Thotada Mane: ನಿಮ್ಮಿಷ್ಟದ ಊಟದೊಂದಿಗೆ ಪ್ರಕೃತಿ ಅಂದವನ್ನು ಆಸ್ವಾದಿಸಬೇಕಾ; ಒಮ್ಮೆ ಮಂಡ್ಯದ 'ತೋಟದ ಮನೆ' ರೆಸ್ಟೋರೆಂಟ್‌ಗೆ ಹೋಗಿ ಬನ್ನಿ
Jul 28, 2023 06:48 PM IST
ಮಂಡ್ಯದ ತೋಟದ ಮನೆ ರೆಸ್ಟೋರೆಂಟ್
ಇತರ ಹೋಟೆಲ್‌ಗಳಂತೆ ಇಲ್ಲಿ ರುಚಿ ಹೆಚ್ಚಿಸಲು ಯಾವುದೇ ಕೃತಕ ಪದಾರ್ಥಗಳನ್ನು ಬಳಸುವುದಿಲ್ಲ. ಎಲ್ಲವೂ ಮನೆ ಊಟದಂತೆ ಇರುತ್ತದೆ. ವ್ಯವಹಾರ ಮನೋಭಾವ ಕೂಡಾ ಇವರಿಗಿಲ್ಲ. ವಿಶೇಷ ಎಂದರೆ ಇಲ್ಲಿ ಅಡುಗೆ ಮಾಡುವ ಮಹಿಳೆಯರು ಸುತ್ತಮುತ್ತಲಿನ ಗ್ರಾಮದವರೇ.
ಸದಾ ಕೆಲಸದ ಜಂಜಾಟದಲ್ಲಿ ಬ್ಯುಸಿ ಇರುವವರಿಗೆ ರಜೆ ಹಾಕಿ ಒಮ್ಮೆ ಹೊರಗೆ ಹೋಗಿ ಬರೋಣ ಎನಿಸದೆ ಇರದು. ಕೆಲವರು ಪಬ್ ಹಾದಿ ಹಿಡಿದರೆ ಕೆಲವರು ದೇವಸ್ಥಾನಕ್ಕೆ ಹೋಗುತ್ತಾರೆ, ಇನ್ನೂ ಕೆಲವರು ಸಿನಿಮಾ ಹೀಗೆ ಒಬ್ಬೊಬ್ಬರು ಒಂದೊಂದು ಪ್ಲಾನ್ ಮಾಡುತ್ತಾರೆ. ಇದರ ಜೊತೆಗೆ ಮತ್ತೊಂದು ಖುಷಿ ಕೊಡುವ ಸ್ಥಳ ಎಂದರೆ ಅದು ಪ್ರಕೃತಿ.
ಮಂಡ್ಯ ಜಿಲ್ಲೆಯ ಕಿರಂಗೂರು ಗ್ರಾಮದಲ್ಲಿರುವ ತೋಟದ ಮನೆ
ಪ್ರಕೃತಿ ಮಡಿಲಲ್ಲಿ ನಿಮ್ಮ ಆತ್ಮೀಯರೊಂದಿಗೆ ಕುಳಿತು, ನಿಮಗಿಷ್ಟವಾದ ಫುಡ್ ತಿನ್ನುತ್ತಾ ಆ ಊಟದ ರುಚಿಯೊಂದಿಗೆ ನಿಸರ್ಗವನ್ನು ಆಸ್ವಾದಿಸುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಮಾತು ನೆನಪಾಗದೆ ಇರದು. ಪ್ರಮುಖ ನಗರಗಳಲ್ಲಿ ಜೈಲ್ ರೆಸ್ಟೋರೆಂಟ್, ಫಾರೆಸ್ಟ್ ಥೀಮ್ ರೆಸ್ಟೋರೆಂಟ್, ಟ್ರೈನ್ ರೆಸ್ಟೋರೆಂಟ್‌ಗಳನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ರೆಸ್ಟೋರೆಂಟ್ ಇದೆ. ಇದು ಸಂಪೂರ್ಣ ಪ್ರಕೃತಿ ನಡುವೆ ಇದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಗ್ರಾಮದ ಬಳಿ ಇರುವ ''ತೋಟದ ಮನೆ'' ಹೋಟೆಲ್‌ಗೆ ಹೋದರೆ ಅಲ್ಲಿಂದ ವಾಪಸ್ ಬರಲು ಮನಸ್ಸಾಗುವುದೇ ಇಲ್ಲ. ಮಕ್ಕಳನ್ನು ಕರೆ ತಂದರೆ ಅವರೂ ಕೂಡಾ ಇಲ್ಲಿರುವ ಕಾರಂಜಿಯಲ್ಲಿ ಆಡುತ್ತಾ ಕುಳಿತುಬಿಡುತ್ತಾರೆ.
