New Year Resolution: ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ತಪ್ಪು ಮಾಡ್ತಿದೀರಾ? ಹೊಸ ವರ್ಷಕ್ಕೆ ಈ ನಿರ್ಣಯಗಳನ್ನು ಕೈಗೊಳ್ಳಿ
Dec 09, 2023 06:00 PM IST
ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಪೋಷಕರು ಕೈಗೊಳ್ಳಲಿ ನಿರ್ಣಯ (ಪ್ರಾತಿನಿಧಿಕ ಚಿತ್ರ/istockphoto)
- New Year Resolution On Parenting: ಹೊಸ ವರ್ಷಕ್ಕೆ ಇತರ ನಿರ್ಣಯಗಳು ಜೊತೆ ಪೋಷಕರು ತಮ್ಮ ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಕೂಡ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಇದು ಮಕ್ಕಳ ಜೀವನಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಮುಂಬರುವ ವರ್ಷಗಳಲ್ಲಿ ನಿಮ್ಮ ಕುಟುಂಬದ ಮೇಲೆ ಪರಿಣಾಮ ಬೀರುವ ನಿರ್ಣಯಗಳು. ಮಕ್ಕಳ ಭವಿಷ್ಯದ ನಿರ್ಣಯಗಳು.
ಹೊಸ ವರ್ಷಕ್ಕೆ ಸಾಮಾನ್ಯವಾಗಿ ಎಲ್ಲರೂ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ ಅಲ್ಲವೇ? ಅದು ವಿದ್ಯಾಭ್ಯಾಸ ಉದ್ಯೋಗ, ಪ್ರೀತಿ, ಆಹಾರ, ಆರೋಗ್ಯ ಹೀಗೆ ಯಾವುದೇ ವಿಚಾರದಲ್ಲಿ ಆಗಿರಬಹುದು. ಈ ನಿರ್ಣಯಗಳು ಹಿಂದಿನ ವರ್ಷಗಳಲ್ಲಿ ನಾವು ಸಾಧಿಸದೇ ಇದ್ದದನ್ನು, ಮಾಡದೇ ಇದ್ದದ್ದನ್ನು ಹೊಸ ವರ್ಷದಿಂದ ಆರಂಭಿಸಲು ಸಹಾಯ ಮಾಡುತ್ತವೆ. ಅದರಂತೆ ನಡೆದರೆ ಶಿಸ್ತಿನ ಜೀವನ ನಮ್ಮದಾಗುತ್ತದೆ.
ಇತರ ನಿರ್ಣಯಗಳು ಜೊತೆ ಪೋಷಕರು ತಮ್ಮ ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಕೂಡ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಇದು ಮಕ್ಕಳ ಜೀವನಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಮುಂಬರುವ ವರ್ಷಗಳಲ್ಲಿ ನಿಮ್ಮ ಕುಟುಂಬದ ಮೇಲೆ ಪರಿಣಾಮ ಬೀರುವ ನಿರ್ಣಯಗಳು. ನಿಮ್ಮ ಮಕ್ಕಳೊಂದಿಗೆ ಅರ್ಥಪೂರ್ಣ ರೀತಿಯಲ್ಲಿ ಸಂಬಂಧ ಗಟ್ಟಿಗೊಳಿಸುವ ನಿರ್ಣಯ. ಮಕ್ಕಳ ಭವಿಷ್ಯದ ನಿರ್ಣಯ. ಆ ನಿರ್ಣಯಗಳು ಯಾವುವು ಎಂದು ನೋಡೋಣ ಬನ್ನಿ..
