Indian Desserts: ವಿಶ್ವದ ಅಗ್ರ ಬೀದಿಬದಿ ಆಹಾರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮೂರು ಸಿಹಿ ತಿನಿಸುಗಳು; ಇದರಲ್ಲಿ ಕರ್ನಾಟಕದ ಪಾಲೂ ಇದೆ
Jul 18, 2023 10:50 AM IST
ವಿಶ್ವದ ಅಗ್ರ ಬೀದಿಬದಿ ಆಹಾರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮೂರು ಸಿಹಿ ತಿನಿಸುಗಳು
- ಟೇಸ್ಟ್ ಆಟ್ಲಾಸ್ ಇತ್ತೀಚೆಗೆ ವಿಶ್ವದ ಅಗ್ರ ಮೂರು ಭಾರತೀಯ ಬೀದಿ ಬದಿ ಸಿಹಿ ತಿನಿಸುಗಳನ್ನು ಬಹಿರಂಗ ಪಡಿಸಿದೆ. ಈ ಪಟ್ಟಿಯಲ್ಲಿ ಯಾವ ಭಕ್ಷ್ಯಗಳು ಸ್ಥಾನ ಪಡೆದಿವೆ ಎಂಬುದನ್ನು ತಿಳಿಯಲು ಮುಂದೆ ಓದಿ.
ಆಚರಣೆ, ಸಂಸ್ಕಾರ, ಸಂಸ್ಕೃತಿಯಂತೆ ಆಹಾರ ಸಂಸ್ಕೃತಿಯಲ್ಲೂ ಭಾರತ ಭಿನ್ನವಾಗಿದೆ. ಬಹಳ ಹಿಂದಿನ ಕಾಲದಿಂದಲೂ ಭಾರತದಲ್ಲಿ ಭಿನ್ನ ಆಹಾರ ಪದಾರ್ಥಗಳು ಜಗತ್ತಿನ ಗಮನ ಸೆಳೆದಿವೆ. ಅಲ್ಲದೆ ಇಂದಿಗೂ ಭಾರತೀಯ ಭಕ್ಷ್ಯಗಳು ಜಗತ್ತಿನಾದ್ಯಂತ ಖ್ಯಾತಿ ಪಡೆಯುತ್ತಲೇ ಇವೆ.
ಭಾರತೀಯ ಸಿಹಿ ತಿನಿಸುಗಳಂತೂ ಭಿನ್ನ ರುಚಿಯನ್ನು ಹೊಂದಿದ್ದು, ವಿದೇಶಿಗರು ಇದರ ರುಚಿಗೆ ಮಾರು ಹೋಗುವುದು ಅತಿಶಯವಲ್ಲ. ಗುಲಾಬ್ ಜಾಮೂನ್, ರಸಗುಲ್ಲಾದಿಂದ ಕಾಜು ಕಟ್ಲಿ, ಧಾರಾವಾಡ ಪೇಡಾದವರೆಗೆ ಭಿನ್ನ, ವಿಭಿನ್ನ ರುಚಿಯ ಸಿಹಿತಿನಿಸುಗಳು ಹೆಸರು ಕೇಳಿದಾಕ್ಷಣ ಬಾಯಲ್ಲಿ ನೀರೂರುವಂತಾಗುವುದು ಸಹಜ.
ಹಲವು ಬಗೆಯ ಸಿಹಿ ತಿನಿಸುಗಳ ಮಧ್ಯೆ ಯಾವುದು ನಿಮಗಿಷ್ಟ ಎಂದು ಕೇಳಿದರೆ ಹೆಸರಿಸುವುದು ಕಷ್ಟ, ಅಷ್ಟು ತಿನಿಸುಗಳು ಇಲ್ಲಿ ಲಭ್ಯವಿವೆ. ಆದರೆ ಇತ್ತೀಚೆಗೆ ಟೇಸ್ಟ್ ಅಟ್ಲಾಸ್ ವಿಶ್ವದ ಅಗ್ರ ಮೂರು ಭಾರತೀಯ ಬೀದಿ ಬದಿ ಸಿಹಿತಿಂಡಿಗಳ ಹೆಸರನ್ನು ಬಹಿರಂಗ ಪಡಿಸಿದೆ.
