Health Tips: ಹದಿಹರೆಯದ ಹೆಣ್ಣುಮಕ್ಕಳು ಹಣ್ಣಿನ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನವೇನು? ಈ ಕುರಿತು ಅಧ್ಯಯನ ಏನು ಹೇಳುತ್ತೆ ನೋಡಿ
Dec 30, 2023 03:21 PM IST
ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಈ ಎಲ್ಲಾ ಪ್ರಯೋಜನಗಳು ಸಿಗುತ್ತವೆ.
- Health Tips for Pre-Teen Girls: ಹದಿಹರೆಯದ ಹೆಣ್ಣುಮಕ್ಕಳು ಹಣ್ಣಿನ ಜ್ಯೂಸ್ ಕುಡಿಯವುದು ಉತ್ತಮವೇ, ಇದರಿಂದ ಅವರ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಸಿಗಲಿವೆ, ಈ ಬಗ್ಗೆ ಅಧ್ಯಯನವೊಂದು ನಡೆದಿದ್ದು, ಅದರ ವಿವರ ಇಲ್ಲಿದೆ.
ಮಕ್ಕಳು ಹದಿವಯಸ್ಸಿಗೆ ಬಂದಾಗ ಪೋಷಕರು ಮಕ್ಕಳ ಆರೋಗ್ಯದ ಮೇಲೆ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಹೆಣ್ಣುಮಕ್ಕಳ ಆರೋಗ್ಯ, ಆಹಾರದ ವಿಚಾರದಲ್ಲಿ ಒಂದಿಷ್ಟು ಹೆಚ್ಚೇ ಕಾಳಜಿ ವಹಿಸಬೇಕು. ಹದಿವಯಸ್ಸಿನ ಹೆಣ್ಣುಮಕ್ಕಳ ಆರೋಗ್ಯ, ಆಹಾರದ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಅಧ್ಯಯನವೊಂದು ನಡೆಯಿತು.
ಹಣ್ಣಿನರಸ ಅಥವಾ ಜ್ಯೂಸ್ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಮೇಲೆ ಆನ್‌ಲೈನ್ ಸಂಶೋಧನೆಯೊಂದು ಪ್ರಕಟವಾಗಿದೆ. ಅದರ ಪ್ರಕಾರ, ನೂರು ಪ್ರತಿಶತದಷ್ಟು ಹಣ್ಣಿನ ಜ್ಯೂಸ್ ಸೇವಿಸುವ ಹದಿಹರೆಯದ ಹುಡುಗಿಯರು ದೀರ್ಘಕಾಲದವರೆಗೆ ಉತ್ತಮ ಪೌಷ್ಠಿಕಾಂಶದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ. ಜೊತೆಗೆ ಅವರ ತೂಕದ ಮೇಲೂ ಯಾವುದೇ ಹಾನಿಕಾರಕ ಪರಿಣಾಮ ಬೀರುವುದಿಲ್ಲ ಎಂಬುದು ತಿಳಿದುಬಂದಿದೆ. ಈ ಹಣ್ಣಿನ ಜ್ಯೂಸ್‌ಗಳ ಮೇಲಿನ ಸಂಶೋಧನೆಯನ್ನು ಬೋಸ್ಟನ್ ಯೂನಿವರ್ಸಿಟಿ ಚೋಬಾನಿಯನ್ ಮತ್ತು ಅವೆಡಿಸಿಯನ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಮೆಡಿಸಿನ್ ಪ್ರೊಫೆಸರ್ ಡಾ ಲಿನ್ ಎಲ್ ಮೂರ್, ಇತ್ತೀಚೆಗೆ ಪ್ರಕಟಿಸಿದ್ದಾರೆ. ಅವರು ಹೇಳುವ ಪ್ರಕಾರ ಹಣ್ಣಿನ ಸೇವನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅದರಲ್ಲೂ ದೊಡ್ಡವರಿಗಿಂತ ಮಕ್ಕಳು ಹೆಚ್ಚು ಹಣ್ಣನ್ನು ಸೇವಿಸುತ್ತಿದ್ದಾರೆ ಎನ್ನುತ್ತಾರೆ.
ಅಧ್ಯಯನದಿಂದ ತಿಳಿದುಬಂದಿದ್ದೇನು?
* ಅತಿ ಹೆಚ್ಚು ಪ್ರಮಾಣ ಅಂದರೆ ದಿನವೊಂದಕ್ಕೆ ಒಂದು ಕಾಲು ಕಪ್ ಅಥವಾ ಅದಕ್ಕಿಂತಲೂ ಹೆಚ್ಚು ಹಣ್ಣಿನ ಜ್ಯೂಸ್ ಸೇವಿಸಿದ ಹುಡುಗಿಯರು ಕಡಿಮೆ BMI (ಬಾಡಿ ಮಾಸ್ ಇಂಡೆಕ್ಸ್) ಮಟ್ಟವನ್ನು ಹೊಂದಿದ್ದಾರೆ.
