Ugadi Recipes: ಯುಗಾದಿಯಂದು ಒಬ್ಬಟ್ಟಿನ ರುಚಿ ಹೆಚ್ಚಿಸುವ ಮಾವಿನ ಸೀಕರಣೆ, ಕಾಯಿಹಾಲು; ಇದನ್ನು ತಯಾರಿಸುವ ಸುಲಭ ವಿಧಾನ ಇಲ್ಲಿದೆ
Apr 03, 2024 11:11 AM IST
ಮಾವಿನ ಸೀಕರಣೆ, ಕಾಯಿ ಹಾಲು
- ಯುಗಾದಿ ಹಬ್ಬದಂದು ಚಿತ್ರಾನ್ನ, ಪುಳಿಯೋಗರೆ, ಪಚಡಿ, ಪಾಯಸದ ಜೊತೆಗೆ ಒಬ್ಬಟ್ಟು ಅಥವಾ ಹೋಳಿಗೆ ಇರಲೇಬೇಕು. ಈ ಒಬ್ಬಟ್ಟಿನ ರುಚಿ ಹೆಚ್ಚಬೇಕು ಅಂದ್ರೆ ನೀವು ಅದರ ಜೊತೆ ಮಾವಿನ ಸೀಕರಣೆ ಅಥವಾ ಕಾಯಿಹಾಲು ತಯಾರಿಸಬೇಕು. ಆಗ ನಿಮ್ಮ ಒಬ್ಬಟ್ಟಿನ ರುಚಿಗೆ ಸರಿಸಾಟಿಯಿಲ್ಲ ಅನ್ನಿಸೋದು ಖಂಡಿತ. ಇದನ್ನು ಸುಲಭವಾಗಿ ಹೇಗೆ ತಯಾರಿಸುವುದು ನೋಡಿ.
ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಯುಗಾದಿಯಂದು ಬಗೆ ಬಗೆಯ ತಿನಿಸುಗಳನ್ನು ತಯಾರಿಸಿ ಸಂಭ್ರಮಿಸುವುದು ವಾಡಿಕೆ. ಯುಗಾದಿಗೆ ಬೇವು ಬೆಲ್ಲದಷ್ಟೇ ಮುಖ್ಯವಾಗಿರುವುದು ಒಬ್ಬಟ್ಟು ಅಥವಾ ಹೋಳಿಗೆ. ಸಾಮಾನ್ಯವಾಗಿ ಯುಗಾದಿಗೆ ಬೇಳೆ ಒಬ್ಬಟ್ಟು ತಯಾರಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೇಳೆ ಒಬ್ಬಟ್ಟಿನ ಜೊತೆಗೆ ಕಾಯಿ ಹೋಳಿಗೆ, ಹಣ್ಣಿನ ಹೋಳಿಗೆಗಳನ್ನು ತಯಾರಿಸಿ ಮನೆಮಂದಿಯನ್ನು ಖುಷಿ ಪಡಿಸುತ್ತಾರೆ. ಹೋಳಿಗೆ ಅಥವಾ ಒಬ್ಬಟ್ಟನ್ನು ತುಪ್ಪದ ಜೊತೆ ತಿನ್ನುವ ಬದಲು ಮಾವಿನ ಸೀಕರಣೆ ಅಥವಾ ಕಾಯಿಹಾಲು ಮಾಡಿ ನೋಡಿ. ಈ ಎರಡರ ಜೊತೆಗೆ ಹೋಳಿಗೆ ಮಸ್ತ್ ಕಾಂಬಿನೇಷನ್. ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚು ತಯಾರಿಸುವ ಈ ವಿಶೇಷ ಖಾದ್ಯಗಳ ರೆಸಿಪಿ ಇಲ್ಲಿದೆ.
