Kitchen Tips: ತರಕಾರಿಗಳನ್ನು ಕೆಡದಂತೆ ಸಂಗ್ರಹಿಸಿಡಲು ಬೇಕು ಕೌಶಲ; ಉದ್ಯೋಗಸ್ಥ ಮಹಿಳೆಯರ ಬದುಕು ಸುಲಭಗೊಳಿಸುವ ಉಪಾಯಗಳಿವು
Nov 08, 2023 06:30 PM IST
Kitchen Tips: ತರಕಾರಿಗಳನ್ನು ಸಂಗ್ರಹಿಸಿಡಲು ಬೇಕು ಕೌಶಲ; ಉದ್ಯೋಗಸ್ಥ ಮಹಿಳೆಯರ ಬದುಕು ಸುಲಭಗೊಳಿಸುವ ಉಪಾಯಗಳಿವು
- Kitchen tips for working women: ತರಕಾರಿಗಳನ್ನು ಬಹಳ ದಿನಗಳವರೆಗೆ ಕೆಡದಂತೆ ಫ್ರಿಜ್‌ನಲ್ಲಿಡುವುದು ಹೇಗೆ? ಆ ಕೌಶಲ ತಿಳಿದುಕೊಂಡರೆ, ಅದು ಉದ್ಯೋಗಸ್ಥ ಮಹಿಳೆಯರ ಸಮಯ ಉಳಿಸುತ್ತದೆ. ನಾವು ಹೇಳಿದ ಮೂರು ವಿಧಾನಗಳನ್ನು ಪಾಲಿಸಿ, ಅಡುಗೆಮನೆಯಲ್ಲಿ ವ್ಯರ್ಥವಾಗುವ ಸಮಯ ಉಳಿಸಿಕೊಳ್ಳಿ. (ಬರಹ: ಅರ್ಚನಾ ವಿ. ಭಟ್)
ರುಚಿಯಾದ ಅಷ್ಟೇ ಆರೋಗ್ಯಪೂರ್ಣವಾದ ತರಕಾರಿಗಳನ್ನು ಸೂಪರ್ ಫುಡ್ ಎಂದೇ ಕರೆಯುತ್ತಾರೆ. ಆದರೆ ತರಕಾರಿಗಳ ಸಂಗ್ರಹಣೆಯಲ್ಲಿ ಮಾತ್ರ ತೊಂದರೆಗಳಿವೆ. ಅವು ಬಹುಬೇಗನೆ ಕೆಡುತ್ತವೆ. ದುಡ್ಡುಕೊಟ್ಟು ಖರೀದಿಸಿದ ಆರೋಗ್ಯಕ್ಕೆ ಉತ್ತಮವಾದ ಮತ್ತು ರುಚಿಯಾದ ತರಕಾರಿಗಳು ಫ್ರಿಡ್ಜನಲ್ಲಿಟ್ಟರೂ ಕಡಿಮೆ ಸಮಯದಲ್ಲಿ ಕೆಟ್ಟುಹೋದರೆ ಬಹಳ ಬೇಸರವಾಗುತ್ತದೆ. ಹಾಗಾಗಿ ತರಕಾರಿಗಳನ್ನು ಕೆಡದಂತೆ ಬಹಳ ದಿನಗಳವರೆಗೆ ಫ್ರಿಡ್ಜ್‌ನಲ್ಲಿಡುವುದು ಹೇಗೆ? ಆ ಕೌಶಲ ಮತ್ತು ತಂತ್ರಗಾರಿಕೆ ತಿಳಿದುಕೊಂಡರೆ ಮತ್ತು ಸರಿಯಾಗಿ ತರಕಾರಿಗಳನ್ನು ಶೇಖರಿಸಿಟ್ಟುಕೊಂಡರೆ ಅದು ನಿಮ್ಮ ಸಮಯ ಉಳಿಸುತ್ತದೆ. ತರಕಾರಿಗಳನ್ನು ಅಚ್ಚುಕಟ್ಟಾಗಿ ಖರೀದಿಸಿ, ಸಂಸ್ಕರಿಸಿ ಮತ್ತು ಸರಿಯಾಗಿ ಫ್ರಿಜ್‌ನಲ್ಲಿ ಶೇಖರಿಸಿಟ್ಟುಕೊಂಡರೆ ಬಹಳ ದಿನಗಳವರೆಗೆ ತಾಜಾತನ ಕಾಪಾಡಿಕೊಳ್ಳಬಬಹುದು.
