Women's Day 2024: ಮಹಿಳೆಯರ ಪರ ನಮ್ಮಲ್ಲಿವೆ ಅಗಣಿತ ಕಾನೂನುಗಳು, ಅನುಷ್ಠಾನದ್ದೇ ಸಮಸ್ಯೆ
Mar 07, 2024 03:57 PM IST
ಮಹಿಳೆ ಮತ್ತು ಕಾನೂನು (ಪ್ರಾತಿನಿಧಿಕ ಚಿತ್ರ)
- International Women's Day 2024: ನಮ್ಮ ಸಂವಿಧಾನ, ಕಾಯ್ದೆಗಳು ಮಹಿಳೆಯರಿಗೆ ಆಸರೆಯಾಗಿವೆ. ಆದರೆ ಇಂಥ ಕಾಯ್ದೆಗಳ ಬಳಕೆ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ನಡೆಯುತ್ತಿದೆ? ಮಹಿಳಾ ಸ್ನೇಹಿ ನ್ಯಾಯಲಯಗಳ ನಿರ್ಮಾಣದ ಅಗತ್ಯದ ಬಗ್ಗೆ ನಾವೆಲ್ಲರೂ ಚರ್ಚಿಸಬೇಕಿದೆ. (ಬರಹ: ಸಿ.ಕೆ.ಮಹೇಂದ್ರ, ವಕೀಲರು)
ಭಾರತದ ಮಹಿಳೆಯರ ಸ್ಥಿತಿ ಈಗ ಮೊದಲಿನಂತಿಲ್ಲ. ಆದರೆ ಸುಧಾರಣೆಯ ಹಾದಿಯಲ್ಲಿ ಮಹಿಳೆಯರಿಗೆ ಇನ್ನೂ ಕಠಿಣ ಸವಾಲುಗಳಿವೆ. ಮಹಿಳೆಯರ ಕುರಿತ ಮನೋಭಾವ ಹಾಗೂ ಧೋರಣೆಯಲ್ಲಿ ಬದಲಾವಣೆಯನ್ನಂತೂ ಖಂಡಿತವಾಗಿಯೂ ಗಮನಿಸಬಹುದಾಗಿದೆ. ಇದಕ್ಕೆ ಮಹಿಳೆಯರ ರಕ್ಷಣೆ, ಸಮಾನತೆಯ ನೆಲೆಯನ್ನು ಸಾಧಿಸಲು ರೂಪಿಸಿದ ಹಲವು ಕಾನೂನುಗಳು, ಸುಪ್ರೀಂ ಕೋರ್ಟ್‌ನ ಅನೇಕ ತೀರ್ಪುಗಳು ದೊಡ್ಡ ಕೊಡುಗೆಯನ್ನೇ ನೀಡಿವೆ ಎಂಬುದರಲ್ಲಿ ಯಾವ ಸಂದೇಹವೂ ಬೇಡ.
ಮಹಿಳಾ ಪರ ಬದಲಾವಣೆಯನ್ನು ಎರಡು ರೀತಿಯಲ್ಲಿ ನಿರೀಕ್ಷಿಸಬಹುದು. ಶಿಕ್ಷಣ ಒಂದಾದರೆ, ಕಾನೂನು ಇನ್ನೊಂದು. ಕಾನೂನು. ಶಿಕ್ಷಣದ ಮೂಲಕ ಸುಧಾರಣೆಯು ಅತ್ಯುತ್ತಮ ಮಾರ್ಗವಾದರೂ ಫಲಿತಾಂಶ ನಿಧಾನ. ಕಾನೂನನ್ನು ಪರಿಪಾಲಿಸಲು ಕೆಲವು ಮನಸ್ಸುಗಳಿಗೆ ಮೊದಮೊದಲು ಕಷ್ಟಸಾಧ್ಯವೆನಿಸಿದರೂ ಅದನ್ನು ಪಾಲಿಸಲೇಬೇಕಾಗುತ್ತದೆ. ಕಾನೂನು ಪಾಲಿಸುತ್ತಲೇ ಮನಸ್ಸು ಬದಲಾವಣೆಯ ಮಾರ್ಗ ಹಿಡಿಯುವುದನ್ನು ನೋಡಬಹುದು. ನಮ್ಮ ದೇಶದಲ್ಲಿ ಎರಡೂ ಮಾರ್ಗದಲ್ಲೂ ಮಹಿಳೆಯರ ವಿಚಾರದಲ್ಲಿ ಇಂಥ ಬದಲಾವಣೆಯನ್ನು ಕಾಣಬಹುದಾಗಿದೆ.
