logo
ಕನ್ನಡ ಸುದ್ದಿ  /  ಜೀವನಶೈಲಿ  /  New Year 2024: ವಿದಾಯದ ಸಮಯ, ಮರೆತೇನೆಂದಾರ ಮರೆಯಲಿ ಹ್ಯಾಂಗ; 2023ರ ನನ್ನ ಮಧುರ ನೆನಪುಗಳಿವು

New Year 2024: ವಿದಾಯದ ಸಮಯ, ಮರೆತೇನೆಂದಾರ ಮರೆಯಲಿ ಹ್ಯಾಂಗ; 2023ರ ನನ್ನ ಮಧುರ ನೆನಪುಗಳಿವು

Rakshitha Sowmya HT Kannada

Dec 31, 2023 08:46 AM IST

google News

2023ರ ಸವಿ ನೆನಪುಗಳು

  • 2023ಕ್ಕೆ ವಿದಾಯ ಹೇಳುವ ಸಮಯ ಬಂದೇ ಬಿಡ್ತು. ಇನ್ನು ಕೆಲವೇ ಗಂಟೆಗಳಲ್ಲಿ 2024ಕ್ಕೆ ಸ್ವಾಗತ ಕೋರುತ್ತಿದ್ದೇವೆ. ಜನರು ತಮ್ಮ ಪ್ರೀತಿ ಪಾತ್ರರಿಗೆ ಈಗಾಗಲೇ ಶುಭಾಶಯ ಕೋರಲು ಆರಂಭಿಸಿದ್ದಾರೆ. ಎಲ್ಲರೂ ನಾಳೆ ಹೊಸ ವರ್ಷ ಆಚರಣೆಯನ್ನು ಸಂಭ್ರಮಿಸಲು ಕಾಯುತ್ತಿದ್ದಾರೆ. ಕೆಲವರು ಹಳೆಯ ಕ್ಯಾಲೆಂಡರ್‌ ತೆಗೆದು ಗೋಡೆಗೆ ಹೊಸ ಕ್ಯಾಲೆಂಡರ್‌ ತೂಗು ಹಾಕಿದ್ದಾರೆ.

  2023ರ ಸವಿ ನೆನಪುಗಳು
2023ರ ಸವಿ ನೆನಪುಗಳು

New Year 2024: ಒಮ್ಮೆ ಹಿಂತಿರುಗಿ ನೋಡಿದರೆ ಪ್ರತಿಯೊಬ್ಬರ ಬದುಕಿನಲ್ಲಿ ಕಳೆದ ವರ್ಷ ಎಷ್ಟೆಲ್ಲಾ ಸಿಹಿ ಕಹಿ ಘಟನೆಗಳು ಗತಿಸಿವೆ. ಬದುಕಿನಲ್ಲೇ ಎಲ್ಲವೂ ಪ್ಲಸ್‌ ಇರಲಿ, ಮೈನಸ್‌ ಬೇಡ ಎನ್ನುವಂತೆ 2023ರಲ್ಲಿ ನಡೆದ ಕೆಲವೊಂದು ಖುಷಿಯ ವಿಚಾರ ಹಾಗೂ ಪ್ರಮುಖ ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

1. 2023 ಶುರುವಾಗಿದ್ದು ಹೀಗೆ

ಕೆಲಸಕ್ಕೆ ಸೇರಿದಾಗಿನಿಂದ ಹೊಸ ವರ್ಷದ ರಾತ್ರಿ ಸ್ನೇಹಿತರೊಂದಿಗೆ ಹೊಸ ವರ್ಷ ಆಚರಿಸಿ ಅಭ್ಯಾಸ. ಆದರೆ ಕಳೆದ ವರ್ಷ ನನಗೆ ಆ ಅವಕಾಶ ಸಿಗಲಿಲ್ಲ. ಎಲ್ಲರನ್ನೂ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎನಿಸಿತು. ಆದರೆ 1 ಜನವರಿ 2023 ನಾನು ಊಹೆಯೇ ಮಾಡಿಲ್ಲದಂತೆ ಬಾಲ್ಯ ಸ್ನೇಹಿತೆ ನನ್ನನ್ನು ಭೇಟಿ ಆದಳು. ಅವಳನ್ನು ನಾನು ನೋಡಿ ಎಷ್ಟೋ ವರ್ಷಗಳಾಗಿತ್ತು. ಕನಿಷ್ಠಪಕ್ಷ ಆಕೆಯ ಫೋನ್‌ ನಂಬರ್‌ ಕೂಡಾ ಇರಲಿಲ್ಲ. ಆದರೆ ಸರ್ಪ್ರೈಸ್‌ ಎಂಬಂತೆ ಅವಳು ಮನೆಗೆ ಬಂದಳು. ಹೊಸ ವರ್ಷದ ಮೊದಲೇ ದಿನವೇ ನನಗೆ ಈ ರೀತಿ ಖುಷಿಯ ಸ್ವಾಗತ ಸಿಕ್ಕಿದ್ದನ್ನು ಎಂದಿಗೂ ಮರೆಯೋಕೆ ಆಗೊಲ್ಲ.

