ಸ್ಯಾಮ್‌ಸಂಗ್ ಬಳಕೆದಾರರೇ ಗಮನಿಸಿ; ನಿಮ್ಮ ಫೋನ್‌ಗೆ ಸೈಬರ್ ದಾಳಿ ಸಾಧ್ಯತೆ ಹೆಚ್ಚು; ಹೀಗಿದೆ ಸರ್ಕಾರದ ಎಚ್ಚರಿಕೆಯ ಸಂದೇಶ
Dec 18, 2023 06:22 PM IST
ಸಾಂಕೇತಿಕ ಚಿತ್ರ
- ನೀವು ಸ್ಯಾಮ್‌ಸಂಗ್ ಫೋನ್ ಅದರಲ್ಲೂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಳಸುತ್ತಿದ್ದರೆ ಖಂಡಿತ ಈ ಸ್ಟೋರಿ ಓದಲೇಬೇಕು. ಸ್ಯಾಮ್‌ಸಂಗ್ ಫೋನ್‌ಗೆ ಸೈಬರ್ ದಾಳಿ ಸಾಧ್ಯತೆ ಹೆಚ್ಚು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಅಲ್ಲದೆ ಈಗಾಗಲೇ ಹಲವರು ಸೈಬರ್ ದಾಳಿಗೆ ಒಳಗಾಗಿ ತಮ್ಮ ಫೋನ್‌ನಲ್ಲಿರುವ ಫೋಟೊ, ವೈಯಕ್ತಿಕ ಮಾಹಿತಿಗಳನ್ನು ಕಳೆದುಕೊಂಡಿದ್ದಾರೆ.
ಸ್ಯಾಮ್‌ಸಂಗ್ ಫೋನ್ ಬಳಕೆದಾರರಿಗೆ ಇಲ್ಲಿದೆ ಕಹಿ ಸುದ್ದಿ. ಸ್ಯಾಮ್‌ಸಂಗ್ ಬಳಕೆ ಮಾಡುವವರಿಗೆ ಸರ್ಕಾರ ನೀಡಿದೆ ಎಚ್ಚರಿಕೆಯ ಗಂಟೆ. ಅದರಲ್ಲೂ ನೀವು ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್ ಬಳಸುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಬೇಕು. ಇತ್ತೀಚಿನ ವರದಿಗಳ ಪ್ರಕಾರ ಸ್ಯಾಮ್‌ಸಂಗ್ ಫೋನ್ ಹೆಚ್ಚು ಹ್ಯಾಕ್ ಆಗುತ್ತಿದೆ. ವಿಲಕ್ಷಣ ಹ್ಯಾಕಿಂಗ್ ಘಟನೆಗಳನ್ನು ಸ್ಯಾಮ್‌ಸಂಗ್ ಹೊಂದಿರುವವರು ಎದುರಿಸುತ್ತಿದ್ದಾರೆ. ಕೆಲವು ಬಳಕೆದಾರರು ತಮ್ಮ ಫೋನ್‌ಗೆ ಅನಧಿಕೃತ ಪ್ರವೇಶವನ್ನು ಗಮನಿಸಿದ್ದಾರೆ. ಕೆಲವರ ಫೋನ್‌ನಲ್ಲಿದ್ದ ಫೋಟೊಗಳು ಇದ್ದಕ್ಕಿದ್ದಂತೆ ಮಾಯವಾಗಿದೆ. ಇನ್ನೂ ಕೆಲವರ ಫೋನ್‌ನಲ್ಲಿ ಪಾಸ್‌ಕೋಡ್, ಫಿಂಗರ್ ಪ್ರಿಂಟ್‌ಗಳು ಡಿಲಿಟ್ ಆಗುತ್ತಿವೆ.
