ತಿರುಪತಿ ಲಡ್ಡು ಪ್ರಸಾದದಲ್ಲಿತ್ತು ಪ್ರಾಣಿ ಕೊಬ್ಬು, ನೀವು ಮನೆಗೆ ತಂದ ತುಪ್ಪ ಸರಿ ಇದೆಯಾ ಅಂತ ಚೆಕ್ ಮಾಡೋಕೆ ಹೀಗೆ ಮಾಡಿ
Sep 23, 2024 01:32 PM IST
ತಿರುಪತಿ ಲಾಡಿನಲ್ಲಿತ್ತು ಪ್ರಾಣಿ ಕೊಬ್ಬು, ನೀವು ಮನೆಗೆ ತಂದ ತುಪ್ಪ ಸರಿ ಇದೆಯಾ ಅಂತ ಚೆಕ್ ಮಾಡುವ ವಿಧಾನ (ಸಾಂಕೇತಿಕ ಚಿತ್ರ)
ಸದ್ಯ ಕಲಬೆರಕೆ ತುಪ್ಪದ ವಿಚಾರ ಹೆಚ್ಚು ಚರ್ಚೆಯಲ್ಲಿದೆ. ತುಪ್ಪಕ್ಕೆ ಪ್ರಾಣಿ ಕೊಬ್ಬು ಸೇರಿಸಿದರೆ ಗೊತ್ತಾಗುವುದಿಲ್ಲ ಎಂಬದು ತಿರುಪತಿ ಲಡ್ಡು ಪ್ರಸಾದದ ಇತ್ತೀಚಿನ ಲ್ಯಾಬ್ ವರದಿಗಳ ಮೂಲಕ ಬಹಿರಂಗವಾಗಿರುವುದು ಇದಕ್ಕೆ ಕಾರಣ. ಆದ್ದರಿಂದ ನೀವು ಮನೆಗೆ ತಂದ ತುಪ್ಪ ಸರಿ ಇದೆಯಾ ಅಂತ ಚೆಕ್ ಮಾಡೋಕೆ ಈ ಟ್ರಿಕ್ಸ್ ಬಳಸಬಹುದು ನೋಡಿ.
ತಿರುಪತಿ ಲಡ್ಡು ಸದ್ಯ ಚರ್ಚೆಯಲ್ಲಿರುವ ಹಾಟ್ ಟಾಪಿಕ್. ಕಲಬೆರಕೆ ತುಪ್ಪ ಬಳಸಿದ್ದರಿಂದ ಅದರಲ್ಲಿ ಪ್ರಾಣಿಕೊಬ್ಬು ಸೇರಿಕೊಂಡಿತ್ತು ಎಂಬ ಅಂಶ ಬೆಳಕಿಗೆ ಬಂದದ್ದೇ ಇದಕ್ಕೆ ಕಾರಣ. ವಿವಿಧ ಲ್ಯಾಬ್‌ಗಳ ವರದಿ ವಿಶೇಷವಾಗಿ ಗುಜರಾತ್‌ನ ಎನ್‌ಡಿಡಿಬಿ ವರದಿಯಲ್ಲಿ ಉಲ್ಲೇಖವಾಗಿರುವ ಪ್ರಾಣಿ ಕೊಬ್ಬು ವಿಚಾರ ತೀವ್ರ ಚರ್ಚೆಗೆ ಒಳಗಾಗಿದೆ. ವರ್ಷಗಳಿಂದ ಕಲಬೆರಕೆ ತುಪ್ಪ ಬಳಕೆಯಲ್ಲಿರುವ ವಿಚಾರವನ್ನು ಸರ್ಕಾರಿ ಅಧಿಕಾರಿಗಳು ತಮ್ಮ ತನಿಖಾ ವರದಿಯಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಹೀಗಾಗಿ ಈ ವಿಚಾರ ಹೆಚ್ಚು ಸಂಚಲನ ಮೂಡಿಸಿರುವಂಥದ್ದು.
ತುಪ್ಪಕ್ಕೆ ಬೆಲೆ ಹೆಚ್ಚೇಕೆ?
ಒಂದು ಅಂದಾಜಿನಂತೆ ದೇಸಿ ಹಸುವಿನ ಒಂದು ಕಿಲೋ ತುಪ್ಪ ಮಾಡಬೇಕು ಎಂದರೆ ಕನಿಷ್ಠ 40 ಲೀಟರ್ ಹಾಲು ಬೇಕು. ಅದನ್ನು ಮೊಸರು ಮಾಡಿ, ಮೊಸರನ್ನು ಮಜ್ಜಿಗೆ ಮಾಡಿ ಬೆಣ್ಣೆ ಬೇರ್ಪಡಿಸಿ ಅದನ್ನು ಕಾಯಿಸಿ ತುಪ್ಪ ಮಾಡಲಾಗುತ್ತದೆ. ಪಕ್ಕಾ ದೇಸಿ ತಳಿಯ ಹಸುವಿನ ತುಪ್ಪಕ್ಕೆ ಬೆಲೆ ಹೆಚ್ಚು. ಆದರೆ, ಜೆರ್ಸಿ, ಎಚ್‌ಎಫ್ ಮುಂತಾದ ಅಥವಾ ಸಂಕರಣಗೊಂಡ ತಳಿಯ ಹಸುಗಳ ತುಪ್ಪಕ್ಕೆ ಕೊಂಚ ಕಡಿಮೆ.
