ಆಪಲ್ ಐಫೋನ್‌ಗಳು ಪ್ರತಿ ವರ್ಷ ಸೆಪ್ಟೆಂಬರ್ನಲ್ಲೇ ಬಿಡುಗಡೆಯಾಗೋದೇಕೆ? ಇದರ ಹಿಂದಿದೆ ಈ ಕಾರಣ
Sep 12, 2024 10:12 AM IST
ಆಪಲ್ ಐಫೋನ್‌ಗಳು ಪ್ರತಿ ವರ್ಷ ಸೆಪ್ಟೆಂಬರ್ನಲ್ಲೇ ಬಿಡುಗಡೆಯಾಗೋದೇಕೆ
- Apple iPhone: ಈ ವರ್ಷ ಐಫೋನ್ 16 ಸರಣಿಯನ್ನು ಸೆಪ್ಟೆಂಬರ್ 9 ರಂದು ಬಿಡುಗಡೆ ಮಾಡಲಾಯಿತು. ಐಫೋನ್ 15 ಸರಣಿಯ ಬಿಡುಗಡೆ ದಿನಾಂಕ 12 ಸೆಪ್ಟೆಂಬರ್ 2023 ಆಗಿತ್ತು. ಸೆಪ್ಟೆಂಬರ್‌ನಲ್ಲಿಯೇ ಐಫೋನ್ ಹೊಸ ಸರಣಿ ಪ್ರಾರಂಭಿಸುವ ಹಿಂದೆ ಆಪಲ್ ಏನಾದರೂ ದೊಡ್ಡ ತಂತ್ರವನ್ನು ಹೊಂದಿದೆಯೇ? ಇದು ದೊಡ್ಡ ಮಾರ್ಕೆಟಿಂಗ್ ಗಿಮಿಕ್ ಆಗಿದೆಯೇ?.
Apple iPhone: ಕೋಟ್ಯಂತರ ಜನರ ಬಹಳ ಸಮಯದಿಂದ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಮೊನ್ನೆಯಷ್ಟೆ ಆಪಲ್ ಹೊಸ ಐಫೋನ್ 16 ಸರಣಿ ಮತ್ತು ಆಪಲ್ ಏರ್ಪಾಡ್ಸ್ 4, ಆಪಲ್ ವಾಚ್ ಸೀರಿಸ್ 10 ಮತ್ತು ಹೊಸ ಆಪಲ್ ವಾಚ್ ಆಲ್ಟ್ರಾ-2 ಅನ್ನು ಬಿಡುಗಡೆ ಮಾಡಿದೆ. ಕಳೆದ ಬಾರಿಗಿಂತ, ಈ ಬಾರಿ ಆಪಲ್ ಐಫೋನ್ ಸರಣಿಯಲ್ಲಿ ಅನೇಕ ಹೊಸ ಹೊಸ ಫೀಚರ್ಸ್ ನೀಡಲಾಗಿದೆ. ಅಲ್ಲದೆ, AI (Apple Intelligence) ಬೆಂಬಲವನ್ನು ಸಹ ಒದಗಿಸಲಾಗಿದೆ. ಆದರೆ, ಆಪಲ್ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿಯೇ ಹೊಸ ಐಫೋನ್‌ಗಳನ್ನು ಏಕೆ ಬಿಡುಗಡೆ ಮಾಡುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ಈ ವರ್ಷ ಐಫೋನ್ 16 ಸರಣಿಯನ್ನು ಸೆಪ್ಟೆಂಬರ್ 9 ರಂದು ಬಿಡುಗಡೆ ಮಾಡಲಾಯಿತು. ಐಫೋನ್ 15 ಸರಣಿಯ ಬಿಡುಗಡೆ ದಿನಾಂಕ 12 ಸೆಪ್ಟೆಂಬರ್ 2023 ಆಗಿತ್ತು. ಆದರೆ, ಮೊದಲ ಐಫೋನ್ ಜೂನ್ 29, 2007 ರಂದು