ಸುದ್ದಿ ಮಾಧ್ಯಮಗಳೇ ಬದಲಾಗಿ, ಬ್ರೇಕಿಂಗ್ ನ್ಯೂಸ್ ಬದಲು ಬಾಂಡಿಂಗ್ ನ್ಯೂಸ್ ಕೊಡಿ: ಡಾ ಮೋಹನ್ ತಲಕಾಲಕೊಪ್ಪ ಬರಹ
Sep 28, 2024 09:12 PM IST
ಸುದ್ದಿ ಮಾಧ್ಯಮಗಳೇ ದಯವಿಟ್ಟು ಬದಲಾಗಿ - ಡಾ ಮೋಹನ್ ತಲಕಾಲಕೊಪ್ಪ ಬರಹ
ಸುದ್ದಿ ಮಾಧ್ಯಮಗಳು ಪ್ರಸ್ತುತ ಪಡಿಸಬೇಕಾದ ವಿಷಯಗಳ ಕುರಿತು ಎಚ್ಚರಿಸುವ ರೀತಿಯಲ್ಲಿ ಅಡಿಕೆ ಪತ್ರಿಕೆ ಅಂಕಣಕಾರರೂ ಆಗಿರುವ ಪುತ್ತೂರಿನ ಗೇರು ಸಂಶೋಧನಾ ಮಂಡಳಿಯ ವಿಜ್ಞಾನಿ ಡಾ ಮೋಹನ್ ತಲಕಾಲಕೊಪ್ಪ ಅವರು ಸುದೀರ್ಘ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಆ ವಿವರ ಇಲ್ಲಿದೆ.
ಇಲ್ಲ!! ಬಹಳ ತೀವ್ರವಾಗಿ ಅನಿಸುತ್ತಿದೆ. ಕರ್ನಾಟಕದ ಎಲ್ಲಾ ಸುದ್ದಿ ಮಾಧ್ಯಮಗಳಿಗೆ ಅದರಲ್ಲೂ ಟಿವಿ ಸುದ್ದಿ ಮಾಧ್ಯಮಗಳಿಗೆ ಸರಿಯಾದ ಪ್ರಹಾರ ಕೊಡದಿದ್ದರೆ ಉಳಿಗಾಲ ಇಲ್ಲ! ಅದಕ್ಕಾಗಿ ಈ ಬರಹ.
ನಾನು ಈ ರೀತಿ ಬರೆಯುವುದರಿಂದ ಏನೋ ಅಪೂರ್ವವಾದ ಬದಲಾವಣೆ ರಾತ್ರಿ ಬೆಳಗಾಗುವುದರೊಳಗೆ ಘಟಿಸಿಬಿಡುತ್ತದೆ ಎಂಬ ಹುಂಬ ಭರವಸೆ ಖಂಡಿತಾ ನನಗಿಲ್ಲ. ಆದರೆ ಸಾತ್ವಿಕ ಸಿಟ್ಟನ್ನು ಹೊರಹಾಕಿದ ನಂತರ ಮೂಡುವ ನೆಮ್ಮದಿ ಇದೆ. ಇನ್ನೂ ಉಳಿದಿರುವ ಕರ್ನಾಟಕದ ಸಹೃದಯರನೇಕರು ನನ್ನ ಅಭಿಪ್ರಾಯವನ್ನು ಒಪ್ಪುತ್ತಾರೆ ಎಂದುಕೊಂಡಿದ್ದೇನೆ.
ಋಣಾತ್ಮಕ ಸುದ್ದಿಗಳ ಸರಮಾಲೆ
ಮೊದಲೆಲ್ಲಾ ನಾನು ಅಪರೂಪಕ್ಕೆ ಟೀವಿ ನೋಡುತ್ತಿದ್ದೆ. ಇತ್ತೀಚೆಗೆ ಸುದ್ದಿವಾಹಿನಿಗಳನ್ನು ರಾತ್ರಿ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದೆ. ಮೊದಲು ಪಬ್ಲಿಕ್ ಟಿವಿಯ ನ್ಯೂಸ್ ನೋಡುತ್ತಿದ್ದೆ. ನಿಧಾನಕ್ಕೆ ರಂಗನಾಥ್ ಅವರ ಗಂಭೀರ ಸಂಗತಿಯನ್ನು ಹಾಸ್ಯಾಸ್ಪದ ಮಾಡಿ, ಘನತೆಯಿಲ್ಲದ ಭಾಷೆಯಲ್ಲಿ ಬೈಯುವ ಮಾದರಿ ಬೋರ್ ಹೊಡೆಸಲು ಆರಂಭಿಸಿತು. ಸುವರ್ಣ ನ್ಯೂಸಿಗೆ ಬದಲಾದೆ. ಹಲವು ದಿನ ನೋಡಿದ ಮೇಲೆ ಅನಿಸತೊಡಗಿತು. ಅಜಿತ್ ಹನುಮಕ್ಕನವರ್ ಕೂಡಾ ನೇರ, ದಿಟ್ಟ, ನಿರಂತರ ಹೆಸರಿನಲ್ಲಿ ಎಲ್ಲಾ ಚಾನೆಲ್ ಗಳ ಹಾಗೆ ಬಹುತೇಕ ಕೆಟ್ಟ ಸುದ್ದಿಗಳನ್ನೇ ಹೈಲೈಟ್ ಮಾಡುತ್ತಿದ್ದಾರೆ ಅಂತ. ಇನ್ನು ರಿಪಬ್ಲಿಕ್ ಕನ್ನಡ ಟಿವಿಯ ಜಯಪ್ರಕಾಶ್ ಶೆಟ್ಟಿಯವರು ಬಿಡಿ - ತಾವು ಅರ್ನಬ್ ಗೋಸ್ವಾಮಿಯ ಕನ್ನಡ ವರ್ಷನ್ ಅಂತ ಅಂದುಕೊಂಡು ಸುದ್ದಿ ಕೊಡ್ತಾರಾ ಅಂತ ! ಇನ್ನು ಉಳಿದ ಚಾನೆಲ್ಲುಗಳ (ಟಿವಿ ೯, ಟಿವಿ ೫, ನ್ಯೂಸ್ ಫಸ್ಟ್, ವಿಸ್ತಾರ ಇತ್ಯಾದಿ) ಬಗ್ಗೆ ಹೇಳದಿದ್ದರೆ ಒಳಿತು!