'ನಾನು ಮೊಬೈಲ್ ಬಳಸುವಾಗ ಒಂದು ದಿನ ಇದ್ದಕ್ಕಿದ್ದಂತೆ ಇನ್‌ಕರೆಕ್ಟ್ ಪಾಸ್‌ವರ್ಡ್ ಎಂಬ ಮೆಸೇಜ್ ಬಂದಿರುವುದು ಗಮನಿಸಿದೆ. ನನಗೆ ಮೊಬೈಲ್ ಪಾಸ್‌ವರ್ಡ್ ಮರೆತು ಹೋಗಲು ಸಾಧ್ಯವೇ ಇಲ್ಲ. ಅಲ್ಲದೇ ನಾನು ಪಾಸ್‌ವರ್ಡ್ ಬದಲಿಸಲೂ ಇಲ್ಲ. ಸರಿ ಬೇರೆ ಮಾರ್ಗ ಟ್ರೈ ಮಾಡೋಣ ಅಂದುಕೊಂಡು ಫಿಂಗರ್‌ಪ್ರಿಂಟ್ ಸೆನ್ಸಾರ್ ಬಳಸಿದ್ರು ಕೂಡ ಪ್ರಯೋಜನವಾಗಿಲ್ಲʼ ಎಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಳಕೆದಾರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೇ ಅವರು 'ನನಗೆ ಅರಿವಿಲ್ಲದೇ ನನ್ನ ಮೊಬೈಲ್ ಪಾಸ್‌ವರ್ಡ್ ಅನ್ನು ಯಾರು ಬದಲಿಸಲು ಸಾಧ್ಯ, ನನ್ನ ಮೊಬೈಲ್‌ನಲ್ಲಿ ಫೋಟೊಗಳು, ಎಸ್‌ಎಂಎಸ್‌ಗಳು ಸೇರಿದಂತೆ ಹಲವು ವೈಯಕ್ತಿಕ ಮಾಹಿತಿಗಳಿವೆ. ಈ ಅನಧಿಕೃತ ಪ್ರವೇಶವನ್ನು ತಡೆಯುವುದು ಮುಖ್ಯವಾಗಿದೆ. ಕೂಡಲೇ ಕ್ರಮ ತೆಗೆದುಕೊಳ್ಳುವ ಉದ್ದೇಶದಿಂದ ನಾನು ಈ ಬಗ್ಗೆ ಆನ್‌ಲೈನ್‌ನಲ್ಲಿ ಚೆಕ್ ಮಾಡಿದೆʼ ಎಂದು ಅವರು ಬರೆದುಕೊಂಡಿದ್ದಾರೆ.
ʼಈ ಬಗ್ಗೆ ತಿಳಿಯಲು ಹೋದ ನನಗೆ ನಿಜಕ್ಕೂ ಗಾಬರಿ ಆಯ್ತು. ನನ್ನಂತೆ ಹಲವರು ಇಂತಹ ಸಮಸ್ಯೆಗಳನ್ನು ಎದುರಿಸಿದ್ದರು. ಇದು ವ್ಯಾಪಕವಾಗಿ ಹಬ್ಬುತ್ತಿರುವ ಸೈಬರ್ ದಾಳಿಯ ಸ್ವರೂಪವನ್ನು ಬಿಚ್ಚಿಟ್ಟಿತ್ತು. ಹೊಸ ಹ್ಯಾಕರ್‌ಗಳು ಫೋನ್‌ಗೆ ಪ್ರವೇಶ ಮಾಡುತ್ತಿದ್ದಾರೆ. ನಮ್ಮ ಸ್ವಂತ ಮೊಬೈಲ್‌ನಿಂದಲೂ ಮಾಹಿತಿ ಕದಿಯುವುದು ನಿಜಕ್ಕೂ ಆಘಾತಕಾರಿʼ ಎಂದು ಅವರು ಹೇಳಿಕೊಂಡಿದ್ದಾರೆ.
ಸರ್ಕಾರದ ಎಚ್ಚರಿಕೆಯ ಸಂದೇಶ ಹೀಗಿದೆ
ಈ ನಡುವೆ ಭಾರತದ ಸಿಇಆರ್‌ಟಿ-ಇನ್ ವಿಭಾಗವು ಸೈಬರ್ ಸುರಕ್ಷತೆಯ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಹೊಂದಿದೆ. ಅಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಳಕೆದಾರರಿಗೆ ಅವರ ಮೊಬೈಲ್ ಡೇಟಾಗೆ ಸೆಕ್ಯೂರಿಟಿ ಥ್ರೆಟ್ ಇರುವ ಬಗ್ಗೆ ಹೆಚ್ಚಿನ ಅಪಾಯದ ಎಚ್ಚರಿಕೆಯನ್ನೂ ನೀಡಿದೆ. ಈ ಅಪಾಯವನ್ನು ಕಡಿಮೆ ಮಾಡಲು ಆಪರೇಟಿಂಗ್ ಸಿಸ್ಟಮ್ (OS) ಮತ್ತು ಫರ್ಮ್‌ವೇರ್ ಅನ್ನು ತುರ್ತಾಗಿ ನವೀಕರಿಸುವ ಅಗತ್ಯವನ್ನು ಒತ್ತಿ ಹೇಳಿದೆ.