ಮಹಿಳೆಯರಿಗಾಗಿ ಅನೇಕ ಕಾನೂನುಗಳಿದ್ದರೂ. ಅವುಗಳಿಂದ ಪ್ರಯೋಜನಗಳಿದ್ದರೂ ಕೆಲವೊಮ್ಮೆ ಅವುಗಳ ಅನುಷ್ಠಾನದಲ್ಲಿ ಅನೇಕ ಸವಾಲುಗಳನ್ನು, ಕಷ್ಟಗಳನ್ನು ನೋಡಬಹುದಾಗಿದೆ. ಎಷ್ಟೋ ಸಂದರ್ಭಗಳಲ್ಲಿ ಕಾನೂನುಗಳ ವಾಸ್ತವದಲ್ಲಿ ಅನೇಕರಿಗೆ ಜಾರಿಯ ವಿಷಯದಲ್ಲಿ ಸಾಧ್ಯವಾಗದಿರುವ ಉದಾಹರಣೆಗಳು ಇವೆ. ಕಾನೂನಗಳ ಕುರಿತು ಮಹಿಳೆಯರಿಗೆ ಹೆಚ್ಚಿನ ತಿಳಿವಳಿಕೆ ಬೇಕಾಗಿದೆ. ಕಾನೂನುಗಳ ಪ್ರಯೋಜನ ಪಡೆಯುವ ಬಗ್ಗೆಯೂ ಗೊಂದಲ, ಭಯವನ್ನು ವ್ಯಕ್ತಪಡಿಸುವುದನ್ನು ನಾವು ಕಾಣುತ್ತಿದ್ದೇವೆ ಎನ್ನುತ್ತಾರೆ ಕಳೆದ ದಶಕದಿಂದ ಮಹಿಳೆಯರ ಸಬಲೀಕರಣಕ್ಕಾಗಿ ದುಡಿಯುತ್ತಿರುವ ತುಮಕೂರು ಸ್ಮಾರ್ಟ್ ಸಿಟಿ ಸಾಮಾಜಿಕ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಸುಧೀಂದ್ರ.
ಗರ್ಭಪಾತದ ಹಕ್ಕು ಫ್ರಾನ್ಸ್‌ನಲ್ಲಿ ಬಂತು
ಅಮೆರಿಕ ದೇಶದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಲು ಹಿಂದು-ಮುಂದು ಎಣಿಸುತ್ತಿರುವಾಗಲೇ ಮಹಿಳೆಯರಿಗೆ ಮತದಾನದ ಹಕ್ಕು ನೀಡಿ ಅವರು ದೇಶಕ್ಕೆ ಎಷ್ಟು ಮುಖ್ಯ ಎನ್ನುವುದನ್ನು ಮನಗಾಣಿಸಿದ ದೇಶ ನಮ್ಮದು. ಆದರೂ ಮಹಿಳಾ ಸಬಲೀಕರಣ, ಮಹಿಳೆಯರನ್ನು ನೋಡುವ ದೃಷ್ಠಿಕೋನದಲ್ಲಿ ನಾವಿನ್ನೂ ಸಾವಿರ ಹೆಜ್ಜೆ ದಾಟಬೇಕಾಗಿದೆ ಎನ್ನಿಸುತ್ತದೆ. ಇದಕ್ಕೆ ಕಾನೂನಿನ ಬಲವೂ ಬೇಕಾಗಿದೆ. ಫ್ರಾನ್ಸ್ ದೇಶದಲ್ಲಿ ಗರ್ಭಪಾತವನ್ನು ಮಹಿಳೆಯರ ಸಾಂವಿಧಾನಿಕ ಹಕ್ಕು ಎಂದು ಈಚೆಗಷ್ಟೇ ಘೋಷಿಸಲಾಗಿದೆ. ನಮ್ಮ ದೇಶದಲ್ಲಿ ಮಹಿಳೆಯರಿಗೆ ಇನ್ನೂ ಈ ವಿಷಯದಲ್ಲಿ ಹಕ್ಕು ಪ್ರಾಪ್ರಿಯೇ ಆಗಿಲ್ಲ. ಮಹಿಳೆಯರ ಮುಟ್ಟಿನ ವಿಚಾರದಲ್ಲೂ ಸಹ ಚರ್ಚೆ ಹಿನ್ನೆಲೆಗೆ ಸರಿಯುತ್ತಲೇ ಇದೆ.