* ಯಾವುದೇ ರೀತಿಯ ಹಣ್ಣುಗಳು ಇರದ ಜ್ಯೂಸ್ ಸೇವಿಸುವವರಲ್ಲಿ BMI ಮಟ್ಟವು ಅಧಿಕವಾಗಿರುವುದು ಕಂಡು ಬಂದಿದೆ.
* ನೂರಕ್ಕೆ ನೂರಷ್ಟು ಹಣ್ಣಿನ ಜ್ಯೂಸ್ ಸೇವಿಸುವ ಮತ್ತು ಸೇವಿಸದ 19 ರಿಂದ 20 ವರ್ಷ ವಯಸ್ಸಿನ ಹುಡುಗಿಯರಲ್ಲಿ BMI ಮಟ್ಟವು 1.7 ಕೆಜಿ/ಮಿ2 ನಷ್ಟು ವ್ಯತ್ಯಾಸ ಕಂಡುಬಂದಿದೆ. ಅದು ಹಣ್ಣಿನ ಜ್ಯೂಸ್ ಸೇವಿಸುವವರಲ್ಲಿ 24.1 ಕೆಜಿ/ಮಿ2 ಇದ್ದರೆ ಹಣ್ಣಿನ ಜ್ಯೂಸ್ ಸೇವಿಸದವರಲ್ಲಿ 25.8 ಕೆಜಿ/ಮಿ2 ಇರುವದು ಕಂಡುಬಂದಿತು.
* ಅಂದರೆ ಹಣ್ಣಿನ ಜ್ಯೂಸ್ ಸೇವನೆಯಿಂದ ತೂಕ ಹೆಚ್ಚಾಗುವುದಿಲ್ಲ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: Weight Control: ಚಳಿಗಾಲದಲ್ಲಿ ನಾಲಿಗೆ ಚಪಲವನ್ನೂ ತಣಿಸಿ, ತೂಕ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಾ, ಹಾಗಿದ್ರೆ ಇವುಗಳನ್ನು ಸೇವಿಸಿ
* ಈ ಅಧ್ಯಯನವು 10 ವರ್ಷದ ಅವಧಿಯಲ್ಲಿ 2,100 ಕ್ಕೂ ಹೆಚ್ಚು ಹೆಣ್ಣುಮಕ್ಕಳಲ್ಲಿ ನಡೆಸಿದ 3 ದಿನದ ಆಹಾರದ ದಾಖಲೆಯನ್ನು ಟ್ರ್ಯಾಕ್ ಮಾಡಿದೆ. ಅದು ಅವರ ಎತ್ತರ ಮತ್ತು ತೂಕವನ್ನು ಆಧರಿಸಿ ನಡೆಸಿದ ಸಂಶೋಧನೆಯಾಗಿದೆ.
* ನೂರಕ್ಕೆ ನೂರಷ್ಟು ಹಣ್ಣಿನ ಜ್ಯೂಸ್ ಸೇವಿಸುವ ಹದಿಹರೆಯದ ಹುಡುಗಿಯರು ಯಾವುದೇ ಜ್ಯೂಸ್ ಸೇವಿಸದೇ ಇರುವವರಿಗಿಂತ, ಶಿಫಾರಸ್ಸು ಮಾಡಲಾದ ಡಯಟ್ ಅನ್ನು ಪೂರೈಸುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂಬುದು ತಿಳಿದು ಬಂದಿದೆ.
* ಹಣ್ಣುಗಳ ಸೇವನೆಯು ತೂಕದ ಮೇಲೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಬೀರದು ಎಂದು ಸೂಚಿಸುವ ಹಿಂದಿನ ಅಧ್ಯಯನಗಳ ಸಂಶೋಧನೆಯನ್ನು ಇದು ದೃಢಪಡಿಸಿದೆ.
* ಹದಿಹರೆಯದಲ್ಲಿ ಹಣ್ಣಿನ ಜ್ಯೂಸ್ ಕುಡಿಯುವುದು ಉತ್ತಮ ಆಹಾರದ ಗುಣಮಟ್ಟವನ್ನು ಉತ್ತೇಜಿಸುತ್ತದೆ.
* ಹದಿಹರೆಯದವರಿಗೆ ಸೂಕ್ತ ಪ್ರಮಾಣದಲ್ಲಿ ಉಪಯುಕ್ತ ಕೊಡುಗೆಗಳನ್ನು ನೀಡುವುದರಲ್ಲಿ ಹಣ್ಣುಗಳ ಜ್ಯೂಸ್ ಹೆಚ್ಚಿನ ಪಾತ್ರ ವಹಿಸಿದೆ.