Orange recipe: ನೀವು ಕಿತ್ತಳೆ ಹಣ್ಣಿನ ಪ್ರಿಯರೆ? ಕಿತ್ತಳೆ ಕೇಕ್, ಸಂದೇಶ್ ಮನೆಯಲ್ಲೇ ಮಾಡಿ ಸವಿಯಿರಿ
Feb 20, 2023 11:25 AM IST
ಕಿತ್ತಳೆಹಣ್ಣಿನ ರೆಸಿಪಿಗಳು
- ಕಿತ್ತಳೆಹಣ್ಣು ಆರೋಗ್ಯಕ್ಕೆ ಮಾತ್ರವಲ್ಲ ಬಾಯಿಗೂ ರುಚಿ. ಇದರಿಂದ ಜ್ಯೂಸ್, ಐಸ್‌ಕ್ರೀಂ, ಸಲಾಡ್, ಡೆಸರ್ಟ್, ಕೇಕ್ ಸೇರಿದಂತೆ ಹಲವು ಬಗೆಯ ತಿನಿಸುಗಳನ್ನು ತಯಾರಿಸಬಹುದು. ನಾಲಿಗೆಯ ರುಚಿಮೊಗ್ಗು ಅರಳಿಸುವ, ಮೂಗಿಗೆ ಸುವಾಸನೆ ಬೀರುವ ಕಿತ್ತಳೆ ಹಣ್ಣಿನಿಂದ ತಯಾರಿಸುವ ಕೆಲವು ರೆಸಿಪಿಗಳು ಇಲ್ಲಿವೆ.
ಕಿತ್ತಳೆ ಹಣ್ಣು ತಿನ್ನುವುದಕ್ಕಿಂತ ಇದರ ಪರಿಮಳವನ್ನು ಬಹುತೇಕರು ಮೆಚ್ಚುತ್ತಾರೆ. ವಿಶ್ವದಾದ್ಯಂತ ಬೆಳೆಯುವ ಜನಪ್ರಿಯ ಹಣ್ಣು ಕಿತ್ತಳೆ. ಬೇಸಿಗೆಯಲ್ಲಿ ಇದನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಬಗೆಯ ಉಪಯೋಗಗಳಿವೆ. ಇದರಿಂದ ತಯಾರಿಸುವ ಬಣ್ಣ ಹಾಗೂ ಸುವಾಸನೆಯನ್ನು ಆಹಾರ ಖಾದ್ಯಗಳೊಂದಿಗೆ ಸೇರಿಸಲಾಗುತ್ತದೆ. ಇದರಲ್ಲಿ ಮಿಟಮಿನ್ ಸಿ ಅಂಶ ಅಧಿಕವಾಗಿದೆ. ಇದು ಉತ್ಕರ್ಷಣ ನಿರೋಧಕವಾಗಿದ್ದು, ಇದು ಆರೋಗ್ಯಕ್ಕೆ ಮಾತ್ರವಲ್ಲ ಬಾಯಿಗೂ ರುಚಿ. ಇದರಿಂದ ಜ್ಯೂಸ್, ಐಸ್‌ಕ್ರೀಂ, ಸಲಾಡ್, ಡೆಸರ್ಟ್, ಕೇಕ್ ಸೇರಿದಂತೆ ಹಲವು ಬಗೆಯ ತಿನಿಸುಗಳನ್ನು ಮಾಡಬಹುದು. ನಾಲಿಗೆಯ ರುಚಿಮೊಗ್ಗು ಅರಳಿಸುವ, ಮೂಗಿಗೆ ಸುವಾಸನೆ ಬೀರುವ ಕಿತ್ತಳೆ ಹಣ್ಣಿನಿಂದ ತಯಾರಿಸುವ ಕೆಲವು ರೆಸಿಪಿಗಳು ಇಲ್ಲಿವೆ.
ಕಿತ್ತಳೆ, ಒಣದ್ರಾಕ್ಷಿ ಮಫಿನ್
ಬೇಕಾಗುವ ಪದಾರ್ಥಗಳು: ಮೈದಾಹಿಟ್ಟು - 1ಕಪ್, ಅಡುಗೆಸೋಡಾ- ಕಾಲು ಟೀ ಚಮಚ, ಬೆಣ್ಣೆ - ಅರ್ಧ ಕಪ್, ಕಿತ್ತಳೆ ಸ್ವ್ಕಾಷ್ - 1 ಟೇಬಲ್ ಚಮಚ, ಪುಡಿ ಮಾಡಿದ ಸಕ್ಕರೆ - ಮುಕ್ಕಾಲು ಕಪ್, ಕಂಡೆನ್ಸಡ್ ಮಿಲ್ಕ್ - ಅರ್ಧ ಕಪ್, ಒಣದ್ರಾಕ್ಷಿ - ಕಾಲು ಕಪ್, ಕ್ರೀಮ್ - ಕಾಲು ಕಪ್, ಬೆಣ್ಣೆ ಅಥವಾ ತುಪ್ಪು - ಅರ್ಧ ಟೇಬಲ್ ಚಮಚ.
