ಎಷ್ಟೇ ಕ್ಲೀನ್ ಮಾಡಿದ್ರು ಅಡುಗೆಮನೆ ಒರೆಸುವ ಬಟ್ಟೆಯಿಂದ ಜಿಡ್ಡಿನ ವಾಸನೆ ಬರುತ್ತಾ, ಈ ಟಿಪ್ಸ್ ಫಾಲೋ ಮಾಡಿ ಹೊಸದು ತರೋದು ತಪ್ಪುತ್ತೆ
Sep 26, 2024 08:07 AM IST
ಅಡುಗೆಮನೆ ಒರೆಸುವ ಬಟ್ಟೆಯಿಂದ ಜಿಡ್ಡಿನ ವಾಸನೆ ಹೋಗಲಾಡಿಸಲು ಟಿಪ್ಸ್
- ಅಡುಗೆ ಮನೆಯ ರ‍್ಯಾಕ್‌ನಿಂದ ಹಿಡಿದು ಗ್ಯಾಸ್ ಸ್ಟೌ, ಸಿಂಕ್ ಸ್ವಚ್ಛ ಮಾಡುವವರೆಗೆ, ಬಿಸಿ ಪಾತ್ರೆಗಳನ್ನ ಸ್ಟೌ ಮೇಲಿಂದ ಹಿಡಿದು ಇಳಿಸಲು ಅನುಕೂಲವಾಗುವವರೆಗೆ ಕಿಚನ್‌ನಲ್ಲಿ ಟವಲ್‌ಗಳ ಪಾತ್ರ ಮಹತ್ವದ್ದು. ಆದರೆ ಧೂಳು, ಕೊಳೆ, ಜಿಡ್ಡು ಹಿಡಿದು ಇದರಿಂದ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಕಿಚನ್ ಟವಲ್ ಸ್ವಚ್ಛವಾಗಿ, ತಾಜಾವಾಗಿ ಇರುವಂತೆ ಮಾಡಲು ಇಲ್ಲದೆ ಟಿಪ್ಸ್.
ಕಿಚನ್‌ನಲ್ಲಿ ಅಡುಗೆ ಸಾಮಗ್ರಿಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕಿಚನ್ ಟವಲ್. ಬಹುಪಯೋಗಿಯಾಗಿರುವ ಈ ಟವಲ್ ಕೇವಲ ಸ್ವಚ್ಛ ಮಾಡಲು ಮಾತ್ರವಲ್ಲ ಬಿಸಿ ಪಾತ್ರೆಯನ್ನ ಹಿಡಿಯಲು, ಪಾತ್ರೆಗಳ ನೀರು ಒರೆಸಲು ಹೀಗೆ ಹಲವು ವಿಧಗಳಲ್ಲಿ ಬಳಸುತ್ತೇವೆ. ಆ ಕಾರಣಕ್ಕೆ ಇದು ಬಹಳ ಬೇಗ ಕೊಳೆಯಾಗುತ್ತದೆ. ಮಾತ್ರವಲ್ಲ ಜಿಡ್ಡು, ಅಂಟು, ಧೂಳು ಎಲ್ಲವೂ ಈ ಬಟ್ಟೆಗೆ ಅಂಟಿಕೊಂಡು ಬಹಳ ಬೇಗನೆ ಕೊಳಕಾಗುತ್ತದೆ. ಕೆಲವೊಮ್ಮೆ ಇದನ್ನು ಎಷ್ಟು ಸ್ವಚ್ಛ ಮಾಡಿದ್ರೂ ಕೊಳೆ ಹೋಗುವುದಿಲ್ಲ. ಹಾಗಂತ ಪದೇ ಪದೇ ಹೊಸತು ತರಲು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಈ ಟ್ರಿಕ್ಸ್ ಬಳಸಿದ್ರೆ ಕಿಚನ್ ಟವೆಲ್ ವಾಸನೆ ರಹಿತವಾಗಿ ಹೊಸರಂತೆ ಕಾಣುತ್ತದೆ.
ಅಡುಗೆಮನೆಯಲ್ಲಿ ಬಳಸುವ ಟವಲ್ ಹೊಸತರಂತೆ ಕಾಣಲು ನೀವು ಈ ಟಿಪ್ಸ್‌ಗಳನ್ನ ಅನುಸರಿಸಿ ನೋಡಿ. ಇದರಿಂದ ಟವಲ್ ವಾಸನೆ ಬರುತ್ತೆ ಎನ್ನುವ ಚಿಂತೆಯೂ ದೂರಾಗುತ್ತದೆ. ಅಲ್ಲದೇ ಬಳಸಲು ಖುಷಿ ಎನ್ನಿಸುತ್ತದೆ.