1) ನಿಮ್ಮ ಮಕ್ಕಳೊಂದಿಗೆ ನೀವು ಕಳೆಯುವ ಸಮಯ:
ಇಂದು ಹೆಚ್ಚಿನ ಕುಟುಂಬಗಳಲ್ಲಿ ಏನಾಗಿದೆ ಅಂದ್ರೆ, ಅಮ್ಮನೂ ದುಡೀತಾರೆ, ಅಪ್ಪನೂ ದುಡೀತಾರೆ. ಪುಟ್ಟ ಮಕ್ಕಳನ್ನ ನೋಡಿಕೊಳ್ಳಲು ಯಾರಾದ್ರೂ ಆಯಾಳನ್ನ ನೇಮಿಸ್ತಾರೆ, ಇಲ್ಲವೇ ಪ್ರಿ-ನರ್ಸರಿ ಶಾಲೆಗಳಿಗೆ ಕಳಿಸಿಬಿಡ್ತಾರೆ. ಇನ್ನು ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೂ ಕೂಡ ಅಪ್ಪ-ಅಮ್ಮ ಸಂಜೆಯೋ ರಾತ್ರಿಯೋ ಕೆಲಸದಿಂದ ಮನೆಗೆ ಬರ್ತಾರೆ, ಮಕ್ಕಳು ಸಂಜೆ ಶಾಲೆಯಿಂದ ಮನೆಗೆ ಬರ್ತಾರೆ. ಅಮ್ಮ-ಅಪ್ಪ ಮನೆಗೆಲಸ, ವಿಶ್ರಾಂತಿ ಅಂತ ಮಾಡಿದ್ರೆ ಮಕ್ಕಳು ಹೋಂ ವರ್ಕ್ ಮಾಡೋದ್ರಲ್ಲಿ ಬ್ಯುಸಿ ಆಗ್ತಾರೆ. ಒಬ್ಬರಿಗೊಬ್ಬರು ಮಾತಾಡಿಕೊಳ್ಳುವುದೇ ಕಡಿಮೆ ಆಗಿರತ್ತೆ. ಮಕ್ಕಳ ಜೊತೆ ಬೆರೆಯಲು ಸಮಯವೇ ಸಿಗದಂತಾಗುತ್ತೆ. ಮಕ್ಕಳಿಗೂ ಕೂಡ ಪೋಷಕರ ಮೇಲೆ ಪ್ರೀತಿ ಗಟ್ಟಿಯಾಗಿ ಇರುವುದಿಲ್ಲ. ಹೀಗಾಗಿ ನಿಮಗೆ ಎಷ್ಟೇ ಕೆಲಸದ ಒತ್ತಡ ಇದ್ರೂ ಮಕ್ಕಳಿಗಾಗಿ ಇಂತಿಷ್ಟು ಫ್ರೀ ಮಾಡಿಕೊಳ್ಳಿ. ಅವರಿಗೆ ನೀವೆ ಹೋಂ ವರ್ಕ್ ಮಾಡಿಸಿ, ಆಟ ಆಡಿ, ಜೊತೆಯಲ್ಲೇ ಎಲ್ಲರೂ ಕುಳಿತು ಊಟ ಮಾಡಿ. ಮಕ್ಕಳ ದಿನನಿತ್ಯದ ಆಗು-ಹೋಗುಗಳ ಕುರಿತು ಅವರೊಂದಿಗೆ ಚರ್ಚಿಸಿ. ಪ್ರತಿ ಭಾನುವಾರದಂತೆ ವಾರಕ್ಕೊಮ್ಮೆ ಅಥವಾ ಆಗಾಗ್ಗ ರಜಾದಿನಗಳಲ್ಲಿ ಮಕ್ಕಳೊಂದಿಗೆ ಹೊರಗಡೆ ಹೋಗಿ ಸಮಯ ಕಳೆಯಿರಿ.
2) ಮಕ್ಕಳ ಸಮಸ್ಯೆ ಆಲಿಸಿ:
ನಿಮ್ಮ ಮಕ್ಕಳು ಕೆಲವೊಂದು ವಿಚಾರದಲ್ಲಿ ಎಷ್ಟೇ ಬುದ್ಧಿ ಹೇಳಿದರೂ ಸರಿಹೋಗದೆ ಇರಬಹುದು. ಇದಕ್ಕಾಗಿ ನೀವು ಅವರಿಗೆ ಹೊಡೆದು-ಬಡಿದರೆ ಅವರು ಸರಿಯಾಗುವುದಿಲ್ಲ. ಅವರ ಸಮಸ್ಯೆ ಏನು ಎಂದು ಆಲಿಸಿ. ಅದಕ್ಕೆ ಏನೆಲ್ಲಾ ಪರಿಹಾರಗಳಿವೆ, ಏನೆಲ್ಲಾ ಪರ್ಯಾಯಗಳಿವೆ ಯೋಚಿಸಿ. ನಿಮ್ಮ ಮಕ್ಕಳಿಗೆ ಪೋಷಕರೇ ಮೊದಲ ಉತ್ತಮ ಸ್ನೇಹಿತರಾಗಿರಬೇಕು.