ಕರ್ನಾಟಕದ ಕೆಎಂಎಫ್ ಮಾರುಕಟ್ಟೆಗೆ ಒದಗಿಸುತ್ತಿರುವ ಒಂದು ಲೀಟರ್ ನಂದಿನಿ ತುಪ್ಪಕ್ಕೆ 630 ರೂಪಾಯಿ ಇದೆ. ನಂದಿನಿ ಹಸುವಿನ ಹಾಲಿನದ್ದಾದರೂ ಅದು ಶುದ್ಧ ದೇಸಿ ಹಸುವಿನ ಹಾಲಷ್ಟೇ ಅಲ್ಲ, ಎಲ್ಲ ತಳಿಗಳ ಹಾಲು ಸೇರಿಸುವ ಕಾರಣ ದರ ಸ್ವಲ್ಪ ಕಡಿಮೆ. ಇನ್ನು ಶುದ್ಧ ದೇಸಿ ಹಸುವಿನ ತುಪ್ಪಕ್ಕೆ 1000 ರೂಪಾಯಿ ಮೇಲ್ಪಟ್ಟು ಬೆಲೆ ಇದೆ.
ತಿರುಪತಿ ಲಡ್ಡುವಿನಲ್ಲಿ ಹೇಗೆ ಬಂತು: ವೈಎಸ್ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪಕ್ಕೆ ಟೆಂಡರ್ ಕರೆಯಲಾಗಿತ್ತು. ಈ ಹಿಂದೆ ಟಿಟಿಡಿಗೆ ತುಪ್ಪ ಪೂರೈಸುತ್ತಿದ್ದ ಕರ್ನಾಟಕದ ಕೆಎಂಎಫ್ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಇದರ ದರ ಒಂದು ಕಿಲೋ ತುಪ್ಪಕ್ಕೆ 600 ರೂಪಾಯಿಗೂ ಅಧಿಕ. ಇದೇ ಟೆಂಡರ್‌ನಲ್ಲಿ ಭಾಗವಹಿಸಿದ್ದ ಇನ್ನೊಂದು ಸಂಸ್ಥೆ, ಒಂದು ಕೆಜಿ ಹಸುವಿನ ತುಪ್ಪವನ್ನು ಕೇವಲ 320 ರೂಪಾಯಿಗೆ ಪೂರೈಕೆ ಮಾಡುವುದಾಗಿ ಹೇಳಿತ್ತು. ಹೀಗಾಗಿ ಈ ಕಂಪನಿಗೆ ಟಿಟಿಡಿ ಈ ಟೆಂಡರ್ ಅನ್ನು ಅಂತಿಮಗೊಳಿಸಿತ್ತು. ಈ ತುಪ್ಪ ಕಳಪೆ ಎಂದು ಟಿಟಿಡಿ ಸಿಬ್ಬಂದಿಯೂ ಹಲವು ಬಾರಿ ಹೇಳಿರುವುದಾಗಿ ವರದಿಯಾಗಿದೆ. ಇದೇ ತುಪ್ಪವನ್ನು ಬಳಸಿ ತಿರುಪತಿ ಲಡ್ಡು ತಯಾರಿಸಲಾಗುತ್ತಿತ್ತು. ತುಪ್ಪ ಕಲಬೆರಕೆಯಾಗಿದ್ದು, ತಿರುಪತಿ ಲಡ್ಡುವಿನಲ್ಲಿ ಹಂದಿಯ ಕೊಬ್ಬಿನ ಅಂಶವಿದೆ ಎಂದು ವರದಿಯಾಗಿದೆ. ಮೀನಿನ ಎಣ್ಣೆ ಮತ್ತು ಬೀಫ್ ಟ್ಯಾಲೋ ಕೂಡ ಇರುವುದು ಕಂಡುಬಂದಿದೆ.