ಆಗಾಗ ತೊಳೆಯಿರಿ
ಅಡುಗೆ ಮನೆಯಲ್ಲಿ ಬಳಸುವ ಟವಲ್ ಅಥವಾ ಬಟ್ಟೆಯನ್ನು ಬಹುತೇಕರು ನಿರಂತರವಾಗಿ ತೊಳೆಯುವುದಿಲ್ಲ. ಇದರಿಂದ ಧೂಳು, ಕೊಳೆ ಹೆಚ್ಚಾಗಿ ಅಂಟಿಕೊಳ್ಳುತ್ತದೆ. ಜಿಡ್ಡಿನಂತ ಅಂಟಿಕೊಂಡ ತಕ್ಷಣ ಅದು ವಾಸನೆ ಬರಲು ಆರಂಭವಾಗುತ್ತದೆ. ಹಾಗಾಗಿ ಪದೇ ಪದೇ ಸ್ವಚ್ಛ ಮಾಡಬೇಕು. ಪ್ರತಿದಿನ ತೊಳೆದು ಒಣಗಿಸುವ ಅಭ್ಯಾಸ ಮಾಡಿಕೊಳ್ಳಿ.
ಹಲವು ಬಟ್ಟೆ ಇಟ್ಟುಕೊಳ್ಳಿ
ಒಂದೇ ಬಟ್ಟೆಯನ್ನು ಬಳಸುವುದರಿಂದ ಕೊಳೆಯಾಗುವುದು ಜಾಸ್ತಿ, ಅಲ್ಲದೇ ಅಂತಹ ಸಂದರ್ಭದಲ್ಲಿ ತೊಳೆದು ಒಣಗಿಸಿದರೆ ಇನ್ನೊಂದು ಬಳಕೆಗೆ ಇರುವುದಿಲ್ಲ. ಹಾಗಾಗಿ ಐದಾರು ಅಡುಗೆಮನೆ ಸ್ವಚ್ಛ ಮಾಡುವ ಬಟ್ಟೆ ಇರಿಸಿಕೊಳ್ಳಿ. ಇದರಿಂದ ಕೂಡ ದಿನ ಅಥವಾ ಎರಡು ದಿನಕ್ಕೊಮ್ಮೆ ಬಳಸುವುದರಿಂದ ಬಟ್ಟೆ ಬೇಗನೆ ಕೊಳೆಯಾಗುವುದಿಲ್ಲ.
ನಿಂಬೆರಸ ಮತ್ತು ಉಪ್ಪು
ಅಡುಗಮನೆಯ ಟವರ್ ಸ್ವಚ್ಛ ಮಾಡಲು ಇರುವ ಇನ್ನೊಂದು ಬೆಸ್ಟ್ ವಿಧಾನ ಎಂದರೆ ನಿಂಬೆರಸ ಮತ್ತು ಉಪ್ಪು ಬಳಸುವುದು. ಕೊಳಕು, ಎಣ್ಣೆಯುಕ್ತ ಮತ್ತು ನಾರುವ ಕಿಚನ್ ಟವೆಲ್ ಅನ್ನು ಸ್ವಚ್ಛಗೊಳಿಸಲು, ಒಂದು ಬಕೆಟ್ ನೀರಿನಲ್ಲಿ ಎರಡು ನಿಂಬೆಹಣ್ಣಿನ ರಸವನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಉಪ್ಪನ್ನು ಸೇರಿಸಿ. ಅದರಲ್ಲಿ ಕಿಚನ್ ಟವೆಲ್ ಹಾಕಿ 30 ನಿಮಿಷ ನೆನೆಯಲು ಬಿಡಿ. ನಂತರ ಚೆನ್ನಾಗಿ ತೊಳೆದು, ಒಣಗಿಸಿ. ಇದರಿಂದ ಟವೆಲ್ ಸ್ವಚ್ಛವಾಗುತ್ತದೆ.
ಒದ್ದೆ ಟವಲ್ ಬಳಸಬೇಡಿ
ಸ್ನಾನದ ಟವಲ್‌ನಂತೆ ಅಡುಗೆ ಮನೆಯಲ್ಲಿ ಬಳಸುವ ಬಟ್ಟೆ ಅಥವಾ ಟವಲ್ ಅನ್ನು ಒಣಗಿಸಿದ ನಂತರವೇ ಬಳಸಬೇಕು. ಒದ್ದೆ ಟವಲ್ ಬಳಸುವುದರಿಂದ ಅದರಿಂದ ವಾಸನೆ ಇನ್ನಷ್ಟು ಹೆಚ್ಚುತ್ತದೆ. ಒದ್ದೆ ಟವಲ್ ಮುದ್ದೆ ಮಾಡಿ ಒಂದು ಕಡೆ ಇರಿಸುವುದರಿಂದ ಕೂಡ ಟವೆಲ್‌ನಲ್ಲಿ ವಾಸನೆ ಹೆಚ್ಚಾಗುತ್ತದೆ ನೆನಪಿರಲಿ.
