Cricket: ಕಾಡುವ ನೆನಪುಗಳು.. 2023ರ ನೆನಪಿನ ಅಂಗಳದಲ್ಲಿ ಕ್ರಿಕೆಟ್ ಲೋಕದ ಹೆಗ್ಗುರುತು..!
Dec 31, 2023 06:48 AM IST
ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರಾಕ್ರಮ
- Happy New Year: 2023 ಮುಗಿದಿದೆ.. ಅಂದರೆ ಮತ್ತೊಂದು ವರ್ಷದ ಕ್ಯಾಲೆಂಡರ್ ಬದಲಾಗುತ್ತಿದೆ ಅಷ್ಟೇ. ಆದರೆ ಕ್ರಿಕೆಟ್ ಲೋಕದ ಪಾಲಿಗೆ 2023 ಕೇವಲ ನೆನಪಲ್ಲ, ಒಂದು ಹೆಗ್ಗುರುತು. ಇಲ್ಲಿ ವರ್ಷದುದ್ದಕ್ಕೂ ಸಂಭ್ರಮಿಸಿದ್ದ ಕ್ಷಣಗಳು, ಮೆರೆದಾಡಿದ್ದ ನೆನಪುಗಳು, ಇತಿಹಾಸದ ಪುಟ ಸೇರಿದ ದಾಖಲೆಗಳು ತುಂಬಿವೆ. ಇಂತಹ ಎಂದೂ ಮರೆಯಲಾಗದ ಅನುಪಮ ನೆನಪುಗಳ ಮೆಲುಕು ಹಾಕೋಣ..
ಕ್ರಿಕೆಟ್ ಇಷ್ಟಪಡುವವರ ಪಾಲಿಗೆ 2023 ಹಲವು ಅಮೂಲ್ಯ ನೆನಪುಗಳನ್ನು ಉಳಿಸಿದೆ. ಅಂಥ ನೆನಪುಗಳ ಪೈಕಿಗೆ ತಮಗೆ ಇಷ್ಟವಾದ 9 ನೆನಪುಗಳನ್ನು ಇಲ್ಲಿ ಹಂಚಿಕೊಳ್ಳುವೆ.
1) ಸ್ಮರಣೀಯ ವಿಶ್ವಕಪ್: 2023ರ ವಿಶ್ವಕಪ್ ಟೂರ್ನಿ ಭಾರತೀಯರ ಪಾಲಿಗೆ ಸ್ಮರಣೀಯವಾಗಿದೆ. ಇಲ್ಲಿ ಭಾರತಕ್ಕೆ ಟ್ರೋಫಿಗೆಲ್ಲಲು ಸಾಧ್ಯವಾಗದೇ ಇರಬಹುದು. ಆದರೆ ಆತಿಥೇಯ ತಂಡವಾಗಿದ್ದರೂ, ತಮ್ಮ ಮೇಲಿದ್ದ ಬೆಟ್ಟದಂತಹ ಒತ್ತಡಗಳನ್ನ ಮೆಟ್ಟಿ ನಿಂತು ಅಜೇಯವಾಗಿ ಫೈನಲ್ ಗೆ ಎಂಟ್ರಿಕೊಡೋದು ಸಾಮಾನ್ಯ ಸಂಗತಿಯಲ್ಲ. ಜೊತೆಗೆ ಭಾರತೀಯ ಆಟಗಾರರು ಇಲ್ಲಿ ದಾಖಲೆಗಳ ಪರ್ವವನ್ನೇ ನಿರ್ಮಿಸಿದರು. ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ್ರೆ, ಮೊಹಮ್ಮದ್ ಶಮಿ, ರೋಹಿತ್ ಶರ್ಮಾ ಸೇರಿದಂತೆ ಇತರರೂ ತಮ್ಮ ತಾಕತ್ತು ತೋರಿಸಿದರು. ಇನ್ನು ಆಫ್ಘಾನಿಸ್ತಾನದ ವಿರುದ್ಧದ ನಿರ್ಣಾಯಕ ಪಂದ್ಯದ ಚೇಸಿಂಗ್ ನಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ ಗಳಿಸಿದ ಅಜೇಯ ದ್ವಿಶಕ ಈ ಟೂರ್ನಿಯ ಹೈಲೈಟ್.