ಕೆಟ್ಟ ಹಾಗೂ ರೊಚ್ಚಿಗೇಳಿಸುವ ಸುದ್ದಿಗಳೇ ಮೊದಲ ಆಯ್ಕ
ಈ ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳ ಆದ್ಯತೆ ಸುದ್ದಿಯಲ್ಲ. ಧನಾತ್ಮಕ ಸುದ್ದಿಯಂತೂ ಮೊದಲೇ ಅಲ್ಲ. ಕೆಟ್ಟ ಸುದ್ದಿಗಳೇ ಇವರ ಮೊದಲ ಆಯ್ಕೆ. ದಿನದ ೨೪ ಘಂಟೆಯಲ್ಲಿ ಯಾವ ಹೊತ್ತಿನಲ್ಲಿ ಈ ಚಾನೆಲ್ಲುಗಳನ್ನು ನೋಡಿ- ಅದೇ ಕೆಟ್ಟ ಸುದ್ದಿಗಳ ಸರಮಾಲೆ. ಇತ್ತೀಚೆಗೆಂತೂ ಮುಡಾ ಹಗರಣ, ದರ್ಶನ್ ಪುರಾಣ, ಮುನಿರತ್ನರ ಕೇಸು, ಇಸ್ರೇಲ್ ದಾಳಿ, ದಿನಾ ಒಂದಲ್ಲಾ ಒಂದು ರಾಜಕೀಯದ ಕೆಸೆರೆರಚಾಟ ಇವಿಷ್ಟಿಲ್ಲದೇ ಏನೂ ಇಲ್ಲ. ಪ್ರತೀ ದಿನ ರಾತ್ರಿ ಸುವರ್ಣ ನ್ಯೂಸ್ ಶುರುವಾಗ ಮೊದಲು ಕರ್ನಾಟಕದ ಎಕ್ಸ್ ಪ್ರೆಸ್ ಸುದ್ದಿಗಳು ಅಂತ ಬರುತ್ತದೆ. ಇದರಲ್ಲಿ ಗಮನಿಸಿ - ನೂರಕ್ಕೆ 99 ಕೆಟ್ಟ ಸುದ್ದಿಗಳೇ. ಅಲ್ಲಿ ಅತ್ಯಾಚಾರ, ಇಲ್ಲಿ ಕೊಲೆ, ಇಲ್ಲಿ ಅಪಘಾತ ಹೀಗೆ. ಒಂದಷ್ಟು ಸೆಲೆಬ್ರಿಟಿಗಳ ಮದುವೆ, ರಾಜಕಾರಣಿಗಳ ಹಗರಣ, ಚಿತ್ರರಂಗದ ಕಾಸ್ಟಿಂಗ್ ಕೌಚ್ ಇವೇ ಕಥೆಗಳು ಈ ಚಾನೆಲ್ಲುಗಳ ಸಾಮಗ್ರಿ. ಇದರಿಂದ ಜನಸಾಮಾನ್ಯನಿಗೇನು ಪ್ರಯೋಜನ? ಆ ಹೊತ್ತಿಗೆ, ತಕ್ಷಣದ ವಿಕೃತ ಕುತೂಹಲಕ್ಕೆ ಸಾಮಗ್ರಿ ದೊರೆಯಬಹುದಾದರೂ ನಿಜವಾದ ಉಪಯುಕ್ತತೆ ಖಂಡಿತಾ ಇಲ್ಲ. ರಾಷ್ಟ್ರೀಯ ಮಾಧ್ಯಮಗಳದೂ (ರಿಪಬ್ಲಿಕ್, ಸಿಎನ್ಎನ್, ಇಂಡಿಯಾ ಟುಡೇ, ಎನ್ ಡಿ ಟೀವಿ ಇತ್ಯಾದಿ) ಇದೇ ಚಾಳಿ. ನಮ್ಮ ಮೆದುಳನ್ನು ಅಡವಿಟ್ಟುಕೊಂಡೇ ಈ ಚಾನೆಲ್ಲುಗಳನ್ನು ನೋಡುವ ಪರಿಸ್ಥಿತಿ. ಈಗೀಗ ನಾನು ಟಿವಿಯನ್ನೇ ನೋಡದಿರುವ ಹಂತ ತಲುಪಿಬಿಟ್ಟಿದ್ದೇನೆ!! ಹಲವರು ಈ ನಿರ್ಧಾರಕ್ಕೆ ಬಂದಿರಲು ಸಾಕು.
ಎಲ್ಲಾ ಟಿಆರ್‌ಪಿಗಾಗಿ
ದುರದೃಷ್ಟಕ್ಕೆ ಇವರಿಗೆ ಒಂದಾದ ನಂತರ ಒಂದು ಕೆಟ್ಟ ಸುದ್ದಿಗಳು ಸಿಗುತ್ತಲೇ ಹೋಗುತ್ತವೆ. ಈ ಚಾನೆಲ್ಲುಗಳು ಅವನ್ನು ಎಳೆದು, ಜಗಿದು ಪೈಪೋಟಿಯಲ್ಲಿ ನಮ್ಮ ಮೇಲೆ ಉಗುಳುತ್ತವೆ !! ಅವರ ಟಿ ಆರ್ ಪಿ ಹೆಚ್ಚುತ್ತಲೇ ಇರುತ್ತದೆ. ಎಲ್ಲಾ ನ್ಯೂಸ್ ಚಾನೆಲ್ಲುಗಳದ್ದೂ ಇದೇ ವರಸೆ. ನೈಜ ಹಾಗೂ ಉಪಯುಕ್ತ ಸುದ್ದಿಗಳನ್ನು ನೋಡಬೇಕೆಂದರೆ ಒಳ್ಳೇ ಆಯ್ಕೆ ಎಲ್ಲಿದೆ? ಅಲ್ಲಲ್ಲಿ ಒಗ್ಗರಣೆಗೆ ಎಂಬಂತೆ ಒಳ್ಳೆ ಸುದ್ದಿಗಳು ಒಮ್ಮೊಮ್ಮೆ ಇರುತ್ತವೆ. ಆದರೆ ವೀಕ್ಷಕರನ್ನು ಭಾವನಾತ್ಮಕವಾಗಿ ಬಲಿಹಾಕುವ ಧಾರ್ಮಿಕ ವಿಷಯಗಳನ್ನು (ತಿರುಪತಿ ಲಡ್ಡು, ನಾಗಮಂಗಲ ಗಲಭೆ, ದಾವಣಗೆರೆ ಗಲಭೆ, ಆರೆಸ್ಸ್ ಸ್ ಕಚೇರಿಗೆ ಪೋಲಿಸರು ಶೂ ಹಾಕಿಕೊಂಡು ಹೋದದ್ದು ಇತ್ಯಾದಿ) ಅಗತ್ಯಕ್ಕಿಂತ ಹೆಚ್ಚು ವಿಜೃಂಭಿಸಿ, ಅದಕ್ಕೆ ಮಸಾಲೆ ತುಂಬಿ ಜನರನ್ನು ಕೆರಳಿಸುವ ಬ್ರೇಕಿಂಗ್ ನ್ಯೂಸ್ ಮಾಡುತ್ತಿರುತ್ತಾರೆ.