ಟೀ ಟ್ರೀ ಆಯಿಲ್
ಟೀ ಟ್ರೀ ಎಣ್ಣೆಯನ್ನು ವಾಸನೆ ಬರುವ ಕಿಚನ್ ಟವೆಲ್‌ಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಇದಕ್ಕಾಗಿ, ನೀರಿನಲ್ಲಿ ಕೆಲವು ಹನಿಗಳ ಟೀ ಟ್ರೀ ಎಣ್ಣೆಯನ್ನು ಸೇರಿಸಿ ಮತ್ತು ಅದರಲ್ಲಿ ಕೊಳಕು ಟವೆಲ್‌ಗಳನ್ನ ನೆನೆಸಿ. ನಂತರ ಅವುಗಳನ್ನು ಸಾಮಾನ್ಯ ನೀರಿನಿಂದ ತೊಳೆದು ಒಣಗಿಸಿ. ಟೀ ಟ್ರೀ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಕಿಚನ್ ಟವೆಲ್ ಅನ್ನು ಸ್ವಚ್ಛಗೊಳಿಸಲು ಈ ಎಣ್ಣೆಯನ್ನು ಬಳಸುವುದರಿಂದ ಕಿಚನ್ ಟವೆಲ್ ಅನ್ನು ಸ್ವಚ್ಛಗೊಳ್ಳುವ ಜೊತೆಗೆ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ.
ಇದು ತಿಳಿದಿರಲಿ
ಅಡುಗೆಮನೆಯಲ್ಲಿ ಬಳಸುವ ಟವೆಲ್‌ಗಳನ್ನು ತೊಳೆದ ನಂತರ, ಅವುಗಳನ್ನು ಚೆನ್ನಾಗಿ ಹಿಸುಕಿ ಹಾಕಿ. ಎಲ್ಲಾ ನೀರನ್ನು ಹಿಂಡಿದ ನಂತರ, ಬಿಸಿಲಿನಲ್ಲಿ ಒಣಗಿಸಿ. ಮಳೆಗಾಲದಲ್ಲಿ ಬಿಸಿಲು ಕಡಿಮೆ ಇರುವ ಹೊರಾಂಗಣದಲ್ಲಿ ಒಣಗಿಸಿದರೆ ವಾಸನೆ ಮಾಯವಾಗುತ್ತದೆ. ಮೊದಲೇ ಹೇಳಿದಂತೆ ಒದ್ದೆ ಟವಲ್ ಎಂದಿಗೂ ಬಳಸಬಾರದು.
ಡಿಟರ್ಜೆಂಟ್
ಇತರ ಬಟ್ಟೆಗಳನ್ನ ಒಗೆಯುವಾಗ ಬಳಸುವಂತೆ ಕೆಲವು ಅಡುಗೆಮನೆಯ ಟವಲ್ ತೊಳೆಯುವಾಗಲೂ ಡಿಟರ್ಜೆಂಟ್ ಬಳಸುತ್ತಾರೆ. ಆದರೆ ಇದನ್ನು ಬಳಸಿದ ನಂತರ ಚೆನ್ನಾಗಿ ತೊಳೆಯಬೇಕು, ಇದನ್ನು ಅಡುಗೆ ಪಾತ್ರೆ ಒರೆಸಲು ಕೂಡ ಬಳಸುವುದರಿಂದ ಎಚ್ಚರ ಅವಶ್ಯ. ಚೆನ್ನಾಗಿ ತೊಳೆದು ಒಣಗಿಸಿದ ನಂತರಷ್ಟೇ ಬಳಸಿ.
ಅಡುಗೆಮನೆಯ ಟವಲ್ ಅಥವಾ ಅಡುಗಗೆಮನೆಯಲ್ಲಿ ಬಳಸುವ ಬಟ್ಟೆ ಹಳೇದಾಯ್ತು ಎನ್ನುವ ಕಾರಣಕ್ಕೆ ಅದನ್ನು ಬಿಸಾಡುವ ಬದಲು ಈ ರೀತಿಯ ಸುಲಭ ಟ್ರಿಕ್ಸ್ ಅನುಸರಿಸಿದ್ರೆ ಇನ್ನಷ್ಟು ದಿನ ಬಳಸಬಹುದು, ವಾಸನೆಯೂ ಇರುವುದಿಲ್ಲ, ನೀವೂ ಟ್ರೈ ಮಾಡಿ.
ವಿಭಾಗ