International News: ಅದೃಷ್ಟ ಬದಲಿಸಿತು 60 ವರ್ಷದ ಹಿಂದಿನ ತಂದೆಯ ಪಾಸ್‌ಬುಕ್; ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಮಗ
Aug 10, 2023 08:08 AM IST
ಹೀಗಿದೆ ಮಗನ ಅದೃಷ್ಟ ಬದಲಿಸಿದ ತಂದೆಯ ಪಾಸ್‌ಬುಕ್ (ಎಡಚಿತ್ರ)
- ಆತ ಸಾಧಾರಣ ಕುಟುಂಬದ ವ್ಯಕ್ತಿ. ಆದರೆ ಅವನ ಅದೃಷ್ಟ ಅಸಾಧಾರಣವಾಗಿತ್ತು. ಎಲ್ಲೋ ಮೂಲೆಯಲ್ಲಿ ಬಿದ್ದಿದ್ದ ತಂದೆಯ 60 ವರ್ಷಗಳ ಹಿಂದಿನ ಪಾಸ್‌ಬುಕ್ ಆತನ ಅದೃಷ್ಟವನ್ನೇ ಬದಲಿಸುತ್ತದೆ. ರಾತ್ರಿ ಬೆಳಗಾಗುವುದರ ಒಳಗೆ ಆತ ಕೋಟ್ಯಾಧಿಪತಿಯಾಗುತ್ತಾನೆ. ಚಿಲಿ ದೇಶದ ಈ ವ್ಯಕ್ತಿಯ ಕಥೆ ನಿಜಕ್ಕೂ ನಿಮಗೆ ಆಶ್ಚರ್ಯ ಎನ್ನಿಸಿದೇ ಇರದು. ಮುಂದೆ ಓದಿ.
ಮನುಷ್ಯನಿಗೆ ಅದೃಷ್ಟ ಹೇಗೆ, ಯಾವಾಗ ಒಲಿಯುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ. ಎಷ್ಟೋ ಬಾರಿ ನಾವು ಸಂಕಷ್ಟದಲ್ಲಿದ್ದಾಗ ಊಹಿಸದ ರೀತಿಯಲ್ಲಿ ಆರ್ಥಿಕ ನೆರವು ಸಿಗುವುದುಂಟು. ಸಾಮಾನ್ಯ ಮಧ್ಯಮ ಕುಟುಂಬದಲ್ಲಿ ಜನಿಸಿರುವ ನಾವು ರಾತ್ರೋ ರಾತ್ರಿ ಶ್ರೀಮಂತರಾದರೆ ಹೇಗೆ? ಅದನ್ನು ಊಹಿಸಿಕೊಂಡರೆ ವಾವ್ ಎನ್ನಿಸುತ್ತದೆ ಅಲ್ವಾ? ಆದರೆ ಚಿಲಿಯ ದೇಶದ ವ್ಯಕ್ತಿಯೊಬ್ಬನ ಜೀವನದಲ್ಲಿ ಇದು ನಿಜ ಆಗಿದೆ. ಏನಿದು ಸ್ಟೋರಿ ಮುಂದೆ ಓದಿ.
ಚಿಲಿ ದೇಶದ ಎಕ್ಸಿಕ್ವಿಯೆಲ್ ಹಿನೊಜೋಸಾ ಎಂಬುವವರು ರಾತ್ರಿ ಬೆಳಗಾಗುವುದರ ಒಳಗೆ ಮಿಲೇನಿಯರ್ ಆಗುತ್ತಾರೆ. ಯಾರೂ ಕಲ್ಪಿಸಲೂ ಸಾಧ್ಯವಾಗದಂತೆ ಅವರ ಜೀವನ ಬದಲಾಗುತ್ತದೆ. ಗುಪ್ತ ಅತಿವಿದ್ದ ನಿಧಿಯೊಂದು ಅವರನ್ನು ಕೋಟ್ಯಾದಪತಿಯನ್ನಾಗಿಸುತ್ತದೆ. ಎಲ್ಲೋ ಮೂಲೆ ಸೇರಿದ್ದ ಆ ಒಂದು ವಸ್ತು ಎಕ್ಸಿಕ್ವಿಯೆಲ್ ಅವರನ್ನು ಮಿಲೇನಿಯರ್ ಪಟ್ಟಕ್ಕೆ ಏರಿಸುತ್ತದೆ. ಏನಿರಬಹುದು ಆ ವಸ್ತು ಎಂದು ಯೋಚಿಸ್ತಾ ಇದ್ದೀರಾ? ಅದೇನು ಎಂದು ತಿಳಿದರೆ ನೀವು ಆಶ್ಚರ್ಯ ಪಡುವುದು ಖಂಡಿತ. ಎಕ್ಸಿಕ್ವಿಯೆಲ್ ಅವರು ಮಿಲೇನಿಯರ್ ಆಗುವಂತೆ ಮಾಡಿದ್ದು ವಜ್ರ, ಚಿನ್ನದ ಗಟ್ಟಿಯಲ್ಲ ಬದಲಾಗಿ ಆರು ದಶಕಗಳ ಹಿಂದಿನ ಅವರ ತಂದೆಯ ಬ್ಯಾಂಕ್ ಪಾಸ್‌ಬುಕ್.