ಮುಟ್ಟಿನ ರಜೆಗೆ ಹಿಂದೇಟು, ಮಹಿಳಾ ಪರ ಕಾರ್ಮಿಕ ನೀತಿಗಳ ಕೊರತೆ
ಮುಟ್ಟಿನ ರಜೆ ನೀಡುವಂತೆ ಅನೇಕ ವರ್ಷಗಳಿಂದ ಭಾರತದ ಮಹಿಳೆಯರು ಕೇಳುತ್ತಲೇ ಬರುತ್ತಿದ್ದಾರೆ. ಆದರೆ ಬಂಡವಾಳಶಾಹಿಗಳಿಗೆ ಮಣೆ ಹಾಕುತ್ತಿರುವ ಸರ್ಕಾರಗಳು ಈ ವಿಚಾರದ ಚರ್ಚೆಯನ್ನೇ ಮುನ್ನೆಲೆಗೆ ತರಲು ಹಿಂದೇಟು ಹಾಕುತ್ತಿವೆ. ಜನಸಂಖ್ಯೆಯ ಒಟ್ಟು ಲೆಕ್ಕ ಪರಿಶೀಲಿಸಿರೆ ಪುರುಷರಿಗೆ ಸರಿಸಮವಾಗಿ ಮಹಿಳೆಯರೂ ಇದ್ದಾರೆ. ಅದರೆ ಕಾರ್ಮಿಕರ ಸಂಖ್ಯೆಯನ್ನು ತೆಗೆದುಕೊಂಡರೆ ಮಹಿಳೆಯರ ಸಂಖ್ಯೆ ಕಡಿಮೆಯೇ ಇದೆ. ಇದಕ್ಕೆ ಕಾರಣ ಕಾರ್ಮಿಕ ನೀತಿ. ಮಹಿಳಾಪರ ಕಾರ್ಮಿಕ ನೀತಿಗಳು ಮತ್ತು ಮಹಿಳೆಯರು ನೆಮ್ಮದಿಯಾಗಿ ಕೆಲಸ ಮಾಡುವ ವಾತಾವರಣವನ್ನು ರೂಪಿಸುವಲ್ಲಿ ನಮ್ಮ ದೇಶದಲ್ಲಿ ಇನ್ನೂ ಸಾಕಷ್ಟು ಪ್ರಯತ್ನಗಳು ನಡೆಯಬೇಕಿವೆ.
ವೇತನದಲ್ಲಿ ಅಗಾಧ ತಾರತಮ್ಯ
ಸಮಾನ ವೇತನ ಕಾಯ್ದೆಯನ್ನು 1976 ರಲ್ಲೇ ಜಾರಿಗೊಳಿಸಲಾಗಿದೆ. ಆದರೆ ಈ ವ್ಯವಸ್ಥೆ ಸರ್ಕಾರಿ ವಲಯದಲ್ಲಿ ಜಾರಿಯಾದರೂ ಖಾಸಗಿ ವಲಯದಲ್ಲಿ ಅನುಷ್ಠಾನ ದೂರವೇ ಉಳಿದಿದೆ. ಅದರಲ್ಲೂ ಗುತ್ತಿಗೆ ಆಧಾರದ ಪೇ ಸ್ಕೇಲ್ ಇರುವ ಕಡೆಯಲ್ಲಿ ಮಹಿಳೆಯರ ವೇತನದಲ್ಲಿ ತಾರತಮ್ಯ ಅಗಾಧ ಎನಿಸುವಷ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಕೂಲಿಯ ವಿಷಯದಲ್ಲಿ ಈಗಲೂ ಪುರುಷ ಕಾರ್ಮಿಕರಿಗಿಂತ ಮಹಿಳಾ ಕಾರ್ಮಿಕರ ಕೂಲಿ ಅರ್ಧಕ್ಕಿಂತ ಕಡಿಮೆ ಇದೆ.
