Parenting: ಹರೆಯದ ಮಗಳಿಗೆ ಅಮ್ಮ ಅಪಥ್ಯ? ಅಪ್ಪನೇ ಫೇವರೀಟ್; ತಾಯಿ-ಮಗಳ ರಾಜಿ ಸಂಧಾನಕ್ಕೆ ನಾಲ್ಕು ಸಮಾಧಾನದ ಮಾತು
Oct 31, 2023 06:09 PM IST
ಆಪ್ತ ಸಮಾಲೋಚಕಿ ಭವ್ಯಾ ವಿಶ್ವನಾಥ್
- “ನನ್ನ ಮಗಳೇಕೆ ಹೀಗಾದಳು” ಹರೆಯದ ಯುವತಿಯ ತಾಯಿಯನ್ನು ಕಾಡುತ್ತಿರುವ ಪ್ರಶ್ನೆಯಿದು. ಮನದಾಳದಲ್ಲಿ ಬಹುಕಾಲ ಕಾಡಿದ್ದ ಪ್ರಶ್ನೆಯೊಂದಕ್ಕೆ ಉತ್ತರ ಬಹಳ ಸರಳ. ಅನುಸರಿಸಿದರೆ ಈ ತಾಯಿ-ಮಗಳ ಬದುಕು ಬಂಗಾರ. ಆಪ್ತಸಮಾಲೋಚಕಿ ಮತ್ತು ಮನಃಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್ ಈ ಸಲ ತಾಯಿ-ಮಗಳ ಸಂಬಂಧದ ಕುರಿತು ವಿವರಿಸಿದ್ದಾರೆ.
ಪ್ರಶ್ನೆ: ನಮಸ್ಕಾರ ಮೇಡಂ. ನನ್ನ ಮಗಳಿಗೆ ಈಗ 18 ವರ್ಷ. ಮೊದಲು ನನ್ನನ್ನು ಜಾಸ್ತಿ ಹಚ್ಚಿಕೊಂಡಿದ್ದಳು. ಇತ್ತೀಚೆಗೆ ಎಲ್ಲದಕ್ಕೂ 'ಅಪ್ಪ ಅಪ್ಪ' ಅಂತಿರ್ತಾಳೆ. ನನ್ನನ್ನು ಲೆಕ್ಕಕ್ಕೇ ಇಟ್ಟಿಲ್ಲ ಅನ್ಸತ್ತೆ. ಒಂದೊಂದು ಸಲ ತುಂಬಾ ಬೇಜಾರಾಗುತ್ತೆ. ಅವಳಿಗೆ ನಾನು ಬೇಡವಾಗ್ತಿದ್ದೀನಿ ಅಂತೆಲ್ಲಾ ಅನ್ನಿಸಿಬಿಡತ್ತೆ. ಇದೇ ಕಾರಣಕ್ಕೆ ಗಂಡನೊಂದಿಗೆ ಜಗಳಾನೂ ಆಡಿದ್ದೀನಿ. ಅವರು "ಎಲ್ಲ ನಿನ್ನ ಭ್ರಮೆ ಅಷ್ಟೇ. ಅವಳಿಗೆ ನಾವಿಬ್ಬರೂ ಬೇಕು" ಅಂತ ಬುದ್ಧಿ ಹೇಳ್ತಾರೆ. ನನಗಿರೋದು ಒಬ್ಬಳೇ ಮಗಳು. ಅವಳೇಕೆ ಹೀಗೆ ನನ್ನ ನೆಗ್ಲೆಕ್ಟ್ ಮಾಡ್ತಿದ್ದಾಳೆ? ನನಗೆ ಅವಳ ಪ್ರೀತಿ ಬೇಕು. ಏನು ಮಾಡಲಿ? ದಯವಿಟ್ಟು ಉತ್ತರಿಸಿ.
