logo
ಕನ್ನಡ ಸುದ್ದಿ  /  ಜೀವನಶೈಲಿ  /  Women's Day Special: ಮನೆ ಬಜೆಟ್ ನಿಭಾಯಿಸೋ ಮಹಿಳೆಯರಿಗೆ ತಿಳಿದಿರಲೇ ಬೇಕಾದ 10 ಮನಿ ಟಿಪ್ಸ್ ಇವು

Women's Day Special: ಮನೆ ಬಜೆಟ್ ನಿಭಾಯಿಸೋ ಮಹಿಳೆಯರಿಗೆ ತಿಳಿದಿರಲೇ ಬೇಕಾದ 10 ಮನಿ ಟಿಪ್ಸ್ ಇವು

Meghana B HT Kannada

Mar 07, 2024 12:36 PM IST

google News

ಮಹಿಳೆಯರಿಗೆ ಮನಿ ಟಿಪ್ಸ್ (ಪ್ರಾತಿನಿಧಿಕ ಚಿತ್ರ)

    • Money Tips: ಕರ್ನಾಟಕದ ಬಹುತೇಕ ಮನೆಗಳಲ್ಲಿ ಬಜೆಟ್ ನಿಭಾಯಿಸುವುದು ಮಹಿಳೆಯರೇ. ಮಕ್ಕಳ ಭವಿಷ್ಯ, ವಿದ್ಯಾಭ್ಯಾಸ, ಮದುವೆ ಮತ್ತು ತಮ್ಮ ವೃದ್ಧಾಪ್ಯದ ಆಸರೆಗೆಂದು ಹಣ ಉಳಿಸುವ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಅಂಥವರಿಗೆಂದೇ ಸಂಗ್ರಹಿಸಿರುವ 10 ಟಿಪ್ಸ್ ಇಲ್ಲಿದೆ. (ಬರಹ: ರಾಘವೇಂದ್ರ ಭಟ್ಟ)
 ಮಹಿಳೆಯರಿಗೆ ಮನಿ ಟಿಪ್ಸ್ (ಪ್ರಾತಿನಿಧಿಕ ಚಿತ್ರ)
ಮಹಿಳೆಯರಿಗೆ ಮನಿ ಟಿಪ್ಸ್ (ಪ್ರಾತಿನಿಧಿಕ ಚಿತ್ರ)

ಹಣಕಾಸು ನಿರ್ವಹಣೆಯು ಪ್ರತಿಯೊಬ್ಬರೂ ತಿಳಿಯಬೇ ಅತ್ಯಗತ್ಯ ಕೌಶಲವಾಗಿದೆ. ನನ್ನ ಈವರೆಗಿನ ಅನುಭವದಲ್ಲಿ ಹೆಂಗಸರು ಮತ್ತು ಗಂಡಸರು ಹಣ ಉಳಿಸಲು ಹೊಂದಿರುವ ಉದ್ದೇಶಗಳು ಬೇರೆ ಎಂಬುದನ್ನು ಗಮನಿಸಿದ್ದೇನೆ. ಪುರುಷರು ಪ್ರತಿಷ್ಠೆಯ ಬಗ್ಗೆ ಯೋಚಿಸಿದರೆ, ಮಹಿಳೆಯರು ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಮಹಿಳೆಯರು ಮತ್ತು ಹಣಕಾಸು ಎನ್ನುವ ವಿಷಯದ ಬಗ್ಗೆ ಮಾತನಾಡುವಾಗ ಕೆಲಸಕ್ಕೆ ಹೋಗುವ ಉದ್ಯೋಗಸ್ಥ ಮಹಿಳೆಯರು ಮತ್ತು ಮನೆಯಲ್ಲಿಯೇ ಇದ್ದು ಪೂರ್ಣ ಅವಧಿಯನ್ನು ಕುಟುಂಬ ಪೋಷಣೆಗೆ ಮೀಸಲಿಟ್ಟ ಮಹಿಳೆಯರು ಎಂದು ಎರಡು ರೀತಿ ವಿಂಗಡಿಸಿಕೊಳ್ಳುತ್ತೇವೆ. ಒಟ್ಟಾರೆಯಾಗಿ ಕರ್ನಾಟಕದ ಬಹುತೇಕ ಮನೆಗಳಲ್ಲಿ ಇಂದಿಗೂ ಮನೆ ಬಜೆಟ್ ನಿರ್ವಹಿಸುವುದು ಮಹಿಳೆಯರೇ. ಈ ವಿಚಾರದಲ್ಲಿ ಉದ್ಯೋಗಸ್ಥರು ಅಥವಾ ಗೃಹಿಣಿ ಎನ್ನುವ ವ್ಯತ್ಯಾಸ ಕಡಿಮೆ.

ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯರು ತಿಳಿದಿರಲೇಬೇಕಾದ 10 ಅಂಶಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ. ಇದರಲ್ಲಿ ಹೊಸದೇನಿದೆ ಎಂದು ನಿಮಗೆ ಅನ್ನಿಸಬಹುದು. ನಮಗೆ ಎಷ್ಟೋ ವಿಷಯ ಈಗಾಗಲೇ ತಿಳಿದಿರುತ್ತದೆ. ಆದರೆ ಆಗಾಗ ಅವನ್ನು ನೆನಪಿಸಿಕೊಳ್ಳುವುದು ಸಹ ಅತ್ಯಗತ್ಯ. ಈ ಬರಹವನ್ನು ನೀವು ಪೂರ್ತಿ ಓದಿ, ಅಷ್ಟೇ ಅಲ್ಲ; ನಿಮ್ಮ ಆತ್ಮೀಯ ಗೆಳತಿಯೊಂದಿಗೆ ಹಂಚಿಕೊಳ್ಳಿ. ಹಣಕಾಸು ಜಾಗೃತಿ ಪಡೆಯಲು ಅವರಿಗೂ ನೆರವಾಗಿ.

1) ಹಣಕಾಸು ಶಿಕ್ಷಣ: ತಿಂಗಳ ಆದಾಯ ಮತ್ತು ವೆಚ್ಚವನ್ನು ದಾಖಲಿಸಲು ಶುರು ಮಾಡಿ. ಮನೆ ಬಜೆಟ್, ಮುಂದಿನ ಅಗತ್ಯಗಳು, ಉಳಿತಾಯ, ಹೂಡಿಕೆ ಮತ್ತು ಸಾಲ ನಿರ್ವಹಣೆಯಂತಹ ಮೂಲ ಪರಿಕಲ್ಪನೆಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಿ.

2) ಹಣಕಾಸಿನ ಗುರಿಗಳು: ಅಲ್ಪಾವಧಿಯ ಮತ್ತು ದೀರ್ಘಾವಧಿಯ ಹಣಕಾಸಿನ ಗುರಿಗಳನ್ನು ಸ್ಪಷ್ಟವಾಗಿ ವಿವರಿಸಿಕೊಳ್ಳಿ. ನಿವೃತ್ತಿಗಾಗಿ ಉಳಿತಾಯ, ಮಕ್ಕಳ ವಿದ್ಯಾಭ್ಯಾಸ, ಮದುವೆ, ಮನೆ ಖರೀದಿಸುವುದು ಅಥವಾ ವ್ಯಾಪಾರವನ್ನು ಪ್ರಾರಂಭಿಸುವುದು ನಿಮ್ಮ ಹಣಕಾಸು ಗುರಿಗಳ ಭಾಗ ಆಗಿರಬಹುದು.

