Money tips: ವೃತ್ತಿ ಜೀವನದ ಆರಂಭದಲ್ಲಿಯೇ ಹಣ ಉಳಿತಾಯ ಮಾಡಿ, ಯುವ ಜನತೆಗೆ 5 ಮನಿ ಸೇವಿಂಗ್ ಟಿಪ್ಸ್ ನೀಡಿದ ಸಿಇಒ ರಾಧಿಕಾ
Sep 05, 2023 06:04 PM IST
ಯುವ ಜನತೆಗೆ 5 ಮನಿ ಸೇವಿಂಗ್ ಟಿಪ್ಸ್ ನೀಡಿದ ಸಿಇಒ ರಾಧಿಕಾ
ವೃತ್ತಿ ಜೀವನದ ಆರಂಭದಲ್ಲಿಯೇ ಹಣ ಉಳಿತಾಯ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ ಅಗತ್ಯ ಎಂದು ಎಡೆಲ್‌ವೈಸ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯ ಸಿಇಒ ರಾಧಿಕಾ ಗುಪ್ತಾ ಹೇಳಿದ್ದಾರೆ. ಈಗಷ್ಟೇ ಉದ್ಯೋಗಕ್ಕೆ ಸೇರಿರುವ ಉದ್ಯೋಗಿಗಳು ಹಣ ಉಳಿಸಲು 5 ಸಲಹೆಗಳನ್ನು ಅವರು ನೀಡಿದ್ದಾರೆ.
ಹಣ ಉಳಿತಾಯವನ್ನು ನಿಮ್ಮ 20ನೇ ವಯಸ್ಸಿನಲ್ಲಿಯೇ ಆರಂಭಿಸಿ ಎಂದರೆ ಕೆಲವರಿಗೆ ಆಶ್ಚರ್ಯವಾಗಬಹುದು. ಆದರೆ, ಈ ವಯಸ್ಸಿನಲ್ಲಿಯೇ ಹಣ ಉಳಿತಾಯ ಮಾಡಿದರೆ ಹಲವು ವರ್ಷದ ಬಳಿಕ ಇದು ಹಲವು ಪಟ್ಟು ಹೆಚ್ಚಾಗುತ್ತದೆ. ಎಡಲ್‌ವೈಸ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯ ಸಿಇಒ ರಾಧಿಕಾ ಗುಪ್ತಾ ಅವರು ಈ ಕುರಿತು ಟ್ವೀಟ್ ಮಾಡಿದ್ದು, "ನನ್ನ 22 ವರ್ಷ ವಯಸ್ಸಿನ ನನಗೆ (ನಾನು ಆ ವಯಸ್ಸಿನಲ್ಲಿ ಉಳಿತಾಯ ಆರಂಭಿಸಿದ್ದೆ) ನಾನು ನೀಡಲು ಬಯಸುವ ಐದು ಹಣಕಾಸು ಸಲಹೆಗಳು ಇಲ್ಲಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ರಾಧಿಕಾ ಗುಪ್ತಾ ತಿಳಿಸಿದ 5 ಹೂಡಿಕೆ ಸಲಹೆ
1. ಬೇಗ ಹೂಡಿಕೆ ಆರಂಭಿಸಿ
ಎಎಂಎಫ್‌ಐ ವೈಸ್ ಚೇರ್‌ಮೆನ್ ಪ್ರಕಾರ ಆರಂಭದಲ್ಲಿಯೇ ಹೂಡಿಕೆ ಮಾಡುವುದು ಹೆಚ್ಚು ಲಾಭ ಗಳಿಸುವ ಉದ್ದೇಶದಿಂದಲ್ಲ. ಭವಿಷ್ಯದಲ್ಲಿ ಈ ರೀತಿ ಹೂಡಿಕೆ ಮಾಡಿದ ಹಣವು ನೆರವಿಗೆ ಬರುತ್ತದೆ. ರಾಧಿಕಾ ಗುಪ್ತಾ ಅವರು ಉದ್ಯೋಗಕ್ಕೆ ಸೇರಿದ ಎರಡು ವರ್ಷದ ಬಳಿಕ ಹೂಡಿಕೆ ಆರಂಭಿಸಿದ್ದರು. ಕೆಲವರು ಇದು ಒಳ್ಳೆಯ ಐಡಿಯಾ ಅಲ್ಲ ಅಂದಿದ್ದರು. ಆದರೆ, ಭವಿಷ್ಯದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಈ ಹೂಡಿಕೆ ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ. ನೀವು ತಡವಾಗಿ ಹೂಡಿಕೆ ಆರಂಭಿಸಿದರೆ ತಪ್ಪುಗಳಾಗುವ ಸಾಧ್ಯತೆಯಿದೆ. ಅವಸರದ ಹೂಡಿಕೆ ಒಳ್ಳೆಯದಲ್ಲ. ಸಣ್ಣ ವಯಸ್ಸಿನಲ್ಲಿ ಚಿಕ್ಕದಾಗಿ ಉಳಿತಾಯ ಮಾಡುತ್ತ ಆರಂಭಿಸುವುದು ಒಳ್ಳೆಯದು ಎಂದು ಅವರು ಹೇಳಿದ್ದಾರೆ.
