Kitchen Tips: ಮಳೆಗಾಲದಲ್ಲಿ ಸಾಂಬಾರ ಪದಾರ್ಥಗಳು ಕೆಡದಂತೆ ದೀರ್ಘಕಾಲದವರೆಗೆ ಸಂಗ್ರಹಿಸಿಡುವುದು ಹೇಗೆ? ಇಲ್ಲಿದೆ ಟಿಪ್ಸ್
Jul 05, 2024 02:48 PM IST
ಮಳೆಗಾಲದಲ್ಲಿ ಸಾಂಬಾರ ಪದಾರ್ಥಗಳು ಕೆಡದಂತೆ ದೀರ್ಘಕಾಲದವರೆಗೆ ಸಂಗ್ರಹಿಸಿಡುವುದು ಹೇಗೆ?
- ಮಳೆಗಾಲ ಬಂತು ಅಂದ್ರೆ ಮನಸ್ಸಿಗೇನೋ ಖುಷಿಯಾಗುತ್ತೆ, ಆದ್ರೆ ಒಂದಿಲ್ಲೊಂದು ತಾಪತ್ರಯ ಕಾಡೋದು ಖಂಡಿತ. ಮಾನ್ಸೂನ್ ಋತುವಿನಲ್ಲಿ ಅಡುಗೆಮನೆಯಲ್ಲಿರುವ ವಸ್ತುಗಳನ್ನು ಕಾಪಾಡಿಕೊಳ್ಳುವುದು ಹೆಂಗಸರಿಗೆ ದೊಡ್ಡ ಸವಾಲು. ಯೀಸ್ಟ್, ಫಂಗಸ್ ಬಾರದಂತೆ ಸಾಂಬಾರ ಪದಾರ್ಥಗಳನ್ನು ಸಂಗ್ರಹಿಸಿ ಇಡುವುದು ಹೇಗೆ ನೋಡಿ. (ಬರಹ: ಪ್ರಿಯಾಂಕ ಗೌಡ)
ಭಾರತೀಯ ಪಾಕಪದ್ಧತಿಯಲ್ಲಿ ಸಾಂಬಾರ ಪದಾರ್ಥಗಳಿಗೆ ವಿಶೇಷ ಮಹತ್ವವಿದೆ. ಸಾಂಬಾರ ಪದಾರ್ಥಗಳನ್ನು ಬಳಸದೇ ಮಾಡಿರುವ ಆಹಾರಗಳು ನಮ್ಮ ನಾಲಿಗೆಗೂ ರುಚಿ ಎನ್ನಿಸುವುದಿಲ್ಲ. ಭಾರತದಲ್ಲಿ ವೈವಿಧ್ಯಮಯ ಆಹಾರ ಪದ್ಧತಿ ಇದ್ದರೂ ಮಸಾಲೆ ಪದಾರ್ಥಗಳ ಬಳಕೆ ಇದ್ದೇ ಇರುತ್ತದೆ. ಆ ಕಾರಣಕ್ಕೆ ಪ್ರತಿ ಭಾರತೀಯ ಅಡುಗೆಮನೆಯ ಮಸಾಲೆ ಪದಾರ್ಥಗಳಿಂದ ತುಂಬಿರುತ್ತದೆ.
ಆಹಾರದ ರುಚಿ ಹಾಗೂ ಪರಿಮಳವನ್ನು ಹೆಚ್ಚಿಸುವ ಮಸಾಲೆ ಪದಾರ್ಥಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಿ ಇಡಲಾಗುತ್ತದೆ. ಮಸಾಲೆಗಳಲ್ಲಿರುವ ನೈಸರ್ಗಿಕ ತೈಲಗಳು ಅವುಗಳನ್ನು ತಾಜಾವಾಗಿರಲು ಮತ್ತು ದೀರ್ಘಕಾಲದ ಸಂಗ್ರಹಣೆಯ ನಂತರವೂ ಬಳಸಲು ಸಹಾಯಕವಾಗಿದೆ.
