logo
ಕನ್ನಡ ಸುದ್ದಿ  /  ಜೀವನಶೈಲಿ  /  ಟೊಮೆಟೊ ದರ ಗಗನಕ್ಕೇರಿದೆ ಅಂತ ಚಿಂತಿಸಬೇಡಿ, ಟೊಮೆಟೊ ಹಣ್ಣಿಗೆ ಪರ್ಯಾಯವಾಗಿ ಇವುಗಳನ್ನು ಬಳಸಿ, ಆಹಾರದ ರುಚಿ ಹೆಚ್ಚಿಸಿ

ಟೊಮೆಟೊ ದರ ಗಗನಕ್ಕೇರಿದೆ ಅಂತ ಚಿಂತಿಸಬೇಡಿ, ಟೊಮೆಟೊ ಹಣ್ಣಿಗೆ ಪರ್ಯಾಯವಾಗಿ ಇವುಗಳನ್ನು ಬಳಸಿ, ಆಹಾರದ ರುಚಿ ಹೆಚ್ಚಿಸಿ

Reshma HT Kannada

Oct 07, 2024 03:36 PM IST

google News

ಟೊಮೆಟೊಗೆ ಪರ್ಯಾಯ

    • ಆಗಾಗ ಟೊಮೆಟೊ ದರ ಗಗನಕ್ಕೇರೋದು ನೋಡಿದ್ರೆ ಗಾಬರಿ ಆಗೋದು ಸಹಜ. ಯಾಕೆಂದ್ರೆ ಬಹುತೇಕ ಅಡುಗೆಗೆಗಳು ಟೊಮೆಟೊ ಇಲ್ಲ ಅಂದ್ರೆ ಪರಿಪೂರ್ಣ ಅನ್ನಿಸೊಲ್ಲ. ಹಾಗಂತ ದುಬಾರಿ ಬೆಲೆ ಕೊಟ್ಟು ಟೊಮೆಟೊ ಹಣ್ಣನ್ನೇ ತರಬೇಕು ಅಂತಿಲ್ಲ. ಹುಳಿ ರುಚಿ ಕೊಡುವ ಈ ಪದಾರ್ಥಗಳನ್ನು ಪರ್ಯಾಯವಾಗಿ ಬಳಸಬಹುದು. ಇದರಿಂದ ರುಚಿಯೂ ಕೆಡೊಲ್ಲ. ಟೊಮೆಟೊಗೆ ಪರ್ಯಾಯವಾಗಿ ಏನೆಲ್ಲಾ ಬಳಸಬಹುದು ನೋಡಿ.
ಟೊಮೆಟೊಗೆ ಪರ್ಯಾಯ
ಟೊಮೆಟೊಗೆ ಪರ್ಯಾಯ

ಕಳೆದ ವರ್ಷ ಕಣ್ಣೀರು ತರಿಸಿದ್ದ ಟೊಮೆಟೊ ದರ ಈಗ ಮತ್ತೆ ಏರಿಕೆಯಾಗಿದೆ. ಈಗಾಗಲೇ 100ರ ಗಡಿ ದಾಟಿರುವ ಟೊಮೆಟೊ ದರ ಏರಿಕೆಗೆ ಇಳುವರಿ ಕುಸಿತವೂ ಕಾರಣವಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಟೊಮೆಟೊ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ. ಟೊಮೆಟೊ ದರ ಏರಿಕೆಯಾದ್ರೆ ಗೃಹಿಣಿಯರ ಕಣ್ಣಲ್ಲಿ ನೀರು ಬರುತ್ತೆ. ಏಕೆಂದರೆ ಟೊಮೆಟೊ ಇಲ್ಲ ಅಂದರೆ ಬಹುತೇಕ ಅಡುಗೆಗಳು ಪರಿಪೂರ್ಣ ಅನ್ನಿಸೊಲ್ಲ. ಹಾಗಂತ ದುಬಾರಿ ಬೆಲೆ ಕೊಟ್ಟು ಟೊಮೆಟೊ ಹಣ್ಣು ಖರೀದಿಸಿ ತರುವುದು ಕಷ್ಟವಾಗುತ್ತದೆ.