2) ವಿರಾಟ್ ಕೊಹ್ಲಿಯ ವಿರಾಟ್ ರೂಪ: 2023ರ ವಿಶ್ವಕಪ್ ಟೂರ್ನಿ ಸಾಕ್ಷಿಯಾಗಿದ್ದು ವಿರಾಟ್ ಕೊಹ್ಲಿಯ ವಿರಾಟ್ ರೂಪಕ್ಕೆ. ಇಲ್ಲಿ ಕೊಹ್ಲಿ ತಂಡಕ್ಕಾಗಿ ಹೋರಾಡುವ ಜೊತೆಗೆ ಏಕದಿನ ಕ್ರಿಕೆಟ್ ಚರಿತ್ರೆಯಲ್ಲೇ ಅಪೂರ್ವ ದಾಖಲೆ ಬರೆದರು. ಈ ಟೂರ್ನಿಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಅತಿಹೆಚ್ಚು ಶತಕಗಳ ದಾಖಲೆ ಮುರಿದ ವಿರಾಟ್ ಹೊಸ ಮೈಲುಗಲ್ಲು ನೆಟ್ಟರು. ಸಚಿನ್ ತೆಂಡೂಲ್ಕರ್ 463 ಪಂದ್ಯಗಳನ್ನಾಡಿ 49 ಶತಕಗಳನ್ನ ಬಾರಿಸಿದ್ದರೆ, ವಿರಾಟ್ ಕೇವಲ 292 ಮ್ಯಾಚ್ ನಿಂದ ಈ ದಾಖಲೆ ಬರೆದಿದ್ದು ಇತಿಹಾಸ. ಜಗತ್ತಿನ ಪ್ರಸ್ತುತ ಆಟಗಾರರನ್ನ ನೋಡಿದರೆ ವಿರಾಟ್ ಕೊಹ್ಲಿಯ ಈ ದಾಖಲೆಯನ್ನ ಮುಟ್ಟುವುದು ಬಹುತೇಕ ಕನಸೇ ಸರಿ.
3) ಒಲಿಂಪಿಕ್‌ಗೆ ಕ್ರಿಕೆಟ್: ಕೆಲವೇ ರಾಷ್ಟ್ರಗಳು ಕ್ರಿಕೆಟ್ ಆಡಿದರೂ ಇದರ ಜನಪ್ರಿಯತೆಗೇನೂ ಕಮ್ಮಿ ಇಲ್ಲ. ಆದರೆ ವಿಶ್ವಕಪ್ ಆಡಿದ್ರೂ, ಐಪಿಎಲ್ ಆಡಿ ಮಿಂಚಿದ್ರೂ ಒಲಿಂಪಿಕ್ ಕೂಟ ಅನ್ನೋ ಕನಸು ಕಾಡುತ್ತಲೇ ಇತ್ತು. ಈ ಜಾಗತಿಕ ಕ್ರೀಡಾಕೂಟದಲ್ಲಿ ಕ್ರಿಕೆಟನ್ನೂ ಸೇರಿಸಬೇಕು, ಅವಕಾಶ ಕೊಡಬೇಕು ಎಂಬ ಕೂಗು ಮತ್ತು ಪ್ರಯತ್ನ ಸತತವಾಗಿ ಇತ್ತು. ಕೊನೆಗೂ ಇದಕ್ಕೆ 2023ರಲ್ಲಿ ಕಾಲ ಕೂಡಿ ಬಂದಿದೆ.128ವರ್ಷಗಳ ಇತಿಹಾಸವಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕೂಡ ಸ್ಥಾನ ಪಡೆದಿದೆ. ಲಾಸ್ ಏಂಜಲೀಸ್ ನಲ್ಲಿ 2028ರಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕೂಡ ಭಾಗವಾಗಲಿದೆ.
4) ದುಡ್ಟಿನ ಜಾತ್ರೆಯಲ್ಲಿ ಹೊಸ ದಾಖಲೆ: ಇಂಡಿಯನ್ ಪ್ರಿಮಿಯರ್ ಲೀಗ್ ಅಂದ್ರೆ ಚಿನ್ನದ ಮೊಟ್ಟೆಯನ್ನಿಡುವ ಕೋಳಿ. ಆಗತಾನೆ ಅಂಬೆಗಾಲಿಡುತ್ತಿರುವ ಕ್ರಿಕೆಟಿಗನಿಂದ ಹಿಡಿದು, ಬೆನ್ನು ಬಾಗಿದ ಆಟಗಾರನಿಗೂ ಇಲ್ಲಿ ಆಡಬೇಕೆನ್ನುವ ತುಮುಲ. ಯಾಕಂದರೆ ಇಂಡಿಯನ್ ಪ್ರಿಮಿಯರ್ ಲೀಗ್ ಹೊಂದಿರುವ ಕ್ರೆಡಿಬಲಿಟಿ ಅಂತದ್ದು. ಇಂತಹ ಟೂರ್ನಿಯಲ್ಲಿ ಯಾವ ಆಟಗಾರ ಎಷ್ಟು ಮೊತ್ತಕ್ಕೆ ಸೇಲ್ ಆಗ್ತಾನೆ ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇಡೀ ಜಗತ್ತು ಕಾದಿರುತ್ತೆ. ಹೀಗಿರುವಾಗ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಈ ಬಾರಿ 24.75ಕೋಟಿ ರೂಪಾಯಿಗೆ ಕೆಕೆಆರ್ ತಂಡಕ್ಕೆ ಮಾರಾಟವಾಗಿವ ಮೂಲಕ ಅಚ್ಚರಿ ಮೂಡಿಸಿದರು.