3) ಬಜೆಟ್ ಇರಲಿ: ನಿಮ್ಮ ಹಣಕಾಸಿನ ಗುರಿಗಳಿಗೆ ಹೊಂದಿಕೆಯಾಗುವ ಬಜೆಟ್ ರೂಪಿಸಿಕೊಳ್ಳಿ. ಇದಕ್ಕಾಗಿ ನಿಮ್ಮ ಆದಾಯ ಮತ್ತು ವೆಚ್ಚಗಳ ಮೇಲೆ ಸರಿಯಾಗಿ ನಿಗಾ ಇಡಿ (ಟ್ರ್ಯಾಕ್ ಮಾಡಿ). ನಿಮ್ಮ ಅಗತ್ಯಗಳು, ಉಳಿತಾಯ ಮತ್ತು ಅನಿರೀಕ್ಷಿತ ವೆಚ್ಚಗಳಿಗಾಗಿ ಹಣವನ್ನು ಪ್ರತ್ಯೇಕವಾಗಿ ತೆಗೆದಿಡಿ.

4) ತುರ್ತು ನಿಧಿ: ಅನಿರೀಕ್ಷಿತ ವೆಚ್ಚಗಳು ಅಥವಾ ಹಣಕಾಸಿನ ಹಿನ್ನಡೆಗಳನ್ನು ಸರಿದೂಗಿಸಲು ತುರ್ತು ನಿಧಿಯನ್ನು ರೂಪಿಸಿಕೊಳ್ಳಿ. ಇದು ನಿಮ್ಮ ಮೂರರಿಂದ ಆರು ತಿಂಗಳ ಜೀವನ ವೆಚ್ಚವನ್ನು ಸರಿದೂಗಿಸುವಷ್ಟು ಪ್ರಮಾಣದಲ್ಲಿ ಇರಬೇಕು.

5) ಸಾಲ ಕಡಿಮೆ ಮಾಡಿ: ಸಾಲ ಮಾಡಿ ತುಪ್ಪ ತಿನ್ನುವುದು ಎಂದಿಗೂ ಒಳ್ಳೆಯದಲ್ಲ. ಕ್ರೆಡಿಟ್ ಕಾರ್ಡ್ ಸಾಲ ಮರುಪಾವತಿ ವಿಚಾರದಲ್ಲಿ ಎಂದಿಗೂ ತಪ್ಪು ಮಾಡಬೇಡಿ. ಹೆಚ್ಚು ಕಡೆ ಸಾಲ ಇದ್ದರೆ, ಹೆಚ್ಚು ಬಡ್ಡಿ ಇರುವ ಸಾಲ ಮೊದಲು ತೀರಿಸಲು ಪ್ರಯತ್ನಿಸಿ.

6) ಹೂಡಿಕೆ: ಉಳಿತಾಯ ಮತ್ತು ಹೂಡಿಕೆಗಳು ಬೇರೆ ಎನ್ನುವುದು ತಿಳಿದಿರಿ. ಹೆಚ್ಚು ಪ್ರತಿಫಲ (ರಿಟರ್ನ್ಸ್) ಸಿಗುತ್ತದೆ ಎಂದು ನಿಮಗೆ ತಿಳಿಯದ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬೇಡಿ. ಸ್ಟಾಕ್‌ಗಳು, ಬಾಂಡ್‌ಗಳು, ಮ್ಯೂಚುಯಲ್ ಫಂಡ್‌ಗಳು ಮತ್ತು ರಿಯಲ್ ಎಸ್ಟೇಟ್‌ನಂತಹ ವಿವಿಧ ಹೂಡಿಕೆ ಆಯ್ಕೆಗಳ ಬಗ್ಗೆ ತಿಳಿದುಕೊಂಡಿರಿ. ಸಾಧ್ಯವಾದಷ್ಟೂ ಬೇಗ ಹೂಡಿಕೆ ಯೋಜನೆ ರೂಪಿಸಿಕೊಳ್ಳಿ.