ನೈತಿಕ ದಿವಾಳಿ: ನೀವು ಯಾಕೆ ಆ ಚಾನೆಲ್ ಗಳನ್ನು ನೋಡುತ್ತೀರಿ? ಅದರ ಬದಲು ಆಸ್ತಾ ಟಿವಿ, ಶಂಕರ ಟಿವಿ ನೋಡಿ. ಆಯುಷ್ ಟಿವಿ ನೋಡಿ ಎಂಬಂತಹ ಅಭಿಪ್ರಾಯವನ್ನು ವಿಶ್ವವಾಣಿಯ ವಿಶ್ವೇಶ್ವರ ಭಟ್ಟರು ಹೊರಹಾಕಿದ್ದರು. ಯಾರೋ “ದರ್ಶನ್ ಬಿಟ್ಟರೆ ಈ ಮಾಧ್ಯಮಗಳಿಗೆ ಏನೂ ಸಿಗುವುದಿಲ್ಲವಾ” ಎಂದು ಕೇಳಿದಾಗ ಹೀಗೆ ಬರೆದಿದ್ದರು. ಅರೇ ! ನಾವು ಯಾವ ಚಾನೆಲ್ ನೋಡಬೇಕು ಅಂತ ನಮಗೆ ಗೊತ್ತಿದೆ. ಆದರೆ ಇಲ್ಲಿ ಪ್ರಶ್ನೆ ಇರುವುದು ಸುದ್ದಿ ಚಾನೆಲ್ಲುಗಳ ನೈತಿಕ ಅಧ:ಪತನದ ಬಗ್ಗೆ. ಇದರ ಬಗ್ಗೆ ನಿಮ್ಮ ಸೊಲ್ಲೇ ಇಲ್ಲವಲ್ಲ! ಹೇಳೋದು ಮಾತ್ರ ಆಚಾರ, ತಿನ್ನೋದು ಬದನೆಕಾಯಿಯಾದರೆ ಹೇಗೆ ಸ್ವಾಮಿ? ನಾಜೂಕಾಗಿ ಈ ಮಾಧ್ಯಮಗಳು ಮಾಡುವ ಅಪಸವ್ಯಗಳನ್ನು ಮರೆಮಾಚಿ ಏನೇನೋ ಸಮರ್ಥನೆ ಕೊಟ್ಟು, ಉಪದೇಶ ಕೊಟ್ಟರೆ ನಾವು ಸುಮ್ಮನಾಗಿಬಿಡಬೇಕೇಕೆ? ಲಾಭಕೋರತನದಿಂದ ಜನರ ಅಭಿರುಚಿಯನ್ನು ಕೀಳುಮಟ್ಟಕ್ಕಿಳಿಸಿರುವ ಸುದ್ದಿ ಮಾಧ್ಯಮಗಳು ಬದಲಾಗುವುದು ಯಾವಾಗ ?
ಕಿರುಚಾಟ - ಅರಚಾಟ: ಆಯಿತು. ನಾವು ಪ್ರಸಾರ ಮಾಡುವುದು ಕೆಟ್ಟ ಸುದ್ದಿಯನ್ನೇ ಎಂಬ ಹಠ ನಿಮ್ಮದಾದರೆ ’ನೇರ ದಿಟ್ಟ ನಿರಂತರ’ 'ಉತ್ತಮ ಸಮಾಜಕ್ಕಾಗಿ', ’ನೇಷನ್ ಫಸ್ಟ್’ ಇತ್ಯಾದಿ ಟ್ಯಾಗ್ ಲೈನುಗಳನ್ನು ’ ನೇರ ದಿಟ್ಟ ನಿರಂತರ ಕೆಟ್ಟ ಸುದ್ದಿ' , 'ಉತ್ತಮ ಸಮಾಜಕ್ಕಾಗಿ ಕೆಟ್ಟ ಸುದ್ದಿ’, ’ಬ್ಯಾಡ್ ನ್ಯೂಸ್ ಫಸ್ಟ್’ ಎಂದು ಬದಲಾಯಿಸಿಬಿಡಿ ನೋಡೋಣ! ಸುಮ್ಮನೆ ಯಾಕೀ ಹಿಪೋಕ್ರಸಿ?? ಅಜಿತ್ ಅವರೇ ’ ನಮಸ್ಕಾರಾ... ಇಡೀ ದಿನದ ಕೆಟ್ಟ ಸುದ್ದಿಗಳ ಪ್ಯಾಕೇಜ್..... ನ್ಯೂಸ್ ಅವರ್” ಅಂತ ನ್ಯೂಸ್ ಓದುವಾಗ ಹೇಳಿಬಿಡಿ. (ಇಲ್ಲಿ ನಾನು ಅಜಿತ್ ಅವರನ್ನೇನೂ ಪ್ರತ್ಯೇಕವಾಗಿ ಟಾರ್ಗೆಟ್ ಮಾಡುತ್ತಿಲ್ಲ. ಅವರ ನ್ಯೂಸ್ ಅವರ್ ನ ಒಂದಷ್ಟು ದಿನ ನೋಡಿದ ಸಲುವಾಗಿ ಹೇಳಿದ್ದು). ಆದರೆ ಏನೋ ಒಳ್ಳೆಯ ಸುದ್ದಿ ಕೊಡುತ್ತೇವೆ ಎಂಬ ಸೋಗಿನಲ್ಲಿ ನಮ್ಮನ್ನು ಯಾಕೆ ಎಲ್ಲರೂ ಏಮಾರಿಸುತ್ತೀರಿ?? ಅದೂ ಎಷ್ಟು ದಿನ??
ಇದು ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ನಿರಂತರವಾಗಿ ಎಲ್ಲಾ ಸುದ್ದಿ ಮಾಧ್ಯಮಗಳೂ ಇವನ್ನೇ ಪ್ರಸಾರ ಮಾಡೀ ಮಾಡೀ ಇಡೀ ಕರ್ನಾಟಕದ ಜನ ಇವೇ ನಿಜವಾದ ಸುದ್ದಿಗಳು ಇನ್ನೇನೂ ಉಪಯುಕ್ತವಾದದ್ದು ಈ ನೆಲದಲ್ಲಿ ಹುಟ್ಟುತ್ತಿಲ್ಲ ಅಥವಾ ಸಂಭವಿಸುತ್ತಿಲ್ಲ ಎಂಬಂತಹ ವಿಸ್ಮೃತಿಗೆ ಸಂದುಹೋಗಿದ್ದಾರಾ ಎಂಬ ಅನುಮಾನ ಬರುವಷ್ಟು. ಅಲ್ಲಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಈ ಬಗ್ಗೆ ಧ್ವನಿ ಎತ್ತುತ್ತಿದ್ದರೂ ಈ ಚಾನೆಲ್ಲುಗಳ ಅರಚಾಟ, ಕಿರುಚಾಟ ಮುಂದುವರೆಯುತ್ತಲೇ ಇದೆ.