ಟೇಸ್ಟ್ ಅಟ್ಲಾಸ್ ಬಗ್ಗೆ ಹಲವರಿಗೆ ತಿಳಿದಿದೆ. ತಿಳಿಯದವರು ಏನಿದು ಎಂದು ತಲೆ ಕೆಡಿಸಿಕೊಳ್ಳಬಹುದು. ಇದು ಆಹಾರ ಲೇಖನಗಳನ್ನು ಪ್ರಕಟಿಸುವ ನಿಯಕಾಲಿಕೆಯಾಗಿದ್ದು, ಅದು ಪ್ರಪಂಚದಾದ್ಯಂತದ ಬೀದಿ ಬದಿ ಆಹಾರಗಳ ಬಗ್ಗೆ ವಿವರವಾದ ವಿಮರ್ಶೆ ಹಾಗೂ ಮಾಹಿತಿಯನ್ನು ನೀಡುತ್ತದೆ.
ವಿಶ್ವ ಅಗ್ರ ಮೂರು ಬೀದಿ ಬದಿ ಸಿಹಿ ತಿನಿಸುಗಳು ಇವೇ ನೋಡಿ
ಟೇಸ್ಟ್ ಅಟ್ಲಾಸ್ ಕಳೆದ ಕೆಲವು ದಿನಗಳ ಹಿಂದೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಂತೆ ಕರ್ನಾಟಕದ ಹೆಮ್ಮೆ ಮೈಸೂರು ಪಾಕ್ ವಿಶ್ವ ಅಗ್ರ ಸಿಹಿ ತಿನಿಸುಗಳ ಪಟ್ಟಿಯಲ್ಲಿ 14ನೇ ಸ್ಥಾನ ಪಡೆದಿದೆ. ಕುಲ್ಫಿ ಹಾಗೂ ಕುಲ್ಫಿ ಪಲೋಡಾ ಕ್ರಮವಾಗಿ 18 ಹಾಗೂ 32ನೇ ಸ್ಥಾನಗಳನ್ನು ಪಡೆದುಕೊಂಡಿವೆ.
ವಿಶ್ವ ಅಗ್ರ ಸಿಹಿ ತಿನಿಸುಗಳ ಪೈಕಿ ಮೊದಲ ಐದು ಸ್ಥಾನದಲ್ಲಿ ಪೋರ್ಚುಗಲ್‌ನ ಪಾಸ್ತೆಲ್ ಡಿ ನಾಟಾ, ಇಂಡೋನೇಷ್ಯಾದ ಸೆರಾಬಿ, ಟರ್ಕಿಯ ಡೊಂಡುರ್ಮಾ, ದಕ್ಷಿಣ ಕೊರಿಯಾದ ಹೊಟೆಕ್, ಥಾಯ್ಲೆಂಡ್‌ನ ಪಾ ಥಾಂಗ್ ಕೋ ಇದೆ.
