Parenting Tips: ಜಂಕ್ ಫುಡ್ ಮೋಹಿ ಮಗಳನ್ನು ಮನೆ ಊಟ ಇಷ್ಟಪಡುವಂತೆ ಮಾಡುವುದು ಹೇಗೆ? ಒಂದೊಳ್ಳೇ ಐಡಿಯಾ ಕೊಡಿ ಮೇಡಂ; ಮನದ ಮಾತು
Jul 18, 2023 07:38 PM IST
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್
- Junk Food vs Healthy Food: ಮನೆಯಲ್ಲಿ ಮಾಡಿದ ಅಡುಗೆಗಿಂತ ಬಣ್ಣಬಣ್ಣದ ಪ್ಯಾಕೆಟ್‌ನಲ್ಲಿರುವ ಜಂಕ್ ಫುಡ್ ಇಷ್ಟಪಡುವ ಮಕ್ಕಳನ್ನು ನಿಭಾಯಿಸುವುದು ಹೇಗೆ? ಜಂಕ್ ಫುಡ್ ಸೇವನೆ ವ್ಯಸನವಾಗಿರುವ ಮಕ್ಕಳ ಮನಸ್ಸು ತಿರುಗಿಸುವುದು ಕಷ್ಟ, ಆದರೆ ಅಸಾಧ್ಯವಲ್ಲ. ಹೇಗೆ ಎಂದು ಉತ್ತರಿಸಿದ್ದಾರೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್.
ಪ್ರಶ್ನೆ: ನನ್ನ ಮಗಳು ಈಗ 2ನೇ ತರಗತಿ. ಬಾಕ್ಸ್‌ಗೆ ಅಂತ ಹಾಕಿಕೊಟ್ಟಿದ್ದನ್ನೆಲ್ಲಾ ವಾಪಸ್ ತರ್ತಾಳೆ. ಆದ್ರೆ ಚಿಪ್ಸು, ಬೇಕರಿ ಐಟಂ ಖುಷಿಪಟ್ಟು ತಿಂತಾಳೆ. ಅವಳನ್ನು ದಾರಿಗೆ ತರುವುದು ಹೇಗೆ? ಏನಾದ್ರೂ ಐಡಿಯಾ ಕೊಡಿ ಮೇಡಂ. - ಶ್ರೀವಿಜೇಂದ್ರ, ರಾಯಚೂರು
ಉತ್ತರ: ಹೌದು, ಮಕ್ಕಳು ಬಾಕ್ಸ್‌ಗೆ ಅಂತ ಹಾಕಿಕೊಟ್ಟಿದ್ದನ್ನೆಲ್ಲಾ ವಾಪಸ್ ತಂದಾಗ ಪೋಷಕರಿಗೆ ಬೇಸರವಾಗುವುದು ಸಹಜ. ಮನಸಿಗೆ ಗೊಂದಲ ಹಾಗೂ ಕಿರಿಕಿರಿ ಆಗುವುದುಂಟು. ಮಕ್ಕಳಿಗೆ ಓದಿನ ಒತ್ತಡ, ಆಟದ ಕೊರತೆ, ಅನಾರೋಗ್ಯಕರ ಸ್ಪಧೆ೯ಗಳು ಮತ್ತುಇತರೆ ಚಟುವಟಿಕೆಗಳ ಸಮಸ್ಯೆಗಳ ಜೊತೆ ಮಕ್ಕಳಿಗೆ ಆರೋಗ್ಯಕರ ಆಹಾರದ ಕೊರತೆಯು ಹೆಚ್ಚಾಗಿದೆ. ಅಂದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಮತ್ತು ಪೋಷಕರು 'ಜಂಕ್' ಫುಡ್‌ಗಳ ಹೆಚ್ಚು ಮೊರೆ ಹೋಗುವುದು ಒಂದು ವ್ಯಸನವೇ ಆಗಿದೆ. ಇದನ್ನು ನೀವು ಚಟ ಎಂದು ಪರಿಗಣಿಸಬಹುದು. ಫೋನ್, ಟಿವಿ, ಮೊಬೈಲ್ (ಗ್ಯಾಜೆಟ್ ಅಡಿಕ್ಷನ್) ತರಹ 'ಜಂಕ್ ಫುಡ್ ಅಡಿಕ್ಷನ್' ಕೂಡ ಮಕ್ಕಳಿಗೆ ಹಾನಿಕರ.
ಏನಿದು ಜಂಕ್ ಫುಡ್ ವ್ಯಸನ?
