ಪೋಷಕರೇ, ಮಕ್ಕಳ ಪರೀಕ್ಷೆ ಹೆಚ್ಚಿಸದಿರಲಿ ನಿಮ್ಮಲ್ಲಿ ಆತಂಕ, ಒತ್ತಡ; ಈ ಸಮಯದಲ್ಲಿ ಹೀಗಿರಲಿ ನಿಮ್ಮ ದಿನಗಳು – ಮನದ ಮಾತು
Jan 21, 2025 09:34 AM IST
ಪೋಷಕರೇ, ಮಕ್ಕಳ ಪರೀಕ್ಷೆ ಹೆಚ್ಚಿಸದಿರಲಿ ನಿಮ್ಮಲ್ಲಿ ಆತಂಕ, ಒತ್ತಡ (ಸಾಂಕೇತಿಕ ಚಿತ್ರ)
- ಮನದ ಮಾತು: ಪರೀಕ್ಷೆ ಸಮಯದಲ್ಲಿ ಕೆಲವು ಪೋಷಕರು ಮಕ್ಕಳಿಗಿಂತ ಹೆಚ್ಚು ಒತ್ತಡ, ಆತಂಕ ಅನುಭವಿಸುತ್ತಾರೆ. ಇದು ಮಕ್ಕಳ ಮೇಲೂ ಪರಿಣಾಮ ಬೀರುವುದು ಸುಳ್ಳಲ್ಲ. ಆ ಕಾರಣಕ್ಕೆ ಪರೀಕ್ಷೆ ಸಮಯದಲ್ಲಿ ಪೋಷಕರು ಮಕ್ಕಳ ಆತಂಕ, ಒತ್ತಡ ಕಡಿಮೆ ಮಾಡಿ ನಿರಾಳರಾಗಿರುವಂತೆ ಮಾಡಬೇಕೇ ವಿನಃ ತಾವು ಆತಂಕಕ್ಕೆ ಒಳಗಾಗಿ ಮಕ್ಕಳಿಗೆ ಇನ್ನಷ್ಟು ಗಾಬರಿ ಪಡಿಸಬಾರದು.

ಶಾಲೆಗಳಲ್ಲಿ ಇನ್ನೇನು ಕೊನೆಯ ಹಂತದ ಪರೀಕ್ಷೆ ಸಮೀಪಿಸುತ್ತಿದೆ. ಮಕ್ಕಳು ಪರೀಕ್ಷೆಯ ಒತ್ತಡ ಮತ್ತು ಆತಂಕವನ್ನು ಎದುರಿಸಿದರೆ ಹೆತ್ತವರೂ ಸಹ ಈ ಸಮಯದಲ್ಲಿ ಆತಂಕವನ್ನು ಅನುಭವಿಸುತ್ತಾರೆ. ಆದರೆ ಪೋಷಕರ ಆತಂಕವು ಮಕ್ಕಳ ಒತ್ತಡ ಮತ್ತು ಆತಂಕವನ್ನು ಮತ್ತಷ್ಚು ಹೆಚ್ಚಿಸುವ ಸಾಧ್ಯತೆಯಿರುತ್ತದೆ.
ಆದ್ದರಿಂದ ಪೋಷಕರು ಸಾಕಷ್ಟು ಎಚ್ಚರ ವಹಿಸಿ ತಮ್ಮ ಆತಂಕವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು. ಹೆತ್ತವರು ಮಕ್ಕಳ ಯೋಗಕ್ಷೇಮ, ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡಬೇಕು. ಅದರಲ್ಲೂ ಮಕ್ಕಳ ಪರೀಕ್ಷೆಯ ವಿಚಾರದಲ್ಲಿ ಪೋಷಕರು ಎಚ್ಚರದಿಂದಿರಬೇಕು. ಇದು ಸಹಜ ಮತ್ತು ಅಗತ್ಯವೂ ಕೂಡ ಹೌದು. ಇದರಿಂದ ಮಕ್ಕಳಿಗೆ ಪೋಷಕರ ನೆರವು ಮತ್ತು ಬೆಂಬಲ ಎರಡೂ ಸಹ ದೊರಕಿದಂತಾಗುತ್ತದೆ.