5) ಮಹಿಳೆಯರ ಪ್ರೀಮಿಯರ್ ಲೀಗ್: ಐಪಿಎಲ್ ನಲ್ಲಿ ಜಂಟ್ಸ್ ಗೆ ಮಾತ್ರ ಅವಕಾಶ ನೀಡಲಾಗ್ತಿದೆ.. ಮಹಿಳಾ ಆಟಗಾರರಿಗೆ ಅವಕಾಶವನ್ನೇ ನೀಡುತ್ತಿಲ್ಲ ಎಂಬ ಕೊರಗು ಕಾಡುತ್ತಲೇ ಇತ್ತು. ಆದರೆ 2023ರಲ್ಲಿ ಈ ಕೊರತೆ ನೀಗಿದೆ. ಈ ವರ್ಷದಿಂದ WPL ಕೂಡ ಶುರುವಾಗಿದ್ದು, 5 ತಂಡಗಳು ಈ ಲೀಗ್‌ನಲ್ಲಿ ಭಾಗವಹಿಸಿವೆ. ಮೊದಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಸವಿಸವಿ ನೆನಪು.
6) ವಾರ್ನರ್ ವಿದಾಯ: ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಕಂಡ ವರ್ಣರಂಜಿತ ಆಟಗಾರ ಡೇವಿಡ್ ವಾರ್ನರ್ 2023ರಲ್ಲಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಆಸೀಸ್ ಪಡೆಯ ಈ ಪ್ರತಿಭಾನ್ವಿತ ಆಟಗಾರ 111 ಟೆಸ್ಟ್ ಹಾಗೂ 161 ಏಕದಿನ ಪಂದ್ಯಗಳಲ್ಲಿ ಆಡಿದ ಹೆಗ್ಗಳಿಕೆ ಹೊಂದಿದ್ದಾರೆ. ಪಾಕಿಸ್ತಾನ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಲಿರುವ ವಾರ್ನರ್ ಸರಣಿಗೂ ಮೊದಲೇ ನಿವೃತ್ತಿ ಘೋಷಿಸಿದ್ದರು. ಕೇವಲ ಬ್ಯಾಟಿಂಗ್ ನಿಂದ ಮಾತ್ರವಲ್ಲ ತಮ್ಮ ಅಭಿನಯ ಚಾತುರ್ಯ ಹಾಗೂ ಗೆಳೆತನದ ವ್ಯಕ್ತಿತ್ವದಿಂದಲೂ ಗಮನ ಸೆಳೆದಿದ್ದವರು ಡೇವಿಡ್ ವಾರ್ನರ್.
7) ಸ್ಟುವರ್ಟ್ ಬ್ರಾಡ್ ನಿವೃತ್ತಿ: ಸ್ಟುವರ್ಟ್ ಬ್ರಾಡ್ ಅಂದಾಕ್ಷಣ ನಮಗೆ ನೆನಪಾಗೋದು ಚೊಚ್ಚಲ ಟಿ20 ಟೂರ್ನಿಯಲ್ಲಿ ಯುವರಾಜ್ ಸಿಂಗ್ 6 ಬಾಲಿಗೆ 6 ಸಿಕ್ಸರ್ ಚಚ್ಚಿದ ಕ್ಷಣ. ಆ ರೀತಿ ಕ್ರಿಕೆಟ್ ಲೋಕಕ್ಕೆ ಪರಿಚಯವಾದ ಸ್ಟುವರ್ಟ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವ ಹೊತ್ತಿನಲ್ಲಿ ಒಬ್ಬ ಬಾಂಪಿಯನ್ ಆಗಿ ಬೆಳೆದಿದ್ದು ಇತಿಹಾಸ. ಇಂಗ್ಲೆಂಡ್ ಪರ ಒಬ್ಬ ವೇಗದ ಬೌಲರ್ ಆಗಿ 167 ಟೆಸ್ಟ್ ಮ್ಯಾಚ್ ಗಳನ್ನಾಡಿ 604 ವಿಕೆಟ್ ಪಡೆದಿರುವ ಬ್ರಾಡ್ ಒಬ್ಬ ಲೆಜೆಂಡ್ ಎಂಬುದರಲ್ಲಿ ಅನುಮಾನವಿಲ್ಲ. ಇಂತಹ ಬ್ರಾಡ್ ಈ ವರ್ಷವೇ ನಿವೃತ್ತಿಯಾಗಿದ್ದು, ಅದ್ಬುತ ಸಾಧನೆಗಳೊಂದಿಗೆ ತಮ್ಮ ನೆನಪುಗಳನ್ನ ಕೊಡುಗೆಯಾಗಿ ನೀಡಿದ್ದಾರೆ.