ತುಪ್ಪಕ್ಕೆ ಪ್ರಾಣಿ ಕೊಬ್ಬು ಸೇರಿಸುವುದು ಹೇಗೆ: ಹೆಚ್ಚಾಗಿ ಹಂದಿ ಕೊಬ್ಬಿನ ಅಂಗಾಂಶವನ್ನು ನೋಡಲಾಗಿದೆ. ಹಸು ಅಥವಾ ಹಂದಿಯ ಚರ್ಮದ ಅಡಿಯಲ್ಲಿರುವ ಕೊಬ್ಬನ್ನು ಕರಗಿಸಿ ಬೇರ್ಪಡಿಸಲಾಗುತ್ತದೆ. ಇದನ್ನು ತುಪ್ಪದಲ್ಲಿ ಬೆರೆಸಲಾಗುತ್ತದೆ. ಇದು ಯಾವುದೇ ಪರಿಮಳವನ್ನು ನೀಡುವುದಿಲ್ಲ, ಆದರೆ ಕರಗಿದ ನಂತರ ಅದು ತುಪ್ಪದ ವಿನ್ಯಾಸವನ್ನು ಪಡೆಯುತ್ತದೆ. ಇದನ್ನು ತುಪ್ಪದಲ್ಲಿ ಬೆರೆಸಿ ಸೇವಿಸಿದರೆ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ. ಆದ್ದರಿಂದಲೇ ಇಷ್ಟು ವರ್ಷ ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಸುತ್ತಿರುವುದು ಕಂಡು ಬರಲಿಲ್ಲ.
ಶುದ್ಧ ತುಪ್ಪವನ್ನು ಕಂಡುಹಿಡಿಯುವುದು ಹೇಗೆ
ಕೋಣೆಯ ಉಷ್ಣಾಂಶದಲ್ಲಿ ಶುದ್ಧ ತುಪ್ಪ ಕರಗುತ್ತದೆ. ಶುದ್ಧ ತುಪ್ಪವನ್ನು ತೆಗೆದುಕೊಂಡು ಅದನ್ನು ನಿಮ್ಮ ಅಂಗೈಯಲ್ಲಿ ಇರಿಸಿ. ಕೆಲವು ಸೆಕೆಂಡುಗಳ ಕಾಲ ಅದನ್ನು ಇಟ್ಟುಕೊಂಡರೆ, ಅದು ನಮ್ಮ ಕೈಗಳ ಶಾಖದಿಂದ ಕರಗಲು ಪ್ರಾರಂಭಿಸುತ್ತದೆ. ಹಾಗೆ ಕರಗಿದರೆ ಶುದ್ಧ ತುಪ್ಪ ಎಂದರ್ಥ. ಕಲಬೆರಕೆ ಇದ್ದರೆ ಅದು ಕರಗದು.
ತುಪ್ಪವು ಕಲಬೆರಕೆಯೇ ಅಥವಾ ಉತ್ತಮವೇ ಎಂದು ತಿಳಿಯಲು ಇನ್ನೊಂದು ಪರೀಕ್ಷೆಯನ್ನು ಸಹ ಬಳಸಬಹುದು. ಕೋಣೆಯ ಉಷ್ಣಾಂಶದಲ್ಲಿ ಗಾಜಿನ ಲೋಟದಲ್ಲಿ ನೀರನ್ನು ತಂದಿಡಿ. ಅದಕ್ಕೆ ಒಂದು ಹನಿ ತುಪ್ಪ ಹಾಕಿ. ಕೆಲವು ಸೆಕೆಂಡುಗಳಲ್ಲಿ ತುಪ್ಪ ತೇಲಿದರೆ, ಅದು ಶುದ್ಧವಾಗಿದೆ ಎಂದರ್ಥ. ಅದೂ ಅಲ್ಲದೆ ತುಪ್ಪದ ಹನಿ ಮುಳುಗಿದರೆ ಅದರಲ್ಲಿ ಕಲಬೆರಕೆ ಪದಾರ್ಥಗಳನ್ನು ಬೆರೆಸಲಾಗಿದೆ ಎಂದು ತಿಳಿಯಬೇಕು. ಹಾಗೆಯೇ ತುಪ್ಪವನ್ನು ಬಿಸಿ ಮಾಡಿದಾಗ ಅದು ಕರಗಬೇಕು. ಆದರೆ ಗುಳ್ಳೆ ಅಥವಾ ಉಗಿ ಬರುವುದಿಲ್ಲ. ಹಾಗೆ ಬಂದರೆ ಅದು ಕಲಬೆರಕೆ ತುಪ್ಪ ಎಂದರ್ಥ.
ಸಾಧ್ಯವಾದಷ್ಟು ಹೊರಗಿನಿಂದ ತುಪ್ಪ ತರುವುದನ್ನು ತಪ್ಪಿಸಿ. ಮನೆಯಲ್ಲೇ ತುಪ್ಪ ತಯಾರಿಸಿ. ಸ್ವಲ್ಪ ತಾಳ್ಮೆ ಬೇಕು ಅಷ್ಟೆ. ಮನೆಯಲ್ಲೇ ಮೊಸರು, ಮಜ್ಜಿಗೆ ಮಾಡಿ. ಬೆಣ್ಣೆ ಸಂಗ್ರಹಿಸಿ ಅದರಿಂದ ತುಪ್ಪ ತಯಾರಿಸಿ.
ವಿಭಾಗ