2. ಸರಿಯಾದ ರೀತಿ ಸ್ವತ್ತುಗಳ ಹಂಚಿಕೆ
20 ವರ್ಷ ವಯಸ್ಸಿನ ಆಸುಪಾಸಿನಲ್ಲಿರುವವರು ತಮ್ಮ ಆದಾಯವನ್ನು ಪೂರ್ತಿ ಈಕ್ವಿಟಿ ಷೇರಿಗೆ ಹಾಕಬೇಕು ಎಂದಿಲ್ಲ. ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇರುತ್ತದೆ. ನಿಮ್ಮಲ್ಲಿರುವ ಹಣವು ನಿದ್ದೆ ಮಾಡಬಾರದು ಎನ್ನುವುದು ನನ್ನ ನಂಬಿಕೆ. ಆದರೆ, ರಾತ್ರಿ ಒತ್ತು ನಿಮ್ಮ ನಿದ್ದೆ ಕೆಡಿಸುವಷ್ಟು ಒತ್ತಡ ಉಂಟು ಮಾಡಬಾರದು. ಹೀಗಾಗಿ ಹಣವನ್ನು ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ.
3. ಸರಳ ಹೂಡಿಕೆ
ಸರಳ ಉತ್ಪನ್ನಗಳ ಹೂಡಿಕೆ ಮಾಡುವ ಮೂಲಕ ಹೂಡಿಕೆ ಆರಂಭಿಸಿ. ಸಿಪ್ ಹೂಡಿಕೆ ಬೆಸ್ಟ್ ಎಂದು ಗುಪ್ತಾ ಹೇಳಿದ್ದಾರೆ. ಬ್ಯಾಲೆನ್ಸೆಡ್ ಅಡ್ವಂಟೇಜ್ ಫಂಡ್ ಮತ್ತು ಮಿಡ್ ಸ್ಮಾಲ್ ಕ್ಯಾಪ್ ಫಂಡ್‌ಗಳಲ್ಲಿ ಸಿಪ್ ಹೂಡಿಕೆ ಉತ್ತಮ ಎನ್ನುವುದು ಅವರ ಅಭಿಪ್ರಾಯ.
4. ಸರಿಯಾದ ಗುರಿ ಹೊಂದಿ
ಮೊದಲಿಗೆ ನಿಮ್ಮ ಗುರಿಯನ್ನು ಬರೆಯಿರಿ. ಯಾವ ರೀತಿ ಹೂಡಿಕೆ ಮಾಡಿ ಎಷ್ಟು ಆದಾಯ ಗಳಿಸಬಹುದು ಎಂದು ತಿಳಿಯಿರಿ. ಎಲ್ಲಿ ಹೂಡಿಕೆ ಮಾಡಿದರೆ ಉತ್ತಮ, ಎಲ್ಲಿ ಹೆಚ್ಚು ಲಾಭ ಬರಬಹುದು ಎಮದು ವಿಶ್ಲೇಷಣೆ ಮಾಡಿ ಎಂದು ಅವರು ಸಲಹೆ ನೀಡಿದ್ದಾರೆ.
5. ನಿಮ್ಮ ಹಣವನ್ನು ಎಂಜಾಯ್ ಮಾಡಿ
ಉಳಿತಾಯ ಮತ್ತು ಹೂಡಿಕೆ ಅತ್ಯಂತ ಅಗತ್ಯ. ಇದೇ ಸಮಯದಲ್ಲಿ ಹಣವನ್ನು ಎಂಜಾಯ್ ಮಾಡುವುದು ಅಗತ್ಯ. "ನೀವು ಬಯಸುವ ವಸ್ತುಗಳಿಗೆ ಹಣ ಖರ್ಚು ಮಾಡಿ. ಶಾಪಿಂಗ್ ಇತ್ಯಾದಿ ಸಣ್ಣ ಖುಷಿಗಳಿಗೆ, ಮನೆ ಖರೀದಿ ಇತ್ಯಾದಿ ದೊಡ್ಡ ಖುಷಿಗೆ ಖರ್ಚು ಮಾಡಿ ಎಂದು ಅವರು ಸಲಹೆ ನೀಡಿದ್ದಾರೆ.
ಅಂದಹಾಗೆ, ರಾಧಿಕಾ ಗುಪ್ತಾ ಅವರು ತನ್ನ ಮಗುವಿಗೆ ಕೇವಲ 3 ತಿಂಗಳು ಆಗುವಾಗಲೇ ಮಗುವಿನ ಹೆಸರಿನಲ್ಲಿ ಸಿಪ್ ಹೂಡಿಕೆ ಆರಂಭಿಸಿದ್ದಾರೆ. ಆ ಮಗುವಿಗೆ 18 ವರ್ಷ ಆಗುವ ತನಕ ಸಿಪ್ ಹೂಡಿಕೆ ಮುಂದುವರೆಸುವುದಾಗಿ ಹೇಳಿದ್ದಾರೆ.