ಮಾಡುವ ವಿಧಾನ: ಅಡುಗೆಸೋಡಾದೊಂದಿಗೆ ಮೈದಾಹಿಟ್ಟನ್ನು ಜರಡಿ ಹಿಡಿದು ಪಾತ್ರೆಯೊಂದರಲ್ಲಿ ಹಾಕಿ. ಇನ್ನೊಂದು ಪಾತ್ರೆಯಲ್ಲಿ ಬೆಣ್ಣೆ, ಕಿತ್ತಳೆ ಸ್ಕ್ವಾಷ್ ಹಾಗೂ ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಕಲೆಸಿ. ಇದು ಕ್ರೀಮ್ ರೂಪಕ್ಕೆ ಬರಬೇಕು. ಇದಕ್ಕೆ ಕಂಡೆನ್ಸಡ್ ಮಿಲ್ಕ್, ಒಣದ್ರಾಕ್ಷಿ, ಕ್ರೀಮ್ ಹಾಗೂ ಹಿಟ್ಟು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ತುಪ್ಪ ಸವರಿದ ಪಾತ್ರೆಗೆ ಹಾಕಿ, 180ಡಿಗ್ರಿ ಸೆಲ್ಸಿಯಸ್‌ನಲ್ಲಿ ಮೊದಲೇ ಬಿಸಿ ಮಾಡಿಟ್ಟುಕೊಂಡಿದ್ದ ಓವೆನ್‌ನಲ್ಲಿ 15 ರಿಂದ 20 ನಿಮಿಷಗಳ ಕಾಲ ಬೇಯಿಸಿ. ತಣ್ಣದಾಗ ಮೇಲೆ ಪಾತ್ರೆಯನ್ನು ಕೆಳಗಿಳಿಸಿ.
ಕಿತ್ತಳೆ ಪನ್ನಕೊಟ್ಟಾ
ಬೇಕಾಗುವ ಪದಾರ್ಥಗಳು: ಆರೆಂಜ್ ಜಿಸ್ಟ್ - 1 ಚಮಚ, ಆರೆಂಜ್ ಜೆಲ್ಲಿ ಪುಡಿ - ಕಾಲು ಕಪ್, ಆರೆಂಜ್ ಮಾರ್ಮಲೇಡ್- 3 ಟೇಬಲ್ ಚಮಚ, ಫ್ರೆಶ್ ಕ್ರೀಮ್ - 2ಕಪ್, ಸಕ್ಕರೆ - 50ಗ್ರಾಂ, ಹಾಲು - ಅರ್ಧ ಕಪ್
ಮಾಡುವ ವಿಧಾನ: ದಪ್ಪ ತಳದ ನಾನ್‌ಸ್ಟಿಕ್ ಪಾನ್‌ನಲ್ಲಿ ಕ್ರೀಮ್ ಅನ್ನು ಬಿಡಿ ಮಾಡಿ. ಅದಕ್ಕೆ ಆರೆಂಟ್ ಜಿಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆ ಪಾತ್ರೆಗೆ ಸಕ್ಕರೆ ಸೇರಿಸಿ ಸಕ್ಕರೆ ಚೆನ್ನಾಗಿ ಕರಗುವವರೆಗೂ ಕುದಿಸಿ. ಒಂದು ಬೌಲ್‌ನಲ್ಲಿ ಹಾಲು ಹಾಕಿ ಅದಕ್ಕೆ ಆರೆಂಜ್ ಜೆಲ್ಲಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಸ್ಟೌ ಆಫ್ ಮಾಡಿ ಪಾತ್ರೆಯನ್ನು ಕೆಳಗಿಸಿ ತಣಿಯಲು ಬಿಡಿ. ನಂತರ ಅದಕ್ಕೆ ಮಿಶ್ರಣ ಮಾಡಿ ಹಾಲು ಹಾಗೂ ಜೆಲ್ಲಿ ಪುಡಿ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಗ್ಲಾಸ್‌ಗೆ ಸುರಿದು, ಫ್ರಿಜ್‌ನಲ್ಲಿಟ್ಟು ಗಟ್ಟಿಯಾಗುವವರೆಗೆ ಬಿಡಿ. ಇದಕ್ಕೆ ಆರೆಂಜ್ ಮಾರ್ಮಲೇಡ್ ಹಾಗೂ ಆರೆಂಜ್ ಜಿಸ್ಟ್‌ನಿಂದ ಅಲಂಕಾರ ಮಾಡಿ ಸವಿಯಿರಿ.
