ಇದು ಕಾನೂನು: ಹೆತ್ತವರನ್ನು ಮಕ್ಕಳು ನೋಡಿಕೊಳ್ಳಲೇ ಬೇಕು, ಅಪ್ಪ-ಅಮ್ಮನನ್ನು ನೋಡಿಕೊಳ್ಳದ ಮಕ್ಕಳಿಗೆ 6 ತಿಂಗಳು ಜೈಲು, ಜೊತೆಗೆ ದಂಡ
Jun 07, 2023 05:00 AM IST
ವಕೀಲ ಸಿ.ಕೆ.ಮಹೇಂದ್ರ
- Lawyer Answers: ನಮ್ಮ ಬದುಕಿನ ಪ್ರತಿ ಹಂತವನ್ನೂ ನಿಯಂತ್ರಿಸುವುದು ಕಾನೂನು. ಕೋರ್ಟು, ಕಾನೂನು ಎಂದರೆ ಹೆದರಿ ಹಿಮ್ಮೆಟ್ಟುವರೇ ಹೆಚ್ಚು. ಒಳಸುಳಿಗಳಿರುವ ಕಾನೂನುಗಳ ಸುತ್ತಲೂ ಇರುವ ವಿಚಾರಗಳೂ ಹಲವು. ಕಾನೂನು, ನ್ಯಾಯಾಂಗ, ಸಂವಿಧಾನದ ಬಗ್ಗೆ ನಿಮ್ಮ ಪ್ರಶ್ನೆಗಳಿಗೆ 'ಇದು ಕಾನೂನು' ಅಂಕಣದಲ್ಲಿ ಉತ್ತರಿಸಲಿದ್ದಾರೆ ತುಮಕೂರಿನ ಹಿರಿಯ ವಕೀಲ ಸಿ.ಕೆ.ಮಹೇಂದ್ರ.
ಪ್ರಶ್ನೆ: 1) ಕೋರ್ಟು, ಕಾನೂನು ಇರೋದು ಶ್ರೀಮಂತರಿಗೆ ಮಾತ್ರ. ಬಡವರಿಗೆ ನ್ಯಾಯ ಸಿಗಲ್ಲ ಎಂಬ ಮಾತಿದೆ. ಇದು ನಿಜವೇ? - ಮಂಜುನಾಥ, ಕೊತ್ತನೂರು
ಉತ್ತರ: ನೀವು ತಪ್ಪಾಗಿ ಗ್ರಹಿಸಿದ್ದೀರಿ. ಪ್ರತಿಯೊಬ್ಬರು ಎಲ್ಲ ಪ್ರಯತ್ನಗಳ ನಂತರ ಕಡೆಯದಾಗಿ ಕೋರ್ಟ್‌ಗೆ ಬರುತ್ತಾರೆ. 'ಕೋರ್ಟ್‌ನಲ್ಲಿ ನೋಡೋಣ ಬಿಡು' ಎನ್ನುವ ಮಾತನ್ನೂ ನೀವು ಕೇಳಿಸಿಕೊಂಡಿರಬಹುದು. ನ್ಯಾಯಾಲಯಗಳಲ್ಲಿ ನ್ಯಾಯ ಸಿಗಲಿದೆ ಎಂಬ ಭರವಸೆಯೇ ಇದಕ್ಕೆ ಕಾರಣ. ವಶೀಲಿ ಬಾಜಿ, ಪ್ರಭಾವ, ರಾಜಕೀಯ, ತೋಳ್ಬಲಗಳು ಯಾವುದೇ ನ್ಯಾಯಾಲಯದಲ್ಲಿ, ನ್ಯಾಯದಾನದ ವ್ಯವಸ್ಥೆಯಲ್ಲಿ ಕೆಲಸಕ್ಕೆ ಬರುವುದಿಲ್ಲ. ನ್ಯಾಯಾಧೀಶರು, ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು. ಶ್ರೀಮಂತ, ಬಡವ ಎಂಬ ಭೇದಭಾವ ಇಲ್ಲಿಲ್ಲ. ಕೋರ್ಟ್ ಶುಲ್ಕವೂ ಸಮಾನವಾಗಿರಲಿದೆ.