ಬೆಂಗಳೂರು ಮೂಲದ ಗುರುದತ್ ಈ ಹೋಟೆಲ್ ಮಾಲೀಕರು. ಗುರುದತ್ ಅವರ ತಂದೆ ತಾಯಿಗೆ ಹಳ್ಳಿ ಜೀವನ ಬಹಳ ಇಷ್ಟ. ಆದ್ದರಿಂದ ಇಲ್ಲಿ ಒಂದಿಷ್ಟು ಜಾಗ ಖರೀದಿಸಿ 17 ವರ್ಷಗಳ ಹಿಂದೆ ಮನೆ ಮಾಡಿದರು. ಗುರುದತ್ ಕೂಡಾ ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಅಪ್ಪ ಅಮ್ಮನ ಜೊತೆ ಬಂದು ಇದೇ ತೋಟದ ಮನೆಯಲ್ಲಿ ನೆಲೆಸಿದರು. ಗುರುದತ್ ಅವರಿಗೆ ಮೊದಲಿನಿಂದಲೂ ಕುಕಿಂಗ್‌ನಲ್ಲಿ ಆಸಕ್ತಿ ಇತ್ತು. ಸುಂದರ ಪ್ರಕೃತಿಯ ನಡುವೆ ಒಂದು ರೆಸ್ಟೋರೆಂಟ್ ತೆರೆದರೆ ಹೇಗೆ ಎಂದೆನಿಸಿ ತಮ್ಮ ಕನಸಿನ ಪ್ರಾಜೆಕ್ಟ್ ಶುರು ಮಾಡೇ ಬಿಟ್ರು.
ಅಡುಗೆಗೆ ಕೃತಕ ವಸ್ತುಗಳನ್ನು ಬಳಸುವುದಿಲ್ಲ
ಇತರ ಹೋಟೆಲ್‌ಗಳಂತೆ ಇಲ್ಲಿ ರುಚಿ ಹೆಚ್ಚಿಸಲು ಯಾವುದೇ ಕೃತಕ ಪದಾರ್ಥಗಳನ್ನು ಬಳಸುವುದಿಲ್ಲ. ಎಲ್ಲವೂ ಮನೆ ಊಟದಂತೆ ಇರುತ್ತದೆ. ವ್ಯವಹಾರ ಮನೋಭಾವ ಕೂಡಾ ಇವರಿಗಿಲ್ಲ. ವಿಶೇಷ ಎಂದರೆ ಇಲ್ಲಿ ಅಡುಗೆ ಮಾಡುವ ಮಹಿಳೆಯರು ಸುತ್ತಮುತ್ತಲಿನ ಗ್ರಾಮದವರೇ. ದರಸಗುಪ್ಪೆ, ಕ್ಯಾತನಳ್ಳಿ, ಬೆಟ್ಟದೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಹಳ ಕಷ್ಟದಲ್ಲಿದ್ದ ಕೆಲವರು ಮಹಿಳೆಯರನ್ನು ಗುರುತಿಸಿದ ಗುರುದತ್, ಅವರನ್ನೆಲ್ಲಾ ಕರೆ ತಂದು ತರಬೇತಿ ನೀಡಿ ಕೆಲಸ ಕೂಡಾ ಕೊಟ್ಟಿದ್ದಾರೆ. ಇಲ್ಲಿ 12 ಮಂದಿ ಮಹಿಳಾ ಕೆಲಸಗಾರರಿದ್ದಾರೆ. ಅಡುಗೆ ಮಾಡುವುರಿಂದ ಹಿಡಿದು ಪಾತ್ರೆ ತೊಳೆಯುವುದು, ಸರ್ವ್ ಮಾಡುವುದು ಎಲ್ಲರೂ ಮಹಿಳೆಯರೇ. ಮಧ್ಯಾಹ್ನ ಕೆಲಸ ಮುಗಿಸಿದ ನಂತರ ಇವರೆಲ್ಲಾ ಇಲ್ಲಿ ಊಟ ಮುಗಿಸಿಯೇ ಮನೆಗೆ ಹೊರಡೋದು.
ತೋಟದ ಮನೆ ಹೋಟೆಲ್‌ನಲ್ಲಿ ಬ್ರೇಕ್ ಫಾಸ್ಟ್ ಹಾಗೂ ಮಧ್ಯಾಹ್ನದ ಊಟ ದೊರೆಯುತ್ತದೆ. ಅಕ್ಕಿರೊಟ್ಟಿ, ರಾಗಿರೊಟ್ಟಿ ಸೇರಿ ಸುಮಾರು 8 ರೀತಿಯ ರೊಟ್ಟಿಯನ್ನು ಮಾಡಲಾಗುತ್ತದೆ. ಪ್ರತಿದಿನ ಊಟಕ್ಕೆ ಒಬ್ಬಟ್ಟು ಇರುತ್ತದೆ. ಸಿಹಿಕಹಿ ಚಂದ್ರು, ಮಂಡ್ಯ ರಮೇಶ್, ರಚಿತಾ ರಾಮ್, ತಮಿಳು ನಟ ಯೋಗಿ ಬಾಬು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಇಲ್ಲಿಗೆ ಬಂದು ಊಟದ ರುಚಿ ಹಾಗೂ ಇಲ್ಲಿನ ವಾತಾವರಣ ನೋಡಿ ಖುಷಿ ಪಟ್ಟಿದ್ದಾರೆ.
