Parenting Tips: ನಿಮ್ಮ ಮಕ್ಕಳು ಓದಿನಲ್ಲಿ ಜಾಣರಾಗಿ, ಬದುಕಿನಲ್ಲಿ ಯಶಸ್ಸು ಗಳಿಸಬೇಕಾ; ಹಾಗಿದ್ರೆ ತಪ್ಪದೇ ಈ ಅಭ್ಯಾಸಗಳನ್ನು ರೂಢಿಸಿ
Mar 15, 2024 05:53 PM IST
ಪೇರೆಂಟಿಂಗ್ ಟಿಪ್ಸ್
- ತಮ್ಮ ಮಕ್ಕಳು ಚೆನ್ನಾಗಿ ಓದಿ ಉತ್ತಮ ಅಂಕಗಳಿಸಬೇಕು ಎನ್ನುವ ಆಸೆ ಪ್ರತಿಯೊಬ್ಬ ಪೋಷಕರಿಗೂ ಇರುವುದು ಸಹಜ. ಆದರೆ ಕೆಲವು ಮಕ್ಕಳು ಓದಿನಲ್ಲಿ ಹಿಂದೆ ಇರುತ್ತಾರೆ. ಉತ್ತಮ ಅಂಕ ಗಳಿಸುವ ಮಕ್ಕಳ ಈ ಅಭ್ಯಾಸಗಳನ್ನು ನಿಮ್ಮ ಮಕ್ಕಳಿಗೂ ಕಲಿಸಿ, ಓದಿನಲ್ಲಿ ಯಶಸ್ಸು ಸಾಧಿಸಲು ಸಹಕರಿಸಿ.
ಮಕ್ಕಳು ಓದಿನಲ್ಲಿ ಯಶಸ್ಸು ಗಳಿಸಬೇಕು, ಉತ್ತಮ ಅಂಕ ತೆಗೆಯಬೇಕು ಎಂಬ ಆಸೆ ಪ್ರತಿ ಪೋಷಕರಲ್ಲೂ ಇರುವುದು ಸಹಜ. ಆದರೆ ಕೆಲವು ಮಕ್ಕಳು ಎಷ್ಟೇ ಓದಿದರೂ ತಲೆಗೆ ಹತ್ತುವುದಿಲ್ಲ. ಹಾಗಿದ್ದಾಗ ಯಶಸ್ವಿ ಮಕ್ಕಳು ಅನುಸರಿಸುವ ಕ್ರಮವನ್ನು ಪೋಷಕರು ತಿಳಿದುಕೊಂಡು ಅದನ್ನು ನಿಮ್ಮ ಮಗು ಕೂಡ ಅನುಸರಿಸುವಂತೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಉತ್ತಮ ಅಂಕ ಗಳಿಸಲು ಮಕ್ಕಳು ಕೆಲವು ಕೌಶಲಗಳನ್ನು ಹೊಂದಿರಬೇಕು. ಉತ್ತಮ ಅಂಕ ಗಳಿಸಲು ಪ್ರತಿ ಮಗು ಹೊಂದಿರಬೇಕಾದ 10 ಅಂಶಗಳಿವು.
ಈ ಅಭ್ಯಾಸಗಳು ಕೇವಲ ಮಕ್ಕಳ ಓದಿನ ವಿಚಾರಕ್ಕೆ ಮಾತ್ರವಲ್ಲ, ಬದುಕಿನಲ್ಲಿ ಯಶಸ್ಸು ಗಳಿಸಲು ಕೂಡ ಬಹಳ ಮುಖ್ಯ. ಬೆಳೆವ ಸಿರಿ ಮೊಳಕೆಯಲ್ಲೇ ಎಂಬಂತೆ ಮಕ್ಕಳಿಗೆ ಬಾಲ್ಯದಿಂದಲೇ ಈ ಅಭ್ಯಾಸಗಳನ್ನು ರೂಢಿಸುವ ಮೂಲಕ ಭವಿಷ್ಯಕ್ಕೆ ಉತ್ತಮ ದಾರಿಯನ್ನು ತೋರುವ ಕೆಲಸವನ್ನು ಪೋಷಕರು ಮಾಡಬಹುದು.