ಇಲ್ಲಿ ಎಲ್ಲರಿಗೂ ನ್ಯಾಯ ಸಿಗಲಿದೆ. ಬಡ ಕಕ್ಷಿದಾರರಿಗೆ ಉಚಿತವಾಗಿ ಕಾನೂನು ಸಹಾಯ ನೀಡಲು ಸರ್ಕಾರವು 'ಕಾನೂನು ಸೇವಾ ಪ್ರಾಧಿಕಾರ'ದ ಅನುಕೂಲ ಕಲ್ಪಿಸಿದೆ. ಒಳ್ಳೆಯ, ನುರಿತ ವಕೀಲರ ಸೇವೆಗೆ ಶುಲ್ಕ ಹೆಚ್ಚಿರುತ್ತದೆ. ಅದು ವಕೀಲರಿಗೆ ಸಂಬಂಧಿಸಿದ ವಿಚಾರ. ಹಾಗೆ, ಗಮನಿಸಿದರೆ ಕಡು ಬಡವರು ಸಹ ಕೋರ್ಟ್‌ಗಳಲ್ಲಿ ಗೆಲುವು ಸಾಧಿಸುತ್ತಾರೆ. ಆಗರ್ಭ ಶ್ರೀಮಂತರು ಕೈಕಟ್ಟಿ ನಿಂತು ಸೋಲುತ್ತಾರೆ. ನಿಮ್ಮ ಪರ ನ್ಯಾಯ ಇದ್ದರೆ ನೀವು ಹೆದರಬೇಕಿಲ್ಲ.
ಪ್ರಶ್ನೆ: 2) ಒಂದು ನಿವೇಶನ ಖರೀದಿ ಮಾಡಬೇಕಾದರೆ ಯಾವೆಲ್ಲ ಅಂಶ ಗಮನಿಸಬೇಕು? ದಯವಿಟ್ಟು ತಿಳಿಸಿ ಸರ್. - ಅನಂತ, ಮಾಗಡಿ
ಉತ್ತರ: ಯಾವುದೇ ಆಸ್ತಿ/ನಿವೇಶನ ಖರೀದಿಸಬೇಕಾದರೆ ಮುನ್ನಚ್ಚರಿಕೆ ವಹಿಸುವುದು ಸೂಕ್ತ. ಕಾನೂನು ಏನು ಹೇಳುತ್ತದೆ ಎಂದು ಗೊತ್ತಿಲ್ಲದೆ ಖರೀದಿ ಮಾಡಿದರೆ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ನಿವೇಶನ ಖರೀದಿಸುವ ಮುನ್ನ ನೀವು ಒಂದಿಷ್ಟು ದಾಖಲೆಗಳನ್ನು ಪರಿಶೀಲಿಸಲೇಬೇಕು. ನಿವೇಶನ ಮಾರುವ ವ್ಯಕ್ತಿಯ ಹಿನ್ನೆಲೆಯ ಬಗ್ಗೆ ಅರಿವಿರಲಿ. ಅವರ ಮಾತುಗಳ ಮೇಲೆ ನಿಗಾ ಇಡಬೇಕು. ಎಲ್ಲ ದಾಖಲೆಗಳನ್ನು ದೃಢೀಕರಿಸಿಕೊಳ್ಳಬೇಕು.
ನಿವೇಶನ ಖರೀದಿಸುವ ಜಾಗದಲ್ಲಿ ನಿವೇಶನ ಇದೆಯೇ ಎಂಬುದು ಖುದ್ದು ಹೋಗಿ ನೋಡಿಕೊಂಡು ಬನ್ನಿ. ಕೇವಲ ಬಾಯ್ಮಾತಿನ ಮೇಲೆ ಹಣ ಹೂಡಿಕೆ ಮಾಡದಿರಿ. ಸಂಬಂಧಪಟ್ಟ ಪ್ರಾಧಿಕಾರದ ದೃಢೀಕೃತ ನಕ್ಷೆಯೊಂದಿದೆ ಚಕ್ ಬಂದ್ ಸಮೇತ ತುಲನೆ ಮಾಡಿ. ನಗರದಲ್ಲಿ ಆದರೆ ಇಸಿ (ಋಣಭಾರ ಪತ್ರ), ಇ- ಖಾತಾ, ಎಂಆರ್, ಈ ಹಿಂದಿನ ಕ್ರಯಪತ್ರಗಳು, ಕಂದಾಯ ರಸೀದಿ, ಭೂ ಪರಿವರ್ತನೆಯ ಜಿಲ್ಲಾಧಿಕಾರಿ ಆದೇಶ ಪ್ರತಿ, ನಗರ ಅಭಿವೃದ್ಧಿ ಪ್ರಾಧಿಕಾರದ ಲೇಔಟ್ ಮಂಜೂರಾತಿ ಆದೇಶ, ಲೇಔಟ್ ಪ್ಲಾನ್, ಮೂಲ ನಗರಾಭಿವೃದ್ಧಿ ಯೋಜನೆ ನಕ್ಷೆಯ ದಾಖಲೆಗಳನ್ನು ಗಮನಿಸಿ. ವಕೀಲರ ಅಭಿಪ್ರಾಯವನ್ನೂ ಪಡೆದುಕೊಳ್ಳಿ.