ತೋಟದ ಮನೆ ಮಾಲೀಕ ಗುರುದತ್
''ನಮಗೆ ಕ್ವಾಂಟಿಟಿಗಿಂತ ಕ್ವಾಲಿಟಿ ಬಹಳ ಮುಖ್ಯ. ಇಲ್ಲಿ ಇಂಥದ್ದೊಂದು ಸ್ಥಳ ಇದೆ ಎಂದು ಒಬ್ಬರಿಂದ ಒಬ್ಬರಿಗೆ ತಿಳಿದು ಎಲ್ಲರೂ ಇಲ್ಲಿಗೆ ಬರುತ್ತಾರೆ. ನಾವು ಎಂದಿಗೂ ಎಲ್ಲಿಯೂ ಜಾಹೀರಾತು ನೀಡುವುದಿಲ್ಲ. ಕೆಲವೊಮ್ಮೆ ಇಲ್ಲಿ ಊಟ ಮಾಡಲೆಂದೇ ಬೆಂಗಳೂರು ಹಾಗೂ ದೂರದಿಂದ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಬರುತ್ತಾರೆ. ಆದರೆ ಅವರು ತಿನ್ನುವ ಊಟದ ಬಿಲ್, ಅವರು ಖರ್ಚು ಮಾಡುವ ಪೆಟ್ರೋಲ್ ದುಡ್ಡಿನ ಅರ್ಧದಷ್ಟು ಇರುತ್ತದೆ. ಅವರಿಗೆಲ್ಲಾ ನಾವು ಶುಚಿ ರುಚಿಯಾದ ಆಹಾರ ನೀಡಬೇಕು ಎಂಬುದೇ ನಮ್ಮ ಉದ್ಧೇಶ. ನನಗೆ ಕುಕಿಂಕ್ ಮೊದಲಿನಿಂದಲೂ ಪ್ಯಾಶನ್ ಹೇಗಿದ್ರೂ ಒಳ್ಳೆ ಪರಿಸರ ಇದೆ. ಇಲ್ಲೇ ಏಕೆ ನನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಬಾರದು ಎನಿಸಿತು. ಪತ್ನಿ ಶಿಕ್ಷಕಿ, ಮಗಳು ಜರ್ನಲಿಸಂ ಮಾಡುತ್ತಿದ್ದಾಳೆ. ತೋಟದ ಮನೆ ಇಷ್ಟು ಹೆಸರು ಗಳಿಸಲು ಅಪ್ಪ ಅಮ್ಮ ಸೇರಿದಂತೆ ಕುಟುಂಬದವರೆಲ್ಲರೂ ಕಾರಣ'' ಎನ್ನುತ್ತಾರೆ ಗುರುದತ್.
ಬ್ಯುಸ್ನೆಸ್ ಮೈಂಡ್‌ನಿಂದಲೇ ಹೋಟೆಲ್ ಆರಂಭಿಸಿ, ದುಪ್ಪಟ್ಟು ಬೆಲೆ ನಿಗದಿಪಡಿಸುವ ಕೆಲವು ಹೋಟೆಲ್ ಮಾಲೀಕರ ನಡುವೆ ಗುರುದತ್ ಬಹಳ ವಿಭಿನ್ನ. ಬೆಂಗಳೂರು-ಮೈಸೂರು ಟ್ರಾವೆಲ್ ಮಾಡುವವರು ಒಮ್ಮೆ ತೋಟದ ಮನೆಗೆ ಹೋಗಿ ಬನ್ನಿ, ವಿಳಾಸ ಇಲ್ಲಿದೆ. ಸರ್ವೆ ನಂಬರ್ 294, ಪಾಂಡವಪುರ ರಸ್ತೆ, ಕಿರಂಗೂರು ಗ್ರಾಮ, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ. 9741217009 ಗುರುದತ್ ಅವರ ಮೊಬೈಲ್ ನಂಬರ್. ಭೇಟಿ ನೀಡುವ ಮುನ್ನ ಒಮ್ಮೆ ಅವರಿಗೆ ಕರೆ ಮಾಡಿ ಹೋಗಿ.
-ರಕ್ಷಿತ
ಈ ಕಾಲಂ ಬಗ್ಗೆ ನಿಮ್ಮ ಅಭಿಪ್ರಾಯ, ಸಲಹೆಯನ್ನು ನಮಗೆ ತಿಳಿಸಿ
ಇ-ಮೇಲ್: ht.kannada@htdigital.in
ಇಂಥಹ ಮತ್ತಷ್ಟು ಅಂಕಣಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