ಶಾಲಾ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಗೆ ಭಾಷಣ ಬೇಕೆ? ಕೇಳುಗರಿಗೆ ದೇಶಭಕ್ತಿ ಉಕ್ಕುವಂತಹ ಈ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಮಾತನಾಡಿ
Aug 08, 2024 03:24 PM IST
ಸ್ವಾತಂತ್ರ್ಯ ದಿನಾಚರಣೆಯಂದು ವಿದ್ಯಾರ್ಥಿಗಳು ಮಾಡಬಹುದಾದ ಭಾಷಣಗಳ ವಿವರ ಇಲ್ಲಿದೆ..
ಸ್ವಾತಂತ್ರ್ಯ ದಿನದಂದು ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ ಭಾಷಣ ಸ್ಪರ್ಧೆ ಆಯೋಜಿಸಲಾಗುತ್ತದೆ. ಈ ಬಾರಿ ಸ್ವಾತಂತ್ರ್ಯೋತ್ಸವಕ್ಕೆ ನಿಮ್ಮ ಮಗು ಯಾವ ವಿಷಯದ ಮೇಲೆ ಭಾಷಣ ಮಾಡಬಹುದು ಎಂದು ನೀವು ಯೋಚಿಸುತ್ತಿದ್ದರೆ ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ.
ಸ್ವಾತಂತ್ರ್ಯ ದಿನಾಚರಣೆಯ ದಿನವು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿಯೂ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಈ ದಿನದಂದು ನಾವು ದೇಶಕ್ಕೆ ಸಿಕ್ಕ ಸ್ವತಂತ್ರವನ್ನು ಸಂಭ್ರಮಿಸುವುದರ ಜೊತೆಯಲ್ಲಿ ನಮ್ಮ ದೇಶಕ್ಕಾಗಿ ಬಲಿದಾನಗೈದ ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುವ ಕಾರ್ಯ ಮಾಡುತ್ತೇವೆ. ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತೇವೆ. ಅದರಲ್ಲೂ ವಿಶೇಷವಾಗಿ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಜೋರಾಗಿರುತ್ತದೆ. ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಲು ಶಾಲೆಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಇವುಗಳಲ್ಲಿ ಭಾಷಣ ಸ್ಪರ್ಧೆ ಕೂಡ ಒಂದು. ಸ್ವಾತಂತ್ರ್ಯ ದಿನಾಚರಣೆಯ ದಿನ ಯಾವ ರೀತಿಯಲ್ಲಿ ಮಕ್ಕಳಿಗೆ ಭಾಷಣ ಕಲಿಸಬೇಕು ಎಂದು ನೀವು ಯೋಚಿಸುತ್ತಿದ್ದರೆ ಇದಕ್ಕೆ ಪರಿಹಾರ ಇಲ್ಲಿದೆ ನೋಡಿ:
ಸ್ವಾತಂತ್ರ್ಯ ದಿನಾಚರಣೆಯ ದಿನದಂದು ನಿಮ್ಮ ಮಗುವಿಗೆ ಶಾಲೆಯಲ್ಲಿ ಭಾಷಣ ಮಾಡುವ ಅವಕಾಶ ಸಿಕ್ಕಿದೆ ಎಂದಾದರೆ ನೀವು ಇನ್ನೊಬ್ಬ ಮಗುವಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಅರಿಯುವ ರೀತಿಯಲ್ಲಿ ಮಕ್ಕಳನ್ನು ಭಾಷಣಕ್ಕೆ ತಯಾರು ಮಾಡಬೇಕು. ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಭಾಷಣ ಮಾಡಲು ಕೆಲವೊಂದು ಐಡಿಯಾಗಳು ಇಲ್ಲಿವೆ.