ಟೊಮೆಟೊ ಹಣ್ಣಿನ ರುಚಿ ಬೇಕು, ಆದರೆ ಟೊಮೆಟೊ ಹಣ್ಣು ತರಲು ಸಾಧ್ಯವಿಲ್ಲ ಎನ್ನುವವರು ಪರ್ಯಾಯಗಳ ಬಗ್ಗೆ ಯೋಚಿಸಬೇಕು. ಹಾಗಾದರೆ ಟೊಮೆಟೊ ಹಣ್ಣಿಗೆ ಪರ್ಯಾಯ ಏನಿದೆ ಎಂಬ ಪ್ರಶ್ನೆ ನಿಮ್ಮ ಮನಸ್ಸಲ್ಲಿ ಮೂಡಿದ್ರೆ ಇದಕ್ಕೆ ಇಲ್ಲಿದೆ ಉತ್ತರ.

ಟೊಮೆಟೊಗೆ ಏನೆಲ್ಲಾ ಪರ್ಯಾಯವಿದೆ?

ನಿಂಬೆಹಣ್ಣು: ಟೊಮೆಟೊಗೆ ನಿಂಬೆಹಣ್ಣಿಗಿಂತ ಉತ್ತಮ ಪರ್ಯಾಯ ಇನ್ನೊಂದಿಲ್ಲ. ಬಹುತೇಕ ಸಂದರ್ಭದಲ್ಲಿ ಟೊಮೆಟೊ ಬದಲಿಗೆ ನಿಂಬೆಹಣ್ಣು ಬಳಸಲಾಗುತ್ತದೆ. ಇದರ ಹುಳಿ ರುಚಿಯು ಟೊಮೆಟೊ ಇಲ್ಲ ಎನ್ನುವ ಯೋಚನೆಯನ್ನೂ ಮರೆಸುತ್ತದೆ. ಹಾಗಂತ ಖಂಡಿತ ರುಚಿ ಕೆಡಿಸುವುದಿಲ್ಲ. ಆದರೆ ಅತಿಯಾಗಿ ಬಳಸಿದ್ರೆ ಹುಳ ರುಚಿ ಹೆಚ್ಚಾಗಬಹುದು ಗಮನದಲ್ಲಿರಲಿ. ಚಿತ್ರಾನ್ನ, ಸಾರು, ಸಾಂಬಾರಿಗೂ ಕೂಡ ನಿಂಬೆಹಣ್ಣನ್ನು ಬಳಸಬಹುದು.

ನೆಲ್ಲಿಕಾಯಿ: ಟೊಮೆಟೊ ಹಣ್ಣಿಗೆ ಪರ್ಯಾಯವಾಗಿ ಕೆಲವು ಖಾದ್ಯಗಳಿಗೆ ನೆಲ್ಲಿಕಾಯಿ ಬಳಸಬಹುದು. ನೆಲ್ಲಿಕಾಯಿಯು ಕೂಡ ಹುಳಿರುಚಿಯನ್ನು ಹೊಂದಿರುವ ಪದಾರ್ಥವಾಗಿದೆ. ಇದರಲ್ಲೂ ಸಿಟ್ರಸ್ ಅಂಶವಿದ್ದು ಟೊಮೆಟೊ ಹಣ್ಣಿಗೆ ಪರ್ಯಾಯವಾಗುವುದರಲ್ಲಿ ಅನುಮಾನವಿಲ್ಲ.

ಹುಣಸೆಹಣ್ಣು: ಹುಣಸೆಹಣ್ಣು ಕೂಡ ಟೊಮೆಟೊ ಹಣ್ಣಿಗೆ ಉತ್ತಮ ಪರ್ಯಾಯ. ಬಹುತೇಕರು ಟೊಮೆಟೊ ಹಣ್ಣಿನ ಬದಲು ಹುಣಸೆಹಣ್ಣು ಬಳಸುತ್ತಾರೆ. ಇದು ಕೂಡ ಖಾದ್ಯಗಳಿಗೆ ವಿಶೇಷ ರುಚಿ ಸಿಗುವಂತೆ ಮಾಡುತ್ತದೆ. ಟೊಮೆಟೊ ಬದಲು ಹುಣಸೆರಸ ಬಳಸಬಹುದು.

ಮಾವಿನಕಾಯಿ: ಇದು ಮಾವಿನಕಾಯಿ ಸೀಸನ್‌ ಅಲ್ಲ ನಿಜ. ಆದರೆ ಟೊಮೆಟೊಗೆ ಮಾವಿನಕಾಯಿ ಕೂಡ ಉತ್ತಮ ಪರ್ಯಾಯವಾಗುತ್ತದೆ. ಇದು ಕೂಡ ಹುಳಿ ರುಚಿ ಹೊಂದಿದ್ದು ಟೊಮೆಟೊ ಬದಲಿಗೆ ಇದನ್ನು ಬಳಸುವ ಮೂಲಕ ಆಹಾರ ಖಾದ್ಯಗಳ ರುಚಿಯನ್ನು ಹೆಚ್ಚಿಸಬಹುದು.

