logo
ಕನ್ನಡ ಸುದ್ದಿ  /  ಜೀವನಶೈಲಿ  /  ಅಂತರರಾಷ್ಟ್ರೀಯ ಮಹಿಳಾ ದಿನ 2023: ಲಿಂಗ ತಾರತಮ್ಯ ಎದುರಿಸಿ ವಿವಿಧ ಕ್ಷೇತ್ರಗಳಲ್ಲಿ ಮೊದಲ ಹೆಜ್ಜೆ ಇರಿಸಿದ ಭಾರತದ ದಿಟ್ಟ ಮಹಿಳೆಯರಿವರು!

ಅಂತರರಾಷ್ಟ್ರೀಯ ಮಹಿಳಾ ದಿನ 2023: ಲಿಂಗ ತಾರತಮ್ಯ ಎದುರಿಸಿ ವಿವಿಧ ಕ್ಷೇತ್ರಗಳಲ್ಲಿ ಮೊದಲ ಹೆಜ್ಜೆ ಇರಿಸಿದ ಭಾರತದ ದಿಟ್ಟ ಮಹಿಳೆಯರಿವರು!

Reshma HT Kannada

Mar 07, 2023 03:37 PM IST

google News

ಅಂತರರಾಷ್ಟ್ರೀಯ ಮಹಿಳಾ ದಿನ 2023

    • International women's day 2023: 1st women in every field: ಅಂತರರಾಷ್ಟ್ರೀಯ ಮಹಿಳಾದಿನದ ಈ ಶುಭ ಸಂದರ್ಭದಲ್ಲಿ ಹಲವು ಪ್ರಥಮಗಳಿಗೆ ಕಾರಣವಾದ ಭಾರತೀಯ ಮಹಿಳೆಯರನ್ನು ಇಲ್ಲಿ ನೆನೆಯಲಾಗಿದೆ. ಲಿಂಗ ತಾರತಮ್ಯವನ್ನು ಮೆಟ್ಟಿ ನಿಂತು ಹೆಣ್ಣು ಸಬಲೆ ಎಂಬುದನ್ನು ಸಾಧಿಸಿದ ಗಿಟ್ಟಿಗಿತ್ತಿಯರು ಇವರು. ಅಂತಹ ಕೆಲವು ಮಹಿಳೆಯರ ಪರಿಚಯ ಇಲ್ಲಿದೆ.
ಅಂತರರಾಷ್ಟ್ರೀಯ ಮಹಿಳಾ ದಿನ 2023
ಅಂತರರಾಷ್ಟ್ರೀಯ ಮಹಿಳಾ ದಿನ 2023

ಪ್ರಪಂಚದಾದ್ಯಂತ ಹೆಣ್ಣುಮಕ್ಕಳು ತಮ್ಮನ್ನು ಸಂಭ್ರಮಿಸುವ ದಿನ ನಾಳೆ (ಮಾರ್ಚ್‌ 8). ಇಂದು ಮಹಿಳೆಯರು ಕಾಲಿಡದ ಕ್ಷೇತ್ರವಿಲ್ಲ, ಪ್ರತಿ ಕ್ಷೇತ್ರದಲ್ಲೂ ಹೆಜ್ಜೆ ಗುರುತು ಮೂಡಿಸುವ ಜೊತೆಗೆ ಯಶಸ್ಸು ಗಳಿಸಿದ್ದಾಳೆ. ಸಾಧನೆಯ ವಿಷಯದಲ್ಲಿ ಭಾರತೀಯ ಹೆಣ್ಣುಮಕ್ಕಳು ಹಿಂದೆ ಉಳಿದಿಲ್ಲ.

ಭಾರತೀಯ ಮಹಿಳಾ ಇತಿಹಾಸದಲ್ಲಿ ಹಲವು ಪ್ರವರ್ತಕರಿದ್ದಾರೆ. ಅವರು ಲಿಂಗ ತಾರತಮ್ಯವನ್ನು ಮೆಟ್ಟಿ ನಿಂತು ತಮ್ಮ ಹಕ್ಕಿಗಾಗಿ ಶ್ರಮಿಸಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಕಾಲಿರಿಸುವ ಮೂಲಕ ಪ್ರಥಮಕ್ಕೆ ನಾಂದಿ ಹಾಡಿದ ಕೆಲವು ಮಹಿಳಾ ಗಟ್ಟಿಗಿತ್ತಿಯರ ಬಗ್ಗೆ ತಿಳಿಸುವ ಪ್ರಯತ್ನ ಇಲ್ಲಿದೆ.

