Sweet Potato benefits: ಸಿಹಿಗೆಣಸಿನಿಂದ ಇಷ್ಟೆಲ್ಲಾ ಲಾಭ; ತೂಕ ನಿಯಂತ್ರಣ ಮಾತ್ರವಲ್ಲ, ಮಧುಮೇಹಿಗಳೂ ತಿನ್ಬೋದು
Oct 29, 2022 10:40 PM IST
ಗೆಣಸು
- ಇವುಗಳಲ್ಲಿ ವಿಟಮಿನ್ ಬಿ5 ಮತ್ತು ವಿಟಮಿನ್ ಬಿ6 ಇರುತ್ತದೆ. ತೂಕ ನಿರ್ವಹಣೆಗೆ ಪ್ರಮುಖವಾದ ಚಯಾಪಚಯವನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ.
ದೇಹದ ತೂಕ ಕಡಿಮೆ ಮಾಡಲು ಹಲವರು ಹರಸಾಹಸ ಒಡುತ್ತಾರೆ. ಅದು ತಿನ್ನೋ ಹಾಗಿಲ್ಲ, ಇದು ಮುಟ್ಟೋಹಾಗಿಲ್ಲ ಅಂತಾ ತಮ್ಮನ್ನು ತಾವೇ ಕಷ್ಟಪಟ್ಟು ಕಟ್ಟಿಹಾಕಿ ಆಹಾರ ಕ್ರಮ ಅಭ್ಯಾಸ ಮಾಡುತ್ತಾರೆ. ಹೆಚ್ಚಿನವರು ಕೆಲವು ದಿನಗಳವರೆಗೆ ಇದನ್ನು ಚೆನ್ನಾಗಿ ಅನುಸರಿಸುತ್ತಾರೆ. ಆದರೆ ದಿನ ಕಳೆದಂತೆ ಕಣ್ಣಿಗೆ ಇಷ್ಟವಾಗುವಂಥದ್ದು ಕಂಡಾಗ ತಿನ್ನಬೇಕು ಅನಿಸುತ್ತೆ. ಆಗ ಡಯಟ್ ಯೋಜನೆ ಮರೆತೇ ಹೋಗುತ್ತದೆ.
ಇದೇ ಕಾರಣಕ್ಕೆ ನೀವು ಆರೋಗ್ಯಕರ ತಾಜಾ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವ ಅಭ್ಯಾಸ ಮಾಡಬೇಕು. ತರಕಾರಿಗಳ ವಿಷಯಕ್ಕೆ ಬಂದರೆ, ಗೆಣಸು ಆರೋಗ್ಯಕ್ಕೆ ಉತ್ತಮ. ಎಲ್ಲಾ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಕೂಡಾ ಇದು ಸಹಾಯ ಮಾಡುತ್ತದೆ. ಸಿಹಿಗೆಣಸನ್ನು ಬೇಯಿಸಿ ಸ್ವಲ್ಪ ಎಣ್ಣೆ, ಸ್ವಲ್ಪ ನಿಂಬೆ ರಸ ಮತ್ತು ಮಸಾಲವನ್ನು ಸೇರಿಸಿದರೆ ಅದು ಸವಿಯಲು ಅದ್ಭುತವಾಗಿರುತ್ತದೆ. ಸಂಜೆಯ ತಿಂಡಿಗೆ ಇದು ಉತ್ತಮ ಆಯ್ಕೆ. ಇದರೊಂದಿಗೆ ಇದು ಆರೋಗ್ಯಕರ ಆಹಾರವೂ ಹೌದು.
ಸಿಹಿ ಗೆಣಸು ತೂಕ ನಷ್ಟಕ್ಕೆ ಅತ್ಯುತ್ತಮ ಆಹಾರ. ಇದರಲ್ಲಿ ಹಲವಾರು ಪೋಷಕಾಂಶಗಳಿವೆ. ಇದರೊಂದಿಗೆ ಫೈಬರ್, ವಿಟಮಿನ್, ಖನಿಜಗಳು ಮತ್ತು ಪ್ರೋಟೀನ್‌ಗಳಿಂದಲೂ ತುಂಬಿದೆ. 100 ಗ್ರಾಂ ಸಿಹಿ ಗೆಣಸು 70 ಪ್ರತಿಶತಕ್ಕಿಂತ ಹೆಚ್ಚು ನೀರನ್ನು ಹೊಂದಿರುತ್ತದೆ. ಇದು 28 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 1.6 ಗ್ರಾಂ ಪ್ರೋಟೀನ್‌ಗಳು ಮತ್ತು 120ರಷ್ಟು ಕ್ಯಾಲರಿಗಳನ್ನು ಒದಗಿಸುತ್ತದೆ.
