logo
ಕನ್ನಡ ಸುದ್ದಿ  /  ಜೀವನಶೈಲಿ  /  ದೋಸೆಯಲ್ಲೇನಿದೆ ದೋಷ, ಯಾಕೀ ದೋಸಾ; ನಂದಿನಿ ದೋಸೆ ಹಿಟ್ಟು ಪ್ಯಾಕೆಟ್ ಮೇಲಿನ ಬರಹಕ್ಕೆ ಕನ್ನಡಿಗರ ಆಕ್ರೋಶ

ದೋಸೆಯಲ್ಲೇನಿದೆ ದೋಷ, ಯಾಕೀ ದೋಸಾ; ನಂದಿನಿ ದೋಸೆ ಹಿಟ್ಟು ಪ್ಯಾಕೆಟ್ ಮೇಲಿನ ಬರಹಕ್ಕೆ ಕನ್ನಡಿಗರ ಆಕ್ರೋಶ

Reshma HT Kannada

Oct 18, 2024 12:54 PM IST

google News

ನಂದಿನಿ ದೋಸೆ ಹಿಟ್ಟಿನ ಪ್ಯಾಕೆಟ್ ಮೇಲೆ ಇಂಗ್ಲಿಷ್‌ನಲ್ಲಿ Dosa ಎಂದು ಬರೆದಿರುವುದು (ಸಾಂಕೇತಿಕ ಚಿತ್ರ)

    • ನಂದಿನಿ ಬ್ರ್ಯಾಂಡ್‌ನ ದೋಸೆ ಹಿಟ್ಟು, ಇಡ್ಲಿ ಹಿಟ್ಟಿನ ಪ್ಯಾಕೆಟ್ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಕನ್ನಡಿಗರು ಖುಷಿ ಪಡಬೇಕಾದ ಈ ವಿಚಾರದಲ್ಲಿ ನಂದಿನಿಯ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ದೋಸೆ ಹಿಟ್ಟಿನ ಪ್ಯಾಕೆಟ್ ಮೇಲೆ ಬರೆದಿರುವ ‘ದೋಸಾ‘. ಕನ್ನಡವನ್ನೇ ಇಂಗ್ಲಿಷ್‌ನಲ್ಲಿ Dose ಎಂದು ಬರೆಯಲು ಇವರಿಗೇನು ದೋಷ ಎಂಬ ಆಕ್ರೋಶ ವ್ಯಕ್ತವಾಗಿದೆ.
ನಂದಿನಿ ದೋಸೆ ಹಿಟ್ಟಿನ ಪ್ಯಾಕೆಟ್ ಮೇಲೆ ಇಂಗ್ಲಿಷ್‌ನಲ್ಲಿ Dosa ಎಂದು ಬರೆದಿರುವುದು (ಸಾಂಕೇತಿಕ ಚಿತ್ರ)
ನಂದಿನಿ ದೋಸೆ ಹಿಟ್ಟಿನ ಪ್ಯಾಕೆಟ್ ಮೇಲೆ ಇಂಗ್ಲಿಷ್‌ನಲ್ಲಿ Dosa ಎಂದು ಬರೆದಿರುವುದು (ಸಾಂಕೇತಿಕ ಚಿತ್ರ)

ಕರ್ನಾಟಕದ ಹೆಮ್ಮೆ ಎಂದರೆ ಕರೆಸಿಕೊಳ್ಳುವ ನಂದಿನಿ ಬ್ರ್ಯಾಂಡ್‌ನ ಉತ್ಪನ್ನಗಳು ದೇಶ–ವಿದೇಶಗಳಲ್ಲೂ ಖ್ಯಾತಿ ಪಡೆದಿವೆ. ಹಾಲು, ಮೊಸರು, ತುಪ್ಪ, ಪನೀರ್‌ ಹೀಗೆ ನಂದಿನಿ ಬ್ರ್ಯಾಂಡ್‌ನ ಉತ್ಪನ್ನಗಳು ಹತ್ತು ಹಲವು. ರುಚಿ, ಗುಣಮಟ್ಟದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದ ನಂದಿನಿ ಇದೀಗ ದೋಸೆಹಿಟ್ಟು ಹಾಗೂ ಇಡ್ಲಿಹಿಟ್ಟನ್ನು ಬಿಡುಗಡೆ ಮಾಡಿದೆ. ಈ ವಿಚಾರ ಕನ್ನಡಿಗರಿಗೆ ಖುಷಿ ನೀಡಿಬೇಕಾಗಿರುವುದು, ಆದರೂ ನಂದಿನಿ ಬಗ್ಗೆ ಕನ್ನಡ ತಾಯಿಯ ಮಕ್ಕಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದಕ್ಕೆ ಕಾರಣ ದೋಸೆ ಪ್ಯಾಕೆಟ್‌ ಮೇಲೆ ಇಂಗ್ಲಿಷ್‌ನಲ್ಲಿ ಬರೆಯಲಾದ ‘ದೋಸಾ‘ (Dosa).

