logo
ಕನ್ನಡ ಸುದ್ದಿ  /  ಜೀವನಶೈಲಿ  /  78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ: ಧ್ವಜಾರೋಹಣ ಮಾಡುವ ಮುನ್ನ ನೆನಪಿರಲಿ ಈ ರಾಷ್ಟ್ರಧ್ವಜ ನಿಯಮಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ: ಧ್ವಜಾರೋಹಣ ಮಾಡುವ ಮುನ್ನ ನೆನಪಿರಲಿ ಈ ರಾಷ್ಟ್ರಧ್ವಜ ನಿಯಮಗಳು

HT Kannada Desk HT Kannada

Aug 15, 2024 06:14 AM IST

google News

ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ಕೆಲವು ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ.

  • ಭಾರತವು 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಿನಲ್ಲಿದೆ. ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜವನ್ನು ಹಾರಿಸುವ ಮುನ್ನ ಭಾರತದಲ್ಲಿ ಧ್ವಜ ಸಂಹಿತೆಯ ಅಡಿಯಲ್ಲಿ ಯಾವೆಲ್ಲ ನಿಯಮಗಳನ್ನು ವಿಧಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ.

ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ಕೆಲವು ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ಕೆಲವು ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತವು ತನ್ನ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳಲು ಇನ್ನೇನು ಬೆರಳೆಣಿಕೆ ದಿನಗಳು ಮಾತ್ರ ಬಾಕಿ ಉಳಿದಿದೆ. ಸರಿ ಸುಮಾರು ಎರಡು ಶತಮಾನಗಳ ಕಾಲ ಬ್ರಿಟೀಷರ ದಾಸ್ಯದಲ್ಲಿದ್ದ ಭಾರತವು 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದುಕೊಂಡಿತು. ಸ್ವಾತಂತ್ರ್ಯ ದಿನಾಚರಣೆ ಎಂದಾಕ್ಷಣ ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಸಾಕಷ್ಟು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಕಣ್ಮುಂದೆ ಸುಳಿದಾಡುತ್ತದೆ. ಮಹಾತ್ಮಾ ಗಾಂಧಿಯವರ ಅಹಿಂಸಾ ಚಳವಳಿಗಳ ಮೂಲಕ ಭಾರತವು ಬ್ರಿಟೀಷರ ದಾಸ್ಯದಿಂದ ಮುಕ್ತಗೊಂಡಿತ್ತು. ಹೀಗಾಗಿ ಈ ದಿನವನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಭಾರತ ತ್ರಿವರ್ಣ ಧ್ವಜವನ್ನು ಹಾರಿಸಿ ಗೌರವ ವಂದನೆ ಸಲ್ಲಿಸಲಾಗುತ್ತದೆ. ನೀವು ಕೂಡ ಈ ವರ್ಷ ಭಾರತದ ಬಾವುಟ ಹಾರಿಸಬೇಕು ಎಂದುಕೊಂಡಿದ್ದರೆ ಅದಕ್ಕೂ ಮುನ್ನ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಅರಿಯಲೇಬೇಕು.

ಆಗಿನ ಕುರುಕ್ಷೇತ್ರದ ಸಂಸದರಾಗಿದ್ದ ನವೀನ್ ಜಿಂದಾಲ್ ಅವರ ಸುದೀರ್ಘ ಕಾನೂನು ಹೋರಾಟದ ಫಲವಾಗಿ ಭಾರತದ ಧ್ವಜ ಸಂಹಿತೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಯಿತು. ಈ ಬದಲಾವಣೆಯ ಭಾಗವಾಗಿ ಪ್ರತಿಯೊಬ್ಬ ಭಾರತೀಯನು ತನ್ನ ಮನೆಯಲ್ಲಿ ಧ್ವಜಾರೋಹಣ ಮಾಡಬಹುದು ಎಂಬ ಹಕ್ಕನ್ನು ನೀಡಲಾಗಿದೆ. ಕೇಂದ್ರ ಸರ್ಕಾರವು 2002ರಲ್ಲಿ ಭಾರತದ ಧ್ವಜ ಸಂಹಿತೆಯಲ್ಲಿ ತಿದ್ದುಪಡಿ ಮಾಡಲು ಆದೇಶವನ್ನು ನೀಡಿತ್ತು.

