logo
ಕನ್ನಡ ಸುದ್ದಿ  /  ಜೀವನಶೈಲಿ  /  World Coconut Day: ಇಂದು ತೆಂಗಿನಕಾಯಿ ಮಹತ್ವ ಸಾರುವ ವಿಶ್ವ ತೆಂಗು ದಿನ; ಈ ದಿನದ ಇತಿಹಾಸ ತಿಳಿಯಿರಿ

World Coconut Day: ಇಂದು ತೆಂಗಿನಕಾಯಿ ಮಹತ್ವ ಸಾರುವ ವಿಶ್ವ ತೆಂಗು ದಿನ; ಈ ದಿನದ ಇತಿಹಾಸ ತಿಳಿಯಿರಿ

Reshma HT Kannada

Sep 02, 2023 07:00 AM IST

google News

ವಿಶ್ವ ತೆಂಗು ದಿನ ಸೆಪ್ಟೆಂಬರ್‌ 2

    • ತೆಂಗಿನಮರವನ್ನು ಕಲ್ಪವೃಕ್ಷವೆಂದು ಕರೆದು ಪೂಜಿಸಲಾಗುತ್ತದೆ. ತೆಂಗಿನಕಾಯಿಯನ್ನು ಪೂಜೆಯಿಂದ ಹಿಡಿದು ಆಹಾರ ತಯಾರಿಸುವವರೆಗೆ ಹಲವು ಬಗೆಗಳಲ್ಲಿ ಬಳಸಲಾಗುತ್ತದೆ. ಇಂತಹ ಬಹುಪಯೋಗಿ ತೆಂಗಿನಕಾಯಿ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್‌ 2 ರಂದು ವಿಶ್ವ ತೆಂಗುದಿನವನ್ನು ಆಚರಿಸಲಾಗುತ್ತದೆ. 
ವಿಶ್ವ ತೆಂಗು ದಿನ ಸೆಪ್ಟೆಂಬರ್‌ 2
ವಿಶ್ವ ತೆಂಗು ದಿನ ಸೆಪ್ಟೆಂಬರ್‌ 2

ತೆಂಗಿನಕಾಯಿ, ಭಾರತೀಯರಿಗೆ ಅಚ್ಚುಮೆಚ್ಚು. ಅದರಲ್ಲೂ ದಕ್ಷಿಣ ಭಾರತದಲ್ಲಿ ಶೇ 90ರಷ್ಟು ಖಾದ್ಯಗಳ ತಯಾರಿಕೆಗೆ ತೆಂಗಿನಕಾಯಿ ಬೇಕೇ ಬೇಕು. ಭಾರತದ ಹಲವು ಭಾಗಗಳಲ್ಲಿ ತೆಂಗು ಬೆಳೆ ಸಾಮಾನ್ಯವಾಗಿದೆ. ಪ್ರಪಂಚದಾದ್ಯಂತ ವಿವಿಧ ಭಕ್ಷ್ಯಗಳ ತಯಾರಿಕೆಯಲ್ಲಿ ಬಳಸುವ ತೆಂಗಿನಕಾಯಿ ಆರೋಗ್ಯಕ್ಕೂ ಉತ್ತಮ.

ತೆಂಗಿನಕಾಯಿಯಿಂದಲೇ ತಯಾರಿಸುವ ತೆಂಗಿನೆಣ್ಣೆ ಕೂಡ ಹಲವು ರೀತಿಯ ಉಪಯೋಗಗಳನ್ನು ಹೊಂದಿದೆ. ಇದರಲ್ಲಿ ಪೋಷಕಾಂಶ ಸಮೃದ್ಧವಾಗಿರುತ್ತದೆ.

ತೆಂಗಿನಕಾಯಿಯ ಉಪಯೋಗ ಹಾಗೂ ಇದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ತೆಂಗಿನ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಹೆಚ್ಚು ತೆಂಗು ಬೆಳೆಯುತ್ತಾರೆ. ವಿಶ್ವ ತೆಂಗು ದಿನದ ಆಚರಣೆಯ ಕುರಿತು ವಿವರ ಹೀಗಿದೆ.

ದಿನ

ಪ್ರತಿವರ್ಷ ಸೆಪ್ಟೆಂಬರ್‌ 2 ರಂದು ವಿಶ್ವ ತೆಂಗು ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಶನಿವಾರ ಅಂದರೆ ನಾಳೆ ವಿಶ್ವ ತೆಂಗು ದಿನ ಆಚರಣೆ ಇದೆ.