ಮಾವಿನ ಸೀಕರಣೆ
ಬೇಕಾಗುವ ಸಾಮಗ್ರಿಗಳು: ರಸಪುರಿ ಮಾವಿನಹಣ್ಣು - 5, ಬೆಲ್ಲ - 1 ಕಪ್, ಹಸಿ ತೆಂಗಿನಕಾಯಿ ತುರಿ - 1/4 ಕಪ್, ಏಲಕ್ಕಿ - 4, ಹಾಲು 1/2 ಕಪ್, ಚಿಟಿಕೆ - ಉಪ್ಪು
ತಯಾರಿಸುವ ವಿಧಾನ: ಮೊದಲಿಗೆ ಮಾವಿನ ಹಣ್ಣನ್ನ ಸಿಪ್ಪೆ ತೆಗೆದು ಚಿಕ್ಕಚಿಕ್ಕ ಹೋಳುಗಳಾಗಿ ಹೆಚ್ಚಿಕೊಳ್ಳಿ. ಒಂದು ಮಿಕ್ಸಿ ಜಾರಿಗೆ ಕಾಲು ಕಪ್ ಹಸಿ ತೆಂಗಿನಕಾಯಿ ತುರಿ, 2 ಏಲಕ್ಕಿ, ಚಿಟಿಕೆ ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಂದು ಪಾತ್ರೆಗೆ ಹೆಚ್ಚಿದ ಮಾವಿನಹಣ್ಣು, ರುಬ್ಬಿಕೊಂಡ ತೆಂಗಿನತುರಿ, ಬೆಲ್ಲ, ಕಾಲು ತಣ್ಣಗಿನ ಹಾಲು ಈ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಮಾವಿನ ಹಣ್ಣಿನ ರುಚಿಯಾದ ಸಿಹಿಯಾದ ರಾಸಾಯನ ಅಥವಾ ಸೀಕರಣೆ ಸವಿಯಲು ಸಿದ್ಧ. ಮಾವಿನ ಹಣ್ಣಿನ ಸೀಕರಣೆ ಸ್ವಲ್ಪ ಗಟ್ಟಿಯಾಗಿಯೇ ಇದ್ದರೆ ರುಚಿ ಹೆಚ್ಚು. ಜಾಸ್ತಿ ನೀರು ಅಥವಾ ಹಾಲು ಹಾಕಿ ತೆಳ್ಳಗೆ ಮಾಡಬಾರದು. ಇದನ್ನು ಹೋಳಿಗೆಯ ಮೇಲೆ ಹಾಕಿಕೊಂಡು ತಿನ್ನುತ್ತಿದ್ದರೆ ಆಹಾ, ಸ್ವರ್ಗ ಎನ್ನಿಸುವುದರಲ್ಲಿ ಅನುಮಾನವಿಲ್ಲ.
ಕಾಯಿಹಾಲು
ಬೇಕಾಗುವ ಸಾಮಗ್ರಿಗಳು: ಹಸಿ ತೆಂಗಿನಕಾಯಿ ತುರಿ - 1ಕಪ್, ಹಾಲು - 1ಚಿಕ್ಕ ಗ್ಲಾಸ್, ಗಸಗಸೆ - 1ಚಮಚ, ಬೆಲ್ಲ - ಮುಕ್ಕಾಲು ಕಪ್, ಏಲಕ್ಕಿ - 2
ತಯಾರಿಸುವ ವಿಧಾನ: ಒಂದು ಮಿಕ್ಸಿ ಜಾರಿಗೆ 1 ಕಪ್ ಹಸಿ ತೆಂಗಿನತುರಿಯನ್ನು ಹಾಕಿ ಅದಕ್ಕೆ 1 ಚಮಚ ಗಸಗಸೆ, 2 ಏಲಕ್ಕಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಂದು ಪಾತ್ರೆಗೆ ಒಂದೂವರೆ ಕಪ್ ನೀರು ಹಾಗೂ ಮುಕ್ಕಾಲು ಕಪ್ ಬೆಲ್ಲ ಹಾಕಿ ಕರಗಿಸಿ ಸೋಸಿಕೊಳ್ಳಿ. ನಂತರ ಒಂದು ಪಾತ್ರೆಗೆ ಸೋಸಿಕೊಂಡ ಬೆಲ್ಲ, ರುಬ್ಬಿಟ್ಟುಕೊಂಡು ತೆಂಗಿನಹಾಲನ್ನು ಹಾಕಿ ಮಿಶ್ರಣ ಮಾಡಿ ಕೊನೆಯಲ್ಲಿ ಚಿಕ್ಕ ಗ್ಲಾಸ್ ಹಾಲನ್ನು ಹಾಕಿ ಕಲಕಿದರೆ ರುಚಿಯಾದ ಕಾಯಿ ಹಾಲು ಸವಿಯಲು ಸಿದ್ದ. ಈ ಕಾಯಿಹಾಲು ಒಬ್ಬಟ್ಟು, ಶ್ಯಾವಿಗೆ, ಇಡ್ಲಿಯೊಂದಿಗೆ ತಿನ್ನಲು ತುಂಬಾ ಚೆನ್ನಾಗಿ ಇರುತ್ತದೆ.
ಬರಹ: ವಿದ್ಯಾ ಗುಮ್ಮನಿ