7) ನಿವೃತ್ತಿ ಯೋಜನೆ: ಎನ್‌ಪಿಎಸ್, ಅಟಲ್ ಪೆನ್ಷನ್ ಯೋಜನಾ ಸೇರಿದಂತೆ ಯಾವುದೇ ನಿವೃತ್ತಿ ಯೋಜನೆಯಲ್ಲಿ ಬಹಳ ಮುಂಚಿತವಾಗಿ ಹಣ ತೊಡಗಿಸಲು ಶುರು ಮಾಡಿ. ಅವಧಿ ಹೆಚ್ಚಿದ್ದಷ್ಟೂ ಪ್ರತಿಫಲ ಹೆಚ್ಚು ಎನ್ನುವುದು ತಿಳಿದಿರಲಿ.

8) ವಿಮೆ: ಆರೋಗ್ಯ ವಿಮೆ, ಜೀವ ವಿಮೆ, ಅಂಗವೈಕಲ್ಯ ವಿಮೆ, ಟರ್ಮ್ ಇನ್ಷುರೆನ್ಸ್ ಮತ್ತು ಆಸ್ತಿ ವಿಮೆ ಸೇರಿದಂತೆ ನಿಮಗೆ ಅಗತ್ಯ ಇರುವ ಸೂಕ್ತ ವಿಮಾ ರಕ್ಷಣೆ ಪಡೆದುಕೊಳ್ಳಿ. ಟರ್ಮ್ ಇನ್ಷುರೆನ್ಸ್ ಮತ್ತು ಆರೋಗ್ಯ ವಿಮೆ ವಿಚಾರದಲ್ಲಿ ಎಂದಿಗೂ ರಾಜಿ ಆಗಬೇಡಿ. ಅವೆರೆಡನ್ನೂ ಕಡ್ಡಾಯ ಎಂದುಕೊಳ್ಳಿ.

9) ನಿಯಮಿತ ವಿಮರ್ಶೆ: ನಿಮ್ಮ ಹಣಕಾಸು ಗುರಿಗಳು ಕಾಲಕ್ಕೆ ತಕ್ಕಂತೆ ಬದಲಾಗಬಹುದು. ನಿಮ್ಮ ಹೂಡಿಕೆ ರೀತಿ, ಪ್ರಮಾಣದಲ್ಲಿಯೂ ಬದಲಾವಣೆ ಬೇಕಾಗಬಹುದು. ಹೀಗಾಗಿ ಆಗಾಗ ನಿಮ್ಮ ಹಣಕಾಸು ಗುರಿಗಳ ಬಗ್ಗೆ ಪರಮಾರ್ಶೆ ಮಾಡಿಕೊಳ್ಳಿ. ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಿ.

10) ಉಳಿತಾಯ, ಹೂಡಿಕೆ, ಬಿಲ್ ಪಾವತಿಗೆ ಆಟೊಮೇಶನ್ ಸಾಧ್ಯತೆ ಬಳಸಿ: ಹೂಡಿಕೆ ಮತ್ತು ವೆಚ್ಚದ ವಿಚಾರದಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಿ. ಬಿಲ್‌ಗಳನ್ನು ಗಡುವಿನ ಒಳಗೆ ಪಾವತಿಸಿ. ದಂಡ ಹಾಕಿಸಿಕೊಳ್ಳಬೇಡಿ. ವಿಮೆ, ಮ್ಯೂಚುವಲ್ ಫಂಡ್, ಆರ್‌ಡಿ ಸೇರಿದಂತೆ ಹಲವು ಉಳಿತಾಯ ಆಯ್ಕೆಗಳಿಗೆ ಆಟೊಮೇಶನ್ ಸೌಲಭ್ಯ ಲಭ್ಯವಿದೆ. ಅದರ ಬಗ್ಗೆ ಬ್ಯಾಂಕ್‌ ಸಿಬ್ಬಂದಿಯಿಂದ ಸರಿಯಾಗಿ ತಿಳಿದುಕೊಂಡು ಮುಂದುವರಿಯಿರಿ.