ಪೋಷಕರ ಆತಂಕ, ದುಗುಡ ಮಕ್ಕಳಿಗೆ ವರ್ಗಾವಣೆಯಾಗದಿರಲಿ
ಪೋಷಕರ ಕಾಳಜಿ ಮತ್ತು ನೆರವು ಅತಿಯಾಗಿ ಭಯ ಮತ್ತು ಆತಂಕಕ್ಕೆ ಕಾರಣವಾಗಬಹುದು. ಪೋಷಕರ ಈ ಆತಂಕ ಮತ್ತು ದುಗುಡ ಮಕ್ಕಳಿಗೂ ಸಹ ವರ್ಗಾವಣೆಯಾಗಬಹುದು. ನಿಮ್ಮ ಮಾತು, ನಡುವಳಿಕೆ, ಮುಖಛಾಯೆ, ಮನಸ್ಥಿತಿ ಮತ್ತು ನೀವು ವ್ಯಕ್ತಪಡಿಸುವಂತಹ ಭಾವನೆಗಳ ಮೂಲಕ ಮಕ್ಕಳಿಗೆ ನಿಮ್ಮ ಗಾಬರಿ, ಆತಂಕ, ಅಸಹಾಯಕತೆಗಳೆಲ್ಲವೂ ವರ್ಗಾವಣೆಯಾಗುತ್ತದೆ. ಇದರಿಂದ ಮಕ್ಕಳಿಗೆ ತಮ್ಮ ಭಯ ಆತಂಕವನ್ನು ನಿಭಾಯಿಸುವುದರ ಜೊತೆ ಪೋಷಕರ ಆತಂಕ ಭಯವನ್ನೂ ಸಹ ನಿಭಾಯಿಸಬೇಕಾಗುವ ಪರಿಸ್ಥಿತಿ ಸಂಭವಿಸಬಹುದು. ಪೋಷಕರ ಉದ್ದೇಶ ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ಗಳಿಸಿ ಉತ್ತೀರ್ಣರಾಗಲಿ, ತಮ್ಮ ಭವಿಷ್ಯವನ್ನು ಉಜ್ವಲವಾಗಿರಿಸಿಕೊಳ್ಳಲಿ ಎಂದಿದ್ದರೂ ಅವರ ಅತಿಯಾದ ನೀರೀಕ್ಷೆ, ಕಾಳಜಿ ಮತ್ತು ಗಮನ ಸದಾ ಮಕ್ಕಳ ಮೇಲೆ ಇದ್ದರೆ ಅದು ಮಕ್ಕಳಿಗೆ ಒತ್ತಡವಾಗಿ ತಿರುಗಿಕೊಳ್ಳುವ ಸಾಧ್ಯತೆಯಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸ ವಿಚಾರದಲ್ಲಿ ವಿಶೇಷವಾಗಿ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಸಾಕಷ್ಟು ಮಾನಸಿಕ ಒತ್ತಡಕ್ಕೆ ತುತ್ತಾಗುತ್ತಿದ್ದಾರೆ. ಪರಿಕ್ಷೆಯ ಸಂದರ್ಭದಲ್ಲಿ ಮಕ್ಕಳಿಗಿಂತ ಪೋಷಕರು ಹೆಚ್ಚು ಆತಂಕಗೊಂಡಿರುತ್ತಾರೆ.
ಈ ಕಾರಣಗಳಿಂದಾಗಿ ಪೋಷಕರು ಕೆಳಗಿನ ವಿವರಣೆಯ ಮೂಲಕ ಮಕ್ಕಳ ಮನಸ್ಥಿತಿಯನ್ನು ಅರಿತು ನಿಮ್ಮ ಭಯ ಮತ್ತು ಆತಂಕವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವುದಕ್ಕೆ ಪ್ರಯತ್ನಿಸಿ ಮತ್ತು ಮಕ್ಕಳ ಒತ್ತಡವನ್ನೂ ಸಹ ನಿಭಾಯಿಸುವುದಕ್ಕೆ ನೆರವಾಗಿರಿ.