8) ಗುಡ್ ಬೈ ಹೇಳಿದವರು 15 ಮಂದಿ: 2023ರಲ್ಲಿ ಡೇವಿಡ್ ವಾರ್ನರ್, ಸ್ಟುವರ್ಟ್ ಬ್ರಾಡ್ ಜೊತೆ ಒಟ್ಟು 15ಕ್ಕೂ ಹೆಚ್ಚು ಮಂದಿ ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ್ದಾರೆ. ಅದರಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕ್ವಿಂಟನ್ ಡಿಕಾಕ್ ಮತ್ತು ವೆಸ್ಟ್ ಇಂಡಿಸ್ ನ ಮಿಸ್ಟ್ರಿ ಸ್ಪಿನ್ನರ್ ಸುನೀಲ್ ನರೈನ್ ಕೂಡ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್ ನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಅಲೆಕ್ಸ್ ಹೇಲ್ಸ್ ಕೂಡ ವಿದಾಯ ಹೇಳುವುದರೊಂದಿಗೆ 2023 ಹಲವು ಕ್ರಿಕೆಟಿಗರನ್ನ ಮಿಸ್ ಮಾಡಿಕೊಳ್ಳುತ್ತಿದೆ.
9) ದಾಂಪತ್ಯದ ಇನ್ನಿಂಗ್ಸ್ ಆರಂಭ: ಟೀಂಇಂಡಿಯಾದ ಸ್ಟಾರ್ ಪ್ಲೇಯರ್ ಕೆಎಲ್ ರಾಹುಲ್ ಈ ವರ್ಷ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದು ಅವಿಸ್ಮರಣೀಯ ನೆನಪು. ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿಯವರ ಪುತ್ರಿ ಆಥಿಯಾ ಶೆಟ್ಟಿಯವರನ್ನ ವರಿಸಿದ ಕೆಎಲ್ ರಾಹುಲ್, ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಜೊತೆಗೆ ಟೀಂಇಂಡಿಯಾದ ಆಲ್ ರೌಂಡರ್ ಅಕ್ಷರ್ ಪಟೇಲ್, ಶಾರ್ದುಲ್ ಠಾಕೂರ್, ಪ್ರಸಿದ್ಧ್ ಕೃಷ್ಣ, ನವದೀಪ್ ಸೈನಿ, ತುಷಾರ್ ದೇಶಪಾಂಡೆ, ಋತುರಾಜ್ ಗಾಯಕ್ವಾಡ್, ಮುಕೇಶ್ ಕುಮಾರ್ ಕೂಡ 2023ರಲ್ಲೇ ಮದುವೆಯಾಗಿದ್ದು ವಿಶೇಷ.
ಹೀಗೆ 2023 ಕಳೆದು ಹೊಸ ಕ್ಯಾಲೆಂಡರ್ ಬಂದರೂ ಇಲ್ಲಿ ನೆನಪುಗಳ ಜಾತ್ರೆಗೇನೂ ಕಮ್ಮಿ ಇಲ್ಲ. ಅದರಲ್ಲೂ ಕ್ರಿಕೆಟ್ ಲೋಕ ಮರೆಯಲಾಗದ ಅಚ್ಚಳಿದ ನೆನಪುಗಳನ್ನ ಈ ವರ್ಷ ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಮುಂಬರುವ 2024 ಕೂಡ ಕ್ರಿಕೆಟ್ ದುನಿಯಾಕ್ಕೆ ಮಹತ್ವದ್ದಾಗಿದ್ದು, ಸವಿನೆನಪುಗಳೇ ತುಂಬಿರಲಿ ಎಂದು ಬಯಸೋಣ.
ಬರಹ: ಪ್ರಶಾಂತ್ ಬಿ.ಆರ್