Raksha Bandhan 2023: ಆಗಸ್ಟ್ 30, 31 ಯಾವ ದಿನದಂದು ಆಚರಿಸಬೇಕು ರಕ್ಷಾಬಂಧನ; ರಾಖಿ ಹಬ್ಬದ ಇತಿಹಾಸ, ಮಹತ್ವ ತಿಳಿಯಿರಿ
Aug 28, 2023 01:15 PM IST
ರಕ್ಷಾಬಂಧನ 2023
- ನಾಡಿನಾದ್ಯಂತ ಭ್ರಾತೃತ್ವದ ಮಹತ್ವ ಸಾರುವ ರಕ್ಷಾಬಂಧನ ಹಬ್ಬದ ತಯಾರಿ ಜೋರಾಗಿದೆ. ಈ ಬಾರಿ ರಕ್ಷಾಬಂಧನ ಆಚರಣೆಯ ದಿನಾಂಕದಲ್ಲಿ ಗೊಂದಲವಿದೆ. ಕೆಲವರು ಆಗಸ್ಟ್ 30 ರಾಖಿ ಹಬ್ಬದವೆಂದರೆ ಕೆಲವರು ಆಗಸ್ಟ್ 31 ಎನ್ನುತ್ತಿದ್ದಾರೆ. ಹಾಗಾದರೆ ರಕ್ಷಾಬಂಧನದ ಆಚರಣೆ ಯಾವಾಗ, ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ರಕ್ಷಾಬಂಧನ ಅಣ್ಣ- ತಂಗಿಯರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಹಬ್ಬ. ರಾಖಿ ಹಬ್ಬ ಅಂತಲೂ ಕರೆಯುವ ಈ ಹಬ್ಬವನ್ನು ಭಾರತ ದೇಶದಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಈ ವರ್ಷದ ರಾಖಿ ಹಬ್ಬ ಇನ್ನೇನು ಸಮೀಪದಲ್ಲಿದೆ.
ರಾಖಿ ಹಬ್ಬಕ್ಕೆ ತಯಾರಿಯೂ ಜೋರಾಗಿದೆ. ಅಂಗಡಿ, ಮಳಿಗೆಗಳಲ್ಲಿ ಬಣ್ಣ ಬಣ್ಣದ ರಾಖಿಗಳು ರಾರಾಜಿಸುತ್ತಿವೆ.
ಶ್ರಾವಣ ಮಾಸದ ಪೂರ್ಣಿಮ ತಿಥಿಯಂದು ಸಹೋದರಿಕೆಯ ಮಹತ್ವವನ್ನು ಸಾರುವ ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಈ ಹಬ್ಬದಂದು ತಂಗಿಯರು ಅಣ್ಣನ ಕೈಗೆ ರಾಖಿ ಕಟ್ಟುವ ಮೂಲಕ ಆಶೀರ್ವಾದ ಪಡೆಯುತ್ತಾರೆ. ಅಲ್ಲದೇ ಅಣ್ಣ ದೀರ್ಘಾಯಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಸಹೋದರರ ಕೈಗೆ ರಾಖಿ ಕಟ್ಟುವ ಸಹೋದರಿ ಅವರಿಂದ ಉಡುಗೊರೆಗಳನ್ನು ಪಡೆಯುತ್ತಾಳೆ.
ಭಾತೃತ್ವದ ಅನುಬಂಧದ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ನಾಡಿನದ್ಯಂತ ಸಕಲ ಸಿದ್ಧತೆಗಳು ನಡೆಯುತ್ತಿವೆ. ಆದರೆ ಈ ವರ್ಷ ಆಗಸ್ಟ್ 30 ಅಥವಾ 31 ರಾಖಿ ಕಟ್ಟಲು ಯಾವುದು ಶುಭದಿನ ಎಂಬ ಕುರಿತು ಗೊಂದಲಗಳಿವೆ. ಹಾಗಾದರೆ ರಾಖಿ ಹಬ್ಬ ಎಂದು?
ರಕ್ಷಾಬಂಧನಕ್ಕೆ ಶುಭಮುಹೂರ್ತ ಯಾವುದು?
ದೃಕ್ ಪಂಚಾಂಗದ ಪ್ರಕಾರ ರಕ್ಷಾಬಂಧನ ಅಥವಾ ರಾಖಿ ಹಬ್ಬದ ಆಚರಣೆ ಆಗಸ್ಟ್ 30ರ ಬುಧವಾರದಂದು ಬರಲಿದೆ. ಆದರೆ ಭದ್ರಕಾಲಾದ ಉಪಸ್ಥಿತಿಯ ಕಾರಣದಿಂದಾಗಿ ಈ ವರ್ಷ ಆಗಸ್ಟ್ 31 ರಂದು ರಾಖಿ ಕಟ್ಟಲು ಶುಭಮುಹೂರ್ತವಾಗಿದೆ.