ನಂದಿನಿ ಬ್ರ್ಯಾಂಡ್‌ನ ದೋಸೆ ಹಿಟ್ಟಿನ ಪ್ಯಾಕೆಟ್ ಮೇಲೆ ಅಚ್ಚ ಕನ್ನಡದಲ್ಲಿ ಇಡ್ಲಿ, ದೋಸೆ ಹಿಟ್ಟು ಎಂದು ಬರೆಯಲಾಗಿದ್ದು, ಪಕ್ಕದಲ್ಲಿ Idly Dosa batter ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಯಾಕೆಂದರೆ ದೋಸೆಯನ್ನು ಇಂಗ್ಲಿಷ್‌ನಲ್ಲಿ ಸ್ವಷ್ಟವಾಗಿ Dose ಎಂದು ಬರೆಯಬಹುದು. ಆದರೂ ನಂದಿನಿ ಉತ್ತರ ಭಾರತೀಯರ ಶೈಲಿಯಲ್ಲಿ ದೋಸೆಯನ್ನು ದೋಸಾ ಎಂದು ಮಾಡಿರುವುದು ಕನ್ನಡಿಗರ ಮನ ನೋಯಿಸಿದೆ.

ನಂದಿನಿಯ ‘ದೋಸಾ‘ ದೋಷದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ದೋಸೆಯನ್ನು ದೋಸೆ ಎಂದೇ ಇಂಗ್ಲಿಷ್‌ನಲ್ಲಿ ಬರೆಯಬೇಕಿತ್ತು, ಇದನ್ನು ದೋಸಾ ಎಂದು ಮಾಡಿರುವುದು ಸರಿಯಲ್ಲ, ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕರ್ನಾಟಕದ ಹಲವು ಉತ್ಪನ್ನಗಳ ಹೆಸರನ್ನು ಹೀಗೆ ಬದಲಿಸಲಾಗುತ್ತದೆ ಎಂದು ಕನ್ನಡಿಗರು ಗುಡುಗಿದ್ದಾರೆ.

ಈ ಬಗ್ಗೆ ಎಸ್‌. ಶ್ಯಾಮ ಪ್ರಸಾದ್ ಅವರು ಪೋಸ್ಟ್ ಒಂದನ್ನು ಹಾಕಿದ್ದಾರೆ. ಅವರ ಪೋಸ್ಟ್‌ಗೆ ಹಲವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಬಹುತೇಕ ನಂದಿನಿ ಸಂಸ್ಥೆಯ ಮಾಡಿರುವುದು ತಪ್ಪು ಎಂಬುದನ್ನೇ ಹೇಳಿದ್ದಾರೆ. ‘ದೋಸೆ ಈಗ ಅಧಿಕೃತವಾಗಿ ದೋಷ!‘ ಎಂದು ಶ್ಯಾಮ ಪ್ರಸಾದ್ ಬರೆದುಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್ ಜೊತೆಗೆ ಕೆಎಂಎಫ್‌ ಸೇರಿ ನಂದಿನಿ ಸಂಸ್ಥೆಗೆ ಸಂಬಂಧಿಸಿದ ಎಲ್ಲವನ್ನು ಟ್ಯಾಗ್ ಮಾಡಿದ್ದಾರೆ.