ಅನಾವರಣಗೊಳಿಸಲಾಯಿತು. ಆ ಬಳಿಕ ಆಪಲ್‌ನ ಹೆಚ್ಚಿನ ಹೊಸ ಐಫೋನ್ ಸರಣಿಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಮಾತ್ರ ರಿಲೀಸ್ ಆಗಿದೆ. ಬಿಡುಗಡೆಯ ದಿನಾಂಕದಲ್ಲಿ ಮಾತ್ರ ವ್ಯತ್ಯಾಸವಿತ್ತಷ್ಟೆ, ಆದರೆ ತಿಂಗಳು ಸೆಪ್ಟೆಂಬರ್ ಆಗಿತ್ತು. ಸೆಪ್ಟೆಂಬರ್‌ನಲ್ಲಿಯೇ ಐಫೋನ್ ಹೊಸ ಸರಣಿ ಪ್ರಾರಂಭಿಸುವ ಹಿಂದೆ ಆಪಲ್ ಏನಾದರೂ ದೊಡ್ಡ ತಂತ್ರವನ್ನು ಹೊಂದಿದೆಯೇ? ಇದು ದೊಡ್ಡ ಮಾರ್ಕೆಟಿಂಗ್ ಗಿಮಿಕ್ ಆಗಿದೆಯೇ? ಇಂತಹ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ವಿವರವಾಗಿ ತಿಳಿದುಕೊಳ್ಳೋಣ.
ಆಪಲ್‌ನ ಆರ್ಥಿಕ ವರ್ಷ
ಸಾಮಾನ್ಯವಾಗಿ, ದೇಶ ಮತ್ತು ಪ್ರಪಂಚದಲ್ಲಿ ಆರ್ಥಿಕ ವರ್ಷವು ಏಪ್ರಿಲ್ 1 ರಿಂದ ಪ್ರಾರಂಭವಾಗುತ್ತದೆ. ಮುಂದಿನ ವರ್ಷದ ಮಾರ್ಚ್ 31 ರಂದು ಕೊನೆಗೊಳ್ಳುತ್ತದೆ. ಆದರೆ, ಆಪಲ್ ಕಂಪನಿಯ ಆರ್ಥಿಕ ವರ್ಷ ಸಂಪೂರ್ಣ ಭಿನ್ನವಾಗಿದೆ. ಆಪಲ್ ತನ್ನದೇ ಆದ ಪ್ರತ್ಯೇಕ ಆರ್ಥಿಕ ವರ್ಷವನ್ನು ಹೊಂದಿದೆ. ಆಪಲ್‌ನ ಆರ್ಥಿಕ ವರ್ಷವು ಸೆಪ್ಟೆಂಬರ್‌ನ ಕೊನೆಯ ಭಾನುವಾರದಂದು ಪ್ರಾರಂಭವಾಗುತ್ತದೆ ಮತ್ತು ಮುಂದಿನ ವರ್ಷದ ಸೆಪ್ಟೆಂಬರ್‌ನ ಕೊನೆಯ ಶನಿವಾರದಂದು ಕೊನೆಗೊಳ್ಳುತ್ತದೆ.
ಉದಾಹರಣೆಗೆ, ಈ ವರ್ಷ ಅಂದರೆ 2024ರ ಆಪಲ್‌ನ ಹಣಕಾಸು ವರ್ಷವು ಸೆಪ್ಟೆಂಬರ್, 29ರ ಕೊನೆಯ ಭಾನುವಾರದಂದು ಪ್ರಾರಂಭವಾಗುತ್ತದೆ ಮತ್ತು ಮುಂದಿನ ವರ್ಷ 2025ರ ಸೆಪ್ಟೆಂಬರ್ 27 ರ ಕೊನೆಯ ಶನಿವಾರದಂದು ಕೊನೆಗೊಳ್ಳುತ್ತದೆ. ಹೀಗೆ ಆಪಲ್‌ನ ಹಣಕಾಸು ವರ್ಷವು ಎಲ್ಲಾ ಕಂಪನಿಗಳಿಗಿಂತ ಭಿನ್ನವಾಗಿದೆ. ಆದ್ದರಿಂದ ಹಣಕಾಸು ವರ್ಷದ ಅಂತ್ಯದ ಮೊದಲು ಹೊಸ ಐಫೋನ್ ಸರಣಿಯನ್ನು ಕಂಪನಿ ಪ್ರಾರಂಭಿಸುತ್ತದೆ.
