logo
ಕನ್ನಡ ಸುದ್ದಿ  /  ಜೀವನಶೈಲಿ  /  ಯಾರು ಯಾವ ಕಾಯಿಲೆ ಬಗ್ಗೆ ಮಾತನಾಡಿದ್ರೂ ನನಗೂ ಅದೇ ಕಾಯಿಲೆ ಬಂದಿದೆ, ಸತ್ತೇ ಹೋಗ್ತೀನಿ ಅನ್ನಿಸತ್ತೆ, ಪರಿಹಾರ ಸೂಚಿಸಿ ಮೇಡಂ; ಮನದ ಮಾತು

ಯಾರು ಯಾವ ಕಾಯಿಲೆ ಬಗ್ಗೆ ಮಾತನಾಡಿದ್ರೂ ನನಗೂ ಅದೇ ಕಾಯಿಲೆ ಬಂದಿದೆ, ಸತ್ತೇ ಹೋಗ್ತೀನಿ ಅನ್ನಿಸತ್ತೆ, ಪರಿಹಾರ ಸೂಚಿಸಿ ಮೇಡಂ; ಮನದ ಮಾತು

HT Kannada Desk HT Kannada

Jul 26, 2023 08:40 PM IST

google News

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್

    • ಮದುವೆ ಎಂದರೆ ನಿರೀಕ್ಷೆಗಳೂ ಸಹಜ. ಆದರೆ ನಿರೀಕ್ಷೆಗಳ ಭಾರ ಅತಿಯಾಗಿ ಭಾವಿ ದಂಪತಿಗಳ ನೆಮ್ಮದಿ ಕುಗ್ಗಿಸಬಾರದು. ಈ ಸಂಚಿಕೆಯಲ್ಲಿ ಅಂಥದ್ದೇ ಒಂದು ಪ್ರಶ್ನೆಗೆ ಆಪ್ತ ಸಮಾಲೋಚಕಿ ಭವ್ಯಾ ವಿಶ್ವನಾಥ್ ಉತ್ತರಿಸಿದ್ದಾರೆ. ಮತ್ತೊಬ್ಬರು ತಮ್ಮನ್ನು ಕಾಡುತ್ತಿರುವ ಮಾನಸಿಕ ಆತಂಕದ ಬಗ್ಗೆ ಪ್ರಶ್ನಿಸಿದ್ದಾರೆ. ಎರಡು ಜೀವಗಳಿಗೆ ಈ ಉತ್ತರಗಳಿಂದ ನೆಮ್ಮದಿ ಸಿಗಲೆಂದು ನೀವೂ ಹಾರೈಸಿ.
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್

ಪ್ರಶ್ನೆ: 1) ನನಗೆ ಏನಾದರೂ ಆಗುತ್ತೆ ನಾನು ಸಾಯುತ್ತೇನೆ ಅನಿಸುತ್ತದೆ. ಯಾವುದಾದರೂ ಕಾಯಿಲೆ ಬಗ್ಗೆ ಕೇಳಿದರೆ ನನಗೂ ಅಂಥದ್ದೇ ಕಾಯಿಲೆ ಬರುತ್ತದೆ ಎಂಬ ಭಯ ಶುರುವಾಗುತ್ತದೆ. ಇದನ್ನು ಎಷ್ಟೇ ಕಂಟ್ರೋಲ್ ಮಾಡೋಕೆ ಪ್ರಯತ್ನಿಸಿದರೂ ಆಗ್ತಿಲ್ಲ. ಒಂದು ದಿನ ಚೆನ್ನಾಗಿ ಇರುತ್ತೇನೆ. ಇನ್ನೊಂದು ದಿನ ನರಳುತ್ತೇನೆ. ಏನು ಮಾಡಬೇಕೆಂದು ದಿಕ್ಕುತೋಚುತ್ತಿಲ್ಲ. ದಯವಿಟ್ಟು ಪರಿಹಾರ ಸೂಚಿಸಿ. -ರಂಗ, ಮಲ್ಲೇಶ್ವರ

ಉತ್ತರ: ನಿಮ್ಮ ಆತಂಕ ಅರ್ಥವಾಗುತ್ತದೆ. ಸಾಯುವ ಭಯ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಆದರೆ ಭಯ ತೀವ್ರವಾದರೆ ನಿಭಾಯಿಸುವುದಕ್ಕೆ ಕಷ್ಟ ಎನಿಸಬಹುದು. ಅತಿಯಾದ ಭಯದ ಸಮಯದಲ್ಲಿ ದೈಹಿಕವಾಗಿಯೂ ಬದಲಾವಣೆಗಳಿದ್ದಲ್ಲಿ (ಹೆಚ್ಚು ಬೆವರುವುದು, ಹೃದಯ ಬಡಿತ ಹೆಚ್ಚಾಗುವುದು, ಕೈ ಕಾಲುಗಳು ನಡುಗುವುದು, ಬಾಯಿ ಒಣಗುವುದು ಇತ್ಯಾದಿ) ವೈದ್ಯರ ಬಳಿ ತೋರಿಸುವುದು ಉತ್ತಮ.

ಆಗಾಗ್ಗೆ ವೈದ್ಯರ ಬಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ . ಯಾವುದೆೇ ಸಮಸ್ಯೆಯಿಲ್ಲದಿದ್ದರೆ ಚಿಂತೆ ಮಾಡುವುದು ಅಥವಾ ಹೆದರುವುದು ಬೇಡ. ಕಾಯಿಲೆ ಬಂದರೂ ಸಹ ಸಾಯುವುದಿಲ್ಲ. ಮನಸ್ಸನ್ನು ಗುಣ ಮಾಡಿಕೊಳ್ಳುವುದರ ಬಗ್ಗೆ ಗಮನ ಹರಿಸಬೇಕು. ಮನಸ್ಸು ಸಕಾರಾತ್ಮಕವಾಗಿದ್ದರೆ ದೇಹವು ಕೂಡ ಆರೊಗ್ಯವಾಗಿರುತ್ತದೆ. ಮನಸ್ಸು ದುರ್ಬಲವಾದಷ್ಟು ದೇಹವೂ ಕೂಡ ದುರ್ಬಲವಾಗಿ ಅನಾರೋಗ್ಯಕ್ಕೆ ಈಡಾಗುತ್ತದೆ.

ಈ ಕೆಳಗಿನ ಧೃಢೀಕರಣಗಳನ್ನು ಮನದಟ್ಟು ಮಾಡಿಕೊಳ್ಳಿ: (ಇವನ್ನು ಬರೆಯಿರಿ ಅಥವಾ ಮನಸಿನಲ್ಲಿ ಪುನಃಪುನಃ ಹೇಳಿಕೊಳ್ಳಿ)

1) ನಾನು ಆರೋಗ್ಯವಾಗಿದ್ದೇನೆ

2) ನನ್ನ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ನಾನು ನಿಶ್ಚಯ ಮಾಡಿದ್ದೇನೆ. ಇದು ನನ್ನ ಆದ್ಯತೆ

3) ನನ್ನ ಆರೋಗ್ಯ ನನ್ನ ಜವಾಬ್ದಾರಿ. ಈ ಜವಾಬ್ದಾರಿಯನ್ನು ನಾನು ಚೆನ್ನಾಗಿ ನಿಭಾಯಿಸಬಲ್ಲೆ.

4) ನಾನು ನನ್ನ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ.

5) ನನ್ನ ಆರೋಗ್ಯವನ್ನು ಸುಧಾರಿಸಲು ನಾನು ಹೊಸ ಮಾರ್ಗಗಳನ್ನು ಅನುಸರಿಸಲು ಸಿದ್ಧನಿದ್ದೇನೆ.

6) ನನ್ನ ದೇಹ ಮತ್ತು ಮನಸ್ಸನ್ನು ಪೋಷಿಸಲು ನಾನು ಸಮಯ ಮಾಡಿಕೊಳ್ಳುತ್ತೇನೆ.

7) ಯಾವುದೇ ಕಾಯಿಲೆ ಬಂದರೂ ಗುಣವಾಗುವುದಕ್ಕೆ ಸಾಕಷ್ಟು ಚಿಕಿತ್ಸೆಗಳು ಮತ್ತು ಆಸ್ಪತ್ರೆ ಲಭ್ಯವಿದೆ.

8) ನನಗೆ ಕಾಯಿಲೆ ಬಂದರೂ ಸಹ ಎದುರಿಸುವ ಶಕ್ತಿ ನನ್ನಲಿದೆ. ಬೇಗ ಗುಣವಾಗುತ್ತೇನೆ.

ಇದರ ಜೊತೆಗೆ ನೀವು ಅಂಶಗಳನ್ನೂ ಗಮನಿಸಬೇಕು. ಪ್ರತಿದಿನ ಒಳಿತಿನ (ಧನಾತ್ಮಕ) ದೃಢೀಕರಣಗಳೊಂದಿಗೆ ನಿಮ್ಮನ್ನು ಪ್ರೇರೇಪಿಸಿಕೊಳ್ಳಿ. ನಕಾರಾತ್ಮಕ ಯೋಚನೆಗಳನ್ನು ಸಕಾರಾತ್ಮಕ ಯೋಚನೆಗಳಿಂದ ಬದಲುಮಾಡಿ.

1) ಭವಿಷ್ಯದಲ್ಲಿ ಕಾಯಿಲೆ ಬಂದರೆ: ಮುಂದೇನು ಗತಿಯೆಂದು ಆತಂಕವಾದಾಗ ವಾಸ್ತವದಲ್ಲಿ ನಾನು ಆರೋಗ್ಯದಿಂದ ಬದುಕಿದ್ದೇನೆಂದು ಗಮನ ಹರಸಿ ಕೃತಜ್ಞತೆ ಸಲ್ಲಿಸಿ.

2) ಒಂದು ಪಕ್ಷ ಕಾಯಿಲೆ ಬಂದು ಬಿಟ್ಟರೆ, ಸಾವಿನ ಬಗ್ಗೆ ಭಯವಾದರೆ: ನಿಮ್ಮಲಿರುವ ಸಂಪನ್ಮೂಲಗಳ ಬಗ್ಗೆ ನಂಬಿಕೆ ವಿಶ್ವಾಸ ಬೆಳೆಸಿಕೊಳ್ಳಿ (ವೈದ್ಯರು, ಆಸ್ಪತ್ರೆ, ಔಷಧ ಇತ್ಯಾದಿ)

3) ಆತಂಕ ಭಯ ಕಾಡಿದ ತಕ್ಷಣ ತಂಪಾದ ನೀರನ್ನು ಕುಡಿದು, ಹೊರಗೆ ಹೋಗಿ ಶುಧ್ಧ ಗಾಳಿಯನ್ನು ಸೇವಿಸಿ. ಮನಸ್ಸು ಶಾಂತವಾಗುತ್ತದೆ.

4) ಆದಷ್ಟು ಒಂಟಿಯಾಗಿರುವುದನ್ನು ತಡೆಯಿರಿ. ಆತ್ಮೀಯರು ಸ್ನೇಹಿತರ ಬಳಿ ಸಮಯ ಕಳೆಯಿರಿ, ನಿಮ್ನ ಆತಂಕವನ್ನು ಹಂಚಿಕೊಳ್ಳಿ.

5) ನಿಮಗೆ ನಿಭಾಯಿಸುವುದು ಅಸಾಧ್ಯವಾದಲ್ಲಿ, ಆಪ್ತಸಮಾಲೋಚಕರನ್ನು ಸಂಪಕಿ೯ಸಿ ಸಹಾಯ ತೆಗೆದುಕೊಳ್ಳಿ

ಪ್ರಶ್ನೆ: 2) ನನಗೆ 27 ವರ್ಷ ವಯಸ್ಸಾಗಿದೆ. ಮದುವೆ ಮಾಡಲು ಹುಡುಗಿ ನೋಡುತ್ತಿದ್ದಾರೆ. ನನಗೆ ಯಾವ ರೀತಿಯ ಸಂಗಾತಿ ಸಿಗುವಳು? ಅವಳು ಒಳ್ಳೆಯವಳೇ? ನಮ್ಮ ಮನೆಯ ಎಲ್ಲರೊಡನೆ ಕೂಡಿ ಬಾಳುವಳೆ? ನನ್ನ ಮನಸ್ಸು ಅರ್ಥ ಮಾಡಿಕೊಳ್ಳುವಂಥವಳು ಸಿಗುತ್ತಾಳೆಯೇ... ಇತ್ಯಾದಿ ಯೋಚನೆ ಕಾಡುತ್ತಿವೆ. ಇವೆಲ್ಲವನ್ನೂ ಯಾರಿಗೂ ಹೇಳಿಕೊಳ್ಳಲು ಆಗುತ್ತಿಲ್ಲ. ಆದರೆ ಒಳ್ಳೆಯದೇ ಆಗಬಹುದು ಎಂಬ ಆಶಾಭಾವನೆಯಲ್ಲಿ ಇದ್ದೇನೆ. ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಮೇಡಂ. -ವಿನಾಯಕ, ದಾವಣಗೆರೆ

ಉತ್ತರ: ಬಾಳ ಸಂಗಾತಿಯನ್ನು ಹುಡುಕುವಾಗ ಈ ತರಹದ ಯೋಚನೆಗಳು ಮತ್ತು ಆತಂಕಗಳು ಉದ್ಭವಿಸುವುದು ಸಹಜ. ನಿಮ್ಮ ಮುಂದಿನ ಇಡೀ ಬದುಕನ್ನು ಬಾಳ ಸಂಗಾತಿಯೊಡನೆ ಹಂಚಿಕೊಂಡು ಹೋಗಬೇಕೆಂದಾಗ ಮನಸ್ಸಿಗೆ ಆತಂಕ ದುಗುಡವಾಗುವುದು ಸಹಜ. ಹುಡುಗಿ / ಹುಡುಗ ಹೇಗಿರುತ್ತಾನೆ / ಳೆ? ಒಳ್ಳೆಯವನೇ/ಳೇ? ನನ್ನನ್ನು ಅಥ೯ಮಾಡಿಕೆೊಳ್ಳುತ್ತಾನೆಯೇ/ಳೇಯೇ ? ನನ್ನವರಿಗೆ ಹೊಂದಿಕೊಂಡು ಹೋಗುತ್ತಾಳೆಯೇ... ಹೀಗೆ ಹಲವಾರು ನೀರೀಕ್ಷೆಗಳು ಮತ್ತು ಕುತೂಹಲಗಳು ಕಾಡುತ್ತವೆ. ಕೆಲವರಿಗೆ ತಮ್ಮ ಈ ಮನಸ್ಥಿತಿಯನ್ನು ಬೇರೆಯವರ ಮುಂದೆ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ತಮ್ಮೊಳಗೆ ಇಟ್ಟುಕೊಂಡು ಚಡಪಡಿಸುತ್ತಾರೆ. ಕೊನೆಗೆ ಎಲ್ಲಾ ಒಳ್ಳೆಯದಾಗುತ್ತೆ ಎನ್ನುವ ಆಶಾಭಾವನೆಯಿಂದ ಸುಮ್ಮನಾಗುತ್ತಾರೆ. ಇದು ತಪ್ಪೇನಲ್ಲ, ಅಸಹಜವು ಅಲ್ಲ. ಇದೂ ಸಹ ಒಂದು ತರಹದ ಮಾನಸಿಕ ಸಿದ್ಧತೆ.

ಆದರೆ, ಕೆಲವೊಮ್ಮೆ ತೀವ್ರವಾಗಿ ಇಂತಹ ಯೋಚನೆಗಳು ಕಾಡುತ್ತವೆ. ದಿನಚರಿಯೂ ಕೆಡುತ್ತದೆ. ನಿದ್ರೆ, ಊಟ, ಉದ್ಯೋಗವೆಲ್ಲದಿಕ್ಕೂ ಅಡಚಣೆಯನ್ನುಂಟು ಮಾಡುತ್ತದೆ. ಅದರಿಂದ ಮನಸ್ಸಿಗೆ ಕಿರಿಕಿರಿ ಹಾಗೂ ಒತ್ತಡವುಂಟಾಗುತ್ತದೆ. ಪರಿಣಾಮವಾಗಿ ಸಿಟ್ಟಾಗುವುದು, ಕೋಪ ಮಾಡಿಕೊಳ್ಳುವುದು, ಕೆರಳುವುದು, ನಿರಾಸೆಗೊಳ್ಳುವುದು ಸಾಮಾನ್ಯವಾಗಿರುತ್ತದೆ. ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ.

ನಿಮಗೂ ಇಂಥ ಅನುಭವವಾಗುತ್ತಿದ್ದಲ್ಲಿ ಕೆಳಕಂಡಂತೆ ಮಾಡಿರಿ:

1) ಹೇಳಿಕೊಳ್ಳಿ: ಆತ್ಮೀಯರ ಬಳಿ ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳುವುದು ಒಳ್ಳೆಯದು. ಇದರಿಂದ ಮನಸ್ಸು ಹಗರಾಗುವುದು. ಒಳ್ಳೆಯ ಸಲಹೆ ಮತ್ತು ಮಾರ್ಗದರ್ಶನವೂ ಸಿಗಬಹುದು.

2) ಬರೆಯಿರಿ: ಬರೆಯುವ ಅಭ್ಯಾಸವಿದ್ದರೆ (ಸ್ನೇಹಿತರ ಬಳಿ ಹೇಳಿಕೊಂಡಂತೆ) ಪ್ರಾಮಾಣಿಕವಾಗಿ ಬರೆಯಿರಿ. ಇದರಿಂದ ಮನಸ್ಸು ಹಗುರವಾಗುವುದಲ್ಲದೇ ಸ್ಪಷ್ಟತೆಯೂ ಸಿಗುತ್ತದೆ. ಮುಂದಿನ ಹೆಜ್ಜೆ ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದು ಸ್ಪಷ್ಟವಾಗುತ್ತದೆ.

3) ನಿರೀಕ್ಷೆ: ನಿಮ್ಮ ನಿರೀಕ್ಷೆಗಳು ಪ್ರಾಮಾಣಿಕವಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಹೆಚ್ಚಾಗಿದ್ದಲ್ಲಿ ಕಡಿಮೆ ಮಾಡಿಕೊಳ್ಳುವುದು ಉತ್ತಮ. ನಿಮ್ಮ ನಿರೀಕ್ಷೆಗಳು ಪೂರೈಸಿಕೊಳ್ಳಲೂ ಆಗದ ಪಕ್ಷದಲ್ಲಿ, ಪರಿಸ್ಥಿತಿಯನ್ನು ಒಪ್ಪಿಕೊಳ್ಳುವ ಮಾನಸಿಕ ಸಿದ್ಧತೆಯಿರಲಿ. ಬದಲಾವಣೆಗಳು ಮತ್ತು ಅನಿರೀಕ್ಷಿತ ಬದುಕನ್ನು ಒಪ್ಪಿಕೊಂಡು ನಿಭಾಯಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಉತ್ತಮ.

4) ಒಪ್ಪಿಕೊಳ್ಳಿ: ಬಾಳ ಸಂಗಾತಿಯನ್ನು ಅವರಿದ್ದ ಹಾಗೆಯೇ ಗೌರವಿಸಿ, ಸ್ವೀಕರಿಸುವುದು. ಬಾಳಸಂಗಾತಿಯ ನಿರೀಕ್ಷೆಗಳನ್ನು ಅರಿಯುವುದಕ್ಕೆ ಪ್ರಯತ್ನಿಸುವುದು ಒಳ್ಳೆಯದು. ಪರಸ್ಪರ ಪ್ರೀತಿ ಗೌರವದಿಂದ ಅರ್ಥಮಾಡಿಕೊಳ್ಳುವುದು ಉತ್ತಮ.

(ಪ್ರಶ್ನೆ ಕೇಳಿದವರ ಹೆಸರು ಮತ್ತು ಊರು ಬದಲಿಸಲಾಗಿದೆ)

---

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