ಒಟ್ಟಾರೆಯಾಗಿ ನಾನು ಹೇಳಬಯಸುವುದು ಇಷ್ಟೇ; ಕುಟುಂಬದ ನೆಮ್ಮದಿಗೆ ಆರ್ಥಿಕ ಸ್ವಾತಂತ್ರ್ಯ ಅತ್ಯಗತ್ಯ. ಉಳಿತಾಯದ ಗುರಿಗಳನ್ನು ಜೀವನದ ಆರಂಭದಲ್ಲಿಯೇ ಸರಿಯಾಗಿ ಕಂಡುಕೊಂಡು ಸೂಕ್ತ ಯೋಜನೆ ರೂಪಿಸಿಕೊಂಡರೆ ನಿಮ್ಮ ಭವಿಷ್ಯ ಸುಂದರವಾಗಿರುತ್ತದೆ. ಮನೆ ಬಜೆಟ್‌ಗಳನ್ನು ನಿಭಾಯಿಸುವ ಹೆಂಗಸರಲ್ಲಿ ಆರ್ಥಿಕ ಜಾಗೃತಿ ಮೂಡಿದರೆ ಕುಟುಂಬಗಳ ಭವಿಷ್ಯ ಸುಭದ್ರವಾಗಿರುತ್ತದೆ. ಇಂಥ ಯೋಚನೆ ನಿಮಗೆ ಬರಲಿ, ನಿಮ್ಮ ಕುಟುಂಬ ಆರ್ಥಿಕವಾಗಿ ಸದಾ ಸದೃಢವಾಗಿರಲಿ ಎಂದು 'ವಿಶ್ವ ಮಹಿಳಾ ದಿನ'ದ ಸಂದರ್ಭದಲ್ಲಿ ನಾನು ಹಾರೈಸುತ್ತೇನೆ.

ಬರಹ: ರಾಘವೇಂದ್ರ ಭಟ್ಟ

---

ರಾಘವೇಂದ್ರ ಭಟ್ಟ ಅವರ ಮನಿ ಟಿಪ್ಸ್

ರಾಘವೇಂದ್ರ ಭಟ್ಟ ಅವರ ಪರಿಚಯ:

ಎಎಂಎಫ್‌ಐ ಮತ್ತು ಐಆರ್‌ಡಿಎ ಪ್ರಮಾಣಪತ್ರಗಳನ್ನು ಪಡೆದಿರುವ ರಾಘವೇಂದ್ರ ಭಟ್ಟ ಅವರು ಮ್ಯೂಚುವಲ್ ಫಂಡ್, ಷೇರುಪೇಟೆ, ವಿಮಾ ಉತ್ಪನ್ನಗಳ ವಿತರಕರಾಗಿ ಬೆಂಗಳೂರಿನಲ್ಲಿ ಕಳೆದ 12 ವರ್ಷಗಳಿಂದ ರಾಘವೇಂದ್ರ ಭಟ್ಟ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕ್ಷೇತ್ರಕ್ಕೆ ಬರುವ ಮೊದಲು ಅವರು ಪತ್ರಕರ್ತರಾಗಿ ವಾಣಿಜ್ಯ ವಿಚಾರಗಳನ್ನು ನಿರ್ವಹಿಸುತ್ತಿದ್ದರು. ಅಕೌಂಟಿಂಗ್, ಆದಾಯ ತೆರಿಗೆ ಮತ್ತು ಪರೋಕ್ಷ ತೆರಿಗೆ ನಿರ್ವಹಣೆಯಲ್ಲಿ ಹಲವು ವರ್ಷಗಳ ಅನುಭವವಿದೆ. ನಿಮ್ಮ ಪ್ರಶ್ನೆಗಳನ್ನು rspservicesblr@gmail.com ವಿಳಾಸಕ್ಕೆ ಇಮೇಲ್ ಮಾಡಬಹುದು. ಸಂಪರ್ಕ ಸಂಖ್ಯೆ: 97422 91012.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