ಹಬ್ಬದ ಸೀಸನ್
ಭಾರತ ಸೇರಿದಂತೆ ವಿಶ್ವದಲ್ಲಿ ಮೂರನೇ ತ್ರೈಮಾಸಿಕದ ಕೊನೆಯ ತಿಂಗಳು ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ. ನಾಲ್ಕನೇ ಅಂದರೆ ಕೊನೆಯ ತ್ರೈಮಾಸಿಕ ಅಕ್ಟೋಬರ್‌ನಿಂದ ಪ್ರಾರಂಭವಾಗುತ್ತದೆ. ಭಾರತ ಸೇರಿದಂತೆ ಜಗತ್ತಿನಲ್ಲಿ, ಅಕ್ಟೋಬರ್ ನಾಲ್ಕನೇ ತ್ರೈಮಾಸಿಕದಿಂದ ಹಬ್ಬಗಳು, ಜಾತ್ರೆಗಳು ಶುರುವಾಗುತ್ತವೆ. ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ, ದೀಪಾವಳಿ, ಕ್ರಿಸ್‌ಮಸ್, ಹೊಸ ವರ್ಷದಂತಹ ಅನೇಕ ದೊಡ್ಡ ಹಬ್ಬಗಳನ್ನು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದು ಹಬ್ಬದ ಸೀಸನ್ ಎನ್ನಬಹುದು.
ಹಬ್ಬದ ಋತುವಿನ ಸಮಯವನ್ನು ಗಮನದಲ್ಲಿಟ್ಟುಕೊಂಡು, ಆಪಲ್ ಸೆಪ್ಟೆಂಬರ್‌ನಲ್ಲಿ ಹೊಸ ಐಫೋನ್ ಸರಣಿಯನ್ನು ಪ್ರಾರಂಭಿಸುವುದು ಮತ್ತೊಂದು ಟ್ರಿಕ್ ಆಗಿದೆ. ಏಕೆಂದರೆ ಜನರು ದೀಪಾವಳಿ, ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭ ನೂತನವಾದ ಫೋನನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಾರೆ. ಹೀಗಾಗಿ ದೇಶ ಮತ್ತು ಪ್ರಪಂಚದಲ್ಲಿ ಹಬ್ಬದ ಸೀಸನ್ ಪ್ರಾರಂಭವಾಗುವ ಮೊದಲು ಸೆಪ್ಟೆಂಬರ್‌ನಲ್ಲಿಯೇ ಹೊಸ ಸರಣಿಯ ಐಫೋನ್‌ಗಳನ್ನು ಪ್ರಾರಂಭಿಸಲು ಇದು ಮುಖ್ಯ ಕಾರಣ.
ಹಾಗೆಯೇ ಹಬ್ಬದ ಋತುವಿನಲ್ಲಿ, ಅನೇಕ ಇ-ಕಾಮರ್ಸ್ ವೆಬ್‌ಸೈಟ್‌ಗಳು ಐಫೋನ್ ಖರೀದಿಯ ಮೇಲೆ ಭಾರಿ ರಿಯಾಯಿತಿ ಕೊಡುಗೆಗಳನ್ನು ನೀಡುತ್ತವೆ. ಆದ್ದರಿಂದ ಈ ಸಮಯದಲ್ಲಿ, ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದಾಗ, ಹಳೆಯ ಐಫೋನ್‌ನ ಬೆಲೆ ತೀವ್ರವಾಗಿ ಕುಸಿಯುತ್ತದೆ. ಆಗ ಆಪಲ್ ಉತ್ಪನ್ನಗಳು ಹೆಚ್ಚು ಮಾರಾಟವಾಗುತ್ತದೆ.