ಶ್ಯಾಮ ಪ್ರಸಾದ್ ಅವರು ಅಕ್ಟೋಬರ್ 17ರಂದು ಈ ಪೋಸ್ಟ್ ಮಾಡಿದ್ದು 5 ಮಂದಿ ಇವರ ಪೋಸ್ಟ್ ಹಂಚಿಕೊಂಡಿದ್ದಾರೆ. ಕೆಲವರು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ಯಾಮ ಪ್ರಸಾದ್ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ

‘DOSE ಡೋಸ್ ಆಗುತ್ತದೆ, ಅದು ಸಮಸ್ಯೆ. (ನಂದಿನಿಯ ತಪ್ಪುಗಳನ್ನು ಹೊಟ್ಟೆಗೆ ಹಾಕ್ಕೊಳ್ಳಿ. ನಂದಿನಿಯ ಸೇವನೆ ಆರೋಗ್ಯಕ್ಕೆ ಒಳ್ಳೆಯದು)‘ ಸುದರ್ಶನ್ ರೆಡ್ಡಿ ಡಿ.ಎನ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಶ್ಯಾಮ ಪ್ರಸಾದ್ ‘ಮೊನ್ನೆ ಅಂಗಡಿಯಲ್ಲಿ ಕನ್ನಡದವನೊಬ್ಬ ಮೂಂಗ್‌ ದಾಲ್ ಕೊಡಿ ಅಂತ ಕೇಳಿದ. ಮೆನು ಕಾರ್ಡ್‌ನಲ್ಲಿ ಕನ್ನಡದಲ್ಲೂ ದೋಸ ಅಂತ ಕೆಲವು ಹೋಟೆಲ್‌ಗಳಲ್ಲಿ ಹಾಕತೊಡಗಿದ್ದಾರೆ‘ ಎಂದು ಕಾಮೆಂಟ್ ಮಾಡಿದ್ದಾರೆ. ಮಾತ್ರವಲ್ಲ ‘ನಮ್ಮ ನಾಡಿನ ನಂದಿನಿ ಯಾಕೆ ದೊಸಾ ಅಂತ ಹಾಕಬೇಕು? ಕನ್ನಡದಲ್ಲಿ ದೋಸೆ ಇಂಗ್ಲಿಷ್‌ನಲ್ಲಿ ದೊಸಾ ಆಗುತ್ತಾ?‘ ಎಂದು ಕಾಮೆಂಟ್ ಮೂಲಕ ಪ್ರಶ್ನಿಸಿದ್ದಾರೆ.

‘KMF Nandini Coop ಅದೇನ್ ಸ್ವಾಮಿ DOSA ಅಂದ್ರೆ?‘ ಎಂದು ಶಶಿ ಕುಮಾರ್ ಡಿ ಎನ್ನುವವರು ನಂದಿನಿಯನ್ನು ಟ್ಯಾಗ್ ಮಾಡಿ ಕಾಮೆಂಟ್‌ ಮಾಡಿದ್ದಾರೆ.

‘ಕೆಲವರು ಇಂಗ್ಲಿಷ್‌ನಲ್ಲಿ Dosey ಅಂತ ಬಳಸ್ತಾ ಇದ್ದಾರೆ. ಇದು ಇಂಗ್ಲಿಷ್‌ನಲ್ಲಿ ಹಾಕಬೇಕಾದರೆ ಸೂಕ್ತವಾಗಬಹುದು . (Dose -ಡೋಸ್ ಬೇಡ). ಕೆಎಂಎಫ್ ಮಾರುಕಟ್ಟೆ ವಿಭಾಗದವರಿಗೆ ಈ ಸಲಹೆಯನ್ನೂ ನೀಡಿದೆ. ಇನ್ನೋದು ರೀತಿಲಿ ಬೆಂಗಳೂರಿನಲ್ಲಿ ಮಲ್ಲೇಶ್ವರ - ಮಲ್ಲೇಶ್ವರಂ ಆಗಿರೋ ಹಾಗೆ ಇದೊಂತರ ‘ ಎಂದು ಪ್ರೇಮನಾಥ ಎನ್ನುವವರು ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