ಉತ್ತರ: ತಾಯಿಯಾಗಿ ನಿಮ್ಮ ಆತಂಕ ಸಹಜ. ಇರುವ ಒಬ್ಬಳೇ ಮಗಳು ನಿಮ್ಮನ್ನು ಅಲಕ್ಷ್ಯ ಮಾಡಿದಾಗ ಬೇಸರವಾಗಿ ನಾನು ಅವಳಿಗೆ ಬೇಡವೆಂಬ ಭಾವನೆ ಬಂದೇ ಬಿಡುತ್ತದೆ. ಅದರಲ್ಲೂ ತಂದೆ ಅಥವಾ ಕುಟುಂಬದ ಇನ್ನೊಬ್ಬ ಸದಸ್ಯರ ಸಂಗಡ ಹೆಚ್ಚು ಅನ್ಯೋನ್ಯತೆಯಿಂದ ಇದ್ದು, ಅವರಿಗೆ ಹೆಚ್ಚು ಗಮನ ಕೊಡುತ್ತಿದ್ದರೆ ನಿಮ್ಮಲ್ಲಿ ಇನ್ನಷ್ಟು ಬೇಸರವಾಗುವುದುಂಟು. ಇಂಥ ಸಮಯದಲ್ಲಿ, ಪೋಷಕರು ಮಕ್ಕಳನ್ನು ಹೆಚ್ಚು ಆಳವಾಗಿ ಅರ್ಥ ಮಾಡಿಕೊಂಡರೆ, ಮಕ್ಕಳ ವತ೯ನೆಯಿಂದ ಮನಸ್ಸಿಗೆ ನೋವುಂಟಾಗುವುದಿಲ್ಲ. ಹೆಣ್ಣಾಗಲಿ, ಗಂಡಾಗಲಿ 18 ವಯಸ್ಸಿನ ಪ್ರಾಯದ (ಟೀನೇಜ್) ಸಮಯದಲ್ಲಿ, ಮಕ್ಕಳ ದೈಹಿಕ ಬೆಳವಣಿಗೆಯ ಜೊತೆ ಮಾನಸಿಕ ಬದಲಾವಣೆಯೂ ಸಹ ಆಗುತ್ತಿರುತ್ತದೆ. ದೈಹಿಕ ಬದಲಾವಣೆಗಳಿಗೆ ಹೊಂದಿಕೊಳ್ಳುವ ಮಾನಸಿಕ ತಯಾರಿ ನಡೆಯುತ್ತಿರುತ್ತದೆ.
ಕಿರಿಕಿರಿ, ಒತ್ತಡ, ಆತಂಕ, ದುಗುಡ, ಪೈಪೋಟಿ, ಹೋಲಿಕೆಗಳು ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ವಿಶೇಷವಾಗಿ, ಹೆಣ್ಣುಮಕ್ಕಳು, ತಂದೆಗೆ ಹೆಚ್ಚು ಪ್ರಾಶಸ್ತ್ಯ ಕೊಡುವ ಸಾಧ್ಯತೆ ಹಾಗೂ ಗಂಡುಮಕ್ಕಳು ತಾಯಿಗೆ ಹೆಚ್ಚು ಪ್ರಾಶಸ್ತ್ಯ ನೀಡುವ ಸಾಧ್ಯತೆಯಿರುತ್ತದೆ.
ಯಾವುದೇ ವಿಚಾರದಲ್ಲಾಗಲಿ, ಸನ್ನಿವೇಶಗಳಲ್ಲಾಗಲಿ ನಿಮ್ಮ (ಪೋಷಕರ) ದೃಷ್ಟಿಕೋನವನ್ನು ಈ ವಯಸ್ಸಿನ ಮಕ್ಕಳಿಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಮಕ್ಕಳಿಗೆ ಪರಿಸ್ಥಿತಿಯ ಪರಿಣಾಮಗಳು ಮತ್ತು ಅಪಾಯಗಳ ಕುರಿತು ಹೆಚ್ಚು ತಿಳಿವಳಿಕೆ ಇರುವುದಿಲ್ಲ. ಹೀಗಾಗಿ, ಪೋಷಕರಿಗೆ, ಈ ವಯಸ್ಸಿನ ಮಕ್ಕಳನ್ನು ಅರ್ಥ ಮಾಡಿಕೊಂಡು ನಿಭಾಯಿಸುವುದು ಒಂದು ರೀತಿಯ ಸವಾಲು ಎನ್ನಬಹುದು. ಆದರೆ, ಮಕ್ಕಳ ಮನಸ್ಸನ್ನು ಆಳವಾಗಿ ಅರಿತರೆ, ಅವರ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಳ್ಳುವುದಕ್ಕೆ ಮತ್ತು ಪೋಷಕರ ಮನಸ್ಥಿತಿಯನ್ನು ಮಕ್ಕಳಿಗೆ ಅರ್ಥ ಮಾಡಿಸುವುದಕ್ಕೆ ಸುಲಭವಾಗುತ್ತದೆ. ಈ ಕೆಳಕಂಡ ಟಿಪ್ಸ್ ಅನುಸರಿಸಿ ನಿಮ್ಮ ಮಗಳ ಮನಸ್ಸನ್ನು ಅರಿಯಿರಿ
ಹರೆಯದ ಮಗಳನ್ನು ಅರ್ಥ ಮಾಡಿಕೊಳ್ಳಲು ಈ ಟಿಪ್ಸ್ ಗಮನಿಸಿ
1) ಇಂತಹ ಸಮಸ್ಯೆಯನ್ನು ಎದುರಿಸಲು ನೀವು ಮೊದಲು ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಆದಷ್ಟು ಸಂಯಮದಿಂದ ಇರಿ ಮತ್ತು ಪರಿಪೂರ್ಣತ್ವ (Perfectionist) ನಿರೀಕ್ಷಿಸಬೇಡಿ. ನೀವು ಕೂಡ ಮನುಷ್ಯರು. ನಿಮ್ಮ ನಿರೀಕ್ಷೆ ಸಹಜ. ಅದರಿಂದ ಏನೂ ತಪ್ಪಿಲ್ಲ. ಆದರೂ ನೀವು ತಾಳ್ಮೆಯಿಂದ ಇರಬೇಕು.