2. ಮೆಚ್ಚಿದ ಸಿನಿಮಾ

ಪ್ರತಿ ವರ್ಷ ಎಷ್ಟೋ ಸಿನಿಮಾಗಳು ಬಿಡುಗಡೆ ಆಗುತ್ತವೆ. ಆದರೆ ನೆನಪಿನಲ್ಲಿ ಉಳಿಯುವುದು ಒಂದೋ ಎರಡೋ. 2023ರಲ್ಲಿ ಬಿಡುಗಡೆ ಆದ ಸಿನಿಮಾಗಳಲ್ಲಿ ನಾನು ಬಹಳ ಮೆಚ್ಚಿದ್ದು ಶಶಾಂಕ್‌ ಸೊಹ್ಗಲ್‌ ನಿರ್ದೇಶನದ ಡೇರ್‌ ಡೆವಿಲ್‌ ಮುಸ್ತಾಫಾ. ಪೂರ್ಣಚಂದ್ರ ತೇಜಸ್ವಿಯವರು ಬರೆದು ಅಬಚೂರಿನ ಪೋಸ್ಟ್‌ ಆಫೀಸ್‌ ಕಥಾ ಸಂಕಲನದಿಂದ ಆರಿಸಿಕೊಳ್ಳಲಾದ ಇದು ನನಗೆ ಬಹಳ ಮನ ಮುಟ್ಟಿದ ಸಿನಿಮಾ. ಹಿಂದೂ ಮುಸ್ಲಿಂ ಭಾವಕ್ಯತೆ ಸಾರುವ ಈ ಸಿನಿಮಾ ನನಗೆ ಇಂದಿಗೂ ಕಾಡುತ್ತಿದೆ.

3. ಇಷ್ಟವಾದ ಬರಹಗಳು

ಪತ್ರಕರ್ತೆಯಾಗಿ ನಾನು ಅನೇಕರನ್ನು ಸಂದರ್ಶನ ಮಾಡಿದ್ದೇನೆ. 2023ರಲ್ಲಿ ಕೂಡಾ ನಾನು ಅನೇಕರನ್ನು ಇಂಟರ್‌ವ್ಯೂ ಮಾಡಿ ಅವರ ಬಗ್ಗೆ ಬರೆದದ್ದು ನನಗೆ ಖುಷಿ ನೀಡಿದ ವಿಚಾರ. ಅದರಲ್ಲೂ ಡಿಗ್ರಿ, ಡಬಲ್‌ ಡಿಗ್ರಿ ಓದಿ ಐಟಿ, ಸಾಫ್ಟ್‌ವೇರ್‌ ಕೆಲಸದ ಕನಸು ಕಾಣದೆ ಸ್ವತ: ಹೋಟೆಲ್‌ ಬಿಸ್ನೆಸ್‌ ಆರಂಭಿಸಿದ ಬೆಂಗಳೂರಿನ ಅಕ್ಕ ತಮ್ಮ, ವಯಸ್ಸು 70 ದಾಟಿದರೂ ಜನರಿಗೆ ರುಚಿ ರುಚಿ ಊಟ ನೀಡುತ್ತಿರುವ ಉಡುಪಿಯ ವೃದ್ದ ದಂಪತಿ, ಜಿಎಫ್‌ಸಿ ಚಿಕನ್‌ ಕೃಷ್ಣಪ್ಪ ಅವರನ್ನು ಮಾತನಾಡಿಸಿದ್ದು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಾಗೇ ನಾನು ಇತ್ತೀಚೆಗೆ ಹೊಸ ಸೆಕ್ಷನ್‌ ಜವಾಬ್ದಾರಿ ವಹಿಸಿಕೊಂಡು ಹೊಸ ವಿಚಾರಗಳನ್ನು ಕಲಿತದ್ದು ಏನೋ ಸಾಧನೆ ಮಾಡಿದಂತೆ ಅನ್ನಿಸುತ್ತಿದೆ.

