logo
ಕನ್ನಡ ಸುದ್ದಿ  /  ಜೀವನಶೈಲಿ  /  Overthinking: ಅತಿಯಾಗಿ ಯೋಚಿಸುತ್ತಿದ್ದೀರಾ? ಇದನ್ನು ತಡೆಗಟ್ಟಲು ಮನಶ್ಶಾಸ್ತ್ರಜ್ಞರ 9 ಸಲಹೆಗಳಿವು

Overthinking: ಅತಿಯಾಗಿ ಯೋಚಿಸುತ್ತಿದ್ದೀರಾ? ಇದನ್ನು ತಡೆಗಟ್ಟಲು ಮನಶ್ಶಾಸ್ತ್ರಜ್ಞರ 9 ಸಲಹೆಗಳಿವು

HT Kannada Desk HT Kannada

Nov 18, 2023 07:00 AM IST

google News

ಅತಿಯಾದ ಯೋಚನೆ (ಪ್ರಾತಿನಿಧಿಕ ಚಿತ್ರ)

    • Tips to stop overthinking: ಅತಿಯಾದ ಯೋಚನೆಯಿಂದ ಅತಿಯಾದ ಭಯ ಆವರಿಸುತ್ತದೆ. ಇದು ಫೋಬಿಯಾದಂತಹ ಗಂಭೀರ ಸಮಸ್ಯೆಗೆ ನಮ್ಮನ್ನು ದೂಡಬಹುದು. ಹೀಗಾಗಿ ಆರಂಭದಿಂದಲೇ ಇದನ್ನು ತಡೆಗಟ್ಟುವುದು ಒಳ್ಳೆಯದು. ಅತಿಯಾಗಿ ಯೋಚಿಸುವುದನ್ನು ತಡೆಯಲು ಮನಶ್ಶಾಸ್ತ್ರಜ್ಞರು ನೀಡುವ ಪರಿಣಾಮಕಾರಿ ಸಲಹೆಗಳು ಇಲ್ಲಿವೆ.. 
ಅತಿಯಾದ ಯೋಚನೆ (ಪ್ರಾತಿನಿಧಿಕ ಚಿತ್ರ)
ಅತಿಯಾದ ಯೋಚನೆ (ಪ್ರಾತಿನಿಧಿಕ ಚಿತ್ರ)

ಅತಿಯಾಗಿ ಯೋಚಿಸುವುದು ನಮ್ಮ ಪಟ್ಟುಬಿಡದ ವೈರಿಯಾಗಿ ಬಿಡುತ್ತದೆ. ಇದು ಮೆದುಳು ಮಾತ್ರವಲ್ಲ ಮನಸ್ಸಿನ ಆಳಕ್ಕೆ ಪ್ರವೇಶಿಸಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ನಮ್ಮ ಸಾಮರ್ಥ್ಯಕ್ಕೆ ಅಡ್ಡಿಯಾಗಬಹುದು. ಹಳೆಯ ಕಹಿ ಘಟನೆ, ಕೆಲಸದ ಒತ್ತಡ, ಭಯ, ಒಂಟಿತನ ಸೇರಿದಂತೆ ನಾನಾ ಕಾರಣಗಳು ಅತಿಯಾಗಿ ಯೋಚನೆಗೆ ಕಾರಣಗಳಾಗಿವೆ. ಇದು ನಮಗೆ ಎಷ್ಟು ಉಪದ್ರ ಕೊಡುತ್ತದೆ ಎಂದರೆ ತಲೆಯನ್ನು ಗೋಡೆಗೆ ಚಚ್ಚಿಕೊಳ್ಳೋಣ ಎಂದೆನಿಸುತ್ತದೆ. ಅತಿಯಾದ ಯೋಚನೆಯಿಂದ ಅತಿಯಾದ ಭಯ ಆವರಿಸುತ್ತದೆ. ಇದು ಫೋಬಿಯಾದಂತಹ ಗಂಭೀರ ಸಮಸ್ಯೆಗೆ ನಮ್ಮನ್ನು ದೂಡಬಹುದು. ಹೀಗಾಗಿ ಆರಂಭದಿಂದಲೇ ಇದನ್ನು ತಡೆಗಟ್ಟುವುದು ಒಳ್ಳೆಯದು. ಅತಿಯಾಗಿ ಯೋಚಿಸುವುದನ್ನು ತಡೆಯಲು ಮನಶ್ಶಾಸ್ತ್ರಜ್ಞರು ನೀಡುವ ಪರಿಣಾಮಕಾರಿ ಸೈಕಾಲಾಜಿಕಲ್​ ತಂತ್ರಗಳು ಇಲ್ಲಿವೆ..