1. ಮಕ್ಕಳ ದೈಹಿಕ ಆರೋಗ್ಯದ ಬಗ್ಗೆ ಗಮನವಿರಲಿ
ಪರೀಕ್ಷೆಯಿಂದಾಗಿ ಮಕ್ಕಳು ತಮ್ಮ ನಿದ್ರೆ ಉಟವನ್ನು ನಿರ್ಲಕ್ಷ್ಯ ಮಾಡುವುದು ಸಾಮಾನ್ಯ. ಆದರೆ ಬೆಳೆಯುತ್ತಿರುವ ಮಕ್ಕಳಿಗೆ 6-7 ತಾಸಿನ ನಿದ್ರೆ, ಸರಿಯಾದ ಸಮಯಕ್ಕೆ ಆರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆಗಳು ಅತ್ಯಗತ್ಯ. ಇದರಲ್ಲಿ ಯಾವ ಕೊರತೆಯಾದರೂ ಕೂಡ ಮಕ್ಕಳ ಏಕಾಗ್ರತೆ, ನೆನಪು ಮತ್ತು ಗ್ರಹಿಸುವ ಶಕ್ತಿಯು ಕುಂದಬಹುದು. ಕಿರಿಕಿರಿ, ಸಿಟ್ಟು, ಆಲಸ್ಯ, ನಿರಾಸಕ್ತಿಯೂ ಕಂಡುಬರುತ್ತದೆ. ಆದ್ದರಿಂದ ಪೋಷಕರು ಓದುವುದರ ಜೊತೆ ಮಕ್ಕಳ ಆರೋಗ್ಯವನ್ನು ಸಹ ಗಮನವಿಟ್ಟು ನೋಡಿಕೊಳ್ಳಬೇಕು.
2. ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಬೇಡಿ
ಮಕ್ಕಳಲ್ಲಿ ಪರೀಕ್ಷೆಯ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿ. ಅನಗತ್ಯ ಹೋಲಿಕೆಗಳು, ಸ್ನೇಹಿತರ ಜೊತೆ ಪೈಪೋಟಿ, ಫಲಿತಾಂಶದ ಕುರಿತು ಅವಾಸ್ತವಿಕ ನಿರೀಕ್ಷೆಗಳು, ಭವಿಷ್ಯದ ಕುರಿತು ವಿಪರೀತ ಚರ್ಚೆ ಇತ್ಯಾದಿ ವಿಷಯಗಳನ್ನು ಆದಷ್ಚು ಕಡಿಮೆ ಮಾಡಬೇಕು. ಮಕ್ಕಳ ಗಮನ ಕಲಿಕೆಯ ಮೇಲೆ ಹೆಚ್ಚಿರುವುದಕ್ಕೆ ಪ್ರೋತ್ಸಾಹಿಸಿ, ಅಂಕಗಳು ಮತ್ತು ಫಲಿತಾಂಶದ ಮೇಲೆ ಗಮನ ಹೆಚ್ಚಾದರೆ ಕಲಿಕೆಗೆ ಅಡ್ಡಿಯಾಗುತ್ತದೆ ಮತ್ತು ಆತಂಕ ಹೆಚ್ಚಾಗುತ್ತದೆ. ಆದ್ದರಿಂದ ಮಕ್ಕಳ ಮನಸ್ಥಿತಿಯ ಬಗ್ಗೆ ಹೆಚ್ಚು ಗಮನ ಹರಿಸಿ.
3. ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಜವಾಬ್ದಾರಿ ನಿಮ್ಮದು
ಮಕ್ಕಳ ಬುದ್ಧಿ, ನೆನಪು ಮತ್ತು ಪ್ರಯತ್ನ ಎಷ್ಟೇ ಪರಿಪೂರ್ಣವಾಗಿದ್ದರೂ ಸರಿ ತಮ್ಮ ಸಾಮರ್ಥ್ಯಗಳ ಮೇಲೆ ನಂಬಿಕೆ ಇಲ್ಲದೇ ಇದ್ದರೆ ಗೆಲುವು ಸುಲಭವಲ್ಲ. ತಾವು ಅಂದುಕೊಂಡಿದ್ದನ್ನು ಸಾಧಿಸಬೇಕೆಂದರೆ ಆತ್ಮವಿಶ್ವಾಸ ಬಹಳ ಮುಖ್ಯ. ಇದೊಂದಿಲ್ಲದಿದ್ದರೆ ಉಳಿದದ್ದೆಲ್ಲಾ ವ್ಯರ್ಥ. ಪೋಷಕರು ಸಾಧ್ಯವಾದಷ್ಟು ಮಕ್ಕಳ ಪ್ರಯತ್ನ, ಪ್ರತಿಭೆ, ಕೊಡುಗೆ, ಅವರ ಒಳ್ಳೆಯ ಗುಣ ಮತ್ತು ಆಲೋಚನೆಗಳನ್ನು ಗುರುತಿಸಿ ಮತ್ತು ಪ್ರಶಂಶಿಸಿ. ಎಷ್ಟೇ ಸಣ್ಣ ಪ್ರಯತ್ನವಿದ್ದರೂ ಸರಿ, ನಿಮ್ಮ ಕಡೆಯಿಂದ ಒಳ್ಳೆಯ ಮಾತುಗಳು ಬಂದರೆ ಮಕ್ಕಳಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಹೆಮ್ಮೆ ಮತ್ತು ನಂಬಿಕೆ ಹುಟ್ಟುತ್ತದೆ.