4. ಇಷ್ಟವಾದ ವ್ಯಕ್ತಿ

ಮನೆ ಕಸ ಗುಡಿಸುವುದು, ಸಾರಿಸೋದು, ಅಡುಗೆ ಮಾಡೋದು ಹೆಣ್ಣು ಮಕ್ಕಳ ಕೆಲಸ ಅಂತಾನೆ ನಾವೆಲ್ರೂ ಅಂದುಕೊಳ್ಳೋದು. ಮದುವೆ ಆಗದ ಸಿಂಗಲ್‌ ಹುಡುಗರೂ ಮಾಡ್ತಾರೆ ಬಿಡಿ. ಕೆಲವೊಮ್ಮೆ ಹುಡುಗಿಯರೇ ಈ ಕೆಲಸ ಮಾಡೋಲ್ಲ. ಆದರೆ ಈ ವಿಚಾರದಲ್ಲಿ ನನಗೆ ಬಹಳ ಇಷ್ಟವಾದ ವ್ಯಕ್ತಿ ನನ್ನ ಒಬ್ಬರು ಸ್ಪೆಷಲ್‌ ಫ್ರೆಂಡ್.‌ ಬಹಳ ದಿನಗಳಿಂದಲೂ ಫೇಸ್‌ಬುಕ್‌ನಲ್ಲಿದ್ದರೂ ಹಾಯ್‌ ಬಾಯ್‌ ಎನ್ನುತ್ತಿದ್ದವರೊಂದಿಗೆ 2023 ರಲ್ಲಿ ಮಾತನಾಡುವ ಅವಕಾಶ ಸಿಕ್ತು. ಅವರಿಗೆ ಇಬ್ಬರು ಅಕ್ಕಂದಿರು. (ಇಬ್ಬರಿಗೂ ಮದುವೆ ಆಗಿದೆ). ತಂದೆ ಕೂಡಾ ನಿಧನರಾಗಿದ್ದಾರೆ. ತಾಯಿಗೆ 2021ರಲ್ಲಿ ಕೋವಿಡ್‌ ಅಟ್ಯಾಕ್‌ ಆದ ನಂತರ ಅವರಿಗೆ ಚಿಕಿತ್ಸೆ ಕೊಡಿಸಲು ಆತ ಪಟ್ಟ ಕಷ್ಟ, ಅಮ್ಮ ಗುಣಮುಖರಾದ ನಂತರ ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ... ಅಂತ ಅಮ್ಮನನ್ನು ಕೂರಿಸಿ ಹೆಣ್ಮಕ್ಕಳಂತೆ ಮನೆ ಕೆಲಸ ಮಾಡೋದು, ಅಡುಗೆ ಮಾಡೋದು, ಅಮ್ಮನಿಗೆ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಕೊಡೋ ವಿಚಾರ ಗೊತ್ತಾದ ನಂತರ ನನಗೆ ಅನ್ನಿಸಿದ್ದು ಪ್ರಪಂಚದಲ್ಲಿ ಈ ರೀತಿ ಹುಡುಗರೂ ಇರ್ತಾರಾ ಅಂತ. ಅವರ ಬಗ್ಗೆ ಹೇಳುತ್ತಾ ಹೋದ್ರೆ ಪುಟಗಳೇ ಸಾಲೋಲ್ಲ. ಆತ ನನಗೆ 2023ರಲ್ಲಿ ಇಷ್ಟವಾದ, ಎಂದೆಂದಿಗೂ ಇಷ್ಟವಾಗುವ ವ್ಯಕ್ತಿ.

