Mutual Funds: ನೇರ ಮತ್ತು ನಿಯಮಿತ ಮ್ಯೂಚುಯಲ್ ಫಂಡ್ ನಡುವೆ ವ್ಯತ್ಯಾಸವೇನು, ಎಂಎಫ್ ಹೂಡಿಕೆ ಮಾಡುವವರು ತಿಳಿದಿರಬೇಕಾದ ವಿಷಯ
Aug 31, 2023 03:25 PM IST
Mutual Funds: ನೇರ ಮತ್ತು ನಿಯಮಿತ ಮ್ಯೂಚುಯಲ್ ಫಂಡ್ ನಡುವೆ ವ್ಯತ್ಯಾಸವೇನು
- Direct vs Regular Mutual Fund: ನೇರ ಮತ್ತು ನಿಯಮಿತ ಮ್ಯೂಚುಯಲ್ ಫಂಡ್ ನಡುವೆ ಯಾವುದು ಉತ್ತಮ? ಇವುಗಳೆರಡರ ನಡುವೆ ವ್ಯತ್ಯಾಸವೇನು? ಮ್ಯೂಚುಯಲ್ ಫಂಡ್ ಹೂಡಿಕೆ ಮಾಡುವವರಿಗೆ ಡೈರೆಕ್ಟ್ ಮತ್ತು ರೆಗ್ಯುಲರ್ ಫಂಡ್ ಕುರಿತು ಒಂದಿಷ್ಟು ವಿವರ ಇಲ್ಲಿ ನೀಡಲಾಗಿದೆ.
ಈಗ ಜನರು ವಿವಿಧ ರೀತಿಯ ಹೂಡಿಕೆ ಮಾಡುವ ಮೂಲಕ ಹಣ ಉಳಿತಾಯ, ಲಾಭ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಹೂಡಿಕೆಗಳಲ್ಲಿ ಮ್ಯೂಚುಯಲ್ ಫಂಡ್ ಜನಪ್ರಿಯತೆ ಪಡೆಯುತ್ತಿದೆ. ಆದರೆ, ಇದರಲ್ಲಿ ನಿಯಮಿತ ಮತ್ತು ನೇರ ಮ್ಯೂಚುಯಲ್ ಫಂಡ್ ಎಂಬ ಎರಡು ವಿಧವಿದೆ. ಡೈರೆಕ್ಟ್ ಮತ್ತು ರೆಗ್ಯುಲರ್ ಮ್ಯೂಚುಯಲ್ ಫಂಡ್ ವ್ಯತ್ಯಾಸ ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಇವರಡರ ನಡುವಿನ ಪ್ರಮುಖ ವ್ಯತ್ಯಾಸ ಕಮಿಷನ್ ವಿತರಣೆಯಲ್ಲಿದೆ. ನಿಯಮಿತ ಮ್ಯೂಚುಯಲ್ ಫಂಡ್‌ನಲ್ಲಿ ಕಮಿಷನ್ ವಿತರಣೆ ಇರುತ್ತದೆ. ಡೈರೆಕ್ಟ್ ಮ್ಯೂಚುಯಲ್ ಪಂಡ್‌ನಲ್ಲಿ ಕಮಿಷನ್ ಇರುವುದಿಲ್ಲ. ಇದೇ ಕಾರಣಕ್ಕೆ ನೇರ ಮ್ಯೂಚುಯಲ್ ಫಂಡ್‌ಗಿಂತ ನಿಯಮಿತ ಮ್ಯೂಚುಯಲ್ ಫಂಡ್‌ನಲ್ಲಿ ಎಕ್ಸ್‌ಪೆನ್ಸ್ ರೇಟಿಯೋ (ವೆಚ್ಚದ ಅನುಪಾತ) ಹೆಚ್ಚಿರುತ್ತದೆ. ಅಸೆಟ್ ಅಂಡರ್ ಮ್ಯಾನೇಜ್‌ಮೆಂಟ್ (ಎಯುಎಂ) ಅಡಿಯಲ್ಲಿ ಫಂಡ್‌ನ ಒಟ್ಟು ವೆಚ್ಚವನ್ನು ಎಕ್ಸ್‌ಪೆನ್ಸ್ ರೇಟಿಯೋ ಅಥವಾ ವೆಚ್ಚದ ಅನುಪಾತ ಎಂದು ಕರೆಯಲಾಗುತ್ತದೆ.
ರೆಗ್ಯುಲರ್ ಮತ್ತು ಡೈರೆಕ್ಟ್ ಮ್ಯೂಚುಯಲ್ ಫಂಡ್‌ಗಳ ನಡುವೆ ಏನು ವ್ಯತ್ಯಾಸವಿದೆ?
ನಿಯಮಿತ ಮತ್ತು ನೇರ ನಿಧಿ ಹೂಡಿಕೆಯಲ್ಲಿ ಹಲವು ವ್ಯತ್ಯಾಸಗಳು ಇವೆ. ಇವುಗಳಲ್ಲಿ ನೇರ ಫಂಡ್‌ನಲ್ಲಿ ಹೆಚ್ಚಿನ ಪ್ರಯೋಜನವಿದೆ.
