Oral Health: ಬಾಯಿಯ ದುರ್ವಾಸನೆಗೆ ನೈಸರ್ಗಿಕ ಮನೆಮದ್ದು; ಇವುಗಳನ್ನು ಅಗಿದರೆ ಅದುವೇ ಮೌತ್ ಫ್ರೆಶ್ನರ್
Oct 24, 2024 07:38 AM IST
ಬಾಯಿಯ ದುರ್ವಾಸನೆಗೆ ನೈಸರ್ಗಿಕ ಮನೆಮದ್ದು; ಇವುಗಳನ್ನು ಅಗಿದರೆ ಅದುವೇ ಮೌತ್ ಫ್ರೆಶ್ನರ್
- Natural Mouth Fresheners: ಮಾರುಕಟ್ಟೆಯಲ್ಲಿ ಬಗೆಬಗೆಯ ಮೌತ್ ಫ್ರೆಶ್ನರ್‌ಗಳು ಸಿಗುತ್ತವೆ. ಅವುಗಳಿಗೆ ದುಡ್ಡು ಕೊಡುವ ಬದಲಿಗೆ ಮನೆಯಲ್ಲೇ ಇರುವ ಪದಾರ್ಥಗಳಿಂದ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡಬಹುದು. ಇವು ಆರೋಗ್ಯಕ್ಕೂ ಒಳ್ಳೆಯದು.
ಆರೋಗ್ಯ ಸರಿ ಇಲ್ಲದಾಗ ಬಾಯಿಯ ದುರ್ವಾಸನೆ ಸಾಮಾನ್ಯ. ಕೆಲವೊಮ್ಮೆ ಬೆಳಗ್ಗೆ ಬ್ರಷ್ ಮಾಡುವ ಮುನ್ನವೂ ಬಾಯಿ ದುರ್ಗಂಧ ಬೀರುತ್ತದೆ. ಉಳದಂತೆ ಆಹಾರ ಕ್ರಮ ಅಥವಾ ದೀರ್ಘಕಾಲದಿಂದ ಏನೂ ಸೇವಿಸದಿದ್ದಾಗಲೂ ಬಾಯಿ ದುರ್ವಾಸನೆ ಬರುತ್ತದೆ. ಕೆಲವೊಂದು ಮಸಾಲೆಯುಕ್ತ ಆಹಾರ, ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಹಲವು ಆಹಾರಗಳ ಸೇವನೆಯಿಂದ ಬಾಯಿಯ ದುರ್ವಾಸನೆ ಹೆಚ್ಚುತ್ತದೆ. ಕೆಲವೊಬ್ಬರ ಆರೋಗ್ಯ ಸಮಸ್ಯೆಗಳಿಂದ ಅಥವಾ ವೈಯಕ್ತಿಕ ಸ್ವಚ್ಛತೆಯ ಕೊರತೆಯಿಂದ ಬಾಯಿ ನಿತ್ಯವೂ ದುರ್ವಾಸನೆ ಬೀರುತ್ತದೆ. ಹಲ್ಲು ಮತ್ತು ಒಸಡುಗಳ ಆರೋಗ್ಯ ಚೆನ್ನಾಗಿಲ್ಲದಿದ್ದಾಗ ಈ ಸಮಸ್ಯೆ ಕಾಣಿಸಬಹುದು. ಇಂಥಹ ಸಮಸ್ಯೆಗಳು ಸಾರ್ವಜನಿಕವಾಗಿ ಮುಜುಗರ ತರಿಸುತ್ತವೆ.
ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡಲು ಮಾರುಕಟ್ಟೆಯಲ್ಲಿ ಹಲವು ಮೌತ್ ಫ್ರೆಶ್ನರ್‌ಗಳು ಲಭ್ಯವಿದೆ. ಆದರೆ, ಇವುಗಳನ್ನು ಬಳಸದೆ, ಮನೆಯಲ್ಲಿಯೇ ಇರುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿದರೆ ಬಾಯಿಯ ದುರ್ಗಂಧ ಕಡಿಮೆಯಾಗುತ್ತದೆ. ಇವೆಲ್ಲವೂ ರಾಸಾಯನಿಕ ಮುಕ್ತವಾಗಿದ್ದು, ನೈಸರ್ಗಿಕ ಮೌತ್ ಫ್ರೆಶ್ನರ್‌ಗಳಂತೆ ಕೆಲಸ ಮಾಡುತ್ತವೆ. ಅವುಗಳು ಯಾವುವು ಎಂಬುದನ್ನು ನೋಡೋಣ.
