Kitchen Hacks: ಲಟ್ಟಣಿಗೆಗೆ ಅಂಟಿಕೊಂಡ ಹಸಿ, ಒಣ ಹಿಟ್ಟು ಎಷ್ಟು ತೊಳೆದರೂ ಕ್ಲೀನ್ ಆಗ್ತಿಲ್ವಾ? ಅದನ್ನು ಸುಲಭವಾಗಿ ಹೀಗೆ ಸ್ವಚ್ಛಗೊಳಿಸಿ
Nov 18, 2023 06:30 PM IST
Kitchen Hacks: ಲಟ್ಟಣಿಗೆಗೆ ಅಂಟಿಕೊಂಡ ಹಸಿ, ಒಣ ಹಿಟ್ಟು ಎಷ್ಟು ತೊಳೆದರೂ ಕ್ಲೀನ್ ಆಗ್ತಿಲ್ವಾ? ಅದನ್ನು ಸುಲಭವಾಗಿ ಹೀಗೆ ಸ್ವಚ್ಛಗೊಳಿಸಿ
- Kitchen Tips: ರೊಟ್ಟಿ, ಚಪಾತಿ ಮಾಡಿದ ಮೇಲೆ ಉಪಯೋಗಿಸಿದ ಮರದ ಲಟ್ಟಣಿಗೆ ಸ್ವಚ್ಛಗೊಳಿಸುವುದನ್ನು ಮರೆಯಬಾರದು. ಇಲ್ಲಿ ಹೇಳಿರುವ ಚಿಕ್ಕ ಮಾಹಿತಿ ನಿಮ್ಮ ಆರೋಗ್ಯ ಕಾಪಾಡಬಲ್ಲದು.
ರುಚಿಕಟ್ಟಾದ ಅಡುಗೆ ಮಾಡೋದಷ್ಟೇ ಮುಖ್ಯವಲ್ಲ. ಅಡುಗೆ ಮಾಡಲು ಬಳಸಿದ ಉಪಕರಣಗಳನ್ನು ಸ್ವಚ್ಛಗೊಳಿಸುವುದು ಅಷ್ಟೇ ಮುಖ್ಯ. ನಮ್ಮ ಆರೋಗ್ಯ ಇರುವುದು ನಾವು ತಿನ್ನುವ ಆಹಾರದ ಮೇಲೆ ಹಾಗೂ ಅದನ್ನು ಎಷ್ಟು ಸ್ವಚ್ಛವಾಗಿ ತಯಾರಿಸುತ್ತೇವೆ ಎನ್ನುವುದರ ಮೇಲಿರುತ್ತದೆ. ಸ್ವಚ್ಛ ಪಾತ್ರೆಗಳಲ್ಲಿ ತಯಾರಿಸಿದ ಆಹಾರವು ಅದು ವಿಷವಾಗುವುದನ್ನು ತಪ್ಪಿಸುತ್ತದೆ. ಸಾಮಾನ್ಯವಾಗಿ ಎಲ್ಲರೂ ದೊಡ್ಡ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ಚಿಕ್ಕ ಪುಟ್ಟ ಉಪಕರಣಗಳ ಕಡೆ ಗಮನ ಹರಿಸುವುದೇ ಇಲ್ಲ. ಚಾಕು, ತರಕಾರಿ ಕತ್ತರಿಸಲು ಬಳಸುವ ಬೋರ್ಡ್, ಚಪಾತಿ ಮಣೆ, ಮರದ ಲಟ್ಟಣಿಗೆ ಇವೆಲ್ಲವೂ ಸಾಮಾನ್ಯವಾಗಿ ನಿರ್ಲಕ್ಷಿಸುವ ಅಡುಗೆಮನೆಯ ಉಪಕರಣಗಳು. ಪ್ರಮುಖವಾಗಿ ಸ್ವಚ್ಛತೆಯ ಕಡೆಗೆ ಗಮನ ಹರಿಸಬೇಕಾದದ್ದು ಇವುಗಳ ಮೇಲೆಯೇ. ಸರಿಯಾದ ರೀತಿಯಲ್ಲಿ ಅವುಗಳನ್ನು ಸ್ವಚ್ಛಗೊಳಿಸುವುದರಿಂದ ಬಾಳಕೆಯೂ ಬರುತ್ತದೆ.
ಚಪಾತಿ, ರೋಟಿಗಳನ್ನು ಮಾಡಲು ಉಪಯೋಗಿಸುವ ಮರದ ಲಟ್ಟಣಿಗೆಯನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಅತಿ ಮುಖ್ಯ. ಏಕೆಂದರೆ ಅದರ ಮೇಲೆ ಹಸಿ, ಒಣ ಹಿಟ್ಟು ಅಂಟಿಕೊಂಡಿರುತ್ತದೆ. ಅದನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅದರ ಮೇಲೆ ಬೆಳೆದ ಬ್ಯಾಕ್ಟೀರಿಯಾಗಳು ಆಹಾರದ ಮುಖಾಂತರ ನಮ್ಮ ದೇಹ ಸೇರಬಹುದು. ಹಾಗಾಗಿ ಮರದ ಲಟ್ಟಣಿಗೆಯನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ.