2) ನಿರ್ಣಯಿಸಬೇಡಿ (Be Non Judgmental): ಮಗಳ ನಿರ್ಧಾರ, ಅನಿಸಿಕೆ, ನಂಬಿಕೆಗಳನ್ನು ತಪ್ಪು, ಸರಿಯೆಂದು ಒಮ್ಮೆಲೇ ತೀರ್ಮಾನ ಮಾಡಬೇಡಿ. ನಿಧಾನವಾಗಿ ಸಮಾಲೋಚಿಸಿ, ಮಗಳ ದೃಷ್ಟಿಕೋನದಲ್ಲಿ ಯೋಚಿಸಿ ನೋಡಿ.
3) ಗಮನವಿಟ್ಟು ಕೇಳಿಸಿಕೊಳ್ಳಿ: ನಿಮ್ಮ ಮಗಳು ಯಾವುದೇ ವಿಷಯದ ಬಗ್ಗೆ ಅವಳ ಅನಿಸಿಕೆ, ಅಭಿಪ್ರಾಯವನ್ನು ನಿಮ್ಮ ಹತ್ತಿರ ಹಂಚಿಕೊಳ್ಳುತ್ತಿದ್ದಾಗ ಗಮನವಿಟ್ಟು ಕೇಳಿಸಿಕೊಳ್ಳಿ. ಅಡಚಣೆಗಳನ್ನು ತಡೆಯಿರಿ.
4) ಸಾರಿ ಕೇಳಿ: ಯಾವುದೇ ಸಂದರ್ಭದಲ್ಲಿ ನೀವು ಮಗಳ ಮೇಲೆ ಅತಿಯಾಗಿ ಕೋಪಗೊಂಡು ಪ್ರತಿಕ್ರಿಯಿಸಿದ್ದರೆ "ಕ್ಷಮಿಸು" (ಸಾರಿ) ಎಂದು ಕೇಳಿ. ನಂತರ ನಿಧಾನವಾಗಿ ಮಾತನಾಡಿ.
5) ಕೋಪದಲ್ಲಿ ಮಾತನಾಡಬೇಡಿ: ನೀವು ಮತ್ತು ನಿಮ್ಮ ಮಗಳು ಕೋಪಗೊಂಡಾಗ ಮಾತಾನಾಡುವುದು / ಚರ್ಚಿಸುವುದನ್ನು ತಡೆಯಿರಿ. ಬದಲಾಗಿ ಇಬ್ಬರೂ ಶಾಂತವಾಗುವವರೆಗೆ ಕಾಯಿರಿ.
6) ನೀವು ಏನು ಹೇಳಬೇಕು ಎಂಬುದನ್ನು ಮೊದಲೇ ತಯಾರಿ ಮಾಡಿಕೊಂಡು ಮಾತನಾಡಿ. ನೀವು ಬಯಸುವ ಪದಗಳು ನಿಮ್ಮ ಮಗಳನ್ನು ನೋಯಿಸಿದಂತೆ , ಗೌರವಾನ್ವಿತವಾಗಿರಲಿ. ಮೂದಲಿಸುವುದು, ಹಣೆಪಟ್ಟಿ ಹಚ್ಚುವುದನ್ನು ತಡೆಯಿರಿ.