ತರಕಾರಿಗಳನ್ನು ಫ್ರಿಜ್‌ನಲ್ಲಿ ಶೇಖರಿಸುವ ಮೊದಲು ಈ ಮೂರು ವಿಧಾನಗಳನ್ನು ಪಾಲಿಸಿ
1. ತರಕಾರಿ ಖರೀದಿಸುವಾಗ ಜಾಣ್ಮೆ ತೋರಿಸಿ
- ನಿಮಗೆ ಅಗತ್ಯವಿರುವ ತರಕಾರಿಗಳನ್ನು ಮಾತ್ರ ಖರೀದಿಸಿ. ಸೀಮಿತ ಪ್ರಮಾಣದಲ್ಲಿ ತರಕಾರಿಗಳನ್ನು ಖರೀದಿಸಿದಾಗ ಮಾತ್ರ ಫ್ರಿಜ್‌ನಲ್ಲಿಯೇ ಉಳಿದು ಹಾಳಾಗುವುದನ್ನು ತಪ್ಪಿಸಬಹುದು. ಸುಮಾರು ಒಂದು ವಾರಕ್ಕೆ ನಿಮಗೆ ಅಗತ್ಯವಿರುವ ತರಕಾರಿಗಳನ್ನು ಖರೀದಿಸುವ ರೂಢಿ ಮಾಡಿಕೊಳ್ಳಿ. ಇದನ್ನು ರೂಢಿಸಿಕೊಳ್ಳಲು ಆಗಾಗ ಸೂಪರ್‌ಮಾರ್ಕೆಟ್‌ಗೆ ಭೇಟಿ ನೀಡಿ. ಅಲ್ಲಿ ನಿಮಗೆ ಅಗತ್ಯವಿರುಷ್ಟನ್ನೇ ಖರೀದಿಸಿ. ಅದು ಸಣ್ಣಪ್ರಮಾಣದ ಖರೀದಿಯಾಗಿರಲಿ. ಮೊದಲೇ ಯೋಜನೆ ಸಿದ್ಧಪಡಿಸಿಕೊಳ್ಳಿ.
- ನಿಮ್ಮ ಇಂದಿನ ಊಟದಲ್ಲಿ ಯಾವ ಬಗೆಯ ತರಕಾರಿಗಳನ್ನು ಬಳಸುತ್ತೀರಿ ಎಂದು ಮೊದಲೇ ಯೋಚಿಸಿ. ಪೂರ್ವಸಿದ್ಧತೆ ಮತ್ತು ಯೋಜನೆಯಿಂದ ನೀವು ಖರೀದಿಸಿದ ತರಕಾರಿಗಳನ್ನು ಸಮಯಕ್ಕೆ ಸರಿಯಾಗಿ ಬಳಸಬಹುದು. ಫ್ರಿಜ್‌ನಲ್ಲೇ ಬಹಳ ದಿನಗಳವರೆಗೆ ಉಳಿದು ಹಾಳಾಗುವುದು ತಪ್ಪುತ್ತದೆ. ಫ್ರಿಜ್‌ನಲ್ಲಿ ಕಡಿಮೆ ತರಕಾರಿಗಳಿದ್ದಾಗ ಅವುಗಳ ಮಧ್ಯೆ ಗಾಳಿಯಾಡಲು ಹಾಗೂ ಇಥಲೀನ್ ಅನಿಲ ಮತ್ತು ತೇವಾಂಶದ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ತರಕಾರಿಗಳ ನಡುವೆ ಹೆಚ್ಚು ಗಾಳಿಯಾಡಿ, ಅವು ದೀರ್ಘಕಾಲದವರೆಗೆ ತಾಜಾವಾಗಿರುವಂತೆ ನೋಡಿಕೊಳ್ಳುತ್ತದೆ.