ಇದನ್ನೂ ಓದಿ: ಗ್ಲಾಸ್ ಸ್ಟೋವನ್ನು ಹೇಗೆ ಕ್ಲೀನ್ ಮಾಡ್ತಿದ್ದೀರಿ; ಸ್ಕ್ರಾಚ್ ಆಗದೆ ಹೊಸತರಂತೆ, ಹೊಳೆಯುವಂತೆ ಮಾಡಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್
1. ಪ್ರತಿ ಬಾರಿ ಮರದ ಲಟ್ಟಣಿಗೆ ಬಳಸಿದ ನಂತರ ಅದನ್ನು ಸ್ವಚ್ಛಗೊಳಿಸುವುದು ಮುಖ್ಯವಾಗಿದೆ. ಅದಕ್ಕಾಗಿ ಬೆಚ್ಚಗಿನ ನೀರು, ಡಿಶ್ ಸೋಪ್ ಅಥವಾ ಲಿಕ್ವಿಡ್ ಮತ್ತು ಮೃದುವಾದ ಸ್ಪೋಂಜ್ ಅಗತ್ಯವಿದೆ. ಮೊದಲು ಬೆಚ್ಚಗಿನ ನೀರಿನಲ್ಲಿ ಡಿಶ್ ಸೋಪ್ ಅಥವಾ ಲಿಕ್ವಿಡ್ ಸೇರಿಸಿ, ದ್ರಾವಣ ತಯಾರಿಸಿಕೊಳ್ಳಿ. ಅದರಲ್ಲಿ ಮರದ ಲಟ್ಟಣಿಗೆಯನ್ನು 5 ನಿಮಿಷ ನೆನೆಸಿಡಿ. ನಂತರ ಅದನ್ನು ಮೃದುವಾದ ಸ್ಪೋಂಜ್‌ನಿಂದ ಉಜ್ಜಿ. ಸ್ಟೀಲ್ ಸ್ಕ್ರಬ್ಬರ್ ಬಳಸಬೇಡಿ. ಅದು ಮರದ ಮೇಲ್ಮೈ ಮೇಲೆ ಗೀರುಗಳಾಗುವಂತೆ ಮಾಡುತ್ತದೆ. ನಂತರ ಸ್ವಚ್ಛ ನೀರಿನಿಂದ ತೊಳೆಯಿರಿ.
2. ಕಬ್ಬಿಣದ ಪ್ಯಾನ್‌ಗಳಿಗೆ ಹೇಗೆ ಪ್ರತಿ ಬಾರಿ ತೊಳೆದನಂತರ ಎಣ್ಣೆ ಸವರಿತ್ತೇವೆಯೋ ಹಾಗೆ ಮರದ ಲಟ್ಟಣಿಗೆಗೂ ಅದರ ಅವಶ್ಯಕತೆ ಇದೆ. ತೆಂಗಿನ ಎಣ್ಣೆ, ಅಡುಗೆಗೆ ಬಳಸುವ ಎಣ್ಣೆ ಅಥವಾ ಅಲೀವ್ ಎಣ್ಣೆ ಯಾವುದಾದರೂ ಒಂದು ಎಣ್ಣೆ ತೆಗೆದುಕೊಂಡು ಅದರ ಮೇಲ್ಮೈ ಮೇಲೆ ಸವರಿ. 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಹೆಚ್ಚುವರಿ ಎಣ್ಣೆಯನ್ನು ಟಿಶ್ಯೂ ಪೇಪರ್ ಸಹಾಯದಿಂದ ಒರೆಸಿ. ಹೀಗೆ ಮಾಡುವುದರಿಂದ ಲಟ್ಟಣಿಗೆ ಬಾಳಿಕೆ ಬರುತ್ತದೆ.
3. ಮರದ ಲಟ್ಟಣಿಗೆಯನ್ನು ಸ್ಯಾನಿಟೈಜ್ ಮಾಡುವುದು ಮುಖ್ಯ. ಏಕೆಂದರೆ ಮರದ ಮೇಲೆ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಆರೋಗ್ಯದ ದೃಷ್ಟಿಯಿಂದ ತಿಂಗಳಿಗೊಮ್ಮೆಯಾದರೂ ಮರದ ಲಟ್ಟಣಿಗೆ ಸ್ಯಾನಿಟೈಜ್ ಮಾಡುವುದು ಅತಿ ಮುಖ್ಯವಾಗಿದೆ. ಸ್ಯಾನಿಟೈಜ್ ಮಾಡಲು ಬೆಚ್ಚಗಿನ ನೀರು ಮತ್ತು ವಿನೆಗರ್ ಮಿಶ್ರಣದಲ್ಲಿ ಲಟ್ಟಣಿಗೆ ತೊಳೆಯಿರಿ. ನಂತರ ಬಿಸಿಲಿನಲ್ಲಿ ಒಣಗಿಸಿ.