ಪ್ರಶ್ನೆ: 3) ನನ್ನ ಮಕ್ಕಳು ನನ್ನನ್ನು ತಾತ್ಸಾರ ಮಾಡ್ತಾರೆ. ಸರಿಯಾಗಿ ನೋಡಿಕೊಳ್ತಿಲ್ಲ. ನಾನು ಹೇಗೆ ಕಾನೂನು ಸಹಾಯ ಪಡೆಯಬಹುದು? - ರಾಜಲಕ್ಷ್ಮಿ, ಬಳ್ಳಾರಿ
ಉತ್ತರ: ಮಕ್ಕಳು ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹಿರಿಯ ನಾಗರಿಕರು ಕೊರಗಬೇಕಾಗಿಲ್ಲ. ತಂದೆ-ತಾಯಿಯನ್ನು ಸಾಕುವುದು ಮಕ್ಕಳ ಕರ್ತವ್ಯವಾಗಿದೆ. ತಂದೆ-ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ ಪೋಷಣೆ ಮತ್ತು ಕಲ್ಯಾಣ ಅಧಿನಿಯಮ ಹಾಗೂ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಮಸೂದೆ ಕರ್ನಾಟಕದಲ್ಲಿ ಜಾರಿಯಲ್ಲಿದ್ದು, ಮಕ್ಕಳ ವಿರುದ್ಧ ಸೂಕ್ತ ಪ್ರಾಧಿಕಾರದಲ್ಲಿ ಅರ್ಜಿ ನೀಡಿ ಸಹಾಯ ಪಡೆಯಬಹುದಾಗಿದೆ. ಹಿರಿಯರ ಊಟೋಪಚಾರ ಅಲ್ಲದೇ ಮಾನಸಿಕ, ದೈಹಿಕ ಆರೋಗ್ಯದ ಹೊಣೆಯೂ ಮಕ್ಕಳದ್ದಾಗಿದೆ. ಇದರಲ್ಲಿ ದತ್ತು ಮಗನೂ ಸೇರುತ್ತಾನೆ. ತಂದೆ ತಾಯಿ ಮಾತ್ರವಲ್ಲ ಅಜ್ಜ-ಅಜ್ಜಿಯನ್ನು ನೋಡಿಕೊಳ್ಳುವ ಹೊಣೆಯೂ ಮಕ್ಕಳಿಗೆ ಇರುತ್ತದೆ. ಮಕ್ಕಳು ನಿಮ್ಮನ್ನು ಸರಿಯಾಗಿ ಗಮನಿಸಿಕೊಳ್ಳುತ್ತಿಲ್ಲ ಎನಿಸಿದರೆ ಮಾಸಿಕ ಹತ್ತು ಸಾವಿರ ರೂಪಾಯಿವರೆಗೂ ಮಾಸಿಕ ಭತ್ಯೆ ಪಡೆಯಬಹುದಾಗಿದೆ.
ಹಿರಿಯ ನಾಗರಿಕರನ್ನು ತ್ಯಜಿಸಿದರೆ ಅಂಥ ಮಕ್ಕಳಿಗೆ ಆರು ತಿಂಗಳು ಜೈಲು, ದಂಡ ಎರಡನ್ನೂ ವಿಧಿಸಬಹುದಾಗಿದೆ.
---
ತುಮಕೂರಿನ ಸುಫಿಯಾ ಕಾನೂನು ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿರುವ ಸಿ.ಕೆ.ಮಹೇಂದ್ರ ಅವರು ವಕೀಲರಾಗಿಯೂ ಜನಪ್ರಿಯರು. ಸಂಪರ್ಕ ಸಂಖ್ಯೆ 98448 17737, ಇಮೇಲ್: ckmgks@gmail.com