Investment: 20ನೇ ವಯಸ್ಸಿನಿಂದಲೇ ಶುರು ಮಾಡಿ ಹೂಡಿಕೆ; ಆಗ ನೀವೂ ಆಗಬಹುದು ಕೋಟ್ಯಾಧಿಪತಿ
Dec 16, 2023 07:52 PM IST
20ರ ಆರಂಭದಲ್ಲೇ ಹಣ ಹೂಡಿಕೆಯಲ್ಲಿ ತೊಡಗಿಸಿಕೊಳ್ಳಿ (PC: Canva)
- Personal Finance: ನಿಮ್ಮ 20ರ ವಯಸ್ಸಿನ ಆರಂಭದಲ್ಲೇ ಹಣ ಹೂಡಿಕೆಯ ಕಡೆ ಗಮನಹರಿಸುವುದು ಏಕೆ ಉತ್ತಮ? ಅದು ಹೇಗೆ ನಿಮ್ಮನ್ನು ಆರ್ಥಿಕವಾಗಿ ಸದೃಢರನ್ನಾಗಿಸುವುದಕ್ಕೆ ವೇದಿಕೆಯನ್ನು ನಿರ್ಮಿಸಿಕೊಡುತ್ತದೆ? ಇಲ್ಲಿದೆ ಓದಿ.
ಕೆಲವೊಮ್ಮೆ ಸರಿಯಾದ ಕೆಲಸ ಮಾಡಿದರೆ ಸಾಕಾಗುವುದಿಲ್ಲ. ಅದನ್ನು ಸರಿಯಾದ ಸಮಯಕ್ಕೆ ಮಾಡುವುದು ಅಗತ್ಯವಾಗಿದೆ. ಈ ಸಿದ್ಧಾಂತ ಹಣಕಾಸಿನ ವಿಚಾರದಲ್ಲೂ ಅಷ್ಟೇ ಸತ್ಯವಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಹೂಡಿಕೆಗಳನ್ನು ಮಾಡುವುದು ನಿಮ್ಮ ಆರ್ಥಿಕ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಇದಕ್ಕೆ ಈಗ ಮಾರುಕಟ್ಟೆಯಲ್ಲಿ ವಿಫುಲ ಅವಕಾಶವೂ ಇದೆ. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯು ಯುವ ಉದ್ಯೋಗಿಗಳಿಗೆ ಗಳಿಸಿದ ಹಣವನ್ನು ಹೂಡಿಕೆಗಳಲ್ಲಿ ತೊಡಗಿಸಲು ಹಲವು ದಾರಿ ಮಾಡಿಕೊಟ್ಟಿದೆ. ಇಕ್ವಟಿಗಳಲ್ಲಿ ಹೂಡಿಕೆ ಮಾಡುವುದು ನಿಸ್ಸಂದೇಹವಾಗಿ ನಿಮ್ಮ ಹಣಕಾಸಿನ ಗುರಿಗಳನ್ನು ಮುಟ್ಟಲು ಸಹಕಾರಿಯಾಗಿದೆ. ಇದು ನೀವು ಉದ್ಯೋಗ ಪ್ರಾರಂಭಿಸಿದ ತಕ್ಷಣ ಇಕ್ವಿಟಿ, ಷೇರುಮಾರುಕಟ್ಟೆ, ಮ್ಯೂಚೂವಲ್ ಫಂಡ್‌ನಂತಹ ಹೂಡಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳವುದು ಮುಖ್ಯವಾಗಿದೆ. ನಿಮ್ಮ 20ರ ವಯಸ್ಸಿನಲ್ಲಿಯೇ ನೀವು ಕೈಗೊಳ್ಳುವ ಹಣಕಾಸಿನ ನಿರ್ಧಾರಗಳು ನಿಮ್ಮ ಜೀವನದಲ್ಲಿ ಆರ್ಥಿಕ ಸದೃಢತೆಯನ್ನು ತಂದುಕೊಡುತ್ತದೆ.
ನಿಮ್ಮ 20ರ ವಯಸ್ಸಿನ ಆರಂಭದಲ್ಲಿಯೇ ಏಕೆ ಹಣ ಹೂಡಿಕೆ ಮಾಡಬೇಕು?