ವಿಶ್ವ ಬೆಸ್ಟ್ ಬೀದಿ ಬದಿ ಸಿಹಿ ತಿನಿಸುಗಳ ಪಟ್ಟಿ ಇಲ್ಲಿದೆ ನೋಡಿ
ಈ ಪೋಸ್ಟ್ ಹಂಚಿಕೊಂಡ ದಿನದಿಂದ ಹಲವರು ಇದಕ್ಕೆ ಕಾಮೆಂಟ್ ಮಾಡುತ್ತಿದ್ದಾರೆ. 8,000 ಕ್ಕೂ ಅಧಿಕ ಮಂದಿ ಇದಕ್ಕೆ ಲೈಕ್ ಮಾಡಿದ್ದಾರೆ. ಹಲವರು ಕಾಮೆಂಟ್ ಮಾಡಿದ್ದಾರೆ. ಈ ಲಿಸ್ಟ್‌ನಲ್ಲಿ ಭಾರತೀಯ ಸಿಹಿ ತಿನಿಸುಗಳ ಪಟ್ಟಿಯನ್ನು ನೋಡಿದ ಹಲವರು ಸಂತೋಷ ವ್ಯಕ್ತ ಪಡಿಸಿದ್ದಾರೆ. ಇನ್ನೂ ಕೆಲವರು ತಮ್ಮಿಷ್ಟದ ತಿಂಡಿ ಇಲ್ಲ ಹಾಗೂ ತಮ್ಮ ದೇಶ ತಿನಿಸು ಇಲ್ಲ ಎಂಬ ಕಾರಣಕ್ಕೆ ಅಸಮಾಧಾನವನ್ನೂ ಹೊರಹಾಕಿದ್ದಾರೆ.
ಟೇಸ್ಟ್ ಅಟ್ಲಾಸ್‌ನ ಪೋಸ್ಟ್‌ಗೆ ಜನರು ಹೇಗೆಲ್ಲಾ ಕಾಮೆಂಟ್ ಮಾಡಿದ್ದಾರೆ ನೋಡಿ
ʼದಿ ಬೆಸ್ಟ್ ಥ್ಯಾಂಕ್ ಯೂʼ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ʼನೀವು ಮೈಸೂರು ಪಾಕ್‌ನ ಇನ್ನೊಂದು ಹಂತ ತುಪ್ಪದ ಮೈಸೂರು ಪಾಕ್ ಅಥವಾ ಹಾಲಿನ ಮೈಸೂರು ಪಾಕ್ ಸವಿಯನ್ನು ಸವಿಯಬೇಕುʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ʼಕುಲ್ಫಿ, ಕುಲ್ಫಿ ಪಲೂಡಾ ನನ್ನ ಫೇವರಿಟ್, ನಾನು ಅದನ್ನು ಯಾವಾಗಲೂ ಕೊಟ್ಟರು ತಿನ್ನುತ್ತೇನೆ. ಆದರೆ ನೀವು ಗುಲಾಬ್ ಜಾಮೂನ್ ಅಥವಾ ಸಂದೇಶ್ ರುಚಿಯನ್ನೂ ಸವಿಯಿರಿʼ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಲಿಸ್ಟ್ ಬಗ್ಗೆ ಅಸಾಮಾಧಾನ ತೋರಿದ ಕೆಲವರ ಕಾಮೆಂಟ್‌ಗಳು ಹೀಗಿವೆ ʼಪಾಸ್ಟಲ್, ಕಾಕ್ಸಿನ್ಹಾ, ಪಯೋಜಿನ್ಹೋ ಡಿ ಕ್ವಿಜೊ ನಾಹ್, ಸವಿ ನೋಡಿಲ್ಲ, ನೀವು ಅದನ್ನು ಮಿಸ್ ಮಾಡಿಕೊಂಡಿದ್ದೀರಿʼ ಎಂದು ಅಸಮಾಧಾನದ ಕಾಮೆಂಟ್ ಮಾಡಿದ್ದಾರೆ. ʼಜಿಲೇಬಿ ಎಲ್ಲಿʼ ಇನ್ನೊಬ್ಬರು ಬೇಸರ ವ್ಯಕ್ತ ಪಡಿಸಿದ್ದಾರೆ. ಈ ಪಟ್ಟಿ ನೋಡಿ ನಿಮಗೆ ಏನ್ನನಿಸಿತು. ನಿಮ್ಮಿಷ್ಟದ ಸ್ವೀಟ್ ಇದರಲ್ಲಿ ಇದ್ಯಾ ನೋಡಿ.
ವಿಭಾಗ