ಮುದ್ರಣ ಮಾಧ್ಯಮಗಳ ಸ್ಥಿತಿ: ಇನ್ನು ಮುದ್ರಣ ಮಾಧ್ಯಮಗಳಲ್ಲೂ ಕೆಟ್ಟ ಸುದ್ದಿಗಳ ದರ್ಬಾರೇನೂ ಕಡಿಮೆಯಿಲ್ಲ. ಒಮ್ಮೆ ನನ್ನ ಮಗನಿಗೆ”ಟೈಮ್ಸ್ ಆಫ್ ಇಂಡಿಯಾ’ ಪೇಪರ್ ತೋರಿಸಿ ಕೆಟ್ಟ ಸುದ್ದಿಗಳ ಲೆಕ್ಕ ಮಾಡಿದ್ದೆ. ನೂರಕ್ಕೆ ೭೫ಕ್ಕಿಂತ ಹೆಚ್ಚು ನೆಗಟಿವ್ ಸುದ್ದಿಗಳೇ. ’ಬ್ಯಾಡ್ ನ್ಯೂಸ್ ಇಸ್ ದ್ ನ್ಯೂಸ್’ ಇವರ ಮಂತ್ರ ! ಇದ್ದುದರಲ್ಲಿ, ಕನ್ನಡ ದಿನಪತ್ರಿಕೆಗಳು ವಾಸಿ. ಕೆಟ್ಟ ಸುದ್ದಿಗಳ ಪ್ರಮಾಣ ೨೦-೪೦ % ಆಸುಪಾಸಿನಲ್ಲಿರಬಹುದು. ಸ್ಥಳೀಯ ಪತ್ರಿಕೆಗಳಲ್ಲೂ ಈ ಚಾಳಿ ಇದ್ದೇ ಇದೆ. ಕೇಳಿದರೆ “ಬರೀ ಒಳ್ಳೆ ಸುದ್ದಿ ಕೊಟ್ಟರೆ ಓದುವವರು ಯಾರು” ಎಂಬ ಸಮರ್ಥನೆ!! ಕೆಟ್ಟ ಸುದ್ದಿಗಳ ವೈಭವೀಕರಣದಲ್ಲಿ ಯಾರೂ ಹಿಂದೆ ಬಿದ್ದಿಲ್ಲ. ಎಲ್ಲರೂ ಹುಸಿ ರೋಚಕತೆ ಸೃಷ್ಟಿಸುವವರೇ.
ದೂರದರ್ಶನದ ನಿರ್ಭಾವುಕತೆ: ಇನ್ನು ಸರಕಾರೀಸ್ವಾಮ್ಯದ ಚಾನೆಲ್- ದೂರದರ್ಶನ (ಡಿಡಿ), ಅದರ ಪ್ರಾದೇಶಿಕ ಅವತರಣಿಕೆ- ಡಿಡಿ ಚಂದನ ಇತ್ಯಾದಿಗಳೆಲ್ಲ ಸುದ್ದಿಯನ್ನು ವೈಭವೀಕರಿಸುವುದಿಲ್ಲ. ಉಪಯುಕ್ತ ವಿಚಾರಗಳನ್ನೇ ನಿರ್ಭಾವುಕವಾಗಿ ಪ್ರಸಾರ ಮಾಡುತ್ತಾರೆ ಎಂಬುದೂ ನಿಜ. ಆದರೆ ಸರಕಾರದ ವಿಚಾರಗಳನ್ನು ಒಮ್ಮುಖವಾಗಿ ಪ್ರಸಾರ ಮಾಡುತ್ತಾರೆ ಎಂಬ ಆರೋಪಗಳಿವೆ. ಯಾವುದೇ ಟೀಕೆ -ಟಿಪ್ಪಣಿಗಳಿಗೆ ಅಲ್ಲಿ ಅವಕಾಶ ಇಲ್ಲ ಎಂದೂ ವೀಕ್ಷಕರು ಹೇಳುತ್ತಾರೆ. ಆದರೆ ಈ ಚಾನೆಲ್ಲುಗಳೂ ತಮ್ಮ ಸುದ್ದಿ ಆದ್ಯತೆಗಳನ್ನು ಬದಲಾಯಿಸಬೇಕಾದ ಅಗತ್ಯವಿದೆ. ಯಾವ ರೀತಿ ಎಂದು ಕೆಳಗೆ ಬರೆದಿದ್ದೇನೆ.
ದಾರಿ ಯಾವುದಯ್ಯಾ: ಈ ಮುಖ್ಯವಾಹಿನಿಯ ಸುದ್ದಿ ಮಾಧ್ಯಮ/ದಿನಪತ್ರಿಕೆಗಳಿಗೆ, ಅವು ಮಾಡುವ ಹಾನಿಯ ಬಗ್ಗೆ ಬಾಯಿಗೆ ಬಂದಹಾಗೆ ಬೈಯ್ಯುವುದೇನೋ ಸರಿ. ಸಾಕಷ್ಟು ಮಂದಿ ಫೇಸ್ಬುಕ್ಕಿನಲ್ಲಿ ಬರೆಯುತ್ತಿರುತ್ತಾರೆ. ಆದರೆ ಪರ್ಯಾಯ ಏನು? ಈ ಬಗ್ಗೆ ಯಾರೂ ಗಂಭೀರ ಚಿಂತನೆ ನಡೆಸಿದ ಹಾಗೆ ಕಾಣುವುದಿಲ್ಲ. ಮುಕ್ತವಾಗಿ ಬರೆಯಲು ಸಾಧ್ಯವಿರುವ ಸಾಮಾಜಿಕ ಮಾಧ್ಯಮಗಳಲ್ಲೂ ಈ ಬಗ್ಗೆ ಎಲ್ಲೂ ಕಂಡಿಲ್ಲ. ಹಾಗಾಗಿ ನನ್ನ ಅನಿಸಿಕೆಯನ್ನು, ಬಿಡಿ ಚಿಂತನೆಗಳನ್ನು ಇಲ್ಲಿ ಬರೆಯುತ್ತಿದ್ದೇನೆ. ಗಮನಿಸಿ, ಇವು ಬ್ರಾಂಡ್ ನ್ಯೂ ಚಿಂತನೆಗಳು ಅಂತ ನಾನು ಹೇಳಿಕೊಳ್ಳುತ್ತಿಲ್ಲ.