- ಆಯಾ ಕಾಲದ ತರಕಾರಿಗಳನ್ನೇ ಖರೀದಿಸಿ. ಸ್ಥಳೀಯವಾಗಿ ಬೆಳೆದ ತರಕಾರಿಗಳು ಹೆಚ್ಚು ತಾಜಾವಾಗಿರುತ್ತವೆ. ಏಕೆಂದರೆ ಸಾಗಾಣಿಕೆಯಲ್ಲಿ ಹೆಚ್ಚು ಸಮಯ ತೆಗೆದುಕೊಂಡಿರುವುದಿಲ್ಲ. ತುಂಬ ದೂರದ ಪ್ರದೇಶಗಳಿಂದ ಬಂದ ತರಕಾರಿಗಳು ಬಹು ಬೇಗನೆ ಕೆಡುತ್ತವೆ.
ಇದನ್ನೂ ಓದಿ: ಅಡುಗೆಮನೆ ಚಿಕ್ಕದೆಂಬ ಚಿಂತೆ ಬಿಡಿ, ನಾವು ಹೇಳಿದಂತೆ ಜೋಡಿಸಿ; ಆಗ ನೋಡಿ ಅಡುಗೆಮನೆಯಲ್ಲಿ ಜಾಗವೋ ಜಾಗ
2. ತರಕಾರಿಗಳನ್ನು ಫ್ರಿಜ್‌ನಲ್ಲಿಡಲು ಈ ಸಲಹೆ ಪಾಲಿಸಿ
- ಫ್ರಿಜ್‌ನಲ್ಲಿ ತರಕಾರಿಗಳನ್ನಿಡುವ ಮೊದಲು ಅವುಗಳನ್ನು ಸ್ವಚ್ಛವಾಗಿ ತೊಳೆದು, ಒಣಗಿಸಿ. ತರಕಾರಿಗಳನ್ನು ತೊಳೆಯುವುದರಿಂದ ಅವುಗಳ ಮೇಲ್ಮೈನಲ್ಲಿರುವ ಬ್ಯಾಕ್ಟೀರಿಯಾ, ಧೂಳು, ರಾಸಾಯನಿಕಗಳಂತಹ ಹಾನಿಕಾರಕಗಳನ್ನು ತೆಗೆದುಹಾಕಬಹುದು. ಫ್ರಿಜ್‌ನಲ್ಲಿ ಶೇಖರಿಸುವ ಮೊದಲು ಅವುಗಳು ಸಂಪೂರ್ಣವಾಗಿ ಒಣಗಿವೆಯೇ ಎಂದು ಪರೀಕ್ಷಿಸಿ. ಇದು ಅಧಿಕ ತೇವಾಂಶದಿಂದ ತರಕಾರಿಗಳು ಹಾಳಾಗುವುದನ್ನು ತಡೆಯುತ್ತದೆ.
- ಎಲ್ಲ ತರಕಾರಿಗಳನ್ನು ಒಂದೇ ಚೀಲದಲ್ಲಿಡಬೇಡಿ. ಆಯಾ ಜಾತಿಯ ತರಕಾರಿಗಳನ್ನು ಮಾತ್ರ ಸೇರಿಸಿಡಿ. ಉದಾಹರಣೆಗೆ ಗೆಡ್ಡೆ ತರಕಾರಿಗಳು, ಸೊಪ್ಪು, ಬೀನ್ಸ್–ಬಟಾಣಿ–ಹುರುಳಿಕಾಯಿ ಮುಂತಾದ ದ್ವಿದಳ ಧಾನ್ಯಗಳ ತರಕಾರಿಗಳು ಹೀಗೆ ಬೇರೆ ಬೇರೆಯಾಗಿಡಿ.
- ತೇವಾಂಶದಿಂದ ಬೇಗನೆ ಕೊಳೆಯುವ ತರಕಾರಿಗಳನ್ನು ತೇವಾಂಶ ಡ್ರಾಯರ್‌ಗಳಿಂದ ಬೇರ್ಪಡಿಸಿ. ಸಾಮಾನ್ಯವಾಗಿ ಎಲ್ಲಾ ಫ್ರಿಜ್‌ನಲ್ಲಿ ತೇವಾಂಶ ನಿಯಂತ್ರಿಸುವ ತಂತ್ರಜ್ಞಾನವಿರುತ್ತದೆ. ನಿಮ್ಮ ತರಕಾರಿಗಳಿಗೆ ಅನುಗುಣವಾಗಿ ಅವುಗಳ ಮಟ್ಟ ಹೊಂದಿಸಿಕೊಳ್ಳಿ. ಹಣ್ಣು, ಟೊಮೆಟೊ ಮತ್ತು ಆಲೂಗೆಡ್ಡೆಯಂತಹ ಕೆಲವು ತರಕಾರಿಗಳನ್ನು ಕಡಿಮೆ ಆರ್ದ್ರತೆಯ ಡ್ರಾಯರ್‌ನಲ್ಲಿರಿಸಬಹುದು.