ಮಾರುಕಟ್ಟೆಯಲ್ಲಿ ಸುಲಭ ಹಾಗೂ ಕಡಿಮೆ ದರದಲ್ಲಿ ಸಿಗುವ ಬಣ್ಣಬಣ್ಣದ, ತರಹೇವಾರಿ ಬಿಸ್ಕೀಟ್, ಚಿಪ್ಸ್, ಚಾಕೊಲೇಟ್, ಬೇಕರಿ ತಿನಿಸುಗಳು, ಪಾನಿಪುರಿಯಂಥ ರುಚಿಕರ ಚಾಟ್ಸ್‌ಗಳು, ಕೋಕ್, ಪೆಪ್ಸಿಯಂಥ ಜ್ಯೂಸ್‌ಗಳು, ಪಿಜ್ಜಾ, ಬರ್ಗರ್, ಗೋಬಿ ಮಂಚೂರಿ, ನೂಡಲ್ಸ್, ಫ್ರೈಡ್ ರೈಸ್ ಮುಂತಾದ ಆಹಾರಗಳನ್ನು ಜಂಕ್ ಫುಡ್‌ಗಳೆಂದು ಕರೆಯಬಹುದು. ಇವುಗಳು ಮಕ್ಕಳನ್ನು ದಿಢೀರನೆ ಸುಲಭವಾಗಿ ಆಕಷಿ೯ಸುತ್ತವೆ.
ಇವುಗಳಲ್ಲಿ ಕೆಳಕಂಡ ಅನಗತ್ಯವಾದ ಮತ್ತು ಅನಾರೋಗ್ಯಕರವಾದ ಪದಾರ್ಥಗಳು ಇರುತ್ತವೆ. ಹೆಚ್ಚು ಸಕ್ಕರೆ ಅಂಶ (high sugar levels), ಕೃತಕ ಸಿಹಿಕಾರಕಗಳ ಬಳಕೆ (artificial sweeteners) ಮತ್ತು ರಾಸಯನಿಕ ಸಂರಕ್ಷಕಗಳು (chemical based preservatives) ಇವ್ಯಾವುದೂ ಆರೋಗ್ಯಕ್ಕೆ ಒಳ್ಳೆಯದಲ್ಲ.
ಜಂಕ್ ಫುಡ್ ದುಷ್ಪರಿಣಾಮಗಳು
1) ಜಂಕ್ ಫುಡ್‌ನಲ್ಲಿರುವ ಈ ಪದಾರ್ಥಗಳಲ್ಲಿನ ಸಕ್ಕರೆ ಮತ್ತು ಕೊಬ್ಬಿನ ಅಂಶ ಮಕ್ಕಳನ್ನು ಅನವಶ್ಯಕವಾಗಿ ದಪ್ಪಮಾಡುವುದಲ್ಲದೆ ಮಕ್ಕಳನ್ನು ಚಟದ ದಾಸರಾಗಿ ಬದಲಾಯಿಸುತ್ತದೆ.
2) ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಜಂಕ್ ಫುಡ್ ರುಚಿನೋಡಿದರೆ, ಅವರಿಗೆ ಅದನ್ನೇ ಮತ್ತೆಮತ್ತೆ ತಿನ್ನಬೇಕೆನಿಸುತ್ತದೆ. ಮನೆಯಲ್ಲಿ ಮಾಡಿದ ಆಹಾರ ಪದಾರ್ಥಗಳು ರುಚಿಯೆನಿಸುವುದಿಲ್ಲ.
3) ಹಸಿವಿದ್ದರೂ ಇಲ್ಲದಿದ್ದರೂ ಇಂತಹ ಆಹಾರಗಳೇ ಬೇಕೆಂದು ಮಕ್ಕಳು ಹಟ ಹಿಡಿಯುತ್ತಾರೆ. ಇದನ್ನೇ ಚಟ / ವ್ಯಸನವೆನ್ನುವುದು.
4) ತಿನ್ನುವಾಗ ಮಕ್ಕಳಿಗೆ ಖುಷಿಯಿದ್ದರೂ ತೃಪ್ತಿಯಿರುವುದಿಲ್ಲ. ಆರೋಗ್ಯವು ಸಹ ಕೆಡುತ್ತದೆ, ಅನೇಕ ರೋಗಗಳಿಗೆ ದಾರಿಮಾಡಿಕೊಡುತ್ತದೆ.
ಮಕ್ಕಳಲ್ಲಿ ಜಂಕ್ ಫುಡ್ ವ್ಯಸನ ಬಿಡಿಸಲು ಹೀಗೆ ಮಾಡಿ
1) ಅರಿವು: ಮಕ್ಕಳಿಗೆ ಅರ್ಥವಾಗುವಂತೆ ಸುಲಭ ರೀತಿಯಲ್ಲಿ, ಆಕರ್ಷಕ ರೀತಿಯಲ್ಲಿ ಜಂಕ್ ಫುಡ್ ದುಷ್ಪರಿಣಾಮ ಕುರಿತು ಅರಿವು ಮೂಡಿಸಿ.
ಉದಾ: ಕಥೆ, ಚಿತ್ರಗಳ ಮೂಲಕ ತೋರಿಸಿಕೊಡುವುದು. ಜಂಕ್ ಫುಡ್ ತಿಂದರೆ ಹುಷಾರು ತಪ್ಪಬಹುದು. ಅನಾರೋಗ್ಯ ಹೆಚ್ಚಾದರೆ ವೈದ್ಯರ ಬಳಿಗೆ ಹೋಗಬೇಕಾಗಬಹುದು, ಇಂಜೆಕ್ಷನ್ ಕೊಡಿಸಬೇಕಾಗಬಹುದು ಎಂದು ವಿವರಿಸಿ.