ಮೂಲಭೂತ ಅವಶ್ಯಕತೆ ಮೊದಲು: ಮನುಷ್ಯನಿಗೆ ಮೂಲಭೂತವಾಗಿ ಏನು ಬೇಕು ಎಂಬುದನ್ನು ತಿಳಿದುಕೊಂಡರೆ ನಮ್ಮ ಸುದ್ದಿಮಾಧ್ಯಮಗಳು ತಮ್ಮ ರೀತಿಯನ್ನು ಬದಲಾಯಿಸಿಕೊಳ್ಳಬಹುದು. ಮೊದಲು ಬೇಕಾಗುವುದು ಆಹಾರ ಮತ್ತು ವಸತಿ, ಔಷಧಿ ಮತ್ತು ರಕ್ಷಣೆ. ಇವಿಷ್ಟು ಆದ ಮೇಲೆ ಉಳಿದದ್ದೆಲ್ಲಾ ಬರುತ್ತದೆ. ಅಲ್ಲಿಗೆ ಕೃಷಿ ಮತ್ತು ನಿರ್ಮಾಣ, ವೈದ್ಯಕೀಯ ಮತ್ತು ಸೈನ್ಯ/ಪೋಲೀಸ್ ಇವು ನಮ್ಮ ಮಾಧ್ಯಮಗಳು ಮೊದಲು ಕೇಂದ್ರೀಕರಿಸಬೇಕಾದ ವಿಷಯಗಳು ಅಂತಾಯಿತು.
ಕೃಷಿಗೆ ಬೇಕು ಮೊದಲ ಮನ್ನಣೆ: ದೇಶದ ೬೦ಕ್ಕೂ ಹೆಚ್ಚು ಮಂದಿ ಕೃಷಿಯಲ್ಲಿ ನೇರವಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನೊಂದು ಐದು ಶೇಕಡಾ ಕೃಷಿ ಸಂಬಂಧೀ ಉದ್ಯೋಗಗಳಲ್ಲಿ ತೊಡಗಿರಬಹುದು. ಸೇವಾವಲಯ, ಸಾಫ್ಟ್ ವೇರ್, ವ್ಯಾಪಾರ ಇತ್ಯಾದಿ 35% ಇರಬಹುದು. ಹಾಗಾದರೆ ನಾವು ಯಾವ ವಲಯಕ್ಕೆ, ಯಾವ ಸುದ್ದಿಗೆ ಪ್ರಾಮುಖ್ಯತೆ ಕೊಡಬೇಕು? ಕೃಷಿ ವೈವಿಧ್ಯಕ್ಕೆ ಹೆಸರಾಗಿರುವ, 15 ಕೃಷಿ ವಲಯಗಳಿರುವ ನಮ್ಮ ಬೃಹತ್ ದೇಶದಲ್ಲಿ ರೈತರ ಹೊಲಗಳಲ್ಲಿ ಏನೂ ಘಟಿಸುತ್ತಿಲ್ಲವೇ?, ಮಳೆ, ಉಷ್ಣತೆ, ಆರ್ದ್ರತೆ ಇವು ಕೃಷಿಯ ಮೇಲೆ ಏನೂ ಪರಿಣಾಮ ಮಾಡುತ್ತಿಲ್ಲವೇ? ಕೃಷಿಯ ಮೇಲೆ ಪರಿಸರ ಬದಲಾವಣೆಯ ಪರಿಣಾಮ ಏನು? ಕೃಷಿ ಬೆಳೆಗಳ ಇಳುವರಿ ಏನು? ಕುಲಾಂತರಿಗಳ ಕತೆ, ಹೊಸ ಬೆಳೆ, ಮೌಲ್ಯವರ್ಧನೆ, ಯಾಂತ್ರೀಕರಣ, ಆಹಾರ ಭದ್ರತೆ, ಹೊಸ ಕೃಷಿಕ್ರಮ ಹೀಗೇ ಹೇಳುತ್ತಾ ಹೋದರೆ ಸಾವಿರ ವಿಷಯಗಳು ಸಿಗುತ್ತವೆ. ಮೊದಲೆಲ್ಲ ಈ ವಾಹಿನಿಗಳು ಹವಾಮಾನ ವರದಿಯನ್ನಾದರೂ ಕೊಡುತ್ತಿದ್ದವು. ಈಗ ಅದೂ ಇಲ್ಲ. ಕೃಷಿಕರು ಈ ನೆಲದ ಪ್ರಜೆಗಳು ಎಂಬುದನ್ನೇ ಮರೆತ ಹಾಗಿದೆ! ಅವರಿಗೆ ನಿಮ್ಮ ಅನುಪಯುಕ್ತ ಸುದ್ದಿಗಳನ್ನು ಕಟ್ಟಿಕೊಂಡು ಆಗಬೇಕಾದ್ದು ಏನು? ನಮ್ಮ ದೇಶದಲ್ಲಿ 113 ಕೃಷಿ ಸಂಶೋಧನಾ ಕೇಂದ್ರಗಳಿವೆ. 74 ಕೃಷಿ ವಿವಿಶ್ವವಿದ್ಯಾಲಯಗಳಿವೆ. ಇವುಗಳಲ್ಲಿ ಉಪಯುಕ್ತವಾಗಿರುವ, ಸುದ್ದಿ ಮಾಡಬೇಕಾದ ವಿಷಯಗಳು ಹೊರಬರುತ್ತಿಲ್ಲವೇ ? ಈ ವರ್ಷ ನಮ್ಮ ಊಟದ ತಟ್ಟೆಯಲ್ಲಿನ ಆಹಾರದ ಕಥೆ ಏನು? ಅದರ ಬೆಲೆ ಏನು? ಇವು ಎಲ್ಲರಿಗೂ ಬೇಕಾದ ವಿಷಯವಲ್ಲವೇ? ಅದಕ್ಕಾಗಿ ದಿನನಿತ್ಯ ಕೃಷಿ ಸಂಬಂಧೀ ಧನಾತ್ಮಕ ಸುದ್ದಿಗಳೇ ಮೊದಲು ಬರಬೇಕು. ಅದು ಕೃಷಿ, ಪಶುಪಾಲನೆ, ಹೈನುಗಾರಿಕೆ ಇತ್ಯಾದಿ, ಕೃಷಿ ಸಂಬಂಧೀ ಕಾನೂನು, ಶಿಕ್ಷಣ, ಸಂಶೋಧನೆ, ಉತ್ಪಾದನೆ ಏನೇ ಆಗಿರಲಿ. ತೊಂದರೆ ಇಲ್ಲ. ಕೃಷಿಯ ಜೊತೆಗೆ ಬಹುಮುಖ್ಯವಾದ ಪರಿಸರದ ವಿಚಾರಗಳೂ ಬೇಕು. ಪರಿಸರಕ್ಕೆ ಸಂಬಂಧಿಸಿದಂತೆ ಕಾಡು, ಜೀವವೈವಿಧ್ಯ, ಎಲ್ಲವೂ ಬರುತ್ತದೆ.