ವಿಷಯ: ವಿವಿಧತೆಯಲ್ಲಿ ಏಕತೆ
ಗೌರವಾನ್ವಿತ ಶಿಕ್ಷಕರೇ ಹಾಗೂ ನನ್ನ ಸಹಪಾಠಿಗಳೇ, ಇಂದು ನಾವು ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದರೆ ಇದರ ಹಿಂದೆ ಸಾಕಷ್ಟು ಜನರ ಬಲಿದಾನವಿದೆ ಎಂಬುದನ್ನು ಮರೆಯುವಂತಿಲ್ಲ. ನಮ್ಮ ರಾಷ್ಟ್ರವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ಭಾರತದಲ್ಲಿ ಸಂಸ್ಕೃತಿ, ಭಾಷೆ ಹಾಗೂ ಧರ್ಮದಲ್ಲಿ ಸಾಕಷ್ಟು ವೈವಿಧ್ಯತೆಯನ್ನು ಕಾಣಬಹುದಾಗಿದೆ. ಆದರೂ ಕೂಡ ನಾವೆಲ್ಲ ಒಂದಾಗಿ ಏಕತೆಯಿಂದ ಭವ್ಯ ಭಾರತದಲ್ಲಿ ಬಾಳುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಭಾರತವು ಹಿಮದಿಂದ ಆವೃತವಾದ ಹಿಮಾಲಯದಿಂದ ಆರಂಭಿಸಿ ಕೇರಳದ ಕಡಲತೀರದವರೆಗೂ ವ್ಯಾಪಿಸಿದೆ.
ಭಾರತ ಮಾತೆಯ ಮಕ್ಕಳಾದ ನಾವೆಲ್ಲ ಎಂದಿಗೂ ಪರಸ್ಪರರ ಧರ್ಮ, ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಸಾಮರಸ್ಯದಿಂದ ಬಾಳಿದರೆ ಮಾತ್ರ ನಾವು ಶತ್ರುಗಳನ್ನು ಸೆದೆಬಡಿಯಲು ಸಾಧ್ಯವಿದೆ. ಅಲ್ಲದೇ ನಮ್ಮ ಪೂರ್ವಜರು ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟಿರುವುದು ಇಂದು ನಾವು ಧರ್ಮಕ್ಕಾಗಿ , ಭಾಷೆಗಾಗಿ ಹೋರಾಡಲಿ ಎಂದಲ್ಲ. ಬದಲಾಗಿ ಭಾರತದಲ್ಲಿ ಒಗ್ಗಟ್ಟಿನಿಂದ ಬಾಳಲಿ ಎಂದಾಗಿದೆ. ಹೀಗಾಗಿ ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸಿನ ಭಾರತ ನಿರ್ಮಿಸಲು ಒಂದಾಗಬೇಕಿದೆ. ಸ್ವಾತಂತ್ರ್ಯ ದಿನವಾದ ಇಂದು ನಾವು ದೇಶದಲ್ಲಿ ಏಕತೆ, ಶಾಂತಿ ಹಾಗೂ ಅಭಿವೃದ್ಧಿಯನ್ನು ಸಾಧಿಸಲು ಒಂದಾಗಿ ಪ್ರತಿಜ್ಞೆ ತೊಡೋಣ. ಉಜ್ವಲ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಒಂದಾಗೋಣ . ಜೈ ಹಿಂದ್..!
ವಿಷಯ: ಭವಿಷ್ಯ ಭಾರತ ನಿರ್ಮಾಣದಲ್ಲಿ ಯುವಜನತೆಯ ಕೊಡುಗೆ
ಗೌರವಾನ್ವಿತ ಶಿಕ್ಷಕರೇ ಹಾಗೂ ನನ್ನ ಸಹಪಾಠಿಗಳೇ, ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವ ಈ ಶುಭ ಸಂದರ್ಭದಲ್ಲಿ ನಾವು ಭವಿಷ್ಯದ ಭಾರತ ನಿರ್ಮಾಣದಲ್ಲಿ ಯುವಜನತೆಯ ಕೊಡುಗೆ ಹೇಗಿರಬೇಕು ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದೇನೆ. ಯುವ ಜನತೆ ಎಂದರೆ ಭವಿಷ್ಯದ ಭಾರತ ನಿರ್ಮಾಣದ ವಾಸ್ತು ಶಿಲ್ಪಿಗಳಿದ್ದಂತೆ. ಇದೇ ಕಾರಣಕ್ಕೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಹಿರಿಯರು ಹೇಳುತ್ತಾರೆ. ಭಾರತದ ಮುಂದಿನ ಸತ್ಪ್ರಜೆಗಳಾಗಬೇಕಿರುವ ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವುದು ತುಂಬಾನೇ ಮುಖ್ಯವಾಗಿದೆ. ಸದೃಢ ಹಾಗೂ ಸಮೃದ್ಧ ಭಾರತವನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ.