5. ಇಷ್ಟವಾದ ಸ್ಥಳ

ಕೆಲಸದ ಜಂಜಾಟದಲ್ಲಿ ಒಮ್ಮೆ ಎಲ್ಲಾದರೂ ಹೊರಗೆ ಹೋಗಿ ಬರೋಣ ಅಂತ ಎಲ್ಲರಿಗೂ ಅನ್ನಿಸೋದು ಸಹಜ. ಸೆಪ್ಟೆಂಬರ್‌ನಲ್ಲಿ ಮನೆ ಮಂದಿಯೆಲ್ಲಾ ಚಾಮರಾಜನಗರದ ಮಹದೇಶ್ವರ ಬೆಟ್ಟಕ್ಕೆ ಹೋಗಿ ಮಾದಪ್ಪನ ದರ್ಶನ ಪಡೆದೆವು. ಅದಕ್ಕೂ ಮುನ್ನ ಬಿಳಿಗಿರಿರಂಗನ ಬೆಟ್ಟಕ್ಕೂ ಹೋಗಿದ್ದೆವು. 2 ದಿನಗಳ ಪ್ರಯಾಣದಲ್ಲಿ ನನಗೆ ಇಷ್ಟವಾಗಿದ್ದು ಸುಮಾರು 8 ಕಿಮೀ ದೂರದ ಕಾನನ. ರಸ್ತೆಯ ಅಕ್ಕಪಕ್ಕದಲ್ಲಿ ಆನೆ, ನವಿಲುಗಳು ಹೊರತುಪಡಿಸಿ ಬೇರೆ ಯಾವ ಪ್ರಾಣಿಗಳೂ ಕಾಣಲಿಲ್ಲ. ಆದರೂ, ಅಷ್ಟು ದೂರದವರೆಗಿನ ಹಸಿರು ಪರಿಸರ ನೋಡಿ, ಮತ್ತೊಮ್ಮೆ ಇಲ್ಲಿಗೆ ಬರಬೇಕು ಎನಿಸಿತು. ಅಲ್ಲಿ ಸೆರೆ ಹಿಡಿದ ಫೋಟೋಗಳನ್ನು ಆಗ್ಗಾಗ್ಗೆ ನೋಡುತ್ತಿರುತ್ತೇನೆ.

6. ಇಷ್ಟವಾದ ಧಾರಾವಾಹಿ

ಕೆಲಸದ ಒತ್ತಡ ಹಾಗೂ ವೈಯಕ್ತಿಕ ಸಮಸ್ಯೆಗಳ ನಡುವೆ ಯಾರಿಗೇ ಆಗಲೀ ಮನರಂಜನೆ ಬೇಕೇ ಬೇಕು. ಅದರಲ್ಲೂ ಮಹಿಳೆಯರಿಗೆ ಬೆಸ್ಟ್‌ ಫ್ರೆಂಡ್‌ನಂತೆ ಜೊತೆಗೆ ಇರೋದು ಧಾರಾವಾಹಿಗಳು. ಒಂದು ದಿನ ಸೀರಿಯಲ್‌ ಎಪಿಸೋಡ್‌ ನೋಡ್ಲಿಲ್ಲ ಅಂದ್ರೆ ಏನೋ ಕಳೆದುಕೊಂಡಂತೆ ಆಗೋದು ಪಕ್ಕಾ. ಹಾಗೇ ನನಗೆ ಬಹಳ ಇಷ್ಟವಾದದ್ದು ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮಿ ಧಾರಾವಾಹಿ. ಇದು ಆರಂಭವಾಗಿದ್ದು 2022 ಅಂತ್ಯದಲ್ಲಾದರೂ ನಾನು ನೋಡಲು ಆರಂಭಿಸಿದ್ದು 2023 ಜನವರಿಯಿಂದ. ಸಮಯ ಮಾಡಿಕೊಂಡು ಹಿಂದಿನ ಎಪಿಸೋಡ್‌ಗಳನ್ನೂ ನೋಡಿ ಮುಗಿಸಿದೆ. ಅತ್ತೆ ಸೊಸೆ ಬಾಂಧವ್ಯವನ್ನು ಸೀರಿಯಲ್‌ನಲ್ಲಿ, ನಿರ್ದೇಶಕರು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ.

7. ಹೊಸ ಸ್ಥಳ, ಹೊಸ ಅನುಭವ

ಕೆಲವೊಂದು ಕಾರಣಗಳಿಂದ 4 ತಿಂಗಳ ಕಾಲ ನಾನು ಮನೆಯಿಂದ ದೂರ ಉಳಿದು ಹಾಸ್ಟೆಲ್‌ನಲ್ಲಿರಬೇಕಾಗಿ ಬಂತು. ಹೊಸ ಸ್ಥಳ, ಹೊಸ ಅನುಭವ, ಹೊಸ ವ್ಯಕ್ತಿಗಳು, ಆ ಸ್ಥಳದಲ್ಲಿ ನನ್ನ ಓಡಾಟ, ಎಂದಿಗೂ ಹಾಸ್ಟೆಲ್‌ನಲ್ಲಿ ಉಳಿಯದ ನನಗೆ ಇದು ನಿಜಕ್ಕೂ ನನಗೆ ಯಾವುದೋ ಹೊಸ ಲೋಕದಲ್ಲಿ ಇದ್ದೇನೆ ಅನಿಸಿತು. ಇದ್ದಿದ್ದು ಕೆಲವೇ ಕೆಲವು ದಿನಗಳಾದರೂ ಆ ಸ್ಥಳ ಇಂದಿಗೂ ಪದೇ ಪದೇ ನೆನಪಾಗುತ್ತಿದೆ.