ಮಾನ್ಸೂನ್ ಋತುವಿನಲ್ಲಿ ಗಾಳಿಯಲ್ಲಿ ಆರ್ದ್ರತೆ ಮಟ್ಟ ಹೆಚ್ಚಿರುತ್ತದೆ. ಮಸಾಲೆಗಳನ್ನು ಸರಿಯಾಗಿ ಸಂಗ್ರಹಿಸಿ ಇಡದಿದ್ದಲ್ಲಿ ಅವುಗಳಲ್ಲಿ ತೇವಾಂಶ ಕಾಣಿಸಿಕೊಂಡು ಪರಿಮಳವನ್ನು ಕಳೆದುಕೊಳ್ಳುತ್ತವೆ. ಹೆಚ್ಚಿನ ತೇವಾಂಶದ ಕಾರಣ ಯೀಸ್ಟ್, ಪಂಗಸ್‌ನ ಬೆಳವಣಿಗೆಗೆ ಒಳಗಾಗುವ ಸಾಧ್ಯತೆಯೂ ಹೆಚ್ಚು. ಮಸಾಲೆ ಪದಾರ್ಥಗಳನ್ನು ಸಂಗ್ರಹಿಸಿಡುವಾಗ ಅವುಗಳು ಕಡೆದಂತೆ ದೀರ್ಘಕಾಲದವರೆಗೆ ಇರಬೇಕು ಅಂದ್ರೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬಹುದು ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.
ಗಾಳಿಯಾಡದ ಕಂಟೇನರ್‌ಗಳ ಬಳಕೆ
ಮುಂಗಾರು ಪ್ರಾರಂಭವಾದ ತಕ್ಷಣ ಮೊದಲು ಮಾಡಬೇಕಾದ ಕೆಲಸ ಏನೆಂದರೆ ಮಸಾಲೆಗಳನ್ನು ಗಾಳಿಯಾಡದ ಕಂಟೇನರ್‌ಗಳಿಗೆ ವರ್ಗಾಯಿಸಬೇಕು. ಸರಿಯಾಗಿ ಗಾಳಿಯಾಡದ ಮತ್ತು ಸಾಕಷ್ಟು ಸ್ಥಳಾವಕಾಶ ಮತ್ತು ಬಿಗಿಯಾದ ಮುಚ್ಚಳಗಳನ್ನು ಹೊಂದಿರುವ ಕಂಟೇನರ್‌ಗಳಲ್ಲಿ ಮಸಾಲೆ ಪದಾರ್ಥಗಳನ್ನು ಶೇಖರಿಸಿಡಬೇಕು. ಅಲ್ಲದೆ, ಮಸಾಲೆಗಳನ್ನು ಸಂಗ್ರಹಿಸಲು ಬಳಸುವ ಡಬ್ಬ ಅಥವಾ ಪಾತ್ರೆಯು ಸರಿಯಾಗಿರಬೇಕು. ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಬಾರದು. ಇದರಿಂದ ಬೇಗನೆ ಪದಾರ್ಥ ಹದಗೆಡುತ್ತದೆ. ಹೀಗಾಗಿ ಸಾಧ್ಯವಾದಷ್ಟು ಗಾಜಿನಿಂದ ಮಾಡಿದಂತಹ ಪ್ರತಿಕ್ರಿಯಾತ್ಮಕವಲ್ಲದ ಡಬ್ಬಿಗಳನ್ನು ಬಳಸಿ. ವಿವಿಧ ರೀತಿಯ ಮಸಾಲೆಗಳು ಮತ್ತು ಸಕ್ಕರೆ ಸೇರಿದಂತೆ ಎಲ್ಲವನ್ನೂ ಅಂತಹ ಪಾತ್ರೆಗಳಲ್ಲೇ ತುಂಬಿ ಇಡಬೇಕು. ಏಕೆಂದರೆ ಇದು ತೇವಾಂಶವನ್ನು ಒಳಗೆ ಬಿಟ್ಟುಕೊಡುವುದಿಲ್ಲ.