ಸರ್ಕಾರಿ ವಲಯದಲ್ಲಿ ಸುಧಾರಣೆಯೇ ಸಮಾನತೆ ಎಂಬ ಮುನ್ನೋಟದಿಂದ ಯಾವುದೇ ಸುಧಾರಣೆ ಕಾಣಲಾರೆವು. ಕೃಷಿ ಕೂಲಿ ಕಾರ್ಮಿಕರ, ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರ ಸಂಖ್ಯೆ ಸರ್ಕಾರಿ, ಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗಿಂತಲೂ ಎರಡು-ಮೂರು ಪಟ್ಟು ಇದೆ. ಆದರೆ ಇಲ್ಲಿ ಇಂಥ ಅನೇಕ ಕಾನೂನುಗಳ ಮಹಿಳೆಯರಿಗೆ ರಕ್ಷಣೆಯನ್ನು ನೀಡಲು ವಿಫಲವಾಗುತ್ತಿವೆ. ಕೃಷಿ, ಅಸಂಘಟಿತ ಮಹಿಳೆಯರ ನೋಂದಣಿ ಕೆಲಸವನ್ನು ಸಹ ಸರ್ಕಾರಗಳು ಮಾಡಿಲ್ಲ. ಈ ನಿಟ್ಟಿನಲ್ಲಿ ಯೋಚಿಸುವ ಬಗೆಯನ್ನು ನಾವು ಕಲಿಯಬೇಕಾಗಿದೆ. ಇಲ್ಲಿ ಬದಲಾವಣೆಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ.
ಕೆಲಸದ ಸ್ಥಳದಲ್ಲಿ ಲೈಂಗಿಕ ಹಿಂಸೆ
ಕೆಲಸದ ಸ್ಥಳಗಳಲ್ಲಿ ಲೈಂಗಿಕ ಹಿಂಸೆ ತಡೆಯುವ ಕಾಯ್ದೆಯನ್ನು 2013 ರಲ್ಲಿ ಜಾರಿಗೆ ತಂದಿದ್ದರೂ ಅದರ ಅನುಷ್ಠಾನವೂ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಈ ಕಾಯ್ದೆಯ ಅಡಿಯಲ್ಲಿ ಪ್ರತಿ ಕಂಪನಿ, ಕೈಗಾರಿಕೆ, ಸರ್ಕಾರಿ ಸಂಸ್ಥೆಗಳು ಮಹಿಳಾ ಸುರಕ್ಷಾ ಸಮಿತಿಯನ್ನು ರಚಿಸಬೇಕಾಗಿದೆ. ಎಷ್ಟೋ ಕಡೆಗಳಲ್ಲಿ ಈ ಸಮಿತಿಗಳು ಕಾಗದದ ಮೇಲಿನ ಸಮಿತಿಗಳಾಗಿವೆ. ಸಮಿತಿಗೆ ಯಾರಾದರೂ ದೂರು ನೀಡಿದರೆ ಆಂತರಿಕ ತನಿಖೆಯನ್ನು ನಡೆಸಿ ಪೊಲೀಸರಿಗೆ ದೂರು ನೀಡುವ ಕೆಲಸವನ್ನು ಈ ಸಮಿತಿಗಳು ಮಾಡಬೇಕಾಗುತ್ತದೆ. ಈ ಸಮಿತಿಯ ಅಧ್ಯಕ್ಷರು ಅದೇ ಸಂಸ್ಥೆಯ ಉದ್ಯೋಗಿಯಾಗಿರುವುದು ಸಹ ಅವರ ಕೈ ಕೆಲವು ಸಲ ಕಟ್ಟಿದಂತೆ ಆಗುತ್ತದೆ. ಈ ಸಮಿತಿಯ ಕಾರ್ಯಯೋಜನೆಯನ್ನೇ ಬದಲಿಸುವ ಕುರಿತು ಚರ್ಚಿಸಬೇಕಾಗುತ್ತದೆ.
