಿಳಿಸಲು ಸಾಧ್ಯವಾಗುತ್ತದೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಸ್ವಾತಂತ್ರ್ಯ ಹೋರಾಟಗಾರರು ಪಟ್ಟ ಪಾಡನ್ನು ತಿಳಿದುಕೊಳ್ಳಲು ಸಾಧ್ಯವಿದೆ.
ದೇಶಭಕ್ತಿ ಗೀತೆ ಸ್ಪರ್ಧೆ: ಎಲ್ಲಾ ಭಾಷೆಗಳಲ್ಲಿಯೂ ನಿಮಗೆ ಸಾಮಾನ್ಯವಾಗಿ ದೇಶಭಕ್ತಿ ಗೀತೆಗಳು ಸಿಗುತ್ತವೆ. ಮಕ್ಕಳಲ್ಲಿ ದೇಶಭಕ್ತಿ ಗೀತೆಯನ್ನು ಹಾಡಿಸುವ ಮೂಲಕ ಅವರಲ್ಲಿ ದೇಶದ ಬಗ್ಗೆ ಗೌರವ ಭಾವನೆ ಮೂಡಿಸಲು ಸಾಧ್ಯವಿದೆ.
ಸಾಂಸ್ಕೃತಿಕ ನೃತ್ಯ: ನಮ್ಮಲ್ಲಿರುವ ದೇಶಭಕ್ತಿಯನ್ನು ಪ್ರದರ್ಶಿಸಲು ಇರುವ ಮತ್ತೊಂದು ಮಾರ್ಗವೆಂದರೆ ನೃತ್ಯ. ಹೀಗಾಗಿ ಸ್ವಾತಂತ್ರ್ಯ ದಿನದ ಪ್ರಯುಕ್ತ ದೇಶ ಭಕ್ತಿಗೀತೆಗಳಿಗೆ ಸಾಂಸ್ಕೃತಿಕ ನೃತ್ಯದ ಸ್ಪರ್ಧೆ ಆಯೋಜಿಸಬಹುದಾಗಿದೆ. ಭರತನಾಟ್ಯ, ಕಥಕ್, ಮಣಿಪುರಿ, ಕೂಚಿಪುಡಿ ಸೇರಿದಂತೆ ವಿವಿಧ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸುವ ಮೂಲಕ ಮಕ್ಕಳು ದೇಶದಲ್ಲಿರುವ ಸಾಂಸ್ಕೃತಿಕ ವೈಭವದ ಬಗ್ಗೆ ಅರಿಯಲು ಸಾಧ್ಯವಿದೆ.
ಛದ್ಮವೇಷ ಸ್ಪರ್ಧೆ: ಛದ್ಮವೇಷ ಸ್ಪರ್ಧೆಯ ಮೂಲಕ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರಂತೆ ಅಥವಾ ಭಾರತೀಯ ಯೋಧರಂತೆ ಕಂಗೊಳಿಸಲು ಅವಕಾಶ ನೀಡಬಹುದು. ಇದರಿಂದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದುಕೊಳ್ಳಲು ಮಕ್ಕಳಿಗೆ ಸಾಧ್ಯವಾಗುತ್ತದೆ.
ರಸಪ್ರಶ್ನೆ ಸ್ಪರ್ಧೆ: ಮಕ್ಕಳಿಗೆ ಈ ದಿನದಂದು ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿ ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನೇ ಕೇಳಬೇಕು. ಆಗ ಮಕ್ಕಳು ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ ಇತಿಹಾಸ ಹಾಗೂ ಕುತೂಹಲಕಾರಿ ಅಂಶದ ಬಗ್ಗೆ ಜ್ಞಾನ ಬೆಳೆಸಿಕೊಳ್ಳುತ್ತಾರೆ.
ಸಿನಿಮಾ ಪ್ರದರ್ಶನ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶಾಲೆಗಳಲ್ಲಿ ಸ್ಕ್ರೀನ್ ವ್ಯವಸ್ಥೆ ಇದ್ದರೆ ಪ್ರತಿ ವಾರಾಂತ್ಯ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಸಿನಿಮಾಗಳನ್ನು ಶಾಲೆಗಳಲ್ಲಿ ಪ್ರದರ್ಶಿಸಬೇಕು. ಈ ಸಿನಿಮಾಗಳನ್ನು ನೋಡುವ ಮೂಲಕ ಮಕ್ಕಳು ದೇಶದ ಇತಿಹಾಸವನ್ನು ಅರಿಯುತ್ತಾರೆ. ಬಳಿಕ ನೀವು ಅವರಿಗೆ ಈ ಸಂಬಂಧಿ ಪ್ರಶ್ನೆಗಳನ್ನು ಕೇಳುವ ಮೂಲಕ ಮೌಲ್ಯಮಾಪನವನ್ನೂ ಮಾಡಬಹುದು.
ಕೇವಲ ಇದು ಮಾತ್ರವಲ್ಲದೇ ಕೆಲವೊಂದು ಫನ್ನಿ ಚಟುವಟಿಕೆಗಳನ್ನೂ ಮಕ್ಕಳಿಗೆ ಮಾಡಿಸಬಹುದು. ಧ್ವಜ ಹಿಡಿದು ರಿಲೇ ಸ್ಪರ್ಧೆ, ಆಶು ಭಾಷಣ ಸ್ಫರ್ಧೆ, ತ್ರಿವರ್ಣದ ತಿಂಡಿ ತಯಾರಿಸುವ ಸ್ಫರ್ಧೆ, ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ ಪದಬಂಧ ಸ್ಫರ್ಧೆ ಹೀಗೆ ನಾನಾ ಚಟುವಟಿಕೆಗಳನ್ನು ಶಾಲೆಗಳಲ್ಲಿ ಆಯೋಜಿಸಬಹುದಾಗಿದೆ.
ವಿಭಾಗ