ವೆಚ್ಚದ ಅನುಪಾತ
ಮ್ಯೂಚುಯಲ್ ಫಂಡ್ ಕಂಪನಿಯು ವೆಚ್ಚದ ಅನುಪಾತ ಎಂಬ ಶುಲ್ಕ ವಿಧಿಸುತ್ತದೆ. ಡೈರೆಕ್ಟ್ ಮ್ಯೂಚುಯಲ್ ಫಂಡ್‌ನಲ್ಲಿ ಇದು ಕಡಿಮೆ ಇರುತ್ತದೆ. ಬಹುತೇಕ ಜನರು ನಿಯಮಿತ ಫಂಡ್‌ಗೆ ಹೂಡಿಕೆ ಮಾಡುವಾಗ ಸ್ಥಳೀಯ ಹಣಕಾಸು ಸಲಹೆಗಾರರು ಅಥವಾ ತಮ್ಮ ಮ್ಯೂಚುಯಲ್ ಫಂಡ್ ಅಡ್ವೈಸರ್ ನೆರವು ಪಡೆಯುತ್ತಾರೆ. ಆದರೆ, ಅಡ್ವೈಸರ್‌ಗೆ ಪಾವತಿಸುವ ಹಣವನ್ನು ನೀವು ಕಿಸೆಯಿಂದ ನೀಡಬೇಕು. ಇದು ನಿಮ್ಮ ಹೂಡಿಕೆ ಖಾತೆಯಿಂದ ಕಡಿತವಾಗಿ ನೇರವಾಗಿ ಸಲಹೆಗಾರರು ಅಥವಾ ಏಜೆಂಟ್‌ಗೆ ಹೋಗುತ್ತದೆ. ನೇರ ಅಥವಾ ಡೈರೆಕ್ಟ್ ಮ್ಯೂಚುಯಲ್ ಫಂಡ್‌ನಲ್ಲಿ ಯಾವುದೇ ಕಮಿಷನ್ ಶುಲ್ಕ ಅಥವಾ ವಿತರಣೆ ಶುಲ್ಕಗಳು ಇರುವುದಿಲ್ಲ. ಇದರಿಂದ ವೆಚ್ಚದ ಅನುಪಾತ ಕಡಿಮೆ ಇರುತ್ತದೆ.
ಅತ್ಯಧಿಕ ರಿಟರ್ನ್
ಯಾವುದೇ ನೇರ ಮ್ಯೂಚುಯಲ್ ಫಂಡ್‌ಗಳಲ್ಲಿ ರಿಟರ್ನ್ ಯಾವಾಗಲೂ ಅತ್ಯಧಿಕವಾಗಿರುತ್ತವೆ. ಅಂದರೆ ನಿಯಮಿತ ಫಂಡ್‌ಗಿಂತ ನೇರ ಫಂಡ್‌ನಲ್ಲಿ ರಿಟರ್ನ್ ಜಾಸ್ತಿ.
ಹೈಯರ್ ಎನ್‌ಎವಿ
ನೆಟ್ ಅಸೆಟ್ ವ್ಯಾಲ್ಯೂ ಕೂಡ ರೆಗ್ಯುಲರ್ ಫಂಡ್‌ಗಿಂತ ನೇರ ಮ್ಯೂಚುಯಲ್ ಫಂಡ್‌ನಲ್ಲಿ ಅಧಿಕವಿರುತ್ತದೆ.
ತಪ್ಪು ಮಾಹಿತಿ ನೀಡುವುದು ಕಡಿಮೆ
ಸಲಹೆಗಾರರು ಯಾವಾಗಲೂ ಹೂಡಿಕೆಗೆ ಸಹಾಯ ಮಾಡುತ್ತಾರೆ ಎಂದುಕೊಳ್ಳುವುದು ತಪ್ಪು. ಗ್ರಾಹಕ ವೇದಿಕೆ ಚರ್ಚೆಗಳಲ್ಲಿ ಏಜೆಂಟ್‌ಗಳ ವಿರುದ್ಧ ಸಾಕಷ್ಟು ದೂರುಗಳಿರುತ್ತವೆ. ಆದರೆ, ನೇರ ಹೂಡಿಕೆಯಲ್ಲಿ ಇಂತಹ ಮೋಸವಾಗುವುದು ತಪ್ಪುತ್ತದೆ.
ನಿಮ್ಮ ನಿಯಂತ್ರಣದಲ್ಲಿರುತ್ತದೆ
ಡೈರೆಕ್ಟ್ ಫಂಡ್‌ಗಳ ನಿಯಂತ್ರಣ ನಿಮ್ಮಲ್ಲಿಯೇ ಇರುತ್ತದೆ. ನಿಮ್ಮಲ್ಲಿ ಮ್ಯೂಚುಯಲ್ ಫಂಡ್ ಕುರಿತು ಸರಿಯಾದ ಜ್ಞಾನವಿದ್ದರೆ ಸಾಕಷ್ಟು ರಿಸರ್ಚ್ ಮಾಡಿ ನೇರವಾಗಿ ನೀವೇ ಡೈರೆಕ್ಟ್ ಫಂಡ್‌ನಲ್ಲಿ ಹಣ ಹಾಕುವುದು ಉತ್ತಮ.