ಇತಿಹಾಸ

ಏಷ್ಯನ್‌ ಅಂಡ್‌ ಪೆಸಿಫಿಕ್‌ ಕಮ್ಯೂನಿಟಿ (APCC) ಇಂಡೋನೇಷ್ಯಾದ ಜಕಾರ್ತಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಏಷ್ಯಾದ ದೇಶಗಳಲ್ಲಿ ತೆಂಗಿನಕಾಯಿ ಬೆಳೆ ಉತ್ಪಾದನೆ, ಮಾರಾಟ ಮತ್ತು ರಫ್ತುಗಳನ್ನು ಬೆಂಬಲಿಸಲು 1969ರಲ್ಲಿ ಇದನ್ನು ಸ್ಥಾಪಿಸಲಾಯಿತು. 2009ರಲ್ಲಿ ಎಪಿಸಿಸಿ ವಿಶ್ವ ತೆಂಗು ದಿನದ ಆಚರಣೆಯನ್ನು ಆರಂಭಿಸಿತು. ಭಾರತ, ಮಲೇಷ್ಯಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್‌, ಥಾಯ್ಲೆಂಡ್‌, ವಿಯೆಟ್ನಾಂ ಸೇರಿದಂತೆ ಹಲವು ದೇಶಗಳು ಎಪಿಸಿಸಿಯ ಸದಸ್ಯ ರಾಷ್ಟ್ರಗಳಾಗಿವೆ.

ಮಹತ್ವ

ವಿಶ್ವ ತೆಂಗಿನಕಾಯಿ ದಿನವನ್ನು ತೆಂಗು ಬೆಳೆಗಾರರು ಹಾಗೂ ಮಾರಾಟ ಮಾಡುವವರು ಆಚರಿಸುತ್ತಾರೆ. ತೆಂಗಿನಕಾಯಿ ಸೇವನೆಯ ಪ್ರಯೋಜನ ಬಗ್ಗೆ ಜಾಗೃತಿ ಮೂಡಿಸುವ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳೊಂದಿಗೆ ಜನರು ಈ ದಿನವನ್ನು ಆಚರಿಸುತ್ತಾರೆ.

ತೆಂಗಿನಕಾಯಿ ಉಪಯೋಗಗಳು

ತೆಂಗಿನಕಾಯಿ, ಎಳನೀರು ಹಾಗೂ ತೆಂಗಿನೆಣ್ಣೆಯಿಂದ ಹಲವು ರೀತಿಯ ಉಪಯೋಗಗಳಿವೆ. ಇದರಿಂದ ತಯಾರಿಸುವ ಖಾದ್ಯಗಳ ರುಚಿಯೂ ಅದ್ಭುತ. ಹೃದಯ, ಕರುಳು, ಚರ್ಮ ಸೇರಿದಂತೆ ಹಲವು ರೀತಿ ಆರೋಗ್ಯ ಸಮಸ್ಯೆಗಳಿಗೂ ತೆಂಗಿನಕಾಯಿ ಮದ್ದು. ಚರ್ಮದ ಕಾಂತಿ ಹೆಚ್ಚಿಸಲು, ಕೂದಲಿನ ಬೆಳವಣಿಗೆಗೆ ಇದು ಉತ್ತಮ. ಎಳನೀರು ಸೇವನೆಯು ಅಮೃತದಷ್ಟೇ ಪವಿತ್ರ ಎಂದೂ ಹೇಳಲಾಗುತ್ತದೆ. ತೆಂಗಿನನಾರಿನಿಂದ ಹಗ್ಗ, ಬ್ಯಾಗ್‌, ಮ್ಯಾಟ್‌ನಂತಹ ವಸ್ತುಗಳನ್ನು ತಯಾರಿಸುತ್ತಾರೆ. ಒಟ್ಟಾರೆ ತೆಂಗು ಎಲ್ಲದ್ದಕ್ಕೂ ಉಪಯೋಗಕ್ಕೆ ಬರುತ್ತದೆ. ಇಂಗು ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತೆ ಅನ್ನುವ ಗಾದೆ ಮಾತು ಕೂಡ ರೂಢಿಯಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