ಮಧುಮೇಹ ನಿಯಂತ್ರಣ
ಮಧುಮೇಹಿಗಳು ಹೆಚ್ಚು ಸಿಹಿಗೆಣಸನ್ನು ಸೇವಿಸಬಾರದು ಎಂಬ ತಪ್ಪು ಕಲ್ಪನೆ ಇದೆ. ಆದರೆ ಈ ಸಿಹಿಗೆಣಸು ಬೇರಿನಲ್ಲಿ ಬೆಳೆಯುವ ತರಕಾರಿಯಾಗಿದ್ದರೂ ಅದನ್ನು ಸಿಪ್ಪೆಯೊಂದಿಗೆ ಬೇಯಿಸಿ ತಿಂದರೆ ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ಇದು ಹಸಿವನ್ನು ಕೂಡಾ ಕಡಿಮೆ ಮಾಡುತ್ತದೆ. ಇದು ಮಿತ ಆಹಾರವಾಗಿದ್ದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದರಲ್ಲಿ ನಾರಿನಂಶ ಹೆಚ್ಚಿದ್ದರೂ, ಇದು ಉತ್ತಮ ತಿಂಡಿಯ ಆಯ್ಕೆಯಾಗಿದೆ. ಇದನ್ನು ಸಾಮಾನ್ಯ ಆಲೂಗಡ್ಡೆಯ ಬದಲಿಗೆ ಬಳಸಬಹುದು. ಇದರಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಿರುವುದರಿಂದ ಮಿತವಾಗಿ ಸೇವಿಸಬೇಕು. ಮಧುಮೇಹಿಗಳು ಸಿಪ್ಪೆ ಸಹಿತ ಸ್ವಲ್ಪ ಪ್ರಮಾಣದಲ್ಲಿ ಬೇಯಿಸಿ ತಿನ್ನಬಹುದು.
ತೂಕ ಕಡಿಮೆ ಮಾಡಲು
ವ್ಯಾಯಾಮದ ಸಮಯದಲ್ಲಿ ಗ್ಲೈಕೊಜೆನ್ ಮಟ್ಟವು ಕಡಿಮೆಯಾಗುತ್ತದೆ. ಅವುಗಳನ್ನು ಮರುಪೂರಣಗೊಳಿಸಲು ಸಿಹಿ ಗೆಣಸನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ. ವ್ಯಾಯಾಮದ ಬಳಿಕ ಅವುಗಳನ್ನು ಮೊಟ್ಟೆ, ಪನೀರ್ ಅಥವಾ ದಾಲ್‌ನಂತೆ ಸೇವಿಸಬಹುದು. ಇದರಿಂದ ಉತ್ತಮ ಪೋಷಣೆ ದೊರೆಯುತ್ತದೆ ಎನ್ನುತ್ತಾರೆ ತಜ್ಞರು. ಇವುಗಳಲ್ಲಿ ವಿಟಮಿನ್ ಬಿ5 ಮತ್ತು ವಿಟಮಿನ್ ಬಿ6 ಇರುತ್ತದೆ. ತೂಕ ನಿರ್ವಹಣೆಗೆ ಪ್ರಮುಖವಾದ ಚಯಾಪಚಯವನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ.
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಕೆಲವು ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳನ್ನು ತಡೆಯುತ್ತದೆ ಎಂದು ತಜ್ಞರು ಬಹಿರಂಗಪಡಿಸಿದ್ದಾರೆ. ಇದು ಎದೆಯುರಿ, ಅತಿಸಾರ ಮತ್ತು ಮಲಬದ್ಧತೆಗೆ ಉತ್ತಮ ನೈಸರ್ಗಿಕ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.
ಹೃದಯಕ್ಕೆ ಒಳ್ಳೆಯದು
ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಗೆಣಸು ಸಹಕಾರಿ. ಮೆಗ್ನೀಸಿಯಂ ಅಂಶಗಳಿಂದ ಸಮೃದ್ಧವಾಗಿರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಹೃದಯಕ್ಕೆ ಒಳ್ಳೆಯದು. ಅಲ್ಲದೆ ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ.