logo
ಕನ್ನಡ ಸುದ್ದಿ  /  ಜೀವನಶೈಲಿ  /  National Brothers Day: ರಾಷ್ಟ್ರೀಯ ಸಹೋದರರ ದಿನದ ಮಹತ್ವವೇನು? ಈ ದಿನ ಅಣ್ಣ-ತಮ್ಮನಿಗೆ ಹೇಗೆಲ್ಲಾ ವಿಶ್‌ ಮಾಡಬಹುದು? ಇಲ್ಲಿದೆ ಐಡಿಯಾ

National Brothers Day: ರಾಷ್ಟ್ರೀಯ ಸಹೋದರರ ದಿನದ ಮಹತ್ವವೇನು? ಈ ದಿನ ಅಣ್ಣ-ತಮ್ಮನಿಗೆ ಹೇಗೆಲ್ಲಾ ವಿಶ್‌ ಮಾಡಬಹುದು? ಇಲ್ಲಿದೆ ಐಡಿಯಾ

Reshma HT Kannada

May 23, 2024 08:05 PM IST

google News

ರಾಷ್ಟ್ರೀಯ ಸಹೋದರರ ದಿನದ ಮಹತ್ವವೇನು?

    • ಪ್ರತಿವರ್ಷ ಮೇ 24ರಂದು ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಅಣ್ಣ, ತಮ್ಮರ ಪ್ರೀತಿ, ಸಹಕಾರ, ತ್ಯಾಗಕ್ಕೆ ಗೌರವ ನೀಡುವ ದಿನ ಇದಾಗಿದೆ. ಈ ದಿನದ ಇತಿಹಾಸ, ಮಹತ್ವ ತಿಳಿಯುವ ಜೊತೆಗೆ ನಿಮ್ಮ ಸಹೋದರರಿಗೆ ಹೇಗೆ ವಿಶ್‌ ಮಾಡಬೇಕು ಎಂಬುದಕ್ಕೆ ಇಲ್ಲಿದೆ ಐಡಿಯಾ.
 ರಾಷ್ಟ್ರೀಯ ಸಹೋದರರ ದಿನದ ಮಹತ್ವವೇನು?
ರಾಷ್ಟ್ರೀಯ ಸಹೋದರರ ದಿನದ ಮಹತ್ವವೇನು?

ಜೀವನದಲ್ಲಿ ನಾವು ಯಾರೊಂದಿಗಾದ್ರೂ ಹೆಚ್ಚು ಕೀಟಲೆ ಮಾಡ್ತೀವಿ, ತೊಂದರೆ ಕೊಡ್ತೀವಿ ಅಂದ್ರೆ ಬಹುಶಃ ಅದು ನಮ್ಮ ಅಣ್ಣ-ತಮ್ಮಂದಿರೊಂದಿಗೆ ಮಾತ್ರ. ಸದಾ ಜಗಳವಾಡುತ್ತಾ, ಬೈದಾಡಿಕೊಳ್ಳುತ್ತಾ ಇರುವ ಈ ಸಂಬಂಧದಲ್ಲಿ ವಿವರಿಸಲಾಗದಷ್ಟು ಪ್ರೀತಿಯೂ ಇರುತ್ತದೆ. ಅಣ್ಣ-ತಮ್ಮಂದಿರು ನಮ್ಮ ಬದುಕಿನ ಸೈನಿಕರಂತೆ ಎಂದರೂ ತಪ್ಪಾಗಕ್ಕಿಲ್ಲ. ನಾವಷ್ಟೇ ಜಗಳ ಮಾಡಿದರೂ ಬೇರೆಯವರ ಎದುರು ನಮ್ಮನ್ನು ಬಿಟ್ಟುಕೊಡದ ನಿಸ್ವಾರ್ಥ ಪ್ರೀತಿ ಅವರದ್ದು. ಇಂತಹ ಪರಿಶುದ್ಧ ಪ್ರೀತಿ ನೀಡುವ ಸಹೋದರರ ಬಾಂಧವ್ಯವನ್ನು ಗೌರವಿಸುವ ದಿನವನ್ನು ರಾಷ್ಟ್ರೀಯ ಸಹೋದರರ ದಿನ ಎಂದು ವಿಶೇಷವಾಗಿ ಆಚರಿಸಲಾಗುತ್ತದೆ.

ಸಹೋದರರು ನಮ್ಮ ಪಾಲಿಗೆ ದೇವರು ನೀಡಿದ ಆಶೀರ್ವಾದ ಎಂದರೂ ತಪ್ಪಾಗಲಿಕ್ಕಿಲ್ಲ. ನಮ್ಮ ಅಪರಾಧದಲ್ಲಿ ಭಾಗಿಯಾಗಿ, ನಮ್ಮ ತಪ್ಪನ್ನೆಲ್ಲಾ ತನ್ನ ತಲೆ ಮೇಲೆ ಹಾಕಿಕೊಂಡು ನಮ್ಮನ್ನು ರಕ್ಷಿಸುವ, ಸದಾ ನಮಗೆ ಬೆಂಬಲ ನೀಡುತ್ತಾ, ನೋವಿಗೆ ಹೆಗಲಾಗುವ ಸಹೋದರರ ಪ್ರೀತಿ ಅವ್ಯಕ್ತ ರೂಪದಲ್ಲಿ ಇರುವುದು ಸುಳ್ಳಲ್ಲ. ಸಹೋದರರ ಜೊತೆ ಕಳೆದ ಕ್ಷಣಗಳು ನಿಮಗೆ ಅದೆಷ್ಟೋ ದಿನಗಳು ಕಳೆದರು ಮಾಸುವುದಿಲ್ಲ. 8 ವರ್ಷದವರಿದ್ದಾಗ ಸಹೋದರರ ಜೊತೆ ಕಳೆದ ನೆನಪುಗಳು 80 ವರ್ಷ ಕಳೆದರೂ ಹಸಿರಾಗಿಯೇ ಇರುತ್ತದೆ. ಇಂತಹ ಅಣ್ಣ-ತಮ್ಮಂದಿರ ಮಧುರ ಬಾಂಧವ್ಯವನ್ನು ಮೆಲುಕು ಹಾಕುವ ಈ ವಿಶೇಷ ದಿನದ ಇತಿಹಾಸ, ಮಹತ್ವ ತಿಳಿಯುವ ಜೊತೆಗೆ ನಿಮ್ಮ ಅಣ್ಣ-ತಮ್ಮಂದಿರಿಗೆ ಡಿಫ್ರೆಂಟ್‌ ಆಗಿ ಹೇಗೆ ವಿಶ್‌ ಮಾಡಬಹುದು ಎಂದು ಮಾಹಿತಿಯೂ ಇಲ್ಲಿದೆ.

ರಾಷ್ಟ್ರೀಯ ಸಹೋದರರ ದಿನ ಯಾವಾಗ, ಈ ದಿನದ ಇತಿಹಾಸವೇನು?

ಪ್ರತಿ ವರ್ಷ ಮೇ ತಿಂಗಳ 24ನೇ ತಾರೀಕಿನಂದು ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಸಹೋದರರ ದಿನ ಶುಕ್ರವಾರ ಬಂದಿದೆ. ಸಹೋದರರ ದಿನದ ಆಚರಣೆ 2005 ರಿಂದ ಆರಂಭವಾಯಿತು ಎಂದು ಹೇಳಲಾಗುತ್ತದೆ. ಈ ದಿನದ ಬಗ್ಗೆ ಇರುವ ಸ್ವಲ್ಪವೇ ಮಾಹಿತಿಯ ಪ್ರಕಾರ ಅಲಬಾಮಾದ ಸಿ. ಡೇನಿಯಲ್‌ ರೋಡ್ಸ್‌ ಅವರು ಸಹೋದರರ ದಿನವನ್ನು ಆಚರಿಸಲು ಕರೆ ನೀಡಿದರು ಎನ್ನಲಾಗುತ್ತದೆ.

ರಾಷ್ಟ್ರೀಯ ಸಹೋದರರ ದಿನದ ಮಹತ್ವ

ಬಾಲ್ಯದಿಂದಲೂ ನಮೆಲ್ಲಾ ಅಪರಾಧ ಕೃತ್ಯಗಳಲ್ಲಿ ಭಾಗಿ, ನಮಗೆ ಬೆಂಬಲದ ಮೂಲವಾಗಿ ಯಾರೂ ನಮ್ಮನ್ನು ಅರ್ಥ ಮಾಡಿಕೊಳ್ಳದೇ ಇದ್ದಾಗ ಅರ್ಥ ಮಾಡಿಕೊಂಡು ಪ್ರೀತಿಸುವ ಸಹೋದರರ ಸಂಬಂಧ ಎಲ್ಲಕ್ಕಿಂತ ಮಿಗಿಲಾದುದು ಎಂದರೆ ತಪ್ಪಲ್ಲ. ಈ ವಿಶೇಷ ದಿನವು ಸಹೋದರರ ಪ್ರೀತಿಯನ್ನು ಗುರುತಿಸುವ ದಿನವಾಗಿದೆ. ಇದು ಕುಟುಂಬ ಸಂಬಂಧಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ, ಬಿಕ್ಕಟ್ಟು ಮತ್ತು ಒಂಟಿತನದ ಸಮಯದಲ್ಲಿ ಸಹೋದರರು ಒದಗಿಸುವ ಸೌಕರ್ಯ ಮತ್ತು ಪರಿಹಾರವನ್ನು ನಮಗೆ ನೆನಪಿಸುತ್ತದೆ.ರಾಷ್ಟ್ರೀಯ ಸಹೋದರರ ದಿನವು ಈ ಸಂಬಂಧಗಳನ್ನು ಪಾಲಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ, ಸಮಯ ಮತ್ತು ದೂರವನ್ನು ಮೀರಿದ ನಿರಂತರ ಸೌಹಾರ್ದತೆಯನ್ನು ಆಚರಿಸುತ್ತದೆ.

ಸಹೋದರರ ದಿನದಂದು ಸಹೋದರರಿಗೆ ಹೀಗೆ ವಿಶ್‌ ಮಾಡಿ

* ನೀನು ಕೇವಲ ನನ್ನ ಸಹೋದರ ಮಾತ್ರವಲ್ಲ, ನನ್ನ ಬೆಸ್ಟ್‌ ಫ್ರೆಂಡ್‌, ನನ್ನ ಆತ್ಮವಿಶ್ವಾಸ. ನಿನ್ನೊಂದಿಗೆ ಕಳೆದ ಪ್ರತಿ ಕ್ಷಣವೂ ನನಗೆ ಅಮೂಲ್ಯ. ನಮ್ಮ ನೆನಪಿನ ಬುತ್ತಿ ಇನ್ನಷ್ಟು ತುಂಬಲಿ. ಸಹೋದರರ ದಿನದ ಶುಭಾಶಯ.

* ನಮ್ಮ ಪ್ರೀತಿಯ ಅಣ್ಣ/ ತಮ್ಮನಿಗೆ ರಾಷ್ಟ್ರೀಯ ಸಹೋದರರ ದಿನದ ಶುಭಾಶಯ. ನನ್ನ ಜೀವನದಲ್ಲಿ ನಿನ್ನ ಆಗಮನ ದೇವರು ನನಗೆ ನೀಡಿದ ಆಶೀರ್ವಾದ. ನಾವು ಒಟ್ಟಿಗೆ ಕಳೆಯುವ ಪ್ರತಿ ಕ್ಷಣವನ್ನು ನಾನು ಪ್ರೀತಿಸುತ್ತೇನೆ.

* ಬಾಲ್ಯದ ಕಿಡಿಗೇಡಿತನದಿಂದ ಹಿಡಿದು ಇಂದಿನ ಕನಸುಗಳವರೆಗೆ ನಿನ್ನೊಂದಿಗೆ ಕಳೆದ ಪ್ರತಿಕ್ಷಣದಲ್ಲೂ ನನ್ನ ಬದುಕಿನ ಖುಷಿ ಇದೆ ಅಣ್ಣ/ ತಮ್ಮ... ನನ್ನೊಲವಿನ ಜೀವಕ್ಕೆ ಸಹೋದರರ ದಿನದ ಶುಭಾಶಯ.

* ಜಗತ್ತಿನ ಬೆಸ್ಟ್‌ ಸಹೋದರ ನೀನಲ್ಲದೇ ಇನ್ನೊಬ್ಬರು ಇರಲು ಸಾಧ್ಯವೇ ಇಲ್ಲ. ನಮ್ಮ ಜೀವನದಲ್ಲಿ ಬಂದಿದ್ದಕ್ಕೆ ನಿನಗೆ ಧನ್ಯವಾದ. ಸಹೋದರರ ದಿನದ ಶುಭಾಶಯ.

* ನನ್ನ ಬದುಕಿನ ಎಲ್ಲಾ ಕ್ಷಣಗಳಲ್ಲಿ ಜೊತೆಯಾಗಿ ನಿಂತ ನಿನ್ನ ಪ್ರೀತಿಗೆ ಅದರ ರೀತಿಗೆ ಸರಿಸಾಟಿ ಇಲ್ಲ. ನಿಮ್ಮ ಸಹಕಾರ, ಪ್ರೀತಿ, ಮಮತೆಗೆ ಕೊನೆ ಎಂಬುದೂ ಇಲ್ಲ. ನಮ್ಮ ಸಂಬಂಧ ಸದಾ ಹೀಗೆ ಶ್ವಾಶತವಾಗಿರಲಿ ಸಹೋದರ. ಹ್ಯಾಪಿ ಬದರ್ಸ್‌ ಡೇ.

* ಜಗಳ ಮಾಡುವಾಗ ನಾನು ಟಾಮ್‌ ನೀನು ಜೆರ್ರಿ, ಆದರೆ ನಮ್ಮಿಬ್ಬರ ಪ್ರೀತಿಗೆ, ನಮ್ಮ ನಡುವಿನ ಬಾಂಧವ್ಯಕ್ಕೆ ಖಂಡಿತ ಉದಾಹರಣೆ ಕೊಡಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಯಾರೂ ನೀಡದ ಅಪರಿಮಿತ ಪ್ರೀತಿ ನೀಡಿದ ಒಲವಿನ ಜೀವಕ್ಕೆ ಸಹೋದರರ ದಿನದ ಶುಭಾಶಯ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