ಭಾರತವು ಈಗಾಗಲೇ ಡಿಜಿಟಲ್ ಇಂಡಿಯಾದತ್ತ ಮುಖ ಮಾಡಿದೆ. ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ವೇಗದಲ್ಲಿ ಮುನ್ನುಗ್ಗುತ್ತಿದೆ. ಭಾರತದ ಯುಪಿಐ ವ್ಯವಸ್ಥೆಯು ವಿದೇಶಗಳಲ್ಲಿಯೂ ಮನೆ ಮಾತಾಗಿದೆ. ಸ್ವದೇಶಿ ನಿರ್ಮಿತ ವಸ್ತುಗಳಿಗೆ ವಿದೇಶಗಳಲ್ಲಿ ಮನ್ನಣೆ ದೊರಕುತ್ತಿದೆ. ಇದೇ ರೀತಿ ಭಾರತವನ್ನು ಇನ್ನಷ್ಟು ಉತ್ತುಂಗಕ್ಕೆ ಒಯ್ಯುವ ಕಾರ್ಯ ನಮ್ಮಿಂದ ಆಗಬೇಕಿದೆ. ಭಾರತದ ಆರ್ಥಿಕತೆಯನ್ನು ಸದೃಢಗೊಳಿಸಲು ನಾವೆಲ್ಲರೂ ಕೊಡುಗೆ ನೀಡಬೇಕಿದೆ. ಶಿಕ್ಷಣ ಹಾಗೂ ಕೌಶಲ್ಯಗಳ ವಿಚಾರದಲ್ಲಿ ನಾವು ಇನ್ನಷ್ಟು ಸಾಧನೆಗಳನ್ನು ಮಾಡಬೇಕಿದೆ. ಅಸಮಾನತೆ, ಬಡತನ ಹಾಗೂ ಸಾಮಾಜಿಕ ಅನ್ಯಾಯಗಳಂತಹ ಪಿಡುಗುಗಳನ್ನು ದೂರ ಸರಿಸಿ ನಾವು ಸಮೃದ್ಧ ಭಾರತವನ್ನು ಕಟ್ಟಬೇಕಿದೆ.
ಸ್ಮೇಹಿತರೇ, ಭಾರತವ ಭವಿಷ್ಯ ನಮ್ಮ ನಿಮ್ಮೆಲ್ಲರ ಕೈಯಲ್ಲಿದೆ. ಇದನ್ನು ಜೋಪಾನವಾಗಿ ಕಾಯ್ದುಕೊಳ್ಳೋಣ. ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಬಾಳೋಣ. ಅಭಿವೃದ್ಧಿ ಹೊಂದಿ ಭಾರತ ನಿರ್ಮಿಸೋಣ ಜೈ ಹಿಂದ್..!
ವಿಷಯ: ಡಿಜಿಟಲ್ ಇಂಡಿಯಾ: ಉಜ್ವಲ ಇಂಡಿಯಾ
ತಂತ್ರಜ್ಞಾನ ಈಗ ಎಲ್ಲರ ಅಂಗೈಯಲ್ಲೇ ಇದೆ. ನಮ್ಮ ಬೆರಳ ತುದಿಯಲ್ಲಿ ವಿಶ್ವದ ಮೂಲೆ ಮೂಲೆಯ ಮಾಹಿತಿಯನ್ನು ಕಲೆ ಹಾಕಿಕೊಡುವಷ್ಟರ ಮಟ್ಟಿಗೆ ತಂತ್ರಜ್ಞಾನ ಮುಂದುವರಿದಿದೆ. ಆದರೆ, ಭಾರತದಲ್ಲಿ ಈ ತಂತ್ರಜ್ಞಾನದ ಲಾಭವನ್ನು ಎಲ್ಲರೂ ಪಡೆಯುತ್ತಿಲ್ಲ. ಕೇಂದ್ರ ಸರ್ಕಾರವು ಡಿಜಿಟಲ್ ಇಂಡಿಯಾಗೆ ಹೆಚ್ಚಿನ ಒತ್ತು ನೀಡುತ್ತಿದೆಯಾದರೂ ಸಹ ನಮ್ಮ ಹಿರಿಯ ಪೀಳಿಗೆ ಡಿಟಿಜಲ್ ಯುಗದಿಂದ ಅಂತರ ಕಾಯ್ದುಕೊಳ್ಳುತ್ತಲೇ ಬರುತ್ತಿದೆ.