ಸ್ಯಾಮ್‌ಸಂಗ್ ಅಂಡ್ರಾಯ್ಡ್ ಆವೃತ್ತಿಗಳಾದ 11, 12, 13 and 14ರಲ್ಲಿ ಈ ಸೈಬರ್ ಸೆಕ್ಯೂರಿಟಿ ಇಶ್ಯೂ ಪತ್ತೆಯಾಗಿದೆ. ಇದು ದಾಳಿಕೋರರಿಗೆ ಸಂಭಾವ್ಯ ಮಾಹಿತಿ ಕಳ್ಳತನ, ಕೋಡ್ ಎಕ್ಸಿಕ್ಯೂಶನ್ ಮತ್ತು ಡಿವೈಸ್ ಕಾಂಪ್ರಮೈಸ್‌ಗೆ ಕಾರಣವಾಗುತ್ತದೆ.
ತಮ್ಮ ಫೋನ್ ಅನ್ನು ಅಪ್‌ಡೇಟ್ ಮಾಡದೇ ಇರುವ ಬಳಕೆದಾರರು ಹೆಚ್ಚ ಹೆಚ್ಚು ಇಂತಹ ಹ್ಯಾಕಿಂಗ್ ಥ್ರೆಟ್‌ಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿದ್ದಾರೆ ಎಂದು ಸಿಇಆರ್‌ಟಿ ಸ್ವಷ್ಟವಾಗಿ ಉಲ್ಲೇಖಿಸಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಸ್ಯಾಮ್‌ಸಂಗ್ ಪ್ಯಾಚ್‌ಗಳನ್ನು ಮಾಡಿದ್ದರೂ, ಸುರಕ್ಷತಾ ದೃಷ್ಟಿಯಿಂದ ಫೋನ್ ಅಪ್‌ಡೇಟ್ ಮಾಡುವುದು ಅವಶ್ಯವಾಗಿದೆ.
ಐಬಿಎಂ ವೆಬ್‌ಸೈಟ್ ಪ್ರಕಾರ ಕೆಲವು ಸಾಮಾನ್ಯ ವಿಧದ ಸೈಬರ್ ಅಟ್ಯಾಕ್‌ಗಳು
* ಮಾಲ್‌ವೇರ್
* ಸೋಷಿಯಲ್ ಎಂಜಿನಿಯರಿಂಗ್
* ಡೆನ್ಷಿಯಲ್ ಆಫ್ ಸರ್ವೀಸ್ ಅಟ್ಯಾಕ್
* ಅಕೌಂಟ್ ಕಾಂಪ್ರಮೈಸ್
* ಮ್ಯಾನ್ ಇನ್ ದಿ ಮಿಡಲ್ ಅಟ್ಯಾಕ್
* ಸಪ್ಲೈ ಚೈನ್ ಅಟ್ಯಾಕ್
ಆಪಲ್ ಹಾಗೂ ಸ್ಯಾಮ್‌ಸಂಗ್ ಫೋನ್ ಬಳಕೆದಾರರು ಸಂಭಾವ್ಯ ಭದ್ರತಾ ದೋಷಗಳ ಬಗ್ಗೆ ಭಾರತ ಸರ್ಕಾರದ ತುರ್ತು ಪ್ರತಿಕ್ರಿಯೆ ತಂಡದಿಂದ ಎಚ್ಚರಿಕೆಯ ಸಂದೇಶಗಳನ್ನು ಸ್ವೀಕರಿಸಿದ್ದಾರೆ. ಅತ್ಯಂತ ಸುರಕ್ಷತೆಯ ನಡುವೆಯೂ ನಿಮ್ಮ ಫೋನ್ ಸೈಬರ್ ದಾಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಈ ಫೋನ್‌ಗಳನ್ನು ಬಳಸುವವರು ಎಚ್ಚರಿಕೆ ವಹಿಸಬೇಕು ಹಾಗೂ ತಮ್ಮ ಡಿವೈಸ್ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.