1. ನಿಮ್ಮ ಆಂತರಿಕ ಸಂವಾದವನ್ನು ಬದಲಾಯಿಸಿ

ಅತಿಯಾಗಿ ಯೋಚಿಸುವುದನ್ನು ಹೋಗಲಾಡಿಸುವ ಮೊದಲ ನಿರ್ಣಾಯಕ ಹಂತವೆಂದರೆ ನೀವು ನಿಮ್ಮೊಂದಿಗೆ ಮಾತನಾಡುವ ವಿಧಾನವನ್ನು ಬದಲಾಯಿಸುವುದು. ಅತಿಯಾಗಿ ಯೋಚಿಸುವವರು ಸಾಮಾನ್ಯವಾಗಿ ನಕಾರಾತ್ಮಕ ಸ್ವ-ಚರ್ಚೆಯಲ್ಲಿ ತೊಡಗುತ್ತಾರೆ. ಇದು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ನಮ್ಮ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ತಡೆಯುತ್ತದೆ. ಹೀಗಾಗಿ ಪ್ರಜ್ಞಾಪೂರ್ವಕವಾಗಿ ನಿಮ್ಮ ಆಂತರಿಕ ಸಂವಾದವನ್ನು ಹೆಚ್ಚು ಸಕಾರಾತ್ಮಕ ಮತ್ತು ರಚನಾತ್ಮಕವಾಗಿ ಬದಲಾಯಿಸುವ ಮೂಲಕ ನೀವು ನಿಮ್ಮ ಮನಸ್ಥಿತಿಯನ್ನು ಮರುರೂಪಿಸಬಹುದು. ಆರೋಗ್ಯಕರ ಚಿಂತನೆಯ ಮಾದರಿಗಳಿಗೆ ದಾರಿ ಮಾಡಿಕೊಡಬಹುದು.

2. ಆಲೋಚನೆಗಳನ್ನು ರಿಪ್ಲೇಸ್ ಮಾಡಿ:

ಯಾವುದನ್ನು ಬೇಡ ಎಂದುಕೊಳ್ಳುತ್ತೇವೆಯೇ ಅದೇ ವಸ್ತು ಅಥವಾ ವಿಷಯಗಳ ಕುರಿತ ಆಲೋಚನೆ ನಮ್ಮ ಮನಸ್ಸನ್ನು ತುಂಬುತ್ತಿರುತ್ತದೆ. ಅದರ ಬದಲು ನಮಗೆ ಏನು ಬೇಕು ಎಂದು ಯೋಚಿಸಬೇಕು. ನಕಾರಾತ್ಮಕ, ಸೋಲಿನ ಆಲೋಚನೆಗಳನ್ನು ಸಕಾರಾತ್ಮಕ, ಗೆಲುವಿನ ಆಲೋಚನೆಗಳೊಂದಿಗೆ ಬದಲಿಸಬೇಕು. ಉಸಿರಾಟದ ಗತಿ ಗಮನಿಸುವುದು ಆಲೋಚನೆಗಳನ್ನು ನಿಯಂತ್ರಿಸುವ ಅತ್ಯುತ್ತಮ ವಿಧಾನ.