ಏಲಕ್ಕಿ
ಏಲಕ್ಕಿಯು ಅಡುಗೆಮನೆಯಲ್ಲಿರುವ ಅತ್ಯುತ್ತಮ ಮೌತ್ ಫ್ರೆಶ್ನರ್ ಎಂದೇ ಹೇಳಬಹುದು. ನಿಮ್ಮ ಬಾಯಿ ದುರ್ವಾಸನೆ ಬೀರುತ್ತಿದೆ ಎಂದು ನಿಮಗನಿಸಿದಾಗ, ಏಲಕ್ಕಿಯನ್ನು ಸಿಪ್ಪೆ ತೆಗೆದು ಅದರ ಬೀಜಗಳನ್ನು ಬಾಯಿಯಲ್ಲಿ ಹಾಕಿಕೊಳ್ಳಿ. ನಿಧಾನಕ್ಕೆ ಅದನ್ನು ಬಾಯಿಯಲ್ಲಿ ಅಗಿಯಿರಿ.
ತುಳಸಿ ಮತ್ತು ಪುದೀನ ಎಲೆ
ಬಾಯಿಯ ದುರ್ವಾಸನೆ ಬಂದಾಗಲೆಲ್ಲಾ ನಿಮ್ಮ ಮನೆಯ ಅಂಗಳದಲ್ಲಿರುವ ತುಳಸಿ ಎಲೆಗಳು ಅಥವಾ ಫ್ರಿಜ್‌ನಲ್ಲಿ ಅಡುಗೆಗೆಂದು ಇಟ್ಟಿರುವ ಪುದೀನಾ ಎಲೆಗಳನ್ನು ತಿನ್ನಿ. ಮನೆಯಲ್ಲಿ ಯಾವುದು ಲಭ್ಯವಿದೆಯೋ ಅದನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿಯಬಹುದು. ಇವುಗಳ ವಿಶಿಷ್ಟ ಪರಿಮಳವು ನಿಮ್ಮ ಬಾಯಿಯಿಂದ ದುರ್ವಾಸನೆ ಬರದಂತೆ ತಡೆಯುತ್ತದೆ.
ಲವಂಗ
ಮಸಾಲೆ ಪದಾರ್ಥಗಳಲ್ಲಿ ಒಂದಾಗಿರುವ ಲವಂಗ ವಿಶಿಷ್ಟವಾದ ಕಟು ವಾಸನೆಯನ್ನು ಹೊಂದಿರುತ್ತದೆ. ನಿಮ್ಮ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ಅಥವಾ ನಿಮಗೆ ಬಾಯಿಯು ಅಸಮಾಧಾನ ಕೊಡುತ್ತಿದ್ದರೆ, ಒಂದು ಲವಂಗವನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿಯಿರಿ. ಇದರಿಂದ ಬಾಯಿ ಫ್ರೆಶ್ ಆಗುತ್ತದೆ. ಸುದೀರ್ಘ ಅವಧಿಯವರೆಗೆ ಬಾಯಿಯಲ್ಲಿ ಲವಂಗ ಪರಿಮಳ ಬರುತ್ತದೆ.
ದಾಲ್ಚಿನ್ನಿ ಮತ್ತು ಜೇನುತುಪ್ಪ
ಬಾಯಿಯಲ್ಲಿ ಹುಣ್ಣು ಅಥವಾ ಇನ್ಯಾವುದೋ ಸಮಸ್ಯೆಗಳಿಂದ ಕೆಟ್ಟ ವಾಸನೆ ಬರಬಹುದು. ಆಗ ಜೇನುತುಪ್ಪದಲ್ಲಿ ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಬಾಯಿಗೆ ಹಾಕಿಕೊಳ್ಳಿ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಅದು ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಆಗ ದುರ್ವಾಸನೆ ದೂರವಾಗುತ್ತದೆ.
ಸೀಬೆ ಎಲೆ
ಪೇರಳೆ ಎಲೆ ಅಥವಾ ಸೀಬೆ ಮರದ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಹಲ್ಲುನೋವು ಮತ್ತು ಬಾಯಿಯ ದುರ್ವಾಸನೆ ಸಮಸ್ಯೆಗಳಿಗೆ ಅವು ಉತ್ತಮ ಪರಿಹಾರ. ಪೇರಲದ ಚಿಗುರು ಜೊತೆಗೆ ಏಲಕ್ಕಿ ಸೇರಿಸಿ ಬಾಯಿಗೆ ಹಾಕಿಕೊಂಡು ಅಗಿಯಿರಿ. ಪೇರಳೆ ಎಲೆಗಳ ಟೀ ಮಾಡಿ ಕುಡಿಯಬಹುದು.
ವಿಭಾಗ