ಸುರಕ್ಷಿತ ಸ್ಥಳಗಳು
ಅಡುಗೆಮನೆಯಲ್ಲಿ ಮಸಾಲೆ ಪಾತ್ರೆ (ಧಾರಕ/ಕಂಟೇನರ್) ಅನ್ನು ಇಡಲು ಸರಿಯಾದ ಸ್ಥಳವನ್ನು ಆಯ್ಕೆ ಮಾಡಬೇಕು. ಯಾವುದೇ ತೇವಾಂಶವಿಲ್ಲದ ಸ್ಥಳದಲ್ಲಿ ಅವುಗಳನ್ನಿಡಬೇಕು. ಉದಾಹರಣೆಗೆ ಅವುಗಳನ್ನು ಕಿಟಕಿಗಳು ಅಥವಾ ಸಿಂಕ್ ಬಳಿ ಇಡುವುದು. ಅಲ್ಲದೆ, ಮಸಾಲೆಗಳನ್ನು ಸ್ಟೌವ್ ಪಕ್ಕದಲ್ಲಿ ಇಡುವುದು ಮಾಡಬಾರದು. ಮಸಾಲೆ ಧಾರಕವನ್ನು ಗ್ಯಾಸ್ ಸ್ಟೌವ್ ಬಳಿ ಇಡುವುದರಿಂದಲೂ ಬೇಗನೇ ಮಸಾಲೆ ಕೆಡುವ ಸಾಧ್ಯತೆ ಹೆಚ್ಚಿರುತ್ತದೆ. ಮಸಾಲೆಗಳನ್ನು ಸಂಗ್ರಹಿಸಲು ಅಡುಗೆಮನೆಯಲ್ಲಿ ಗಾಢವಾದ ಮತ್ತು ಅತ್ಯಂತ ಶುಷ್ಕ ಸ್ಥಳವನ್ನು ಆರಿಸಿಕೊಳ್ಳಬೇಕು. ಅಲ್ಲದೆ, ಸೂರ್ಯನ ಬೆಳಕು ನೇರವಾಗಿ ಬೀಳುವ ಸ್ಥಳದಲ್ಲೂ ಇಡಬಾರದು.
ಸಣ್ಣ ಡಬ್ಬಿಗಳಲ್ಲಿ ಸಂಗ್ರಹಿಸಿ
ಮಳೆಗಾಲದಲ್ಲಿ ಮಸಾಲೆಗಳು ದೀರ್ಘಾವಧಿಯವರೆಗೆ ಕೆಡದಂತೆ ಇರಲು ಸಣ್ಣ ಜಾಡಿಗಳಲ್ಲಿ ತುಂಬಿಡಬೇಕು. ಉಳಿದ ಮಸಾಲೆಗಳನ್ನು ದೊಡ್ಡ ಜಾಡಿಗಳಲ್ಲಿ ಸುರಕ್ಷಿತವಾಗಿ ಶೇಖರಿಸಿಡಬೇಕು. ಸಾಮಾನ್ಯವಾಗಿ, ಅಡುಗೆಮನೆಯಲ್ಲಿನ ತಾಪಮಾನವು ಮನೆಯ ಉಳಿದ ಭಾಗಗಳಿಗಿಂತ ಹೆಚ್ಚಾಗಿರುತ್ತದೆ. ಇಲ್ಲಿ ತೇವಾಂಶ ಮತ್ತು ಶಾಖ ಹೆಚ್ಚಿರುತ್ತದೆ. ಮಾನ್ಸೂನ್ ಸಮಯದಲ್ಲಿ ತ್ವರಿತ ಬಳಕೆಗಾಗಿ ಸಣ್ಣ ಪಾತ್ರೆಗಳಲ್ಲಿ ಮಸಾಲೆಗಳನ್ನು ಸಂಗ್ರಹಿಸುವುದು ಸೂಕ್ತ. ಇದರಿಂದ ಎಲ್ಲಾ ಮಸಾಲೆಗಳು ಹಾಳಾಗುವುದನ್ನು ತಪ್ಪಿಸಬಹುದು.
ಸ್ವಚ್ಛ ಚಮಚಗಳನ್ನು ಬಳಸಿ
ಹೆಚ್ಚಿನ ಮಸಾಲೆಗಳು ತೇವಾಂಶವನ್ನು ತಕ್ಷಣವೇ ಹೀರಿಕೊಳ್ಳುತ್ತವೆ. ಮಸಾಲೆಗೆ ಚಮಚವನ್ನು ಬಳಸುವ ಸಂದರ್ಭದಲ್ಲಿ ಅದು ಶುಷ್ಕ ಮತ್ತು ಸ್ವಚ್ಛವಾಗಿಲ್ಲದಿದ್ದರೆ, ಸೋಂಕಿಗೆ ಒಳಗಾಗುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಅಲ್ಲದೆ, ಎಲ್ಲಾ ಮಸಾಲೆಗಳನ್ನು ಬಳಸುವಾಗ ಒಂದೇ ಚಮಚವನ್ನು ಬಳಸಬಾರದು. ಇದು ಬಹುತೇಕ ಮಂದಿ ಮಾಡುವ ಸಾಮಾನ್ಯ ತಪ್ಪು. ಪ್ರತಿಯೊಂದು ಮಸಾಲೆ ಡಬ್ಬಿಯಲ್ಲಿಯೂ ಒಂದು ಸಣ್ಣ ಚಮಚಗಳನ್ನಿಡಬೇಕು. ಇದರಿಂದ ಮಸಾಲೆ ಹಾಳಾಗುವುದನ್ನು ತಡೆಯಬಹುದು. ಒದ್ದೆಯಾದ ಚಮಚವು ಮಸಾಲೆಯನ್ನು ಹಾಳುಮಾಡುತ್ತದೆ. ನೀವು ಮಸಾಲೆಗಳನ್ನು ಬಳಸುವ ಮೊದಲು ನಿಮ್ಮ ಕೈಗಳು ಸರಿಯಾಗಿ ಸ್ವಚ್ಛವಾಗಿದೆಯೇ ಅಥವಾ ಶುಷ್ಕವಾಗಿದೆಯೇ ಎಂಬುದನ್ನು ಸರಿಯಾಗಿ ಗಮನಿಸಬೇಕು.