3. ಹಿಂದಿನದನ್ನು ಬಿಟ್ಟು ಬಿಡುವುದು:

ಅತಿಯಾಗಿ ಯೋಚಿಸುವುದನ್ನು ನಿಗ್ರಹಿಸುವ ಮೂಲಭೂತ ಕ್ರಮಗಳಲ್ಲಿ ಒಂದು ಎಂದರೆ ಅದು ಭೂತಕಾಲವು ಬದಲಾಗುವುದಿಲ್ಲ ಎಂದು ಒಪ್ಪಿಕೊಳ್ಳುವುದು. ಹಿಂದೆ ನಿಮ್ಮ ಜೀವನದಲ್ಲಿ ಏನೇ ನಡೆದಿದ್ದರೂ ಅದನ್ನು ಒಪ್ಪಿಕೊಂಡು ವಾಸ್ತವದಲ್ಲಿ ಬದುಕಬೇಕು. ಭೂತಕಾಲದ ಬಗ್ಗೆ ಯೋಚಿಸುವ ಬದಲು ಅದರಿಂದ ಕಲಿತ ಪಾಠವನ್ನು ಮನದಟ್ಟು ಮಾಡಿಕೊಳ್ಳಿ. ಹಿಂದೆ ನಡೆದ ತಪ್ಪನ್ನೇ ಅವಕಾಶವನ್ನಾಗಿ ಪರಿವರ್ತಿಸಿ. ಭವಿಷ್ಯದಲ್ಲಿ ಹಿಂದೆ ನಡೆದ ಕಹಿ ಘಟನೆ ಮರುಕಳಿಸದಂತೆ ಎಚ್ಚರ ವಹಿಸಿದರೆ ಸಾಕು ಅಷ್ಟೇ.

4. ಈ ಕ್ಷಣದಲ್ಲಿ ಬದುಕಿ:

ಕೇವಲ ಪ್ರಸ್ತುತ ಕ್ಷಣದ ಬಗ್ಗೆ ಯೋಚಿಸಿ. ನಿಮ್ಮ ಹೃದಯದ ಬಡಿತವನ್ನು ಕೇಳಿ. ಭೂತಕಾಲದ ಬಗ್ಗೆಯೂ ಯೋಚಿಸಬೇಡಿ, ಭವಿಷ್ಯದ ಬಗ್ಗೆ ಅತಿಯಾಗಿ ಯೋಚಿಸಬೇಡಿ. ವರ್ತಮಾನದಲ್ಲಿ ಮುಳುಗಿ. ಹಿಂದೆ ನಡೆದದ್ದು ಮತ್ತು ಮುಂದೆ ನಡೆಯುವುದು ನಿಮ್ಮ ನಿಯಂತ್ರಣಕ್ಕೆ ಮೀರಿದೆ ಎಂಬುದನ್ನು ತಿಳಿಯಿರಿ. ಪ್ರಸ್ತುತ ಕ್ಷಣವನ್ನು ಸಾರ್ಥಕಗೊಳಿಸಲು, ಈ ಕ್ಷಣದಲ್ಲಿ ಖುಷಿಯಾಗಿರಲು ಏನು ಮಾಡಬಹುದು ಅದನ್ನು ಮಾಡಿ.

5. ಮನಸ್ಸನ್ನು ಮಗುವಿನಂತೆ ಸಂಭಾಳಿಸಿ:

ಎಲ್‌ಕೆಜಿ ಓದುವ ಮಗು ಪರೀಕ್ಷೆ ಇದೆ ಅಂತ ಹೆದರಿಕೊಂಡು ಶಾಲೆಗೆ ಹೋಗಲ್ಲ ಅಂತ ಹಟ ಹಿಡಿದರೆ ಅಮ್ಮ ಹೇಗೆ ಅನುನಯಿಸಿ ಶಾಲೆಗೆ ಕಳಿಸ್ತಾರೆ ಯೋಚಿಸಿ. ಯಾವುದೇ ಕೆಲಸದ ವಿಚಾರದಲ್ಲಿ, ಹೊಸ ಹವ್ಯಾಸ ರೂಢಿಸಿಕೊಳ್ಳುವ ವಿಚಾರದಲ್ಲಿ ಹಟ ಹಿಡಿಯುವ ನಿಮ್ಮ ಮನಸ್ಸನ್ನು ಹೀಗೆ ಅನುನಯಿಸಿ ಸಂಭಾಳಿಸಬೇಕು. ಅಮ್ಮ ಪದೇಪದೆ ಹೊಡೆದರೆ ಮಗು ಜಡ್ಡುಬೀಳುತ್ತೆ. ನೀವೂ ನಿಮ್ಮ ಮನಸ್ಸಿನೊಂದಿಗೆ ಪದೇಪದೆ ಒರಟಾಗಿ ನಡೆದುಕೊಂಡರೆ ಅದು ಬಂಡೇಳುತ್ತೆ. ನಿಮ್ಮ ನಿಯಂತ್ರಣದಿಂದ ಜಾರುತ್ತೆ. ನೀವು ಎಲ್ಲಿಗೇ ಹೋದರೂ ನಿಮ್ಮ ಮನಸ್ಸು ಸದಾ ನಿಮ್ಮೊಂದಿಗೇ ಇರುತ್ತೆ. ಅದನ್ನು ನೀವು ಬೆಸ್ಟ್‌ ಫ್ರೆಂಡ್ ಮಾಡಿಕೊಳ್ಳಿ.

6. ನಿಮ್ಮ ಆಲೋಚನೆಗಳಿಗೆ ಸವಾಲು ಹಾಕಿ, ನಿಮ್ಮೊಡನೆ ನೀವು ಸ್ಪರ್ಧಿಸಿ:

ನಿಮ್ಮ ತಲೆಯಲ್ಲಿ ಅನಗತ್ಯ ಆಲೋಚನೆಗಳು ಬರುತ್ತಿದ್ದರೆ ಅದಕ್ಕೇ ಸವಾಲು ಹಾಕಿ. "ನೀನು ಹೇಳಿದಂತೆಲ್ಲಾ ಆಗೊಲ್ಲ, ನಾನು ಹಾಗೆ ಮಾಡೊಲ್ಲ, ಚಾಲೆಂಜಾ?" ಎಂದು ನಿಮ್ಮ ಮನಸ್ಸಿಗೆ ಕೇಳಿ. ಕೆಟ್ಟ ಆಲೋಚನೆಗಳನ್ನು ಕಾಗದದ ಮೇಲೆ ಬರೆದು ಅದನ್ನು ಹರಿದು ಹಾಕಿ. ಇದು ಸಿಂಪಲ್​ ಟ್ರಿಕ್​ ಆದ್ರೂ ಪರಿಣಾಮಕಾರಿ ಕ್ರಿಯೆಯಾಗಿದೆ. ಒಮ್ಮೆ ಪ್ರಯತ್ನಿಸಿ ನೋಡಿ. ನೀವು ಸ್ಪರ್ಧಿಸಬೇಕಿರುವುದು ನಿಮ್ಮೊಡನೆ, ನಿಮ್ಮ ಮನಸ್ಸಿನೊಡನೆ ಮಾತ್ರ. ಇತರರನ್ನು ಸ್ಫರ್ಧಿಗಳಾಗಿ ತೆಗೆದುಕೊಳ್ಳಬೇಡಿ.

7. ನಿಯಂತ್ರಿಸಬಹುದಾದ ಅಂಶಗಳ ಬಗ್ಗೆ ಯೋಚಿಸಿ:

ನಮ್ಮ ನಿಯಂತ್ರಣಕ್ಕೆ ಮೀರಿದ ವಿಷಯಗಳ ಬಗ್ಗೆ ಚಿಂತಿಸುವುದರಿಂದ ಅತಿಯಾದ ಆಲೋಚನೆ ಉಂಟಾಗುತ್ತದೆ. ಯಾರಿಗೆ ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು, ಯಾವ ಘಟನೆಗಳೂ ನಡೆಯಬಹುದು. ಹಾಗಂತ ಪ್ರತಿ ವಿಷಯಕ್ಕೂ ಹೀಗಾಗಬಹುದು, ಹಾಗಾಗಬಹುದು ಎಂದುಬ ಚಿಂತಿಸಿ ಏನು ಪ್ರಯೋಜನ. ಹೀಗಾಗಿ ನೀವು ನಿಯಂತ್ರಿಸಬಹುದಾದ ಅಂಶಗಳ ಬಗ್ಗೆ ಮಾತ್ರ ಯೋಚಿಸಿ. "ನಾನು ಕೇವಲ ಮನುಷ್ಯ. ನನ್ನ ಮಿತಿಯಲ್ಲಿ ಏನೆಲ್ಲಾ ಸಾಧ್ಯವೋ ಅದು ಮಾಡಬಹುದು. ನಾನು ಇಂಥ ಸಾವು, ಅನ್ಯಾಯ ಆಗಬೇಕೆಂದು ಬಯಸಿರಲಿಲ್ಲ" ಎಂದು ಹೇಳಿಕೊಳ್ಳಿ. ತುಸು ಸಮಾಧಾನ ಆಗಬಹುದು. ನಿಮ್ಮಿಂದ ಏನೆಲ್ಲಾ ನಿಯಂತ್ರಿಸಬಹುದು ಎಂದು ಮೌಲ್ಯಮಾಪನ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಬಾಹ್ಯ ಅಂಶಗಳಿಗೆ ಸಂಬಂಧಿಸಿದ ಅನಗತ್ಯ ಒತ್ತಡವನ್ನು ಕಡಿಮೆ ಮಾಡಿ.

8. ನಿಮ್ಮ ಭಯವನ್ನು ಗುರುತಿಸಿ ಮತ್ತು ಎದುರಿಸಿ:

ನಿಮಗೆ ಯಾವೆಲ್ಲಾ ವಿಚಾರದಲ್ಲಿ ಭಯ ಕಾಡುತ್ತಿದೆ ಎಂಬುದನ್ನು ಗುರುತಿಸಿ. ಭಯದ ಕೆಲಸಗಳನ್ನು ಚಾಲೆಂಜ್​ ಆಗಿ ತೆಗೆದುಕೊಂಡು ಒಮ್ಮೆ ಮಾಡಿನೋಡಿ. ಅದರಿಂದ ಯಾವುದೇ ಅಪಾಯಗಳು ಆಗದಿದ್ದಾಗ ನೀವು ಇನ್ನು ಮುಂದೆ ಅದರ ಬಗ್ಗೆ ಯೋಚಿಸುವುದಿಲ್ಲ.

9. ಪರಿಹಾರಗಳನ್ನು ರೆಕಾರ್ಡ್​ ಮಾಡಿ:

ಯಾವುದೇ ವಿಚಾರದ ಕುರಿತು, ಸಮಸ್ಯೆಯ ಕುರಿತು ನಿಮಗೆ ಪರಿಹಾರ-ಐಡಿಯಾ ಹೊಳೆದರೆ ಅದನ್ನು ಒಂದು ನೋಟ್​ಬುಕ್​​ನಲ್ಲಿ ಬರೆದಿಡಿ. ಪರಿಹಾರಗಳನ್ನು ರೆಕಾರ್ಡ್​ ಮಾಡುವ ಈ ಪೂರ್ವಭಾವಿ ವಿಧಾನವು ಸಮಸ್ಯೆಯನ್ನು ಪರಿಹರಿಸುವ ಕಡೆಗೆ ನಿಮ್ಮ ಗಮನವನ್ನು ಕೇಂದ್ರೀಕರಿಸುತ್ತದೆ ಸವಾಲುಗಳನ್ನು ಜಯಿಸಲು ನಿಮ್ಮ ಸಾಮರ್ಥ್ಯದ ಸ್ಪಷ್ಟವಾದ ದಾಖಲೆಯನ್ನು ಒದಗಿಸುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