ರಜಿಯಾ ಸುಲ್ತಾನ್‌

ದೆಹಲಿ ಸಂಸ್ಥಾನವನ್ನು ಆಳುವ ಮೂಲಕ ಭಾರತ ಮೊದಲ ಮಹಿಳಾ ರಾಣಿ ಎನ್ನಿಸಿಕೊಂಡವರು. ಇವರು 1231 ರಿಂದ 1232ರವರೆಗೆ ಆಳ್ವಿಕೆ ನಡೆಸಿದ್ದರು. ದೆಹಲಿ ಸಂಸ್ಥಾನವನ್ನು ಆಳಿದ ಏಕೈಕ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಯೂ ಈಕೆಗಿದೆ.

ಆನಂದಿಬಾಯಿ ಗೋಪಾಲ್‌ರಾವ್‌ ಜೋಷಿ

ಆನಂದಿಬಾಯಿ ಗೋಪಾಲ್‌ರಾವ್‌ ಜೋಷಿ ಭಾರತದ ಮೊದಲ ಮಹಿಳಾ ವೈದ್ಯೆ. 1887ರಲ್ಲಿ ಇವರು ವೈದ್ಯ ವೃತ್ತಿ ಆರಂಭಿಸಿದ್ದರು. ಪಾಶ್ಚಾತ್ಯ ವೈದ್ಯಕೀಯ ಪದ್ಧತಿಯ ತರಬೇತಿ ಪಡೆದ ಮೊದಲ ಭಾರತೀಯ ಮಹಿಳೆ ಇವರು ಎಂಬ ಹಿರಿಮೆಯೂ ಇವರದ್ದು. ಭಾರತದಿಂದ ಅಮೆರಿಕಕ್ಕೆ ಪ್ರಯಾಣಿಸಿದ ಮೊದಲು ಮಹಿಳೆಯೂ ಇವರಾಗಿದ್ದಾರೆ.

ಕಿರಣ್‌ ಬೇಡಿ

ಕಿರಣ್‌ ಬೇಡಿ ಹೆಸರು ಕೇಳದವರಿಲ್ಲ. ಇವರು ಭಾರತದ ಮೊದಲ ಮಹಿಳಾ ಐಪಿಎಸ್‌ ಅಧಿಕಾರಿ. 2003ರಲ್ಲಿ ಯುನೈಟೆಡ್‌ ನೇಷನ್ಸ್‌ ಸಿವಿಲ್‌ ಪೊಲೀಸ್‌ ಅಡ್ವೈಸರ್‌ ಹುದೆಯನ್ನು ಅಲಂಕರಿಸಿದ್ದರು. ಈ ಹುದ್ದೆಯನ್ನು ಅಲಂಕರಿಸಿದ ಭಾರತದ ಮೊದಲ ಮಹಿಳೆಯೂ ಇವರಾಗಿದ್ದಾರೆ.

ಇಂದಿರಾಗಾಂಧಿ

ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ಇಂದಿರಾಗಾಂಧಿ ಅವರದ್ದು. ಇವರು 1966 ರಿಂದ 1977ರವರೆಗೆ ಭಾರತದ ಪ್ರಧಾನಿಯಾಗಿದ್ದರು.

ಪ್ರತಿಭಾ ಪಾಟೀಲ್‌

ಪ್ರತಿಭಾ ದೇವಿಸಿಂಗ್‌ ಪಾಟೀಲ್‌ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹಿರಿಮೆಗೆ ಪಾತ್ರರಾದವರು. 2007ರ ಜುಲೈ 25ರಂದು ಇವರು ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದರು.

ಸುಚೇತಾ ಕೃಪಲಾನಿ

ಇವರು ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ. 1963ರಿಂದ 1967ರವರೆಗೆ ಇವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.

ಮೀರಾ ಸಾಹಿಬ್‌ ಫಾತಿಮಾ ಬೀಬಿ

ನ್ಯಾಯಾಂಗಕ್ಕೆ ಹಾಜರಾಗಿ ಭಾರತದಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾದ ಮೊದಲ ಮಹಿಳಾ ಇವರು. ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರೂ ಆಗಿದ್ದಾರೆ ಈಕೆ. ಇವರು ಕೆಲಕಾಲ ತಮಿಳುನಾಡಿನ ರಾಜ್ಯಪಾಲರೂ ಆಗಿದ್ದರು.

ನೀರ್ಜಾ ಭಾನೋಟ್‌

ಅಶೋಕ ಚಕ್ರ ಪ್ರಶಸ್ತಿಗೆ ಭಾಜನರಾದ ಭಾರತದ ಮೊದಲ ಮಹಿಳೆ ನೀರ್ಜಾ ಭಾನೋಟ್‌. ವಿಮಾನ ಅಪಹರಣದ ಸಂದರ್ಭದಲ್ಲಿ ಹೋರಾಡಿ ಪ್ರಯಾಣಿಕರ ಜೀವ ಉಳಿಸಿ, ವೀರ ಮರಣ ಹೊಂದಿದ ಈಕೆಗೆ ಅಶೋಕ ಚಕ್ರ ನೀಡಿ ಗೌರವಿಸಲಾಗಿತ್ತು.

