logo
ಕನ್ನಡ ಸುದ್ದಿ  /  ಜೀವನಶೈಲಿ  /  International Tea Day 2022: ಟೀ ಟೈಮ್‌; ಅಂತಾರಾಷ್ಟ್ರೀಯ ಚಹಾ ದಿನ, ಇತಿಹಾಸ ಮತ್ತು ಮಹತ್ವ ತಿಳ್ಕೊಂಡು ಟೀ ಕುಡಿಯೋಣ!

International Tea Day 2022: ಟೀ ಟೈಮ್‌; ಅಂತಾರಾಷ್ಟ್ರೀಯ ಚಹಾ ದಿನ, ಇತಿಹಾಸ ಮತ್ತು ಮಹತ್ವ ತಿಳ್ಕೊಂಡು ಟೀ ಕುಡಿಯೋಣ!

HT Kannada Desk HT Kannada

Dec 14, 2022 04:28 PM IST

google News

ಮೈಗ್ರೇನ್‌ ಶಮನಕ್ಕೆ ಒಳ್ಳೆಯದು ತುಳಸಿ ಚಹಾ

  • International Tea Day 2022: ಕೆಲವರಿಗೆ ದಿನದ ಯಾವುದೇ ಹೊತ್ತಿನಲ್ಲಿ ಕೇಳಿದ್ರೂ ʻಟೀ ಟೈಮ್‌ʼ. ಭಾರತ ಮತ್ತು ಇತರೆ ಕೆಲವು ದೇಶಗಳಿಗೆ ಡಿಸೆಂಬರ್‌ 15ರಂದು ಅಂತಾರಾಷ್ಟ್ರೀಯ ಚಹಾದಿನ. ಇನ್ನು ಕೆಲವು ದೇಶಗಳಿಗೆ ಮೇ 21 ಅಂತಾರಾಷ್ಟ್ರೀಯ ಚಹಾದಿನ. ಅದೇನೇ ಇರಲಿ. ಮಾಹಿತಿ ತಿಳ್ಕೊಳ್ಳೋದಕ್ಕೆ ದಿನ ಒಂದು ನಿಮಿತ್ತ. ಇಲ್ಲಿದೆ ಅದರ ವಿವರ. 

ಮೈಗ್ರೇನ್‌ ಶಮನಕ್ಕೆ ಒಳ್ಳೆಯದು ತುಳಸಿ ಚಹಾ
ಮೈಗ್ರೇನ್‌ ಶಮನಕ್ಕೆ ಒಳ್ಳೆಯದು ತುಳಸಿ ಚಹಾ (Unsplash)

ಚಹ ಯಾರಿಗೆ ಇಷ್ಟ ಇಲ್ಲ ಹೇಳಿ? ಬಹುತೇಕರಿಗೆ ಚಹಾ ಇಲ್ಲದೇ ಹೋದರೆ ದಿನದ ಆರಂಭವೇ ಆಗಲ್ಲ. ಕೆಲಸ ಮಾಡೋದಕ್ಕೆ ಮೂಡ್‌ ಬರಬೇಕು, ನಿದ್ದೆ ಓಡಿಸಬೇಕು ಅಂತ ಚಹಾ ಕುಡಿಯುವವರು ಎಷ್ಟೋ ಜನ. ಹೌದು ಟೀ ಟೈಮ್‌ ಗೋಸ್ಕರ ಕಾಯುವುದೇ ಒಂದು ರೀತಿಯ ಖುಷಿ.

ಚಹಾ ಎಂದರೆ ಸಾಲದು. ಅದರಲ್ಲೂ ಅನೇಕ ವೆರೈಟಿಗಳಿವೆ. ಕಾಶ್ಮೀರಿ ಕಹ್ವಾ, ಶುಂಠಿ ಟೀ, ತುಳಸಿ ಟೀ, ಸುಲೈಮಾನಿ ಟೀ, ರೋಂಗಾ ಸಾಹ್, ಮಸಾಲಾ ಟೀ, ಲೆಮನ್‌ಗ್ರಾಸ್ ಟೀ, ಏಲಕ್ಕಿ ಟೀ, ಲಿಂಬು ಚಾಯ್, ಗ್ರೀನ್ ಟೀ, ಗುರ್ ಗುರ್ ಚಾಯ್/ಬಟರ್‌ ಮುಂತಾದವು ಕೆಲವನ್ನು ಒಮ್ಮೆಯಾದರೂ ಕುಡಿದು ರುಚಿ ನೋಡಬೇಕು.

ಅಂದ ಹಾಗೆ, ನಾಳೆ ಅಂದರೆ ಡಿಸೆಂಬರ್‌ 15 - ಅಂತಾರಾಷ್ಟ್ರೀಯ ಚಹಾ ದಿನ. ಇದನ್ನು ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ವಿಯೆಟ್ನಾಂ, ಇಂಡೋನೇಷಿಯಾ, ಕೀನ್ಯಾ, ಮಲಾವಿ, ಮಲೇಷ್ಯಾ, ಉಗಾಂಡಾ ಮತ್ತು ತಾಂಜಾನಿಯಾ ಸೇರಿ ಅನೇಕ ರಾಷ್ಟ್ರಗಳು ಆಚರಿಸುತ್ತವೆ. ಗೂಗಲ್‌ ಮಾಡಿ ನೋಡಿದರೆ ಅಂತಾರಾಷ್ಟ್ರೀಯ ಚಹಾ ದಿನ ಮೇ 21 ಎಂದು ತೋರಿಸುತ್ತದೆ. ಗಾಬರಿ ಬೀಳಬೇಡಿ. ಕೆಲವು ರಾಷ್ಟ್ರಗಳು ಆ ದಿನವನ್ನು ಅಂತಾರಾಷ್ಟ್ರೀಯ ಚಹಾ ದಿನವನ್ನಾಗಿ ಆಚರಿಸುತ್ತವೆ.

ಚಹಾವು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯೊಂದಿಗೆ ಪರಿಮಳಯುಕ್ತ ಪಾನೀಯವಾಗಿದೆ. ನೀರಿನ ನಂತರ, ಇದು ವಿಶ್ವದ ಎರಡನೇ ಅತ್ಯಂತ ಜನಪ್ರಿಯ ಪಾನೀಯ. ಕೆಲವು ಜನರ ಜೀವನದಲ್ಲಿ ಚಹಾವು ಒಂದು ಪ್ರಮುಖ ಅಂಶವಾಗಿದೆ ಏಕೆಂದರೆ ಅದು ಅವರ ಬದುಕಿಗೆ ಒಂದು ಲಯವನ್ನು ಒದಗಿಸುವುದಾಗಿ ಅವರು ಭಾವಿಸುತ್ತಿದ್ದಾರೆ.

ಪ್ರಸ್ತುತ ವಿಶ್ವದ ಅತಿದೊಡ್ಡ ಚಹಾ ರಫ್ತುದಾರ ರಾಷ್ಟ್ರ ಚೀನಾ. 2007 ರಲ್ಲಿ ಟೀ ಬೋರ್ಡ್ ಆಫ್ ಇಂಡಿಯಾ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಚಹಾದ ಸುಮಾರು 80% ಅನ್ನು ಭಾರತೀಯರೇ ಸೇವಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಟೀ ದಿನ 2022: ಇತಿಹಾಸ (International Tea Day 2022 History)

ಭಾರತದಲ್ಲಿ ಮೊದಲ ಸಲ ಅಂತಾರಾಷ್ಟ್ರೀಯ ಚಹಾ ದಿನವನ್ನು 2005ರಲ್ಲಿ ಆಚರಿಸಲಾಗಿತ್ತು. ಮತ್ತೊಂದೆಡೆ, ಭಾರತ ಸರ್ಕಾರವು 2015 ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಗೆ ಅಂತರರಾಷ್ಟ್ರೀಯ ಚಹಾ ದಿನವನ್ನು ವಿಶ್ವದಾದ್ಯಂತ ವಿಸ್ತರಿಸಲು ಶಿಫಾರಸು ಮಾಡಿತು. ವಿಶ್ವಸಂಸ್ಥೆಯು ಮೇ 21 ಅನ್ನು ಅಂತರರಾಷ್ಟ್ರೀಯ ಚಹಾ ದಿನ ಎಂದು ಗೊತ್ತುಪಡಿಸಿತು. ಏಕೆಂದರೆ ಹೆಚ್ಚಿನ ಚಹಾ-ಉತ್ಪಾದಿಸುವ ದೇಶಗಳಲ್ಲಿ ಚಹಾ ಕೊಯ್ಲು ಅವಧಿಯು ಮೇ ತಿಂಗಳಲ್ಲಿ ಪ್ರಾರಂಭವಾಗುತ್ತದೆ.

ಅಂತರರಾಷ್ಟ್ರೀಯ ಚಹಾ ದಿನ 2022: ಮಹತ್ವ (International Tea Day 2022 Importance)

ಚಹಾ ಕೃಷಿಗೆ ಹೆಚ್ಚಿನ ಗಮನ ಮತ್ತು ಶ್ರಮದ ಅಗತ್ಯವಿದೆ. ಪ್ರತಿ ವರ್ಷ, ಚಹಾ ಉತ್ಪಾದನೆಯನ್ನು ಎದುರಿಸುತ್ತಿರುವ ಸವಾಲುಗಳು ಮತ್ತು ಜಾಗತಿಕ ಚಹಾ ವ್ಯಾಪಾರವು ಚಹಾ ತೋಟಗಳು, ಸ್ಥಳೀಯ ಚಹಾ ಬೆಳೆಗಾರರು ಮತ್ತು ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸರ್ಕಾರ ಮತ್ತು ಸಾರ್ವಜನಿಕರ ಗಮನವನ್ನು ಸೆಳೆಯಲು ಅಂತರರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಪ್ರಕಾರ, ಚಹಾದಲ್ಲಿ ಆರೋಗ್ಯ ಚಿಕಿತ್ಸಕ ಮೌಲ್ಯ ಇದೆ. ಇದು ವಿಶೇಷವಾಗಿ ಹಾಲು ಹಾಕದ ಚಹಾ ಜನರ ಆರೋಗ್ಯಕ್ಕೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