ಹೀಗೆಂದ ಕೂಡಲೇ, ನಗರಗಳಲ್ಲಿ ಇರುವವರಿಗೆ ಕೃಷಿಯ ಸುದ್ದಿ ಬೇಕಾಗಿಲ್ಲ. ಅವರು ನೋಡುವುದಿಲ್ಲ ಎಂಬ ವಾದ ಬರುತ್ತದೆ. ಆದರೆ ಅವರಿಗೆ ಇದು ಬೇಡ ಅಂತ ನಿರ್ಧಾರ ಮಾಡಲು ಅದು ಹೇಗೆ ಸಾಧ್ಯ? ಅವರು ಅನ್ನ ತಿನ್ನುವುದಿಲ್ಲವೇ? ಹಾಲು ಕುಡಿಯುವುದಿಲ್ಲವೇ? ಈ ಪ್ರಶ್ನೆಯನ್ನೇ ತಿರುಗಿಸಿದರೆ - ಹಳ್ಳಿಯಲ್ಲಿರುವ ಅಥವಾ ಕೃಷಿಯಲ್ಲಿ ತೊಡಗಿಕೊಂಡಿರುವವರಿಗೆ ನಗರದ ಕೊಲೆ, ದರೋಡೆ, ಅತ್ಯಾಚಾರ, ಅನೈತಿಕ ಸಂಬಂಧ, ವಾರಾಂತ್ಯದ ಸಿನಿಮಾ, ಮಾಲ್, ಪಾರ್ಟಿಗಳು, ಟ್ರಾಫಿಕ್ ಜಾಮ್ ಇವುಗಳನ್ನು ಕಟ್ಟಿಕೊಂಡು ಏನಾಗಬೇಕಾಗಿದೆ? ಆ ಸುದ್ದಿಗಳನ್ನು ನಾವೇಕೆ ನೋಡಬೇಕು/ಓದಬೇಕು ಎಂದರೆ?! ಅಲ್ಲಿಗೆ ಕೃಷಿ ಚಾನೆಲ್ಲುಗಳಿಗೆ/ ಪತ್ರಿಕೆಗಳಿಗೆ ಮಾತ್ರ ಕೃಷಿ ಸಂಬಂಧೀ ಸುದ್ದಿಗಳು ಮುಖ್ಯವಲ್ಲ. ಎಲ್ಲಾ ಮಾಧ್ಯಮದವರಿಗೂ ಕೃಷಿ ಸುದ್ದಿಯೇ ಮೊದಲ ಆದ್ಯತೆ ಆಗಬೇಕು. ಕೃಷಿಕ, ಕೃಷಿ ಇಲಾಖೆ ಹಾಗೂ ಸಂಬಂಧಪಟ್ಟ ಸಚಿವರನ್ನು ಸಂಪರ್ಕದಲ್ಲಿಟ್ಟುಕೊಂಡು ಜನರಿಗೆ ಸುದ್ದಿ/ಮಾಹಿತಿ ಕೊಡಿ. ದೇಶದ ಕೃಷಿ ವಿಚಾರವನ್ನು, ಸಂಶೋಧನೆಗಳನ್ನು ನಿರಂತರವಾಗಿ ತಲುಪಿಸಿ. ಉದಾಹರಣೆಗೆ ಇತ್ತೀಚೆಗೆ ಪ್ರಧಾನಿಯವರು ವಿವಿಧ ಬೆಳೆಗಳ ಒಟ್ಟೂ ೧೦೯ ಸುಧಾರಿತ ತಳಿಗಳನ್ನು ಲೋಕಾರ್ಪಣೆ ಮಾಡಿದರು. ನಿಜವಾಗಿ ದೊಡ್ಡ ಸುದ್ದಿಯಾಗಬೇಕಾದ ವಿಷಯ. ಆದರೆ ಇದು ಉಳಿದ ವಿಷಯಗಳ ಹಾಗೆ ಜನರನ್ನು ತಲುಪಲೇ ಇಲ್ಲ. ಹಾಗಿದ್ದರೆ ಇವರ ಆದ್ಯತೆ ಏನು?
ಕೃಷಿಯ ಜೊತೆಗೆ ಇನ್ನೊಂದು ಮುಖ್ಯ ವಿಷಯ - ವಸತಿ. ಭೂಮಿಯ ಹಕ್ಕು, ಕಂದಾಯ, ವಾಸದ ಮನೆಗಳ ವಿಚಾರ, ಕಾನೂನು, ವಿನ್ಯಾಸ, ಕಚ್ಚಾ ಸಾಮಗ್ರಿಗಳ ಲಭ್ಯತೆ, ದರ, ಸಿವಿಲ್ ಇಂಜನಿಯರಿಂಗ್ ವಿಭಾಗದ ಸುದ್ದಿ ಇವು ಯಾವುದೂ ಈ ಚಾನೆಲ್ ಗಳಿಗೆ ವಸ್ತುವೇ ಅಲ್ಲ. ಈ ರಂಗದಲ್ಲಿ ಏನೇನೂ ಆಗುತ್ತಿಲ್ಲವೇ?
ವೈದ್ಯಕೀಯ ರಂಗದ ಮಹತ್ವ: ಎರಡನೆಯ ಆದ್ಯತೆ ಕೊಡಬೇಕಾದದ್ದು ಆರೋಗ್ಯ ಅಂದರೆ ವೈದ್ಯಕೀಯ ರಂಗಕ್ಕೆ. ಅಲೋಪತಿ, ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ ಇತ್ಯಾದಿ. ಈ ರಂಗಗಳಲ್ಲಿ ಆಗುತ್ತಿರುವ ಆವಿಷ್ಕಾರ, ಬದಲಾವಣೆ, ಕಾನೂನು, ವೈದ್ಯ/ರೋಗಿ/ಆಸ್ಪತ್ರೆಗಳ ಸಮಸ್ಯೆ, ಹರಡುತ್ತಿರುವ ರೋಗ, ಪರಿಹಾರ, ಆಹಾರ ಮತ್ತು ಅದರ ಪರಿಣಾಮ ಹೀಗೆ ಏನೂ ಇರಬಹುದು. ಅವುಗಳ ಬಗ್ಗೆ ನಿತ್ಯ ಏನೂ ಪಾಸಿಟಿವ್ ಸುದ್ದಿ ಸಿಗುವುದಿಲ್ಲ ಎಂದರೆ ನಂಬಲಸಾದ್ಯ.