ದೊಣ್ಣೆಮೆಣಸು: ಟೊಮೆಟೊ ಬೆಲೆ ಏರಿಕೆಯಾದಾಗ ನೀವು ದೊಣ್ಣೆ ಮೆಣಸು ತರುವ ಮೂಲಕ ಆಹಾರ ಖಾದ್ಯಗಳ ರುಚಿಯನ್ನು ಹೆಚ್ಚಿಸಬಹುದು.

ವಿನೇಗರ್: ವಿನೇಗರ್ ಹುಳಿ ರುಚಿ ಹೊಂದಿರುವ ಒಂದು ರೀತಿಯ ಪಾನೀಯ. ಬಹುತೇಕರ ಅಡುಗೆ ಮನೆಯಲ್ಲಿ ವಿನೇಗರ್ ಇರುತ್ತದೆ. ಟೊಮೆಟೊ ದರ ಏರಿಕೆಯಾದಾಗ ನೀವು ಕೊಂಚ ವಿನೇಗರ್ ಬಳಸಿ ಖಾದ್ಯಗಳಿಗೆ ಹುಳಿ ರುಚಿ ನೀಡಬಹುದು. ಹಾಗಂತ ಎಲ್ಲಾ ಖ್ಯಾದಗಳಿಗೂ ಇದನ್ನು ಬಳಸಿದರೆ ರುಚಿ ಕೆಡಬಹುದು, ನೋಡಿಕೊಂಡು ಬಳಸಿ.

ಮೊಸರು: ಟೊಮೆಟೊ ಇಲ್ಲದೇ ಹುಳಿ ರುಚಿ ಸಿಗುತ್ತಿಲ್ಲ ಎಂದರೆ ಇದಕ್ಕೆ ಪರ್ಯಾಯವಾಗಿ ಮೊಸರನ್ನು ಕೂಡ ಬಳಸಬಹುದು. ಒಂಡೆರಡು ಚಮಚ ಮೊಸರು ಬಳಸುವುದರಿಂದ ವಿವಿಧ ರೀತಿಯ ಖಾದ್ಯಗಳ ರುಚಿಯೂ ಹೆಚ್ಚಾಗುತ್ತದೆ. ಟೊಮೆಟೊ ಇಲ್ಲ ಎಂಬ ಚಿಂತೆಯೂ ದೂರಾಗುತ್ತದೆ.

ಪುನರ್ಪುಳಿ: ಕರಾವಳಿ ಭಾಗದಲ್ಲಿ ಹೆಚ್ಚು ಬಳಸುವ ಪುನರ್ಪುಳಿ ಕೂಡ ಟೊಮೆಟೊಗೆ ಪರ್ಯಾಯ. ಇದು ಹುಳಿ ರುಚಿ ನೀಡುವುದು ಮಾತ್ರವಲ್ಲ ಇದರಿಂದ ಕೂಡ ರಸಂ ತಯಾರಿಸಬಹುದು. ಸಾಂಬಾರಿಗೆ ಇದನ್ನು ಬಳಸುವ ಮೂಲಕ ಹುಳಿ ರುಚಿ ಸಿಗುವಂತೆ ಮಾಡಬಹುದು.

ಆಮ್ಚೂರ್ ಪೌಡರ್: ಮಾರುಕಟ್ಟೆಯಲ್ಲಿ ಆಮ್ಚೂರ್ ಪುಡಿ ಸಿಗುತ್ತದೆ. ಇದು ಮಾವಿನಕಾಯಿಯಿಂದ ತಯಾರಿಸಿರುವುದು, ಇದನ್ನು ಕೂಡ ಟೊಮೆಟೊಗೆ ಪರ್ಯಾಯವಾಗಿ ಬಳಸಬಹುದು.

ಹೇರಳೆಕಾಯಿ: ಟೊಮೆಟೊ ದರ ಏರಿಕೆಯಾಯ್ತು ಎನ್ನುವ ಚಿಂತೆ ಇರುವವರು ಮಾರುಕಟ್ಟೆಯಿಂದ ಹೇರಳೆಕಾಯಿ ತಂದು ಬಳಸಬಹುದು. ಆದರೆ ಇದು ಕೊಂಚ ಕಹಿ ರುಚಿಯ ಇರುವ ಕಾರಣ ಎಲ್ಲರಿಗೂ ಇಷ್ಟವಾಗದೇ ಇರಬಹುದು, ನೋಡಿಕೊಂಡು ಬಳಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