ನಿಯಮಿತವಾಗಿ ತಪಾಸಣೆ ಮಾಡುತ್ತಿರಿ
ಮಸಾಲೆಗಳನ್ನು ಆಗಾಗ್ಗೆ ಗಮನಿಸುವುದರಿಂದ ಅವು ತಾಜಾವಾಗಿವೆಯೇ ಅಥವಾ ಹದಗೆಟ್ಟಿದೆಯೇ ಎಂಬುದನ್ನು ಕಂಡುಕೊಳ್ಳಬಹುದು. ಒಂದು ವೇಳೆ ಮಸಾಲೆಗಳು ಹಾಳಾಗಿದ್ದರೆ ಅಂತಹವುಗಳನ್ನು ಎಸೆಯಬೇಕು. ಹಲವು ಬಾರಿ ಕೆಲವರು ಸರಿಯಾಗಿ ಸಾಂಬಾರ ಪದಾರ್ಥಗಳನ್ನು ಗಮನಿಸದೆ, ಆಹಾರಕ್ಕೆ ಬಳಸುತ್ತಾರೆ. ಒಂದು ವೇಳೆ ಸಾಂಬಾರ ಪದಾರ್ಥ ಹಾಳಾಗಿದ್ದರೆ, ತಮಗೇ ಗೊತ್ತಿಲ್ಲದೆ ನೀವು ಸೋಂಕಿತ ಮಸಾಲೆಗಳನ್ನು ತಿನ್ನಬಹುದು. ಇದರಿಂದ ಬಹಳಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಬೇವಿನ ಎಲೆಗಳು
ಸ್ವಲ್ಪ ಒಣ ಬೇವಿನ ಎಲೆಗಳನ್ನು ಮಸಾಲೆ ತುಂಬಿದ ಡಬ್ಬಿಯಲ್ಲಿ ಹಾಕುವುದರಿಂದ ಮಸಾಲೆ ಕೆಡದಂತೆ ಇರುತ್ತದೆ. ಇದು ತುಂಬಾ ಹಳೆಯ ಕಾಲದ ಟ್ರಿಕ್ ಆಗಿದ್ದು, ನಿಮ್ಮ ಮನೆಯಲ್ಲಿ ಅಜ್ಜಿಯಂದಿರು ಇದ್ದರೆ ಅವರು ಉಪಯೋಗಿಸುತ್ತಿದ್ದುದನ್ನು ಬಹುಶಃ ನೀವು ನೋಡಿರಬಹುದು. ಬೇವು ಉತ್ತಮ ಸೋಂಕು ನಿವಾರಕವಾಗಿದ್ದು, ಮಸಾಲೆಗಳಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಲ್ಲಿಸಬಹುದು. ಮಸಾಲೆ ಧಾರಕಗಳಲ್ಲಿ ಇಡುವ ಮೊದಲು ಬೇವಿನ ಎಲೆಗಳನ್ನು ಸರಿಯಾಗಿ ಬಿಸಿಲಿನಲ್ಲಿ ಒಣಗಿಸಬೇಕು. ಒಂದು ವೇಳೆ ಸರಿಯಾಗಿ ಒಣಗದಿದ್ದರೆ, ಮಸಾಲೆಗಳು ಹಾಳಾಗುತ್ತವೆ.
ವಿಭಾಗ