ಆಗಸ್ಟ್ 30 ರಂದು ಭದ್ರಕಾಲದ ಉಪಸ್ಥಿತಿಯ ಕಾರಣದಿಂದಾಗಿ ಈ ವರ್ಷ ಆಗಸ್ಟ್ 30ರ ರಾತ್ರಿ 9.01ರ ನಂತರ ರಕ್ಷಾಬಂಧನ ಆಚರಣೆಯನ್ನು ಪ್ರಾರಂಭಿಸಬೇಕು. ಯಾಕೆಂದರೆ 9.01ಕ್ಕೆ ಭದ್ರ ಕಾಲದ ಮುಕ್ತಾಯದವಾಗುತ್ತದೆ. ಪೂರ್ಣಿ ಮಾ ತಿಥಿ ಅಥವಾ ಹುಣ್ಣಿಮೆಯ ಹಂತವು ಆಗಸ್ಟ್ 30ರ ಬೆಳಿಗ್ಗೆ 10.58ಕ್ಕೆ ಪ್ರಾರಂಭವಾಗಿ, ಆಗಸ್ಟ್ 31 ರಂದು ಬೆಳಿಗ್ಗೆ 7.05ಕ್ಕೆ ಮುಕ್ತಾಯವಾಗುತ್ತದೆ.
ಏನಿದು ಭದ್ರಕಾಲಾ?
ಪ್ರತಿವರ್ಷ ಶ್ರಾವಣ ಮಾಸದ ಶುಕ್ಲಪಕ್ಷದ ಪೂರ್ಣಿಮೆ ದಿನ ರಕ್ಷಾ ಬಂಧನ ಆಚರಣೆ ಇರುತ್ತದೆ. ಆದರೆ ಈ ಬಾರಿ ಅಧಿಕ ಮಾಸವಿದೆ. ಅಧಿಕ ಮಾಸದ ಪ್ರಭಾವದಿಂದ ರಕ್ಷಾಬಂಧನ ಹಬ್ಬವನ್ನ ಉತ್ತರ ಭಾರತದಲ್ಲಿ ಎರಡು ದಿನ ಆಚರಿಸ್ತಾರೆ. ಈ ಬಾರಿ ಆಗಸ್ಟ್ 30 ಹಾಗೂ 31 ಎರಡೂ ದಿನಗಳಲ್ಲಿ ಹಬ್ಬದ ಆಚರಣೆ ಇದೆ. ಅಧಿಕೃತವಾಗಿ 31ನೇ ತಾರೀಖು ಆಚರಿಸಬೇಕು ಅಂತ ಪಂಚಾಂಗ ಹೇಳುತ್ತದೆ. ಇದಕ್ಕೆ ಕಾರಣ ಆಗಸ್ಟ್ 30ನೇ ತಾರೀಕನ್ನು ಭದ್ರಕಾಲ ಎಂದು ಪರಿಗಣಿಸಲಾಗುದೆ. ಭದ್ರಕಾಲ ಎಂದರೆ ಅಶುಭ ದಿನ ಎಂದು ಅರ್ಥ.ಅವತ್ತು ರಾಖಿ ಕಟ್ಟಿದ್ರೆ ಅಣ್ಣಂದಿರಿಗೆ ಕೆಟ್ಟದಾಗುತ್ತೆ ಅಂತ ನಂಬಿಕೆ. ಹೀಗಾಗಿ ಭದ್ರಕಾಲದಲ್ಲಿ ಹಬ್ಬ ಆಚರಿಸದೆ ಮರುದಿನ ಆಚರಿಸಬೇಕು ಅಂತ ಪಂಚಾಂಗ, ಶಾಸ್ತ್ರ ಹೇಳುತ್ತದೆ. ಇದಕ್ಕೆ ಪುರಾಣಗಳ ಐತಿಹ್ಯ ಕೂಡ ಇದೆ. ಭದ್ರಕಾಲದಲ್ಲಿ ಶೂರ್ಪನಖಿ ಅವನ ಅಣ್ಣ ರಾವಣನಿಗೆ ರಾಖಿ ಕಟ್ಟಿದ್ದಳಂತೆ. ಅದೇ ವರ್ಷ ರಾವಣನ ಸಾವು ಕೂಡ ಆಗಿತ್ತು ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಭದ್ರಕಾಲ ಅಂದ್ರೆ ಹಬ್ಬ ಆಚರಿಸೋಕೆ ಕೆಟ್ಟ ದಿನ ಎಂದು ಅರ್ಥ. ಅವತ್ತು ರಾಖಿ ಕಟ್ಟದೆ ಮರುದಿನ ಕಟ್ಟುವುದು ಉತ್ತಮ.