ಮೀರಾ ಕುಮಾರ್‌

ಮೀರಾಕುಮಾರ್‌ ರಾಜತಾಂತ್ರಿಕ ರಾಜಕಾರಣಿ ಎನ್ನಿಸಿಕೊಂಡವರು. 1980ರ ದಶಕದ ಮಧ್ಯಭಾಗದಲ್ಲಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದ ಗಿಟ್ಟಿಗಿತ್ತಿ ಈಕೆ. 2009ರಲ್ಲಿ ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗುತ್ತಾರೆ.

ದುರ್ಗಾ ಬ್ಯಾನರ್ಜಿ

ದುರ್ಗಾ ಅವರು ಮೊದಲ ಬಾರಿಗೆ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದಾಗ ವಾಣಿಜ್ಯ ಪೈಲಟ್ ಬದಲಿಗೆ ಫ್ಲೈಟ್ ಅಟೆಂಡೆಂಟ್ ಹುದ್ದೆಯನ್ನು ನೀಡಲಾಗಿತ್ತು. ಪೈಲಟ್ ಆಗಬೇಕೆಂಬ ದೃಢ ನಿಶ್ಚಯದ ಮೇಲೆ ನಿಂತಿದ್ದ ಅವರು 1956 ರಲ್ಲಿ ಭಾರತೀಯ ಏರ್‌ಲೈನ್ಸ್‌ನ ಮೊದಲ ಮಹಿಳಾ ಪೈಲಟ್ ಮತ್ತು ಕ್ಯಾಪ್ಟನ್ ಆದರು.

ಕಾರ್ನೆಲಿಯಾ ಸೊರಾಬ್ಜಿ

ಕಾರ್ನೆಲಿಯಾ ಸೊರಾಬ್ಜಿ ಲೇಖಕಿ ಹಾಗೂ ಸಮಾಜ ಸುಧಾರಕಿ ಆಗಿದ್ದವರು. ಆಕ್ಸ್‌ಫರ್ಡ್‌ನಿಂದ ಕಾನೂನು ಪದವಿಯನ್ನು ಪಡೆದು, ಭಾರತದ ಮೊದಲ ಮಹಿಳಾ ವಕೀಲರಾದರು.

ಸುರೇಖಾ ಯಾದವ್‌

ಭಾರತದಲ್ಲಿ ಪ್ಯಾಸೆಂಜರ್‌ ರೈಲು ಓಡಿಸಿದ ಮೊದಲ ಮಹಿಳೆ ಸುರೇಖಾ ಯಾದವ್‌. 1988ರಲ್ಲಿ ಮೊದಲ ಬಾರಿಗೆ ರೈಲು ಓಡಿಸುವ ಮೂಲಕ ಭಾರತ ಮಾತ್ರವಲ್ಲ, ಏಷ್ಯಾ ಖಂಡದಲ್ಲೇ ರೈಲು ಓಡಿಸಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದರು.

ಎ ಲಲಿತಾ

ಎ ಲಲಿತಾ 1943ರಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆಯುತ್ತಾರೆ. ಆ ಮೂಲಕ ಭಾರತದ ಮೊದಲ ಮಹಿಳಾ ಎಂಜಿನಿಯರ್‌ ಪಟ್ಟಕ್ಕೇರುತ್ತಾರೆ. ಇವರ ತಂದೆ ಗಂಡುಮಕ್ಕಳ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಆ ಕಾಲದಲ್ಲಿ ಲಿಲಿತಾ ಏಕೈಕ ವಿದ್ಯಾರ್ಥಿನಿಯಾಗಿದ್ದರು.

ಕರ್ಣಂ ಮಲ್ಲೇಶ್ವರಿ

2000 ಇಸವಿಯ ಸಿಡ್ನಿ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದರು.

ವಿದ್ಯಾ ಮಾನುಷಿ

ಭಾರತದ ಮೊದಲ ಮಹಿಳಾ ಪತ್ರಕರ್ತೆ ಎಂಬ ಹೆಮ್ಮೆಗೆ ಪಾತ್ರರಾದವರು ವಿದ್ಯಾ ಮಾನುಷಿ. ಇವರು ಹಲವು ಸಂಸ್ಥೆಗಳಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ.