7) ಸೂಕ್ತ ಸಮಯ ನೋಡಿ, ನಿಮ್ಮ ಬೇಸರವನ್ನು ಮಗಳ ಹತ್ತಿರ ಹಂಚಿಕೊಳ್ಳಿ. ತಕ್ಷಣವೇ ಅವಳು ಅರ್ಥಮಾಡಿಕೊಳ್ಳಬೇಕೆಂದು ಬಯಸಬೇಡಿ. ಅರ್ಥ ಮಾಡಿಕೊಳ್ಳಲು ಅವಳಿಗೆ ಸ್ವಲ್ಪ ಸಮಯಾವಕಾಶ ಕೊಡಿ.
8) ಸಮಯ ಕೊಡಿ: ಮಗಳ ಸಾಮಿಪ್ಯದಲ್ಲಿ ಪದೇಪದೆ ಈ ವಿಷಯದ ಕುರಿತು ಮಾತಾನಾಡ ಬೇಡಿ. ಅವಳಿಗೆ ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ನೀಡಿ. ಸಮಸ್ಯೆ ಏನು ಎನ್ನುವುದು ಸರಿಯಾಗಿ ಅರ್ಥ ಮಾಡಿಕೊಂಡು ಮಾತುಕತೆ ನಡೆಸಿ.
ಮೇಲಿನ ಎಲ್ಲ ಟಿಪ್ಸ್ ಸರಿಯಾಗಿ ಅರ್ಥ ಮಾಡಿಕೊಳ್ಳಿ, ಅನುಸರಿಸಿ. ಮುಖ್ಯವಾಗಿ ಮಗಳು ನಿಮ್ಮನ್ನು ಪ್ರೀತಿಸುವುದಿಲ್ಲವೆಂಬ ಮನೋಭಾವನೆಯಿಂದ ಹೊರಗೆ ಬರಲು ಪ್ರಯತ್ನಿಸಿ. ಅವಳು, ನಿಮ್ಮನ್ನು ಮೊದಲಿನಷ್ಟೇ ಪ್ರೀತಿಸುತ್ತಿದ್ದು ಅದನ್ನು ವ್ಯಕ್ತಪಡಿಸುವ ರೀತಿ ಬದಲಾಗಿರಬಹುದು. ಬದಲಾಗಿರುವ ರೀತಿಯನ್ನು ನೀವು ಗುರುತಿಸಲು ವಿಫಲವಾಗಿದ್ದು ಅವಳು ನಿಮ್ಮನ್ನು ಪ್ರೀತಿಸುವುದೇ ಇಲ್ಲವೆಂದು ಭಾವಿಸಿರಬಹುದು ಅಥವಾ ಅವಳು ನಿಮ್ಮ ಮೇಲಿರುವ ಪ್ರೀತಿ ವ್ಯಕ್ತಪಡಿಸುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿರಬಹುದು.
ಈ ಬದಲಾವಣೆಗಳು ನಿಮಗೆ ಅವಳು ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾಳೆ ಎಂದೆನಿಸಿರಬಹುದು. ಒಮ್ಮೆ ನಿಧಾನವಾಗಿ ಕೂಲಂಕಶವಾಗಿ ಯೋಚಿಸಿ ನೋಡಿ. ಪ್ರಾಯದ ವಯಸ್ಸಿನ ಕಾರಣದಿಂದಾಗಿ ಆದ್ಯತೆ ಮತ್ತು ಆಕರ್ಷಣೆಗಳು ಬದಲಾಗಿ ನಿಮ್ಮ ಮಗಳ ವರ್ತನೆಯಲ್ಲಿ ವ್ಯತ್ಯಾಸ ಕಂಡುಬಂದಿರಬಹುದು. ಆದರೆ ಖಂಡಿತವಾಗಿಯೂ ಅವಳಿಗೆ ತಾಯಿಯ ಮೇಲಿರುವ ಪ್ರೀತಿ ಕಡಿಮೆಯಾಗಿರುವುದಿಲ್ಲ. ನಿಮ್ಮ ಅನಿಸಿಕೆಯನ್ನು ಹೀಗೆ ಮುಕ್ತವಾಗಿ ಹಂಚಿಕೊಳ್ಳುವುದು ಯಾವಾಗಲೂ ಒಳ್ಳೆಯದು.
(ರಿಲೇಷನ್‌ಶಿಪ್ ಟಿಪ್ಸ್, ಪೇರೆಂಟಿಂಗ್ ಟಿಪ್ಸ್, ಆರೋಗ್ಯ, ಫ್ಯಾಷನ್ ಕುರಿತ ಮಾಹಿತಿಗೆ kannada.hindustantimes.com ಜಾಲತಾಣಕ್ಕೆ ಭೇಟಿ ನೀಡಿ).
---
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 9945743542
ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.