- ಪಾಲಕ್ ಮತ್ತು ಲೆಟಿಸ್‌ನಂತಹ ಸೊಪ್ಪುಗಳನ್ನು ತೊಳೆದ ನಂತರ ಚೆನ್ನಾಗಿ ಒಣಗಿಸಿ ಸಂಗ್ರಹಿಸಿ. ಅವುಗಳನ್ನು ಕಾಗದ ಅಥವಾ ತೆಳುವಾದ ಟವೆಲ್‌ನಲ್ಲಿ ಸುತ್ತಿ ಮತ್ತು ಚೀಲ ಅಥವಾ ಡಬ್ಬಿಯಲ್ಲಿಡಿ.
- ಈರುಳ್ಳಿಗಳು ಅಥವಾ ಅಣಬೆಗಳಂತಹ ಬೇರು ತರಕಾರಿಗಳನ್ನು ತಂಪಾದ ಮತ್ತು ಸೂರ್ಯನ ಬೆಳಕು ಕಡಿಮೆ ಇರುವ ಸ್ಥಳದಲ್ಲಿ ಇರಿಸಿ. ಅವುಗಳನ್ನು ಫ್ರಿಡ್ಜ್‌ನಲ್ಲಿ ಇಡುವ ಅಗತ್ಯವಿಲ್ಲ. ಅವು ಶುಷ್ಕವಾಗಿ ಮತ್ತು ನೇರ ಸೂರ್ಯನ ಬೆಳಕಿನಿಂದ ದೂರವಿರುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ಬ್ಯಾಕ್ಟೀರಿಯಾಗಳು ಅವುಗಳ ಮೇಲೆ ಬಹುಬೇಗನೆ ಬೆಳೆಯುತ್ತವೆ.
- ನಿಮ್ಮ ತರಕಾರಿಗಳನ್ನು ಇಥಲೀನ್ ಅನಿಲ ಉತ್ಪಾದಿಸುವ ವಸ್ತುಗಳಿಂದ ದೂರವಿಡಿ. ಕೆಲವು ತರಕಾರಗಳು ಮತ್ತು ಅನೇಕ ಹಣ್ಣುಗಳು ಇಥಲೀನ್ ಉತ್ಪತ್ತಿ ಮಾಡುತ್ತದೆ. ಇದರಿಂದ ಉಳಿದ ತರಕಾರಿಗಳು ಬಹು ಬೇಗನೆ ಕೆಡುತ್ತವೆ. ಇಥಲೀನ್ ಉತ್ಪತ್ತಿ ಮಾಡುವ ಹಣ್ಣುಗಳಲ್ಲಿ ಸೇಬು, ಆವಕಾಡೊ, ಬಾಳೆಹಣ್ಣು, ಪೀಚ್, ಪೇರಳೆ, ಮತ್ತು ಟೊಮೆಟೊಗಳು ಸೇರಿವೆ. ಇನ್ನು ತರಕಾರಿಗಳೆಂದರೆ ಕೋಸುಗಡ್ಡೆ, ಸೌತೆಕಾಯಿ, ಬಿಳಿಬದನೆ, ಲೆಟಿಸ್, ಮೆಣಸುಗಳು, ಕುಂಬಳಕಾಯಿ ಮತ್ತು ಚೀನಿಕಾಯಿ. ಇಥಲೀನ್ ಉತ್ಪತ್ತಿ ಮಾಡುವ ಹಣ್ಣು ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿ ತೇವಾಂಶ ಡ್ರಾಯರ್‌ಗಳಲ್ಲಿ ಇಡಿ.