4. ಪೂರ್ವಸಿದ್ಧತೆ
ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸವೆನ್ನುವಂತೆ ಪರೀಕ್ಷೆಯ ಸಮಯದಲ್ಲಿ ಮಿತಿ ಮೀರೀದ ಸಿದ್ಧತೆಯನ್ನು ತಡೆಯುವುದು ಆರೋಗ್ಯಕರ. ಕೊನೆ ಸಮಯದ ಸಿದ್ಧತೆಯು ಕಲಿಕೆಯಾಗುವುದಿಲ್ಲ ಬದಲು ಪರೀಕ್ಷೆಯೊಂದನ್ನು ಸಮೀಪದಲ್ಲಿ ಗುರಿಯಾಗಿಟ್ಟುಕೊಂಡು ಬರೀ ಅಂಕಗಳಿಸಲು ಅಥವಾ ಉತ್ತೀರ್ಣರಾಗಲು ಪಾಲ್ಗೊಳ್ಳುವ ಒಂದು ಸ್ಪರ್ಧೆಯಷ್ಟೇ. ಅಲ್ಲದೇ ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡವನ್ನುಂಟು ಮಾಡುತ್ತದೆ. ಇದರಿಂದ ಭಯ, ಗೊಂದಲ ಮತ್ತು ಆತಂಕವೂ ಸಹ ಮೂಡಬಹುದು. ಪರಿಣಾಮವಾಗಿ ಮಕ್ಕಳು ಪರೀಕ್ಷೆಯಲ್ಲಿ ಓದಿದ ವಿಷಯಗಳನ್ನು ಮರೆಯಬಹುದು, ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಹುದು, ದೈಹಿಕ ಅನಾರೋಗ್ಯವೂ ಕೂಡ ಉಂಟಾಗಬಹುದು (ಜ್ವರ, ತಲೆ ನೋವು, ಹೊಟ್ಟೆ ನೋವು, ವಾಂತಿ, ಬೇದಿ ಇತ್ಯಾದಿ). ಈ ಕಾರಣಗಳಿಂದಾಗಿ ನಿಮ್ಮ ಮಕ್ಕಳನ್ನು ವಿಪರೀತವಾದ ಕೊನೆಯ ಸಮಯ ಸಿದ್ಧತೆಯಿಂದ ರಕ್ಷಿಸಿ.
5. ಹದಿಹರೆಯದ ವಯಸ್ಸು
12 ರಿಂದ 15ನೇ ವಯಸ್ಸಿನ ಮಕ್ಕಳಿಗೆ ಹಾರ್ಮೋನಲ್ ಅಸಮತೋಲನ ಹೆಚ್ಚಿರುತ್ತದೆ. ಇದರಿಂದ ವಯಸ್ಸಿನ ತಕ್ಕ ಆಕರ್ಷಣೆಗಳು, ಚಂಚಲ ಮನಸ್ಸು, ಹುಡುಗಾಟತನವಿರುತ್ತದೆ. ಹಾಗೆಯೇ, ಏಕಾಗ್ರತೆಯ ಕೊರತೆ, ಕೋಪ, ಹಠ ಹೆಚ್ಚಿರುತ್ತದೆ. ಪ್ರಚೋದನೆಗಳಿಗೆ ಬೇಗ ಪ್ರತಿಕ್ರಯಿಸುತ್ತಾರೆ. ಸ್ನೇಹಿತರ ಕಡೆಗೆ ಒಲವು ಹೆಚ್ಚಿರುತ್ತದೆ. ಓದಿನ ಕಡೆಗೆ ಗಮನವಿರುವುದಿಲ್ಲ.
ಪರೀಕ್ಷೆಯ ಸಮಯದಲ್ಲಿ ಇವುಗಳ ಪರಿಣಾಮ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಪೋಷಕರು ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಂಡು, ಮಕ್ಕಳ ಜೊತೆ ಸಂಯಮದಿಂದಿರಿ. ಅವರ ತಪ್ಪುಗಳನ್ನು ತಿದ್ದಿ ಆದರೆ ಹೆಚ್ಚು ನಿಂದಿಸದೆ, ಅವಹೇಳನ ಮಾಡದೇ, ನೀವು ಸಹ ಹೆಚ್ಚು ಸಂಕಟವನ್ನು ಅನುಭವಿಸದೇ ಪರಿಸ್ಥಿಯನ್ನು ಎದುರಿಸಿ. ಆದರೆ ಕಾಲಕ್ರಮೇಣ ವಯಸ್ಸು ಹೆಚ್ಚಾದಂತೆ ಪ್ರಬುದ್ಧತೆಯು ಬರುತ್ತದೆ ಮತ್ತು ಬಹಳ ಮಟ್ಟಿಗೆ ಸುಧಾರಿಸಿಕೊಳ್ಳುತ್ತಾರೆ.