ವಿರ್ಮಶಾತ್ಮಕ ಚಿಂತನೆ
ವಿವಿಧ ದೃಷ್ಟಿಕೋನಗಳಿಂದ ಮಾಹಿತಿಯನ್ನು ಪ್ರಶ್ನಿಸುವ, ವಿಶ್ಲೇಷಿಸುವ ಹಾಗೂ ಮೌಲ್ಯಮಾಪನ ಮಾಡುವ ಸಾಮರ್ಥ್ಯ ಹೊಂದಿರುವ ಮಕ್ಕಳು ಜೀವನದಲ್ಲಿ ಯಶಸ್ಸಿಗೆ ಹತ್ತಿರವಿರುತ್ತಾರೆ. ವಿರ್ಮಶಾತ್ಮಕ ಚಿಂತೆನಯು ಸಮಸ್ಯೆಗಳನ್ನು ಪರಿಹರಿಸುವ ಕೌಶಲವನ್ನು ವೃದ್ಧಿಸುತ್ತದೆ. ಇದು ಸ್ವಯಂ ನಿರ್ಧಾರಕ್ಕೂ ಅವಶ್ಯ.
ಸ್ವಷ್ಟ ಸಂವಹನ
ಸಂವಹನ ಸಾಮರ್ಥ್ಯವು ಮಕ್ಕಳ ವೈಯಕ್ತಿಕ ಹಾಗೂ ಶೈಕ್ಷಣಿಕ ಎರಡರ ಯಶಸ್ಸಿಗೂ ಕಾರಣವಾಗುತ್ತದೆ. ತಮ್ಮನ್ನು ತಾವು ಹೇಗೆ ಬಿಂಬಿಸಿಕೊಳ್ಳಬೇಕು ಎಂಬುದನ್ನು ಪೋಷಕರು ಮಕ್ಕಳಿಗೆ ಕಲಿಸಬೇಕು. ತಮ್ಮ ಎದುರಿನವರ ಮಾತನ್ನು ಕೇಳಿಸಿಕೊಳ್ಳಬೇಕು ಹಾಗೂ ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ಗುಣವನ್ನು ಬೆಳೆಸಿಕೊಳ್ಳಬೇಕು.
ಸೃಜನಶೀಲತೆ
ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಗುರುತಿಸಿ. ಹೊಸ ಹಾಗೂ ಭಿನ್ನ ಯೋಚನೆಗಳ ಮೂಲಕ ಮಕ್ಕಳ ಮನಸ್ಸನ್ನು ಕ್ರಿಯಾಶೀಲಗೊಳಿಸಬಹುದು. ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದನ್ನು ಪೋಷಕರು ಕಲಿಸಬೇಕು.
ಸೋಲಿನಿಂದ ಕಲಿಯುವುದು
ಜೀವನದಲ್ಲಿ ಏರಿಳಿತಗಳು ಸಹಜ. ಆದರೆ ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಒಂದೇ ರೀತಿ ಮನಸ್ಥಿತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಸೋಲಿನಿಂದ ಪಾಠ ಕಲಿಯುವುದನ್ನು ಮಗುವಿಗೆ ಹೇಳಿಕೊಡಬೇಕು.
ಬದಲಾವಣೆಗಳನ್ನು ಒಪ್ಪಿಕೊಳ್ಳುವುದು
ಉತ್ತಮ ಅಂಕ ಗಳಿಸುವ ಮಕ್ಕಳು ಬದಲಾವಣೆಗೆ ಹೆದರುವುದಿಲ್ಲ. ಅವರು ಬದಲಾವಣೆಯನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತಾರೆ. ಬದಲಾವಣೆಯಿಂದ ಕಲಿಯುವುದ ಹಾಗೂ ಇದಕ್ಕೆ ಹೊಂದಿಕೊಳ್ಳುವುದನ್ನು ಕೂಡ ಮಕ್ಕಳಿಗೆ ಪೋಷಕರು ಕಲಿಸಬೇಕು.
ಭಾವನಾತ್ಮಕವಾಗಿ ಸದೃಢವಾಗಿರುವುದು
ಮಕ್ಕಳು ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದರೆ ಭಾವನಾತ್ಮಕವಾಗಿ ಸದೃಢರಾಗಿರುವುದು ಬಹಳ ಮುಖ್ಯವಾಗುತ್ತದೆ. ಹಲವು ಮಕ್ಕಳ ಸೋಲಿಗೆ ಭಾವನಾತ್ಮಕ ಅಂಶಗಳೂ ಕಾರಣವಾಗುತ್ತವೆ. ಹಾಗಾಗಿ ಮಕ್ಕಳು ಭಾವನಾತ್ಮಕ ಬಲ ಹೊಂದಿರುವುದು ಮುಖ್ಯವಾಗುತ್ತದೆ.
