logo
ಕನ್ನಡ ಸುದ್ದಿ  /  ಜೀವನಶೈಲಿ  /  ಮೂಢನಂಬಿಕೆ ಮತ್ತು ಮನೋವಿಜ್ಞಾನ: ಫಿಶ್ ಕರ್ರಿ ಕೇಸ್‌ನಲ್ಲಿ ಕಂಡ ಸ್ಕಿಜೋಟೈಪಾಲ್ ವ್ಯಕ್ತಿತ್ವ ಅಸ್ವಸ್ಥತೆ

ಮೂಢನಂಬಿಕೆ ಮತ್ತು ಮನೋವಿಜ್ಞಾನ: ಫಿಶ್ ಕರ್ರಿ ಕೇಸ್‌ನಲ್ಲಿ ಕಂಡ ಸ್ಕಿಜೋಟೈಪಾಲ್ ವ್ಯಕ್ತಿತ್ವ ಅಸ್ವಸ್ಥತೆ

Praveen Chandra B HT Kannada

Oct 04, 2024 05:11 PM IST

google News

ಫಿಶ್ ಕರ್ರಿ ಕೇಸ್‌ನಲ್ಲಿ ಕಂಡ ಸ್ಕಿಜೋಟೈಪಾಲ್ ವ್ಯಕ್ತಿತ್ವ ಅಸ್ವಸ್ಥತೆ ಕುರಿತು ಸೈಕಾಲಜಿಸ್ಟ್ ರೂಪಾ ರಾವ್‌ ಬರೆದ ಲೇಖನ

    • ಸೈಕಾಲಜಿಸ್ಟ್ ರೂಪಾ ರಾವ್‌ ಫೇಸ್‌ಬುಕ್‌ನಲ್ಲಿ ಬರೆದ ಲೇಖನವೊಂದು ಮೂಡನಂಬಿಕೆ ಮತ್ತು ಮನೋವಿಜ್ಞಾನಕ್ಕೆ ಸಂಬಂಧಪಟ್ಟ ಸಾಕಷ್ಟು ವಿವರ ನೀಡುತ್ತದೆ. ‌ ಫಿಶ್ ಕರ್ರಿ ಕೇಸ್ ಅಥವಾ ವರುಣ್ ಅರೋರಾ ಕೇಸ್‌ ಎಂದೇ ಜನಪ್ರಿಯವಾಗಿರುವ ಪ್ರಕರಣದ ಮೂಲಕ ಇವರು ಸ್ಕಿಜೋಟೈಪಾಲ್ ವ್ಯಕ್ತಿತ್ವ ಅಸ್ವಸ್ಥತೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಫಿಶ್ ಕರ್ರಿ ಕೇಸ್‌ನಲ್ಲಿ ಕಂಡ ಸ್ಕಿಜೋಟೈಪಾಲ್ ವ್ಯಕ್ತಿತ್ವ ಅಸ್ವಸ್ಥತೆ ಕುರಿತು ಸೈಕಾಲಜಿಸ್ಟ್ ರೂಪಾ ರಾವ್‌ ಬರೆದ ಲೇಖನ
ಫಿಶ್ ಕರ್ರಿ ಕೇಸ್‌ನಲ್ಲಿ ಕಂಡ ಸ್ಕಿಜೋಟೈಪಾಲ್ ವ್ಯಕ್ತಿತ್ವ ಅಸ್ವಸ್ಥತೆ ಕುರಿತು ಸೈಕಾಲಜಿಸ್ಟ್ ರೂಪಾ ರಾವ್‌ ಬರೆದ ಲೇಖನ (google photos)

ಫಿಶ್ ಕರ್ರಿ ಕೇಸ್ ಅಥವಾ ವರುಣ್ ಅರೋರಾ ಕೇಸ್‌ ಎಂದೇ ಜನಪ್ರಿಯವಾಗಿರುವ ಪ್ರಕರಣದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಮನೋಶಾಸ್ತ್ರಜ್ಞೆ ರೂಪಾ ರಾವ್‌ ಲೇಖನವೊಂದನ್ನು ಬರೆದಿದ್ದಾರೆ. ಈ ಮೂಲಕ ಬಹುತೇಕರಿಗೆ ತಿಳಿಯದೆ ಇರುವ ಸ್ಕಿಜೋಟೈಪಾಲ್ ವ್ಯಕ್ತಿತ್ವ ಅಸ್ವಸ್ಥತೆ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ.

"ಹೀಗೇ ಯುಟ್ಯೂಬ್ ನೋಡುತ್ತಿದ್ದೆ. ವರುಣ್ ಅರೋರಾ ಕೇಸ್ ಎಂಬ ಶೀರ್ಷಿಕೆ ಕಣ್ಣಿಗೆ ಬಿತ್ತು. ಪೂರ್ತಿ ನೋಡಿದ ಮೇಲೆ ಗೊತ್ತಾದ ವಿಷಯ, ವರುಣ್ ಅರೋರಾ ಎಂಬ ವ್ಯಕ್ತಿ ತನ್ನ ಹೆಂಡತಿ ಹಾಗೂ ಮತ್ತವಳ ತಾಯಿ, ತಂಗಿ ಕೊನೆಗೆ ಅವರ ಮನೆಯ ಕೆಲಸದವಳನ್ನು ಸೇರಿದಂತೆ ಇಡೀ ಕುಟುಂಬವನ್ನೇ ಕೊಂದ ಕಥೆ ಅದು. ಈಗ ಬದುಕಿರುವವರು ಹೆಂಡತಿಯ ತಂದೆ ಮಾತ್ರ . ಈತ ಇವರೆಲ್ಲರನ್ನೂ ಕೊಂದದ್ದು ವೈಷಮ್ಯಕ್ಕಾಗಿ. ವೈಷಮ್ಯದ ಕಾರಣ ಕೇಳಿದರೆ ಸಖೇದಾಶ್ಚರ್ಯ ಆಗುತ್ತದೆ.

ವರುಣ್ ಅರೋರ ಹಾಗು ದಿವ್ಯ‌ಅರೋರ ಮದುವೆಯಾಗಿ ಬಹಳ ವರ್ಷಗಳ‌ ನಂತರ ಐವಿಎಫ್ ಮೂಲಕ ಇಬ್ಬರು ಮಕ್ಕಳನ್ನು ಪಡೆದರು. ಕೋವಿಡ್‌ ಸಮಯದ ಅಸುಪಾಸು ವರುಣ್‌ ಅರೋರಾ ತಂದೆ ತೀರಿ ಹೋದರು, ಅವರು ಹೋದ ನಂತರ ದಿವ್ಯ ಈ ಸಲ ಸಹಜವಾಗಿಯೇ ಯಾವದೇ ಐವಿಎಫ್ ಸಹಾಯವಿಲ್ಲದೆ ಗರ್ಭಿಣಿ‌ ಆದಳು. ಈ ಸಲ ಹುಟ್ಟಲಿರುವ ಮಗು ತನ್ನ ತಂದೆಯ ಮರುಜನ್ಮ ಎಂದು ವರುಣ್ ಅರೋರ ನಂಬಿದ್ದ. ಇದನ್ನೇ‌ ವರುಣ್‌ ಅರೋರ ಅಮ್ಮನೂ‌ ನಂಬಿದ್ದಳು.

ಆದರೆ, ದಿವ್ಯಾಳ ಪ್ರೆಗ್ನೆನ್ಸಿಯಲ್ಲಿ ತೊಂದರೆ ಇತ್ತು. ಅವಳಿಗೆ ಇದರಿಂದ ವೈದ್ಯಕೀಯ ತೊಂದರೆ ಉಂಟಾಗುತ್ತದೆ. ಮಗುವನ್ನು ತೆಗೆಸಿಬಿಡಿ ಎಂದು ವೈದ್ಯರು ಹೇಳಿದರು. ಆದರೆ, ಇದಕ್ಕೆ ವರುಣ್‌ ಮತ್ತು ಆತನ ತಾಯಿ ಒಪ್ಪಲಿಲ್ಲ. ಆದರೆ, ತನ್ನ ಕುಟುಂಬದ ಸಹಾಯದಿದ ದಿವ್ಯಾ ಗರ್ಭಪಾತ ಮಾಡಿಸಿಕೊಂಡಳು.

ತನ್ನ ತಂದೆಯನ್ನು ಮತ್ತೆ ಈ ಲೋಕಕ್ಕೆ‌ ಬರಗೊಡಲಿಲ್ಲವೆಂಬ ಕೋಪಕ್ಕೆ ಅವನು ಮತ್ತು ಅವನ ತಾಯಿ ಸೇರಿ ಮಾಡಿದ ಫಿಶ್ ಕರ್ರಿ ಉಪಾಯ ದಿವ್ಯಾಳ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡಿತು. ಇದರ ಬಗ್ಗೆ ಮತ್ತಷ್ಟು ಓದಿಗಾಗಿ‌ ಫಿಶ್ ಕರ್ರಿ ಕೇಸ್ ಅಥವಾ ವರುಣ್ ಅರೋರಾ ಕೇಸ್‌ ಎಂದು ಗೂಗಲ್ ಮಾಡಿ ನೋಡಿ ನೋಡಬಹುದು.

ಸ್ಕಿಜೋಟೈಪಾಲ್ ವ್ಯಕ್ತಿತ್ವ ಅಸ್ವಸ್ಥತೆ

ಬಹುತೇಕ ಎಲ್ಲರೂ ದೇವರು, ದೆವ್ವ , ಮರು ಜನ್ಮ,ಹಳೆಯ ಜನ್ಮ ಎಂದೆಲ್ಲಾ ನಂಬುತ್ತಾರೆ. ಅದು‌ ಬದುಕಿನ ಭರವಸೆಗಾಗಿ, ನೋವಿನ ಸಮಾಧಾನಕ್ಕಾಗಿ, ಜೀವದ ಚೈತನ್ಯಕ್ಕಾಗಿ, ಎಲ್ಲಿಯವರೆಗೆ ನಾವು ನಂಬಿದ್ದು ನಮ್ಮ ಅಥವಾ ಪರರ ಹಿತಕ್ಕಾಗಿಯೋ ಅದು ನಂಬಿಕೆ. ಆದರೆ ಯಾರೊಬ್ಬರ ಅಥವಾ ಯಾವುದೇ‌ ಪ್ರಾಣಿಯ ಜೀವಕ್ಕೆ/ ಜೀವನಕ್ಕೆ / ಅಥವಾ ಮಾನಸಿಕವಾಗಿ ಮಾರಕವಾದರೆ ಅದು ಮೂಢ ನಂಬಿಕೆ ಅಷ್ಟೇ . Let me be very clear here. I am not talking about beliefs in general. I am specifically pointing out superstitious beliefs.

ಅದೇನಾಗಿ ಹೋಗುತ್ತದೆ?

ಕೆಲವರಲ್ಲಿ ನಂಬಿಕೆ ‌ಮೂಢನಂಬಿಕೆಯಾಗಿ ಹೇಗೆ ಬದಲಾಗಿಬಿಡುತ್ತದೆ.?

ಬುದ್ಧಿಗೆ ಯಾವ ರೀತಿ ಮಂಕು ಬಡಿಯುತ್ತದೆ?

ಇದಕ್ಕೆ‌ ಉತ್ತರ ಮನೋವಿಜ್ಞಾನದಲ್ಲಿದೆ.

ಈ ಮೇಲಿನ ಪ್ರಕರಣದಲ್ಲಿ ವರುಣ್ ಮತ್ತು ಅವನ ತಾಯಿ ಇಬ್ಬರ ವರ್ತನೆ, ನಂಬಿಕೆ ಹಾಗು ಗ್ರಹಿಕೆ ಇವುಗಳು ಸ್ಕಿಜೋಟೈಪಲ್ (STPD)ಎಂಬ ವ್ಯಕ್ತಿತ್ವದ ಡಿಸಾರ್ಡರ್‌ನತ್ತ ಬೆರಳು ತೋರಿಸುತ್ತದೆ.

ಏನಿದು STPD?

ವಿಲಕ್ಷಣ ನಡವಳಿಕೆ, ವಿಚಿತ್ರ ನಂಬಿಕೆಗಳು ಸ್ಕಿಜೋಟೈಪಾಲ್ ವ್ಯಕ್ತಿತ್ವದ ಮುಖ್ಯ‌ ಲಕ್ಷಣಗಳು. ಈ ಅಸ್ವಸ್ಥತೆ ಹೊಂದಿರುವ ಜನರು ಸಾಮಾನ್ಯವಾಗಿ ಅಸಹಜ ಚಿಂತನೆ, ಗ್ರಹಿಕೆಗಳು ಮತ್ತು ಸಂವಹನ ಶೈಲಿಗಳನ್ನು ಪ್ರದರ್ಶಿಸುತ್ತಾರೆ. ಆದರೆ ಇದು ಸ್ಕಿಜೋಫ್ರೇನಿಯಾದಂತಲ್ಲ, STPD ಹೊಂದಿರುವವರು ವಾಸ್ತವದಲ್ಲಿಯೇ ಇರುತ್ತಾರೆ‌. ಆದರೆ ಅವರ ಆಲೋಚನಾ ಮಾದರಿಗಳು ವಿಲಕ್ಷಣ ಹಾಗು ವಿಚಿತ್ರವಾಗಿರಬಹುದು.

ಸ್ಕಿಜೋಟೈಪಾಲ್ ವ್ಯಕ್ತಿತ್ವದ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು ಪುನರ್ಜನ್ಮ ಅಥವಾ ದೇವರು , ಶಿಕ್ಷೆ ಸ್ವರ್ಗ, ನರಕ ಮುಂತಾದ ಅಲೌಕಿಕ ವಿದ್ಯಮಾನಗಳಲ್ಲಿ ಆಳವಾದ ಹಾಗು ಅಪ್ರಜ್ಞಾಪೂರ್ವಕ ನಂಬಿಕೆ ಇರುತ್ತೆ. ವಿಶೇಷವಾಗಿ ತಮ್ಮ ಅಥವಾ ತಮ್ಮ ಆಪ್ತರ ಜೀವಕ್ಕೆ ಬೆದರಿಕೆಯಂತಹುದೋ ಅಥವಾ ಅವರ ಈ ನಂಬಿಕೆಗಳನ್ನು ಯಾರಾದರೂ ಸವಾಲು ಮಾಡಿದರೆ ಹಿಂಸಾತ್ಮಕವಾಗಿ ವರ್ತಿಸಬಹುದು. ಮದನಪಲ್ಲಿಯ ಮಕ್ಕಳನ್ನೇ ಕೊಂದು ಪ್ರೊಫೆಸರ್ ದಂಪತಿಗಳಿರಬಹುದು ಅಥವಾ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ 32 ಜನರ ಕುಟುಂಬವಿರಬಹುದು. ಇವರೆಲ್ಲರಲ್ಲಿಯೂ ಮಾನಸಿಕ ಕಾಯಿಲೆಗಳಿವೆ.

ತಮ್ಮಲ್ಲಿ ಅಮಾನುಷ ಶಕ್ತಿ ಇದೆ, ದೇವರು ಬಂತು ದೆವ್ವ ಬಂತು ಎಂದೆಲ್ಲಾ ವರ್ತಿಸುವವರಲ್ಲಿ ಬಹಳಷ್ಟು ಜನಕ್ಕೆ ಗ್ರಾಂಡಿಯೋಸ್‌ ಡಿಲ್ಯೂಶನಲ್ ಡಿಸಾರ್ಡರ್‌ ಎಂಬ ಮನೋ ಕಾಯಿಲೆ ಇರುತ್ತದೆ. ಇವರು ತಾವು ಅಸಾಧಾರಣ ಪ್ರತಿಭೆ, ಶಕ್ತಿ, ಸಂಪತ್ತು ಅಥವಾ ಐಡೆಂಟಿಟಿ ಹೊಂದಿದ್ದೇವೆ ಎಂದು ನಂಬುತ್ತಾರೆ.(ಇನ್ನೂ ಬಿಡುಗಡೆ ಭಾಗ್ಯಕ್ಕೆ ಕಾದಿರುವ ನನ್ನ ಸೈಕೋ‌ಹಾರರ್ ಪುಸ್ತಕದಲ್ಲಿ ಇಂತಹುದೇ ಕಾಯಿಲೆಯ ಬಗೆಗಿನ ಕಥೆ ಇದೆ.)

ನಾವೆಲ್ಲಾ ಪೂಜಿಸುತ್ತೇವೆ, ವ್ರತ ಕೈಗೊಳ್ಳುತ್ತೇವೆ , ನಂಬಿಕೆ ಇಡುತ್ತೇವೆ. ಆದರೆ ವಿಚಾರಶೂನ್ಯರಾಗುವುದಿಲ್ಲ.‌ನಮ್ಮ ನಂಬಿಕೆಗಳು ನಮಗೆ‌ ಒಳ್ಳೆಯದು ಮಾಡದೇ ಇದ್ದರೂ ಸರಿ ಕೆಟ್ಟದು ಅಥವಾ ಇನ್ನೊಬ್ಬರಿಗೆ ತೊಂದರೆ ಕೊಡುವುದಿಲ್ಲ.

ರಾತ್ರಿ ಹನ್ನೆರೆಡು ಗಂಟೆಗೆ ಪೂಜೆ ಸಮಯದಲ್ಲಿ ಘಂಟಾನಾದ ಮಾಡಲೂ ಪಾಪ ಪಕ್ಕದ ಮನೆಯವರಿಗೆ ಎಚ್ಚರವಾಗಬಹುದೆಂಬ ಪ್ರಜ್ಞೆ ಇಡುತ್ತೇವೆ. ನಾವು ಎಷ್ಟರ ಮಟ್ಟಿಗೆ ಪೂಜೆ ಅಥವಾ ವ್ರತದಲ್ಲಿ ಇನ್ವಾಲ್ವ್ ಆಗಬಹುದು ಎಲ್ಲಿ ನಿಲ್ಲಿಸಬೇಕು ಎಂಬುದರ ಅರಿವು ಇರುತ್ತದೆ‌

ಇದು ಆರೋಗ್ಯಕರ ಮನಸು. ಆದರೆ, ಇತರರಿಗೋ ಅಥವಾ ತಮಗೋ‌ ಹಾನಿ ಮಾಡಿಸುವ ಅಥವಾ ಮರಳಿ ಬಾರದಷ್ಟು ಆಳದಲ್ಲಿ ಮುಳುಗಿಸುವ ನಂಬಿಕೆಗಳಿದ್ದರೆ ಅದು ಮಾನಸಿಕ ಅನಾರೋಗ್ಯ.

  • ಡಾ. ರೂಪಾ ರಾವ್‌, ಮನಃಶಾಸ್ತ್ರಜ್ಞೆ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