ಭಾರತದ ಯುವ ಪೀಳಿಗೆ ಎನಿಸಿಕೊಂಡಿರುವ ನಾವು ಡಿಜಿಟಲ್ ಅಂತರವನ್ನು ಕಡಿಮೆ ಮಾಡುವ ಜವಾಬ್ದಾರಿಯನ್ನು ಹೊರಬೇಕಿದೆ. ಯಾರಿಗೆ ತಂತ್ರಜ್ಞಾನದ ಅರಿವು ಇಲ್ಲವೋ ಅಂಥವರ ಜೀವನದಲ್ಲಿ ನಾವು ಡಿಜಿಟಲ್ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕಿದೆ. ಈ ಮೂಲಕ ನಮ್ಮ ಹಿರಿಯ ಪೀಳಿಗೆಯನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡುವ ಹೊಣೆ ನಮ್ಮ ಮೇಲಿದೆ. ಗ್ರಾಮೀಣ ಭಾರತದಲ್ಲಿ ಈ ಸಮಸ್ಯೆ ಅತಿಯಾಗಿದ್ದು ಈ ಸಮಸ್ಯೆಯನ್ನು ಈಗಿನಿಂದಲೇ ಬಗೆಹರಿಸುವ ಕಾರ್ಯ ನಮ್ಮಿಂದ ಆಗಬೇಕಿದೆ.
ಯಾರ ಮನಸ್ಸಿಗೂ ಘಾಸಿಯುಂಟು ಮಾಡದೆಯೇ, ತಂತ್ರಜ್ಞಾನ ಬಳಕೆ ಹೇಗೆ ಮತ್ತು ಅದರ ಮಹತ್ವ ಏನು ಎನ್ನುವುದನ್ನು ಕಲಿಸೋಣ. ಸಮಾಜದಲ್ಲಿ ಬೆಳೆಯುತ್ತಿರುವ ಈ ಡಿಜಿಟಲ್ ಅಂತರಕ್ಕೆ ನಾವೇ ಕೊನೆ ಹಾಡೋಣ. ಯುವ ಜನತೆಯಾಗಿ ನಾವು ಡಿಜಿಟಲ್ ಕ್ರಾಂತಿಯನ್ನು ಸಾಧಿಸುವ ಮೂಲಕ ಉಜ್ವಲ ಭಾರತ ನಿರ್ಮಾಣಕ್ಕೆ ಮೆಟ್ಟಿಲಾಗೋಣ. ಜೈ ಹಿಂದ್..!
ವಿಷಯ: ಪರಿಸರ ಕ್ರಾಂತಿ: ಕಾಪಾಡೋಣ ನಮ್ಮ ಭಾರತ
ನಮ್ಮ ಹಿಂದಿನ ತಲೆಮಾರಿನವರು ತಮ್ಮ ರಕ್ತವನ್ನೇ ಸುರಿಸಿ ಬ್ರಿಟೀಷರ ಕಪಿಮುಷ್ಠಿಯಲ್ಲಿದ್ದ ನಮ್ಮ ಭಾರತವನ್ನು ದಾಸ್ಯದಿಂದ ಮುಕ್ತಿಗೊಳಿಸಿದ್ದಾರೆ. ಸಾಕಷ್ಟು ಜನರ ಬಲಿದಾನದ ಸಂಕೇತದಂತಿರುವ ನಮ್ಮ ಭಾರತವನ್ನು ಜೋಪಾನವಾಗಿ ಕಾಯ್ದುಕೊಳ್ಳಬೇಕಾದ ನಾವು ಪರಿಸರ ಬಿಕ್ಕಟ್ಟಿಗೆ ಕಾರಣವಾಗಿದ್ದೇವೆ. ಹವಾಮಾನ ಬದಲಾವಣೆ, ಮಾಲಿನ್ಯ ಹಾಗೂ ಅರಣ್ಯ ನಾಶದಿಂದಾಗಿ ನಮ್ಮ ಪರಿಸರ ಮಲಿನಗೊಳ್ಳುತ್ತಿದೆ. ಈ ಬಗ್ಗೆ ಈಗಿನಿಂದಲೇ ಸೂಕ್ತ ಕ್ರಮ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ.