ಇದಾದ ಬಳಿಕ ಅಂದರೆ 2021ರ ಡಿಸೆಂಬರ್ 30ರಂದು ಭಾರತ ಧ್ವಜ ಸಂಹಿತೆಯಲ್ಲಿ ಮತ್ತೊಂದು ಬದಲಾವಣೆ ಮಾಡಿತು. ಯಂತ್ರಗಳಿಂದ ಮಾಡಲ್ಪಟ್ಟ ಅಥವಾ ಪಾಲಿಸ್ಟರ್ ಬಟ್ಟೆಗಳಿಂದ ತಯಾರಿಸಿದ ರಾಷ್ಟ್ರಧ್ವಜಗಳನ್ನು ಹಾರಿಸಲು ಅವಕಾಶ ನೀಡಲಾಯಿತು. ಸಾರ್ವಜನಿಕ, ಖಾಸಗಿ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಧ್ವಜದ ಘನತೆ ಹಾಗೂ ಗೌರವಕ್ಕೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಎಲ್ಲಾ ದಿನಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಅವಕಾಶ ನೀಡಲಾಗಿದೆ.

ರಾಷ್ಟ್ರಧ್ವಜವು ಆಯತಾಕಾರದಲ್ಲಿಯೇ ಇರಬೇಕು. ಧ್ವಜದ ಗಾತ್ರ ಯಾವುದೇ ಇರಬಹುದು . ಆದರೆ ಎತ್ತರ ಹಾಗೂ ಉದ್ದದ ನಡುವಿನ ಅನುಪಾತವು 3:2 ಆಗಿರುವುದು ಕಡ್ಡಾಯ. ರಾಷ್ಟ್ರಧ್ವಜವನ್ನು ಯಾವುದೇ ಸಮಯದಲ್ಲಿ ಪ್ರದರ್ಶಿಸುವಾಗಲೂ ಅದರ ಘನತೆ ಹಾಗೂ ಗೌರವಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯುಂಟಾಗಬಾರದು ಹಾಗೂ ರಾಷ್ಟ್ರಧ್ವಜ ಸ್ಪಷ್ಟವಾಗಿ ಗೋಚರವಾಗುವಂತೆಯೇ ಪ್ರದರ್ಶಿಸಬೇಕು. ಯಾವುದೇ ಕಾರಣಕ್ಕೂ ಹರಿದು ಹೋದ, ಕೊಳೆಯಾದ ರಾಷ್ಟ್ರಧ್ವಜ ಪ್ರದರ್ಶಿಸುವಂತಿಲ್ಲ.

ಭಾರತದ ತ್ರಿವರ್ಣ ಧ್ವಜಕ್ಕೆ ಸಮನಾದ ಎತ್ತರಕ್ಕೆ ಇನ್ನಿತರ ಯಾವುದೇ ಧ್ವಜವನ್ನೂ ಹಾರಿಸುವಂತಿಲ್ಲ. ಏಕಕಾಲದಲ್ಲಿ ಭಾರತದ ತ್ರಿವರ್ಣ ಧ್ವಜದ ಜೊತೆಯಲ್ಲಿ ಮತ್ತೊಂದು ಧ್ವಜ ಹಾರಿಸಲು ಅವಕಾಶವಿಲ್ಲ.

ಧ್ವಜ ಸಂಹಿತೆಯ ಭಾಗ III ರ ವಿಭಾಗ IX ರಲ್ಲಿ ತಿಳಿಸಿರುವಂತೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಮುಂತಾದ ಗಣ್ಯರನ್ನು ಹೊರತುಪಡಿಸಿ ಇನ್ನಿತರ ಯಾರದ್ದೇ ವಾಹನದ ಮೇಲೂ ಧ್ವಜವನ್ನು ಹಾರಿಸಬಾರದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