ರಕ್ಷಣೆಗೆ ಇರಲಿ ಗಮನ:
ಮೂರನೆಯ ಆದ್ಯತೆ ರಕ್ಷಣೆ : ಸೈನ್ಯ/ಪೋಲೀಸ್ ಬಗ್ಗೆ. ತಮ್ಮ ಕುಟುಂಬಗಳನ್ನು ಬಿಟ್ಟು ಎಲ್ಲೋ ದೂರದ ಪ್ರದೇಶದಲ್ಲಿ, ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ನಮ್ಮನ್ನು ಕಾಯುತ್ತಿರುವ ಯೋಧರ ತ್ಯಾಗ, ಬಲಿದಾನ, ಸೈನ್ಯದಲ್ಲಿ ಆಗುತ್ತಿರುವ ಬದಲಾವಣೆ, ರಾಜ್ಯದ ಪೋಲೀಸ್ ವ್ಯವಸ್ಥೆ, ಅವರ ಬವಣೆ, ಅದರಲ್ಲಾಗುತ್ತಿರುವ ಬದಲಾವಣೆ, ಕಾನೂನು ಸುವ್ಯವಸ್ಥೆ, ಭಯೋತ್ಪಾದನೆಯ ಬಗ್ಗೆ ಹೋರಾಟ, ಸರ್ಕಾರದ ಕ್ರಮಗಳು ಇತ್ಯಾದಿಗಳ ಬಗ್ಗೆ ದಿನವೂ ಚಾನೆಲ್ ಗಳು ಧನಾತ್ಮಕ ಸುದ್ದಿ ಮಾಡಬಾರದು ಯಾಕೆ? ಕೆಲವರು ಹೇಳಬಹುದು - ಈ ಸುದ್ದಿಗಳನ್ನು ಹಾಕುತ್ತಾರಲ್ಲ ಎಂದು. ಆದರೆ ನೆನಪಿರಲಿ. ಇವರು ಹೇಳುವುದು ಬರೀ ನೆಗಟಿವ್ ಸುದ್ದಿಗಳನ್ನು ಮಾತ್ರ. ಅಲ್ಲಿಏನೂ ಪಾಸಿಟಿವ್ ಬದಲಾವಣೆ ಆಗುತ್ತಿಲ್ಲ ಎಂದು ಹ್ಯಾಗೆ ನಿರ್ಧರಿಸುತ್ತಾರೆ? ಯೋಧ ಸತ್ತಾಗ ಮಾತ್ರ ಸುದ್ದಿ ಮಾಡುವ ಈ ಚಾನೆಲ್ ಗಳು ಉಳಿದ ಧನಾತ್ಮಕ ಸುದ್ದಿಗಳನ್ನು ನಮಗೆ ತಲುಪಿಸುವುದೇ ಇಲ್ಲ ಯಾಕೆ?
ಇನ್ನಿತರ ರಂಗಗಳು: ಇವುಗಳ ನಂತರ ಶಿಕ್ಷಣ, ಸಮಾಜಮುಖೀ ಕೆಲಸಗಳು (ರಸ್ತೆ, ನೀರು, ಸಾರಿಗೆ, ಇಂಧನ, ಮೂಲಭೂತ ಸೌಲಭ್ಯ ಇತ್ಯಾದಿ) ಧಾರ್ಮಿಕ ವಿಚಾರ, ರಾಷ್ಟ್ರೀಯತೆ, ಒಳ್ಳೆಯ ಮನರಂಜನೆ (ಸಂಗೀತ, ಕಲೆ, ಸಾಹಿತ್ಯ, ಒಳ್ಳೇ ಸಿನಿಮಾ ಇತ್ಯಾದಿ), ಈ ಚಾನೆಲ್ಲುಗಳು ಇವುಗಳ ಬಗ್ಗೆ ಗಮನ ಯಾಕೆ ಹರಿಸಬಾರದು?
*ಒಂದಂತೂ ನಿಜ. ಇವುಗಳಿಗೆ ಸುದ್ದಿ ಮಾಡುವಂತಹ ಉಪಯುಕ್ತ ನೂರಾರು ವಿಷಯಗಳು ಪ್ರತೀ ದಿನ ಸಿಗುತ್ತವೆ. ಆದರೆ ಮಾಡುವುದು ಮಾತ್ರ ಅಪ್ಪಟ ವ್ಯತಿರಿಕ್ತ ವ್ಯವಹಾರ!*
ಸುದ್ದಿ ಮಾಧ್ಯಮಗಳೇ, ಕೆಟ್ಟ ರಾಜಕೀಯ, ಸಿನಿಮಾ, ಕ್ರೈಂ, ಇತ್ಯಾದಿ ವಿಚಾರ ಮಾತ್ರ ನಿಮ್ಮಲ್ಲಿ ಇರಲೇಬೇಕೆಂಬ ಅಲಿಖಿತ ನಿಯಮ ಹಾಕಿದವರು ಯಾರು? ಅದರ ಬದಲಾಗಿ ಮೇಲೆ ಹೇಳಿದ ಉಪಯುಕ್ತ ವಿಚಾರಗಳ ಬಗ್ಗೆ ನೀವ್ಯಾಕೆ ಸುದ್ದಿ ಮಾಡುತ್ತೇವೆ ಎಂದು ನಿರ್ಧಾರ ಮಾಡಬಾರದು? ರಾಜಕೀಯದಲ್ಲೂ ಉಪಯುಕ್ತ ವಿಚಾರಗಳನ್ನು ನೀವು ಪ್ರಸಾರ ಮಾಡುವುದೇ ಇಲ್ಲ. ನೀವ್ಯಾರಾದರೂ ಸುದ್ದಿಮಾಧ್ಯಮದವರು ಸಂಬಂಧಪಟ್ಟ ಎಷ್ಟು ರಾಜಕಾರಣಿಗಳನ್ನು ನಿಮ್ಮ ಖಾತೆಯಲ್ಲಿ ಏನೇನು ಬದಲಾವಣೆ ತರುತ್ತಿದ್ದೀರಿ? ಹೊಸತೇನು? ಅಭಿವೃದ್ಧಿ ಏನಾಗಿದೆ, ನಿಮ್ಮ ಯೋಚನೆ/ ಯೋಜನೆಗಳೇನು ಅಂತ ಕೇಳಿದ್ದು ಇದೆಯಾ? ಬಹಳ ಕಡಿಮೆ. ಅದರ ಬದಲು ರಾಜಕಾರಣಿಗಳ ಆರೋಪ-ಪ್ರತ್ಯಾರೋಪಗಳ ಸುದ್ದಿಯನ್ನೇ ಯಾವಾಗಲೂ ಹಾಕುತ್ತೀರಲ್ಲ? ಅವರನ್ನು ಕೆದಕಿ ಜನರನ್ನು ಸಿಟ್ಟಿಗೆಬ್ಬಿಸುವ ಹೇಳಿಕೆ ಕೊಡುವಂತೆ ಮಾಡುತ್ತಿರಲ್ಲಾ? ಚುನಾವಣೆಯನ್ನಂತೂ ಬಿಡಿ. ಒಂದು ಯುದ್ಧ ಎನ್ನುವಂತೆಯೇ ಬಿಂಬಿಸಿ ಸಮಾಜದಲ್ಲಿ ಅಶಾಂತಿ ಹುಟ್ಟುಹಾಕುತ್ತೀರಿ.