- ಸಾಧ್ಯವಾದಷ್ಟು ಒಂದು ವಾರಕ್ಕೆ ಸಾಕಾಗುವಷ್ಟು ತರಕಾರಿಗಳನ್ನು ಮಾತ್ರ ಫ್ರಿಜ್‌ನಲ್ಲಿಡಿ. ಪ್ರತಿ ತರಕಾರಿಯು ಕೆಡಲು ಬೇರೆ ಬೇರೆ ಸಮಯ ತೆಗೆದುಕೊಳ್ಳುತ್ತದೆ. ಅಂದರೆ ಕೆಲವು ತರಕಾರಿಗಳು ಬೇಗನೆ ಕಟ್ಟುಹೋದರೆ, ಇನ್ನು ಕೆಲವು ಹಾಗಲ್ಲ. ತರಕಾರಿ ಖರೀದಿಸುವಾಗಲೇ ಅವುಗಳನ್ನು ಎಷ್ಟು ದಿನಗಳ ಒಳಗೆ ಉಪಯೋಗಿಸಬೇಕು ಎಂಬುದನ್ನು ಯೋಚಿಸಿ. ಅಡುಗೆ ಮಾಡುವಾಗಲೂ ಅಷ್ಟೆ ಬೇಗನೆ ಕೆಟ್ಟು ಹೋಗುವ ತರಕಾರಿಗಳನ್ನೆ ಮೊದಲು ಆಯ್ದುಕೊಳ್ಳಿ.
3. ತರಕಾರಿಗಳನ್ನು ಆಗಾಗ ಪರಿಶೀಲಿಸುತ್ತಿರಿ
- ತರಕಾರಿಗಳು ಹಾಳಾಗಿವೆಯೇ ಇಲ್ಲವೆ ಎಂದು ಸುಲಭವಾಗಿ ಕಂಡುಹಿಡಿಯಲು ಮೊದಲು ಅದರ ಬಣ್ಣ ಪರೀಕ್ಷಿಸಿ. ಗಾಢ ಹಸಿರು ಬಣ್ಣದ ತರಕಾರಿಗಳು ಹಳದಿ ಬಣ್ಣ ಅಥವಾ ಕಂದು ಬಣ್ಣಕ್ಕೆ ತಿರುಗುತ್ತವೆ. ಅಂತಹವುಗಳನ್ನು ಪರೀಕ್ಷಿಸಿ ಉಪಯೋಗಿಸಲು ಯೋಗ್ಯ ಎಂದು ಅನಿಸಿದರೆ ಬಳಸಿ ಇಲ್ಲವಾದರೆ ಖಂಡಿತ ಬಳಸಬೇಡಿ.
- ತಾಜಾತನ ಕಳೆದುಕೊಂಡ ತರಕಾರಿಗಳು ಬಳಸಲು ಯೋಗ್ಯವಾಗಿರುವುದಿಲ್ಲ. ಕೆಲವು ತರಕಾರಿಗಳು ಮೃದುವಾದರೆ, ಇನ್ನ ಕೆಲವು ಸುಕ್ಕುಗಟ್ಟಿರಬಹುದು.
- ತರಕಾರಿಗಳ ವಾಸನೆ ಪರೀಕ್ಷಿಸಿ. ಕೆಟ್ಟು ಹೋದ ತರಕಾರಿಗಳಿಂದ ಕೆಟ್ಟವಾಸನೆ ಬರುತ್ತವೆ. ಅಂತಹವುಗಳನ್ನು ಬಳಸಬೇಡಿ.
- ಅಡುಗೆ ಮಾಡುವಾಗ ತರಕಾರಿಗಳನ್ನು ಸಂಪೂರ್ಣವಾಗಿ ಬಳಸಿ. ಕತ್ತರಿಸಿದ ಅಥವಾ ಹೆಚ್ಚಿದ ತರಕಾರಿಗಳನ್ನು ಗಾಳಿಯಾಡದ ಡಬ್ಬಿಗಳಲ್ಲಿಡಿ.
ಈ ಸಲಹೆಗಳನ್ನು ಪಾಲಿಸಿ, ಅಡುಗೆಮನೆಯಲ್ಲಿ ವ್ಯರ್ಥವಾಗುವ ಸಮಯ ಉಳಿಸಿಕೊಳ್ಳಿ.
ವಿಭಾಗ