ಪಾಸ್ ಸಿಕ್ಕಿದ್ದೇ ಆಶ್ಚರ್ಯ
ಎಕ್ಸಿಕ್ವಿಯೆಲ್ ಒಮ್ಮೆ ಮನೆ ಸ್ವಚ್ಛಗೊಳಿಸುತ್ತಿರುತ್ತಾರೆ. ಮನೆಯಲ್ಲಿನ ಹಳೆಯ ಸಾಮಾನುಗಳನ್ನು ಶೋಧಿಸುತ್ತಿರುವಾಗ ಒಂದು ವಸ್ತು ಕಣ್ಣಿಗೆ ಬೀಳುತ್ತದೆ. ಅದು ಒಂದು ಹಳೆಯ ಪಾಸ್‌ಬುಕ್ ಆಗಿರುತ್ತದೆ. ಅದನ್ನು ತೆಗೆದು ಕೊಡವಿ ನೋಡಿದಾಗ ಅವರಿಗೆ ಅರಿವಾಗುತ್ತದೆ, ಇದು ತನ್ನ ತಂದೆಯವರು ಬಹಳ ದಿನಗಳ ಹಿಂದೆ ಕಳೆದುಕೊಂಡ ಪಾಸ್‌ಬುಕ್ ಎಂಬುದು. ಅದು ಹಲವು ವರ್ಷಗಳಲ್ಲ, ದಶಕಗಳ ಹಿಂದಿನ ಪಾಸ್‌ಬುಕ್ ಆಗಿತ್ತು. ಈ ಬ್ಯಾಂಕ್ ಖಾತೆಯ ಬಗ್ಗೆ ಎಕ್ಸಿಕ್ವಿಯೆಲ್ ಅವರ ತಂದೆಗೆ ಮಾತ್ರ ತಿಳಿದಿತ್ತು. ಅವರು ಬೇರೆಯವರ ಬಳಿ ಹೇಳಿರಲಿಲ್ಲ. ಆದರೆ ಒಂದು ದಶಕದ ಹಿಂದೆ ಅವರು ಸಾವನ್ನಪ್ಪುತ್ತಾರೆ. ಅವರ ಸಾವಿನೊಂದಿಗೆ ಬ್ಯಾಂಕ್ ಖಾತೆಯ ಕಥೆಯೂ ಹುದುಗಿ ಹೋಗುತ್ತದೆ.
1960-70ರ ದಶಕದಲ್ಲಿ ಎಕ್ಸಿಕ್ವಿಯೆಲ್ ಅವರ ತಂದೆ ಸುಮಾರು 1.40 ಲಕ್ಷ ಚಿಲಿ ಪೆಸೊಗಳನ್ನು ಠೇವಣಿ ಇರಿಸಿದ್ದರು. ಅಲ್ಲದೇ, ಭವಿಷ್ಯದಲ್ಲಿ ಮನೆ ಖರೀದಿಸಬೇಕು ಎಂದು ಅವರು ಯೋಚಿಸಿದ್ದರು. ಅಂದಿನ ಆ ಠೇವಣಿ ಮೊತ್ತವು ಇಂದು ದ್ವಿಗುಣವಾಗಿತ್ತು.