ಹೋಮೈ ವ್ಯಾರವಲ್ಲ

ಇಂದಿಗೂ ಬೆರಳೆಣಿಕೆಯಷ್ಟು ಜನ ಇರುವ ಫೋಟೊಗ್ರಫಿ ಕ್ಷೇತ್ರದ ಮೊದಲ ಮಹಿಳೆ ಹೋಮೈ ವ್ಯಾರವಲ್ಲ.

ದುರ್ಗಾಬಾಯಿ ಕಾಮತ್‌

ಭಾರತೀಯ ಸಿನಿರಂಗಕ್ಕೆ ಕಾಲಿರಿಸಿದ ಮೊದಲ ಮಹಿಳಾ ನಟಿ ದುರ್ಗಾಬಾಯಿ ಕಾಮತ್‌. ಮರಾಠಿ ರಂಗಭೂಮಿಯಲ್ಲಿ ನಟಿಸುತ್ತಿದ್ದ ಇವರು ದಾದಾ ಸಾಹೇಬ್‌ ಫಾಲ್ಕೆ ಅವರ ಎರಡನೇ ಚಿತ್ರ ಮೋಹಿನಿ ಭಸ್ಮಾಸುರದಲ್ಲಿ ನಟಿಸಿದ್ದರು.

ಫಾತಿಮಾ ಬೇಗಂ

ಭಾರತೀಯ ಚಿತ್ರರಂಗ ಕಂಡ ಮೊದಲ ಮಹಿಳಾ ಚಲನಚಿತ್ರ ನಿರ್ದೇಶಕಿ ಫಾತಿಮಾ ಬೇಗಂ. 1926ರಲ್ಲಿ ಬುಲ್‌ ಬುಲ್‌ ಇ ಪರಿಸ್ತಾನ್‌ ಚಿತ್ರದ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ ಖ್ಯಾತಿ ಇವರದ್ದು.

ಶೀಲಾ ದ್ವಾರೆ

ಆಟೊ ರಿಕ್ಷಾ ಓಡಿಸುವುದು ಹೆಣ್ಣುಮಕ್ಕಳಿಂದ ಸಾಧ್ಯವಿಲ್ಲ ಎಂಬ ಮಾತನ್ನು ಧಿಕ್ಕರಿಸಿ ರಿಕ್ಷಾ ಓಡಿಸಿದ ಮೊದಲ ಭಾರತೀಯ ಮಹಿಳೆ ಶೀಲಾ ದ್ವಾರೆ. 1988ರಲ್ಲಿ ಇವರು ರಿಕ್ಷಾ ಓಡಿಸಲು ಆರಂಭಿಸಿದ್ದರು. ಇವರು ಪುಣೆಯವರು.

ಅರುಣಿಮಾ ಸಿನ್ಹಾ

ತಮ್ಮ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಅತಿ ಎತ್ತರದ ಮೌಂಟ್‌ ಎವೆರೆಸ್ಟ್‌ ಪರ್ವತವನ್ನು ಏರಿದವರು ಈಕೆ. ಅಂಗವೈಕಲ್ಯದ ನಡುವೆಯೂ ಎವರೆಸ್ಟ್‌ ಹತ್ತಿದ ಭಾರತದ ಮೊದಲ ಮಹಿಳೆ ಇವರು. ರಾಷ್ಟ್ರಮಟ್ಟದ ವಾಲಿಬಾಲ್‌ ಆಟಗಾರ್ತಿ ಆಗಿರುವ ಅರುಣಿಮಾ ಚಲಿಸುತ್ತಿದ್ದ ರೈಲಿನಿಂದ ಬಿದ್ದು ತಮ್ಮ ಕಾಲನ್ನು ಕಳೆದುಕೊಂಡಿದ್ದರು.

ಇವರಷ್ಟೇ ಅಲ್ಲದೇ ಇನ್ನೂ ಹಲವು ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಮೊದಲ ಹೆಜ್ಜೆ ಇರಿಸುವ ಮೂಲಕ ಗಂಡುಮಕ್ಕಳಿಗೆ ತಾವೇನು ಕಮ್ಮಿ ಇಲ್ಲ, ಗಂಡು-ಹೆಣ್ಣು ಸಮಾನರು ಎಂಬುದನ್ನು ಸಾಬೀತು ಪಡಿಸಿದ್ದಾರೆ. ವಿವಿಧ ಕ್ಷೇತ್ರದ ಪ್ರಥಮಗಳಿಗೆ ಕಾರಣರಾದ ಎಲ್ಲಾ ಹೆಣ್ಣುಮಕ್ಕಳಿಗೂ ನಮ್ಮ ಕಡೆಯಿಂದ ಒಂದು ಸಲಾಂ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