2) ಶಿಸ್ತು: ಊಟದ ವಿಚಾರದಲ್ಲಿ ಶಿಸ್ತು ಪಾಲನೆಗೆ ಒತ್ತುಕೊಡಿ. ದಿನದಲ್ಲಿ ಮೂರು ಬಾರಿ ಊಟದ ಹೊರತಾಗಿ ಜಂಕ್ ಫುಡ್‌ಗಳನ್ನು ಯಾವುದೇ ಕಾರಣಕ್ಕೂ ಕೊಡಬೇಡಿ. ಮುಂಜಾನೆ ತಿಂಡಿ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವನ್ನು ಮಾತ್ರ ಮನೆಯಲ್ಲಿ ಕೊಡಿ. ಮಕ್ಕಳು ಎಷ್ಟೆೇ ಹಟಹಡಿದರೂ ರಾಜಿ ಆಗಬೇಡಿ.
3) ಕುರುಕಲು ತಿಂಡಿಗೂ ಅವಕಾಶವಿರಲಿ: ಮಕ್ಕಳ ಬಾಯಿರುಚಿಯನ್ನು ಸಂಪೂರ್ಣವಾಗಿ ಕಟ್ಟಿ ಹಾಕುವುದು ಕಷ್ಟವಾದರೆ ಹೀಗೆ ಮಾಡಬಹುದು. ವಾರದಲ್ಲಿ ಒಮ್ಮೆ ಮಾತ್ರ ಊಟವಾದ ಮೇಲೆ ಚಿಕ್ಕ ಪ್ರಮಾಣದಲ್ಲಿ ಮಕ್ಕಳಿಗಿಷ್ಟವಾದ ಒಂದು ಹೊರಗಿನ ಆಹಾರ ಪದಾರ್ಥ ಕೊಡಿಸಬಹುದು.
4) ಆಹಾರ ಆಕರ್ಷಕವಾಗಿರಲಿ: ಮನೆಯಲ್ಲಿ ಆಹಾರವನ್ನು ವಿಭಿನ್ನ ಮತ್ತು ಆಕರ್ಷಕವಾಗಿ ಸಿದ್ಧಪಡಿಸಲು ಪ್ರಯತ್ನಿಸಿ. ಉದಾ: ಹಣ್ಣುಗಳನ್ನು ವಿವಿಧ ಆಕಾರದಲ್ಲಿ ಕತ್ತರಿಸುವುದು, ದೋಸೆ, ಚಪಾತಿಗಳನ್ನು ವಿವಿಧ ಆಕಾರಗಳಲ್ಲಿ ಮಾಡುವುದು ಇತ್ಯಾದಿ…
5) ಪ್ರೋತ್ಸಾಹಿಸಿ: ಮಕ್ಕಳು ಮೊದಲಿಗೆ ಒಪ್ಪದಿದ್ದರೂ, ಹಟ ಮಾಡಿದರೂ ಕ್ರಮೇಣ ದಾರಿಗೆ ಬರುತ್ತಾರೆ. ಪ್ರಯತ್ನ ಬಿಡಬೇಡಿ. ನಿಂದಿಸದೆ, ಕಠಿಣ ಶಿಕ್ಷೆ ವಿಧಿಸದೆ, ಹೋಲಿಸದೆ ಅವರನ್ನು ಬೆಂಬಲಿಸಿ. ಪ್ರೋತ್ಸಾಹ ನೀಡಿ.
6) ಬಹುಮಾನ ಘೋಷಿಸಿ: ಮಕ್ಕಳಿಗೆ ಬಹುಮಾನವೆಂದರೆ ಇಷ್ಟ. ಆಹಾರದ ವಿಚಾರದಲ್ಲಿ ಶಿಸ್ತು ಪಾಲಿಸಿದರೆ ಪ್ರಶಂಸೆಯೊಂದಿಗೆ ಸಣ್ಣಪುಟ್ಟ ಆಟಿಕೆಗಳು, ಪುಸ್ತಕ ಮುಂತಾದ ಬಹುಮಾನಗಳನ್ನು ನೀಡಿ. ಮುಂದೆ ಇದೂ ಒಂದು ಚಟವಾಗಬಾರದು ಅಥವಾ ಮಿತಿ ಮೀರಬಾರದು.
7) ಹೊರಬರಲು ಸಾಧ್ಯ: ಯಾವುದೇ ಚಟದಿಂದ ಹೊರಬರಲು ಸಮಯ, ಧೃಢ ನಿರ್ಧಾರ, ಸಂಯಮ, ಪ್ರಶಂಸೆ , ಸತತ ಪ್ರಯತ್ನ ಅಗತ್ಯ.
---
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.
ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.