ಮುಚ್ಚಿತ್ತು ಬ್ಯಾಂಕ್
ಆದರೆ ಎಕ್ಸಿಕ್ವಿಯೆಲ್ ಬ್ಯಾಡ್‌ಲಕ್ ನೋಡಿ, ಇವರ ಈ ಸಂತೋಷ ಬಹಳ ಕಾಲ ಉಳಿಯಲಿಲ್ಲ. ಯಾಕೆಂದರೆ ಇವರ ತಂದೆ ಠೇವಣಿ ಇಟ್ಟ ಬ್ಯಾಂಕ್ ಅನ್ನು ಮುಚ್ಚಲಾಗಿತ್ತು. ಅಲ್ಲದೇ ಹಲವರು ಈ ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದರು. ಆದರೆ ಅವರೆಲ್ಲರದ್ದೂ ಇದೇ ಕತೆ ಆಗಿತ್ತು. ಆದರೆ ಎಕ್ಸಿಕ್ವಿಯೆಲ್ ಅವರದ್ದು, ಬ್ಯಾಡ್‌ಲುಕ್ ಆಗಿರಲಿಲ್ಲ. ಪಾಸ್‌ಬುಕ್‌ನಲ್ಲಿನ ಒಂದೇ ಒಂದು ಪದ ಅವರ ಅದೃಷ್ಟವನ್ನೇ ಬದಲಿಸಿತ್ತು. ಆ ಪದ ಯಾವುದೆಂದರೆ ʼಸ್ಟೇಟ್ ಗ್ಯಾರೆಂಟೀಡ್ʼ. ಅದರ ಪ್ರಕಾರ ಠೇವಣಿ ಹಣವನ್ನು ಪಾವತಿಸಲು ಬ್ಯಾಂಕ್ ವಿಫಲವಾದರೆ, ಸರ್ಕಾರ ಮರುಪಾವತಿ ಮಾಡಬೇಕು ಎಂಬುದಾಗಿದೆ.
ಕೊನೆಗೂ ಸಿಕ್ಕಿತು ಜಯ
ಆದರೆ ಈ ಗ್ಯಾರೆಂಟಿಯನ್ನು ತಿರಸ್ಕರಿಸಿದ ಸರ್ಕಾರ ಅದನ್ನು ಒಪ್ಪಲು ಸಿದ್ಧವಿರಲಿಲ್ಲ. ಇದರಿಂದ ಎಕ್ಸಿಕ್ವಿಯೆಲ್ ಕಾನೂನು ಹೋರಾಟಕ್ಕೆ ಮುಂದಾಗುತ್ತಾರೆ. ಪ್ರಕರಣವನ್ನು ನ್ಯಾಯಲಯಕ್ಕೆ ಒಪ್ಪಿಸುತ್ತಾರೆ. ಈ ಹಣವು ತನ್ನ ತಂದೆ ಬಹಳ ಕಷ್ಟಪಟ್ಟು ಗಳಿಕೆ ಮಾಡಿದ್ದು, ಎಂದು ಭಾವನಾತ್ಮಕವಾಗಿ ವಾದಿಸುತ್ತಾರೆ. ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಲಯವು ಎಕ್ಸಿಕ್ವಿಯೆಲ್ ಪರವಾಗಿ ತೀರ್ಪು ನೀಡುತ್ತದೆ. ಅಲ್ಲದೆ ನ್ಯಾಯಾಲಯವು ಅವರಿಗೆ 1.2 ಮಿಲಿಯನ್ ಡಾಲರ್ ಸಿಗಬೇಕು ಎಂದು ತೀರ್ಪಿನಲ್ಲಿ ಹೇಳುತ್ತದೆ (ಅಂದರೆ ಸುಮಾರು 10 ಕೋಟಿ). ಇಷ್ಟೇ ಅಲ್ಲದೆ, ಅದಕ್ಕೆ ಬಡ್ಡಿ ಸೇರಿಸಿ ನೀಡಬೇಕು ಎಂದು ನ್ಯಾಯಾಲಯ ಹೇಳುತ್ತದೆ. ಹೀಗೆ ಎಕ್ಸಿಕ್ವಿಯೆಲ್ ರಾತ್ರೋರಾತ್ರಿ ಯಾರೂ ಊಹಿಸದ ರೀತಿಯಲ್ಲಿ ಶ್ರೀಮಂತರಾಗುತ್ತಾರೆ.