ಮೊಟ್ಟೆರಹಿತ ಕಿತ್ತಳೆಹಣ್ಣಿನ ಕೇಕ್
ಬೇಕಾಗುವ ಸಾಮಗ್ರಿಗಳು: ಬೆಣ್ಣೆ - ಅರ್ಧ ಕಪ್, ಪುಡಿ ಮಾಡಿದ ಸಕ್ಕರೆ - ಅರ್ಧ ಕಪ್, ಕಂಡೆನ್ಸಡ್ ಮಿಲ್ಕ್- ಅರ್ಧ ಕಪ್, ಮೊಸರು - ಅರ್ಧ ಕಪ್, ಆರೆಂಜ್ ಮಾರ್ಮಲೇಡ್- ಕಾಲು ಕಪ್, ಬೇಕಿಂಗ್ ಪುಡಿ -1 ಚಮಚ, ಬೇಕಿಂಗ್ ಸೋಡಾ - 1 ಚಮಚ, ಮೈದಾ - 1ಕಪ್, ವೆನಿಲ್ಲಾ ಎಸೆನ್ಸ್ - 1 ಟೀ ಚಮಚ, ಕಿತ್ತಳೆ ಹಣ್ಣು - 2, ಹಾಲಿನ ಕೆನೆ - 1 ಕಪ್.
ಮಾಡುವ ವಿಧಾನ: ಬೆಣ್ಣೆ ಹಾಗೂ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕ್ರೀಮ್ ಆಗುವವರೆಗೂ ನೋಡಿಕೊಳ್ಳಿ. ಅದಕ್ಕೆ ಕಂಡೆನ್ಸಡ್ ಮಿಲ್ಕ್, ಮೊಸರು ಹಾಗೂ ಆರೆಂಜ್ ಮಾರ್ಮಲೇಡ್ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಅಡುಗೆ ಸೋಡಾಪುಡಿ, ಬೇಕಿಂಗ್ ಪುಡಿ, ಮೈದಾ ಸೇರಿಸಿ ಮಿಶ್ರಣ ಮಾಡಿ ಇದು ದೋಸೆಹಿಟ್ಟಿನ ರೂಪದಲ್ಲಿರಬೇಕು. ಆ ಮಿಶ್ರಣಕ್ಕೆ ವೆನಿಲ್ಲಾ ಎಸೆನ್ಸ್ ಸೇರಿಸಿ ವಿಸ್ಕ್ ಸಹಾಯದಿಂದ ತಿರುಗಿಸಿ. ನಂತರ ತುಪ್ಪ ಸವರಿದ ಪಾತ್ರೆಗೆ ಈ ಹಿಟ್ಟನ್ನು ಸುರಿಯಿರಿ. ಓವೆನ್ ಅನ್ನು 180 ಡಿಗ್ರಿ ಸೆಲ್ಸಿಯಸ್‌ನಲ್ಲಿಟ್ಟು 35 ರಿಂದ 40 ನಿಮಿಷಗಳ ಕಾಲ ಬೇಯಿಸಿ. ಬೇಕಿದ್ದರೆ ಟಾಪಿಂಗ್ ಮಾಡಿಕೊಳ್ಳಬಹುದು.
ಕಿತ್ತಳೆಯ ಸಂದೇಶ್
ಬೇಕಾಗುವ ಪದಾರ್ಥಗಳು: ತುರಿದ ಪನೀರ್ - 1 ಕಪ್, ರೆಡಿಮೇಡ್ ಆರೆಂಜ್ ಕ್ರಷ್ - 5 ಟೇಬಲ್ ಚಮಚ, ಹಾಲು - 1 ಚಮಚ, ಕಿತ್ತಳೆ ಹಣ್ಣ - ಕಾಲು ಕಪ್.
ತಯಾರಿಸುವ ವಿಧಾನ: ಪನೀರ್, ಆರೆಂಜ್ ಕ್ರಷ್ ಹಾಗೂ ಹಾಲನ್ನು ಒಂದು ಬೌಲ್‌ಗೆ ಹಾಕಿ, ಮಿಕ್ಸರ್ ಸಹಾಯದಿಂದ ನುಣ್ಣಗೆ ಪೇಸ್ಟ್ ಮಾಡಿ. ಅದನ್ನು ಒಂದು ಪ್ಲೇಟ್ ಮೇಲೆ ಹರಡಿ. ಅದರ ಮೇಲೆ ಕಿತ್ತಳೆ ಜಿಸ್ಟ್, ಸಣ್ಣದಾಗಿ ಕತ್ತರಿಸಿದ ಕಿತ್ತಳೆ ಹಣ್ಣನ್ನು ಹರಡಿ. 3ರಿಂದ 4 ಗಂಟೆ ಫ್ರಿಜ್ಜ್‌ನಲ್ಲಿಡಿ.
ವಿಭಾಗ