6. ಪರೀಕ್ಷೆಯ ವೇಳೆಯಲ್ಲಿ ಪೋಷಕರ ಆತಂಕವನ್ನು ಹೇಗೆ ನಿಭಾಯಿಸುವುದು?
ಕೆಳಗೆ ವಿವರಿಸಿದ ಎಲ್ಲಾ ಅಂಶಗಳನ್ನು ಪಾಲಿಸಿ. ಹಾಗೆಯೇ, ಮಕ್ಕಳ ವಿಷಯದಲ್ಲಿ ಸಂಯಮ ಮತ್ತು ಸಹಾನುಭೂತಿ ಬಹಳ ಮುಖ್ಯ, ಪ್ರತಿಯೊಂದು ಬೆಳವಣಿಗೆಯ ಹಂತದಲ್ಲಿ ಹೊಸ ಸವಾಲುಗಳು ಎದುರಾಗುತ್ತವೆ. ಈ ಹೊಸ ಸವಾಲುಗಳು ಮತ್ತು ಪರೀಕ್ಷೆಗಳು ಹೆತ್ತವರಿಗೆ ಹೊಸ ಆತಂಕ ಮತ್ತು ಒತ್ತಡವನ್ನು ತರುತ್ತವೆ. ಪೋಷಕರು ಇದನ್ನು ಮನನ ಮಾಡಿಕೊಳ್ಳಬೇಕು, ಸಂದಿಗ್ಧ ಪರಿಸ್ಥಿತಿಯಲ್ಲಿ ಆತಂಕವಾಗುವುದು ಸಹಜ, ಇದನ್ನು ಹೀಗೆೇ ಬಿಟ್ಟರೆ ಒತ್ತಡವಾಗಿ ರೂಪಾಂತರಗೊಂಡು ನಿಮ್ಮ ಸುತ್ತಮುತ್ತಲಿರುವ ಜನಗಳಿಗೂ ಹರಡುತ್ತದೆ. ಪೋಷಕರು ಇದನ್ನು ಗಮನದಲ್ಲಿಟ್ಟುಕೊಂಡು, ಮಕ್ಕಳ ಪರೀಕ್ಷೆಯ ಸಂದರ್ಭದಲ್ಲಿ ತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಚಾಗಿ ನಿಭಾಯಿಸಿ. ಆದರೆ ನಿಮಗೆ ಮಕ್ಕಳ ಮೇಲಿರುವ ಫಲಿತಾಂಶದ ನಿರೀಕ್ಷೆ ವಾಸ್ತವಕ್ಕೆ ಹತ್ತಿರವಿರಲಿ ಮತ್ತು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ನಿಮ್ಮ ಮಗುವಿನ ಸಾಮಾರ್ಥ್ಯದ ಬಗ್ಗೆ ನಂಬಿಕೆಯಿರಲಿ ಮತ್ತು ಅವರ ಪರೀಕ್ಷೆ ಆತಂಕವನ್ನು ಕಡಿಮೆ ಮಾಡುವ ಜವಾಬ್ದಾರಿ ನಿಮ್ಮದು ಹೊರತು ಹೆಚ್ಚು ಮಾಡುವುದಲ್ಲ.
ಇಷ್ಟರ ಮೇಲೂ, ನಿಮ್ಮ ಮಗುವಿನ ಪರೀಕ್ಷೆ ಕುರಿತು ನಿಮಗೆ ಬಹಳ ಕಸಿವಿಸಿಯಾಗುತ್ತಿದ್ದು, ಮಗುವಿಗೂ ಸಹ ಇದರ ಪರಿಣಾಮ ತಾಕುತ್ತಿದೆ, ನಿಮ್ಮ ಆತಂಕವನ್ನು ನಿಮಗೆ ನಿಭಾಯಿಸಲು ಆಗುತ್ತಿಲ್ಲವೆಂದರೆ, ಆಪ್ತಸಮಾಲೋಚನೆ ಅಥವಾ ಮನಃಶಾಸ್ತ್ರಜ್ಞರ ಮಾರ್ಗದರ್ಶನ ತೆಗೆದುಕೊಳ್ಳಿ.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.
ವಿಭಾಗ