ಯುವಜನತೆಯಾಗಿರುವ ನಾವುಗಳು ನಮ್ಮ ಮುಂದಿನ ಪೀಳಿಗೆಗೂ ಈ ಭಾರತವನ್ನು ಸುರಕ್ಷಿತವಾಗಿ ಹಸ್ತಾಂತರಿಸಬೇಕಿದೆ. ಇದಕ್ಕಾಗಿಯಾದರೂ ನಾವು ನಮ್ಮ ದೈನಂದಿನ ಜೀವನದಲ್ಲಿ ಕೆಲ ಪರಿಸರ ಸ್ನೇಹಿ ಕಾರ್ಯವನ್ನು ಮಾಡಬೇಕಿದೆ. ನೀರು ಹಾಗೂ ಇಂಧನಗಳ ಪೋಲನ್ನು ತಡೆಯಬೇಕಿದೆ. ಹೆಚ್ಚೆಚ್ಚು ಮರಗಳನ್ನು ನೆಟ್ಟು ನಮ್ಮ ಅರಣ್ಯ ಸಂಪತ್ತನ್ನು ರಕ್ಷಿಸಬೇಕಿದೆ. ಮರು ಬಳಕೆಯಾಗುವಂತಹ ವಸ್ತುಗಳನ್ನು ಬಳಸುವ ಮೂಲಕ ತ್ಯಾಜ್ಯ ನಿರ್ವಹಣೆಯ ಹಾದಿಯನ್ನು ಸುಗಮಗೊಳಿಸಬೇಕಿದೆ.
ಪರಿಸರ ಸ್ನೇಹಿ ಭಾರತ ನಿರ್ಮಾಣಕ್ಕೆ ನಾವೆಲ್ಲ ಕೈ ಜೋಡಿಸೋಣ. ಹಸಿರು ಶಕ್ತಿಯನ್ನು ಹೆಚ್ಚಿಸಿ ಮುಂದಿನ ಪೀಳಿಗೆಯ ಆರೋಗ್ಯವನ್ನು ಕಾಪಾಡುವ ಶಪಥ ತೊಡೋಣ. ಜೈ ಹಿಂದ್.
ವಿಷಯ: ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ
ಇಂದು ನಾವೆಲ್ಲ ಸೇರಿ ಹೆಮ್ಮೆಯಿಂದ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ವೀರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ಬಲಿದಾನಗಳೇ ಕಾರಣ. ಬ್ರಿಟೀಷರ ವಸಾಹತುಶಾಹಿ ಆಡಳಿತದ ವಿರುದ್ಧ ಪಟ್ಟು ಬಿಡದೇ ಹೋರಾಡಿದ ಸ್ವಾತಂತ್ರ್ಯ ಯೋಧರು ತಮ್ಮ ಜೀವವನ್ನೇ ಪಣಕ್ಕಿಟ್ಟು ಅಮೂಲ್ಯ ಭಾರತವನ್ನು ದುಷ್ಟರ ಕೈಯಿಂದ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿಯೇ ಬಿಟ್ಟರು.
ಸ್ವಾತಂತ್ರ್ಯ ದಿನಾಚರಣೆಯ ಈ ದಿನದಂದು ನಾವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ - ಬಲಿದಾನಗಳನ್ನು ಸ್ಮರಿಸಿ ಗೌರವಿಸಬೇಕಿದೆ. ಪ್ರತಿಯೊಬ್ಬ ಪ್ರಜೆಗೂ ಸಮಾಜದಲ್ಲಿ ಸಮಾನ ಅವಕಾಶ ಸಿಗಬೇಕು ಎಂಬ ಸಮಾಜವನ್ನು ನಿರ್ಮಿಸುವಲ್ಲಿ ನಾವು ನೀವೆಲ್ಲರೂ ಒಂದಾಗಬೇಕಿದೆ.
ದೇಶಭಕ್ತಿ, ಏಕತೆ ಮತ್ತು ತ್ಯಾಗದ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸೋಣ. ಸಮಾನತೆ ಮತ್ತು ನ್ಯಾಯ ಇರುವ ದೇಶವನ್ನು ಕಟ್ಟಲು ಶ್ರಮಿಸೋಣ. ಪ್ರತಿಯೊಬ್ಬ ಪ್ರಜೆಯೂ ಯಶಸ್ವಿಯಾಗಲು ಸಮಾನ ಅವಕಾಶಗಳನ್ನು ಹೊಂದಿರುವ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡೋಣ. ಜೈ ಹಿಂದ್.
ವಿಭಾಗ