ಮಹಿಳೆಯರಿಗೆ ಬಲ ತುಂಬಿದ ಗಟ್ಟಿ ಕಾಯ್ದೆಗಳಿವು
ಇವೆಲ್ಲವುಗಳ ನಡುವೆಯೂ ಮಹಿಳೆಯರ ರಕ್ಷಣೆಗಾಗಿ ನಿಂತಿರುವ ಅನೇಕ ಕಾಯ್ದೆಗಳು ಪರಿಣಾಮಕಾರಿಯಾಗಿವೆ. ಹಿಂದೂ ವಿವಾಹ ಕಾಯ್ದೆ, ಹಿಂದೂ ಉತ್ತಾರಧಿಕಾರ ಕಾಯ್ದೆ, ಮೆಟರ್ನಿಟಿ ಬೆನಿಫಿಟ್ ಆಕ್ಟ್ (ಹೆರಿಗೆ ಕಾಯ್ದೆ), ಪೋಸ್ಕೊ (ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ), ಡೊಮೆಸ್ಟಿಕ್ ವಾಯಲೆನ್ಸ್ ಆಕ್ಟ್ (ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ) ಸೇರಿದಂತೆ ಹಲವು ಕಾನೂನುಗಳು ಮಹಿಳೆಯರಿಗೆ ಆಸರೆಯಾಗಿವೆ. ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಯೋಚಿಸಲು, ಎದ್ದು ನಿಲ್ಲಲು ಈ ಕಾಯ್ದೆಗಳೂ ಕಾರಣವಾಗಿವೆ.
ಮಹಿಳಾ ಪರ ಕಾಯ್ದೆಗಳ ಬಳಕೆಯ ವಿಚಾರದಲ್ಲಿ ಮಹಿಳೆಯರನ್ನು ಈಗಲೂ ಮಾನಸಿಕವಾಗಿ, ಭಾವನಾತ್ಮಕವಾಗಿ ಕಟ್ಟಿ ಹಾಕುವ ಕೆಲಸಗಳು ನಡೆಯುತ್ತವೆ. ನ್ಯಾಯಾಲಯಗಳಿಗೆ ಬರುವ ಮಹಿಳೆಯರಿಗೆ ಮಹಿಳಾ ಸ್ನೇಹಿ ನ್ಯಾಯಲಯಗಳ ನಿರ್ಮಾಣದ ಅಗತ್ಯತೆಯೂ ಬಗ್ಗೆಯೂ ಚರ್ಚಿಸಬೇಕಾಗಿದೆ.
(ಬರಹ: ಸಿ.ಕೆ.ಮಹೇಂದ್ರ)
ವಕೀಲ ಸಿ.ಕೆ.ಮಹೇಂದ್ರ ಪರಿಚಯ
ತುಮಕೂರಿನ ಸುಫಿಯಾ ಕಾನೂನು ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿರುವ ಸಿ.ಕೆ.ಮಹೇಂದ್ರ ಅವರು ವಕೀಲರಾಗಿಯೂ ಜನಪ್ರಿಯರು. ಮಹೇಂದ್ರ ಅವರ ಸಂಪರ್ಕ ಸಂಖ್ಯೆ 98448 17737, ಇಮೇಲ್: ckmgks@gmail.com. ನಿಮ್ಮ ಪ್ರಶ್ನೆಗಳನ್ನು ಇಮೇಲ್ ಮಾಡಬಹುದು.