3) ವೇಳಾಪಟ್ಟಿ:
ಮಕ್ಕಳಿಗಾಗಿ ಒಂದು ವೇಳಾಪಟ್ಟಿ ರಚಿಸಿ. ಇದರಲ್ಲಿ ಮಕ್ಕಳಿಗೆ ಆಟ-ಪಾಠ-ಊಟ-ಮನರಂಜನೆ-ಪಠ್ಯೇತರ ಪುಸ್ತಕ ಓದು-ಸಾಕಷ್ಟು ನಿದ್ರೆ ಎಲ್ಲದಕ್ಕೂ ಅವಕಾಶವಿರುವಂತೆ ನೋಡಿಕೊಳ್ಳಿ. ಅವರು ಇದನ್ನು ಪಾಲಿಸುವಂತೆ ಮಾಡಿ.
4) ಮನೆಗೆಲಸ:
ಮಕ್ಕಳು ತಮ್ಮ ಆಟ-ಪಾಠ-ಊಟ-ಮನರಂಜನೆ ಜೊತೆ ಪ್ರತಿದಿನ ಮನೆಯಲ್ಲಿ ಏನಾದ್ರೂ ಒಂದು ಸಣ್ಣ-ಪುಟ್ಟ ಕೆಲಸ ಮಾಡುವಂತೆ ನೋಡಿಕೊಳ್ಳಿ. ಅದು ಅಡುಗೆ, ಕಸ ಗುಡಿಸುವುದು, ನೆಲ ಒರೆಸುವುದು, ಪಾತ್ರೆ ತೊಳೆಯುವುದು ಹೀಗೆ ಏನಾದರೂ ಆಗಿರಲಿ. ಚಿಕ್ಕಂದಿನಿಂದ ಅವರು ಏನು ಕಲಿಯುತ್ತಾರೋ ದೊಡ್ಡವರಾದ ಮೇಲೆ ಅವರ ಕೆಲಸ ಅವರೇ ಮಾಡಿಕೊಳ್ಳಲು ಇದು ನೆರವಾಗುತ್ತದೆ.
5) ಮಕ್ಕಳಾಸಕ್ತಿಯ ಕಲೆ:
ನಿನ್ನ ಮಕ್ಕಳಿಗೆ ಓದುವುದರ ಜೊತೆಗೆ ಸಂಗೀತ, ನೃತ್ಯ, ಚಿತ್ರಕಲೆ, ಕ್ರೀಡೆ ಹೀಗೆ ಯಾವುದರಲ್ಲಾದರೂ ಆಸಕ್ತಿ ಇದ್ದರೆ ಅದಕ್ಕೂ ಸಪೋರ್ಟ್ ಮಾಡಿ, ಪ್ರೋತ್ಸಾಹ ನೀಡಿ.
6) ಸಂಬಂಧಗಳ ಮೌಲ್ಯ:
ಈಗಿನ ಕಾಲದಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತೆ ಆಗಿಹೋಗಿದೆ. ನಿಮ್ಮ ಮಕ್ಕಳಿಗೆ ಸಂಬಂಧಗಳ ಮೌಲ್ಯ ಅರ್ಥವಾಗುವಂತೆ ಮಾಡಿ. ಸಹೋದರ-ಸಹೋದರಿ ಜೊತೆ ಹೇಗಿರಬೇಕು, ಅಪ್ಪ-ಅಮ್ಮನ ಜೊತೆ ಹೇಗಿರಬೇಕು, ಅಜ್ಜಿ-ತಾತನ ಜೊತೆ ಹೇಗಿರಬೇಕು, ಸ್ನೇಹಿತರು, ಇತರ ಕುಟುಂಬ ಸದಸ್ಯರ ಜೊತೆ ಹೇಗಿರಬೇಕು ಎಂಬುದನ್ನು ಹೇಳಿಕೊಡಿ. ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಿ. ಹಾಗೆಯೆ ಮಕ್ಕಳ ಎದುರು ನೀವು ಜಗಳ ಆಡಬೇಡಿ.