ಸಹಕಾರ ಮನೋಭಾವ, ಸ್ನೇಹಪರತೆ
ಮಕ್ಕಳಿಗೆ ಇನ್ನೊಬ್ಬರಿಗೆ ಸಹಕಾರ ನೀಡುವ ಗುಣ ಬಹಳ ಮುಖ್ಯ. ಇತರರಿಗೆ ಸಹಾಯ ಮಾಡುವ ಮರುಗುವ ಗುಣ ಇರುವ ಮಕ್ಕಳು ನಿಜಕ್ಕೂ ಜೀವನದಲ್ಲಿ ಮುಂದೆ ಬರುತ್ತಾರೆ. ಜೊತೆಗೆ ಸಹಪಾಠಿಗಳೊಂದಿಗೆ ಸ್ನೇಹಪರ ಗುಣ ಹೊಂದಿರುವ ಮಕ್ಕಳು ಬದುಕಿನಲ್ಲಿ ಯಶಸ್ಸು ಸಾಧಿಸುತ್ತಾರೆ.
ಹಣಕಾಸಿನ ಜ್ಞಾನ
ಮಕ್ಕಳು ಕೇಳಿದಾಗೆಲ್ಲಾ ಹಣ ಕೊಟ್ಟು ಖುಷಿ ಪಡಿಸುವುದು ಮಾತ್ರವಲ್ಲ, ಹಣ ಸಂಪಾದನೆ ಹೇಗೆ, ಅದಕ್ಕೆ ಎಷ್ಟು ಕಷ್ಟ ಪಡಬೇಕು ಎಂಬುದನ್ನು ಅರ್ಥ ಮಾಡಿಸಿ. ಹಣ ಮೌಲ್ಯದ ತಿಳಿದ ಮಕ್ಕಳು ಬದುಕಿನ ಮೌಲ್ಯ, ಸಂಬಂಧಗಳ ಮೌಲ್ಯವನ್ನೂ ಅರಿಯುತ್ತಾರೆ.
ಡಿಜಿಟಲ್ ಜ್ಞಾನ
ಡಿಜಿಟಲ್ ಜ್ಞಾನ ಈಗಿನ ಮಕ್ಕಳಿಗೆ ಬಹಳ ಅವಶ್ಯ. ಆದರೆ ಅಂತರ್ಜಾಲವನ್ನು ಯಾವ ರೀತಿ ಸುರಕ್ಷತೆಯಿಂದ ಬಳಸಬೇಕು ಎಂಬ ಬಗ್ಗೆಯೂ ನಾವು ಅರಿವು ಹೊಂದಿರಬೇಕು.
ಸ್ವಯಂ ಶಿಸ್ತು
ಯಾವುದೇ ಮಗು ಜೀವನ, ಓದು, ವೈಯಕ್ತಿಕ ವಿಚಾರ ಯಾವುದರಲ್ಲಿ ಯಶಸ್ಸು ಗಳಿಸಬೇಕು ಅಂದರೂ ಸ್ವಯಂಶಿಸ್ತು ಬಹಳ ಮುಖ್ಯ. ಸಮಯ ನಿರ್ವಹಣೆ, ಗುರಿಗಳನ್ನು ಹೊಂದಿಸುವುದು ಇಂತಹ ಅಂಶಗಳು ಸಮಯ ಮುಖ್ಯವಾಗುತ್ತವೆ.
ನೋಡಿದ್ರಲ್ಲ ಈ ಎಲ್ಲಾ ಅಂಶಗಳನ್ನು ನಿಮ್ಮ ಮಗುವಿನಲ್ಲಿ ರೂಢಿಸಿದಾಗ ಮಾತ್ರ ಆ ಮಗು ಯಶಸ್ಸು ಕಾಣಲು ಸಾಧ್ಯ. ನಿಮ್ಮ ಮಗು ಕೂಡ ಓದಿನಲ್ಲಿ ಜಾಣನಾಗಿ, ಬದುಕಿನಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ಈ ಮೇಲಿನ ಅಂಶಗಳನ್ನು ಮಗುವಿನಲ್ಲಿ ರೂಢಿಸಿ.
ವಿಭಾಗ