ಕೆಟ್ಟ ಸುದ್ದಿಗಳು ಬೇಡವೇ?: ಹಾಗಂತ ನಾನು ಕೆಟ್ಟ ಸುದ್ದಿಗಳನ್ನು ಪ್ರಸಾರ ಮಾಡಬೇಡಿ/ ಹಾಕಲೇಬೇಡಿ ಎನ್ನುತ್ತಿಲ್ಲ. ಸಮಾಜದಲ್ಲಿ ಅದೂ ನಡೆಯುತ್ತಿದೆ. ಅದರ ಬಗ್ಗೆ ಎಲ್ಲರಿಗೂ ಅರಿವಿರಲೇಬೇಕು. ಆದರೆ ಅದಕ್ಕೆ ಕೊಡಬೇಕಾದ ಅದ್ಯತೆ/ಸ್ಥಾನ ಏನು ಎಂಬುದನ್ನು ವಿಚಾರ ಮಾಡಬೇಕಲ್ಲವೇ? ಅವನ್ನು ಅಗತ್ಯ ಮೀರಿ ವಿಜೃಂಭಿಸಲು ಹೋಗಬಾರದು ಎಂಬ ಪ್ರಜ್ಞೆ ಇರುವುದು ಅತ್ಯವಶ್ಯಕ. ಆದಷ್ಟು ಸರಳ ಮತ್ತು ಸಂಕ್ಷಿಪ್ತವಾಗಿ ಈ ರೀತಿ ನಡೆಯುತ್ತಿದೆ ಎಂಬುದನ್ನು ಹೇಳಿ ಬಿಟ್ಟುಬಿಡಬೇಕು. ಅದೇ ಪ್ರಮುಖ ಸುದ್ದಿಯಾಗಬಾರದು. ಆದರೆ ಅದನ್ನೇ 24 ಗಂಟೆ ಬ್ರೇಕಿಂಗ್ ನ್ಯೂಸ್ ಮಾಡುವುದು, ತೋರಿಸಬಾರದ ದೃಶ್ಯಗಳನ್ನೆಲ್ಲಾ ಮತ್ತೆ ಮತ್ತೆ ತೋರಿಸುವುದು ಏತಕ್ಕೆ? ರಾತ್ರಿ ನ್ಯೂಸ್ ನೋಡಿದರೆ ನಿದ್ರೆ ಹಾಳಾಗುವಷ್ಟು ನೆಮ್ಮದಿ ಕದಡುವ ಅಗತ್ಯ ಇದೆಯಾ?
ಜನ ಪಾಠ ಕಲಿಸುತ್ತಾರೆ ಎಚ್ಚರ!: “ಅಯ್ಯೋ, ಬಿಡ್ರೀ ನಮಗೆ ಇದೆಲ್ಲಾ ಗೊತ್ತು. ಅದರೆ ನಮ್ಮ ಹೊಟ್ಟೆಪಾಡು ಮುಖ್ಯ. ಅಷ್ಟಕ್ಕೂ ನೀವ್ಯಾರು ಹೇಳೋದಕ್ಕೆ? ಬೇಕಾದ್ರೆ ನೋಡಿ. ಬೇಡಾಂದ್ರೆ ಬಿಡಿ” ಎಂಬ ವರಸೆ ನಿಮ್ಮದಾದರೆ ಜನರೇ ನಿಮಗೆ ಮರೆಯದ ಪಾಠ ಕಲಿಸುತ್ತಾರೆ. ಆ ದಿನಗಳು ದೂರ ಇಲ್ಲ.
ಆದ್ದರಿಂದ ಸುದ್ದಿ ಮಾಧ್ಯಮಗಳೇ ದಯವಿಟ್ಟು ಆದಷ್ಟು ಬೇಗ ಬದಲಾಗಿ. ವೀಕ್ಷಕನಿಗೆ ನಿಮ್ಮ ಹುನ್ನಾರ ಒಂದಲ್ಲಾ ಒಂದು ದಿನ ಗೊತ್ತಾಗಿಯೇ ಅಗುತ್ತದೆ. ಟಿಆರ್ ಪಿ ಆಸೆಗೆ ಬಿದ್ದು ಈಗ ಮಾಡುತ್ತಿರುವಂತೆ ಬರೀ ಕೆಟ್ಟ ಸುದ್ದಿಗಳನ್ನೇ ಕೊಡುತ್ತಾ ಹೋದರೆ ಒಂದು ದಿನ ಶಾಶ್ವತವಾಗಿ ನೆಲಸಮವಾಗುತ್ತೀರಿ. ಬದಲಾಗಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಏನು ಬೇಕೋ ಅದನ್ನು ಕೊಡಿ. ಅಲ್ಲಿ ನಿಮ್ಮ ಪೈಪೋಟಿಯನ್ನು ತೋರಿಸಿ.
ಬ್ರೇಕಿಂಗ್ ನ್ಯೂಸ್ ಬದಲು ಬಾಂಡಿಂಗ್ ನ್ಯೂಸ್ ಕೊಡಿ. ಕೊನೆಗೂ ಆಯ್ಕೆ ನಿಮ್ಮದು! ನಮ್ಮ ಆಯ್ಕೆಯಂತೂ ಸ್ಪಷ್ಟ !!
ಬರಹ: ಡಾ ಮೋಹನ್ ತಲಕಾಲಕೊಪ್ಪ, ಲೇಖಕರು ಪುತ್ತೂರಿನ ಗೇರು ಸಂಶೋಧನಾ ಮಂಡಳಿಯಲ್ಲಿ ವಿಜ್ಞಾನಿ, 'ಅಡಿಕೆ ಪತ್ರಿಕೆ'ಯ ಅಂಕಣಕಾರರು.
ಗಮನಿಸಿ: ಇಲ್ಲಿರುವ ಲೇಖಕರ ವೈಯಕ್ತಿಕ ಅಭಿಪ್ರಾಯ. ಶೀರ್ಷಿಕೆ ಕೊಟ್ಟಿರುವುದು ಬಿಟ್ಟರೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸಿಬ್ಬಂದಿ ಈ ಬರಹವನ್ನು ತಿದ್ದಿಲ್ಲ.