ಆಚರಣೆ
ರಕ್ಷಾಬಂಧನವನ್ನು ಬೇರೆ ಬೇರೆ ಭಾಗದಲ್ಲಿ ಬೇರೆ ಬೇರೆ ರೀತಿ ಆಚರಿಸುತ್ತಾರೆ. ಈ ರಾಖಿಹಬ್ಬದಂದು ಸಹೋದರಿ ಸಹೋದರನಿಗೆ ಆರತಿ ಬೆಳಗುವ ಮೂಲಕ ಆತನ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾಳೆ. ನಂತರ ಸಹೋದರ ಕೈಗೆ ರಾಖಿ ಕಟ್ಟಿ, ಹಣೆಯ ಮೇಲೆ ತಿಲಕ ಇಟ್ಟು ಸಿಹಿ ತಿಂಡಿ ಹಂಚುವುದು ವಾಡಿಕೆ. ಸಹೋದರರು ರಾಖಿ ಕಟ್ಟಿದ ಸಹೋದರಿಗೆ ಉಡುಗೊರೆ ಅಥವಾ ಹಣ ನೀಡುವ ಮೂಲಕ ಪ್ರೀತಿಯನ್ನು, ರಕ್ಷಣೆಯನ್ನು ಒದಗಿಸುತ್ತಾರೆ.
ರಕ್ಷಾಬಂಧನದ ಇತಿಹಾಸ
ಹಿಂದೂ ಧರ್ಮದಲ್ಲಿ ರಕ್ಷಾಬಂಧನ ಆಚರಣೆಗೆ ಹಲವು ಧಾರ್ಮಿಕ ಮಹತ್ವಗಳಿವೆ. ಈ ಹಬ್ಬಕ್ಕೆ ಸಂಬಂಧಿಸಿದ ದಂತಕಥೆಗಳಲ್ಲಿ ಒಂದು ಮಹಾಭಾರತದಿಂದ ಹುಟ್ಟಿಕೊಂಡಿದೆ. ಪುರಾಣಗಳ ಪ್ರಕಾರ
ಒಮ್ಮೆ ಆಕಸ್ಮಿಕವಾಗಿ ಸುದರ್ಶನ ಚಕ್ರಕ್ಕೆ ಸಿಲುಕಿ ಶ್ರೀಕೃಷ್ಣನ ಬೆರಳು ಕತ್ತರಿಸುತ್ತದೆ. ಇದನ್ನು ನೋಡಿದ ದ್ರೌಪದಿ ತನ್ನ ಸೀರೆಯ ತುಂಡನ್ನು ಹರಿದು ಗಾಯಕ್ಕೆ ಕಟ್ಟಿ ರಕ್ತ ಸುರಿಯುವುದನ್ನು ನಿಲ್ಲಿಸುತ್ತಾಳೆ. ಅಂದು ಆಕೆಯನ್ನು ತನ್ನ ತಂಗಿಯಾಗಿ ಸ್ವೀಕರಿಸಿ, ಎಂದಿಗೂ ಅವಳನ್ನು ರಕ್ಷಿಸುವ ಭರವಸೆ ನೀಡುತ್ತಾನೆ. ಕೌರವರು ದ್ರೌಪದಿ ವಸ್ತ್ರಾಪಹರಣ ಮಾಡಲು ಯತ್ನಿಸಿದಾಗ ಶ್ರೀಕೃಷ್ಣ ದ್ರೌಪದಿಗೆ ಸೀರೆ ನೀಡುವ ಅವಳನ್ನು ಕಾಪಾಡುತ್ತಾನೆ. ಸೀರೆಯನ್ನು ಸುತ್ತಿ ಶ್ರೀಕೃಷ್ಣನ ಗಾಯವನ್ನು ಮಾಗಿಸಿದ ದ್ರೌಪದಿಯಿಂದ ರಾಖಿ ಹಬ್ಬ ಹುಟ್ಟಿತು ಎನ್ನುತ್ತದೆ ಪುರಾಣ.