8. ಇಷ್ಟವಾದ ತಿಂಡಿ

ತಿಂಡಿಪೋತರಿಗೆ ಎಲ್ಲಾ ತಿಂಡಿಗಳೂ ಇಷ್ಟವೇ. ಹಾಗೇ ಹೊಸ ಹೊಸ ರುಚಿ ಸವಿಯೋದು ಅಂದ್ರೆ ಯಾರು ಬೇಡ ಅಂತಾರೆ. ಬಹಳ ವರ್ಷಗಳಿಂದ ನನಗೆ ಮೊಮೋಸ್‌ ತಿನ್ನಬೇಕು ಎಂಬ ಆಸೆ ಇತ್ತು. ಆದರೆ ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ. 2023 ನವೆಂಬರ್‌ನಲ್ಲಿ ಮೊಮೊಸ್‌ ರುಚಿ ಮಾಡೇ ಬಿಟ್ಟೆ. ಅಬ್ಬಾ ಏನ್‌ ರುಚಿ ಅಂತೀರಾ ಚೀಸ್‌ ಮೊಮೊಸ್‌. ಅಲ್ಲಿಂದ ಈಚೆಗೆ ಮೊಮೋಸನ್ನು 5-6 ಬಾರಿ ತಿಂದಿದ್ದೇನೆ.

9. ಹೊಸ ಕಲಿಕೆ

2023ರಲ್ಲಿ ನಾನು ಕಾರ್‌ ಡ್ರೈವಿಂಗ್‌ ಕಲಿತದ್ದು ನನಗೆ ದೊರೆತ ಸುವರ್ಣಾವಕಾಶ ಎನ್ನಬಹುದು. ಕಾರ್‌ ಡ್ರೈವಿಂಗ್‌ ಕಲಿಯಬೇಕು ಅನ್ನೋದು ಬಹಳ ವರ್ಷಗಳ ಕನಸು, ಆದರೆ ಅದು ಸಾಧ್ಯವಾಗಿರಲಿಲ್ಲ. ನವೆಂಬರ್‌ನಲ್ಲಿ ಡ್ರೈವಿಂಗ್‌ ಸ್ಕೂಲ್‌ಗೆ ಹೋಗಿ ಕಾರ್‌ ಡ್ರೈವಿಂಗ್‌ ಕಲಿತೆ. ಇನ್ನು ಡಿಲ್‌ ಪಡೆಯೋದೊಂದೇ ಬಾಕಿ.

10. ಇಷ್ಟವಾದ ಸುಭಾಷಿತ

ಹಿರಿಯರು ಹೇಳಿದ ನುಡಿಮುತ್ತುಗಳು, ಸುಭಾಷಿತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಮಾತುಗಳು ಎಲ್ಲರಿಗೂ ಅನ್ವಯವಾಗುತ್ತದೆ. ಮನುಷ್ಯನ ಜೀವನದಲ್ಲಿ ಬಯಸಿದ್ದೆಲ್ಲವೂ ಸಿಗುವುದಿಲ್ಲ. ಆದರೂ ಮನುಷ್ಯ ಆಸೆಯ ಬೆನ್ನೇರಿ ಅಲೆಯುತ್ತಾನೆ. ಇದಕ್ಕೆ ಸಂಬಂಧಿಸದಂತೆ ನಡೆದಾಡುವ ದೇವರು, ಡಾ. ಶಿವಕುಮಾರ ಸ್ವಾಮೀಜಿಯವರು ಹೇಳಿರುವ ಬಯಸಿದ್ದೆಲ್ಲವೂ ಸಿಗುವಂತಿದ್ದರೆ ಬಯಕೆಗೆ ಅರ್ಥವೇನು? ಅನ್ನಿಸಿದ್ದೆಲ್ಲವನ್ನೂ ಆಡುವಂತಿದ್ದರೆ ಮೌನದ ಮಹತ್ವವೇನು? ಎನ್ನುವ ಸುಭಾಷಿತ ಬಹಳ ಇಷ್ಟ.

ಎಲ್ಲರಿಗೂ ಒಳಿತಾಗಲಿ, ನಿಮ್ಮ ಕನಸೆಲ್ಲವೂ ನನಸಾಗಲಿ, ಹೊಸ ವರ್ಷದ ಶುಭಾಶಯಗಳು.

-ರಕ್ಷಿತಾ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