- 20 ರ ವಯಸ್ಸಿನ ಆರಂಭದಲ್ಲಿಯೇ ನೀವು ಮಾಡುವ ಹೂಡಿಕೆಯ ದೊಡ್ಡ ಪ್ರಯೋಜನವೆಂದರೆ ಬಡ್ಡಿಯ ಮೇಲೆ ಬಡ್ಡಿ ಬೆಳೆಯುತ್ತಾ ಹೋಗುವುದು. ಅದನ್ನೇ ಕಂಪೌಂಡಿಂಗ್ ಎಂದು ಕರೆಯಲಾಗುತ್ತದೆ. ಇದಕ್ಕೆ ನಿಮ್ಮ ಗಳಿಕೆಯನ್ನು ಆಸ್ತಿಯನ್ನಾಗಿಸುವ ಸಾಮರ್ಥ್ಯವಿದೆ. ನೀವು ತೊಡಗಿಸಿರುವ ಹಣವೇ ಮರುಹೂಡಿಕೆಯಾಗುವುದರಿಂದ ನಿಮ್ಮ ಆದಾಯ ವೃದ್ಧಿಯಾಗುತ್ತದೆ. ಉದಾಹರಣೆಗೆ, 20 ವಯಸ್ಸಿನ ಆರಂಭದಲ್ಲೇ, ನೀವು ಮಾಸಿಕ 10,000 ರೂ. ಹೂಡಿಕೆ ಮಾಡಲು ಪ್ರಾರಂಭಿಸಿದಿರಿ ಎಂದುಕೊಳ್ಳಿ. ನಿಮಗೆ 40 ವರ್ಷ ವಯಸ್ಸಾಗುವ ವೇಳೆಗೆ ನಿಮ್ಮ ಹೂಡಿಕೆ ಹಣ ಶೇಕಡಾ 12 ಬಡ್ಡಿದರದಲ್ಲಿ ಬೆಳವಣಿಗೆಯಾದರೆ, 1 ಕೋಟಿ ಕಾರ್ಪಸ್ ಹಣ ಸಂಗ್ರಹವಾಗಲಿದೆ.
- ಭಾರತದಲ್ಲಿ ನಿಮ್ಮ ಹೂಡಿಕೆಗೆ ಲಾಭ ತಂದುಕೊಡುವ ಅನೇಕ ಕ್ಷೇತ್ರಗಳಿವೆ. ಇ–ಕಾಮರ್ಸ್, ಹೆಲ್ತ್ ಕೇರ್‌ಗಳು, ನವೀಕರಿಸಬಹುದಾದ ಇಂಧನ ಮತ್ತು ತಂತ್ರಜ್ಞಾನದಂತಹ ವಲಯಗಳು ವೇಗವಾಗಿ ವಿಸ್ತಾರವಾಗುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಈ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದು ದೀರ್ಘಾವಧಿಯಲ್ಲಿ ಗಣನೀಯವಾಗಿ ನಿಮಗೆ ಆದಾಯ ತಂದುಕೊಡಬಲ್ಲದು. ಸಣ್ಣ ಸ್ಟಾರ್ಟ್‌ಅಪ್‌ಗಳಾಗಿ ಪ್ರಾರಂಭವಾದ ಕಂಪನಿಗಳು ಇಂದು ಬಹುಕೋಟಿ ಡಾಲರ್ ದೈತ್ಯ ಕಂಪನಿಗಳಾಗಿ ಬೆಳೆದಿವೆ. ಅಂತಹ ಕಂಪನಿಗಳ ಆರಂಭಿಕ ಹಂತಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ.
- ಇಂದು ಯುವ ಉದ್ಯೋಗಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಹೂಡಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ. ದೇಶವು ಹೊಸ ಹೊಸ ಉದ್ಯಮಗಳು ಮತ್ತು ಆರ್ಥಿಕ ಬೆಳವಣಿಗೆಯನ್ನು ಕಾಣುತ್ತಿದೆ. ಹಾಗಾಗಿ ಹಣ ಹೂಡಿಕೆ ಮಾಡಲು ಮತ್ತು ಲಾಭಾಂಶ ಪಡೆಯಲು ಸಹಕಾರಿಯಾಗಿದೆ.
- ಭಾರತ ಸರ್ಕಾರವು ದೇಶೀಯ ಮತ್ತು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. 'ಮೇಕ್ ಇನ್ ಇಂಡಿಯಾ, 'ಡಿಜಿಟಲ್ ಇಂಡಿಯಾ,' ಮತ್ತು 'ಸ್ಟಾರ್ಟ್‌ಅಪ್ ಇಂಡಿಯಾ' ನಂತಹ ಕಾರ್ಯಕ್ರಮಗಳು ವ್ಯಾಪಾರದ ಬೆಳವಣಿಗೆಯನ್ನು ಸುಲಭಗೊಳಿಸಿವೆ. ಇವು ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಅನುಕೂಲಕರ ಹೂಡಿಕೆಯ ಪರಿಸರವನ್ನು ಒದಗಿಸುತ್ತಿದೆ.
- ಷೇರುಪೇಟೆ, ಮ್ಯೂಚುವಲ್ ಫಂಡ್, ರಿಯಲ್ ಎಸ್ಟೇಟ್ ಅಥವಾ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಲು 20ರ ಆರಂಭದ ವಯಸ್ಸುಗಳು ಸರಿಯಾದ ಸಮಯವಾಗಿದೆ. ಅಲ್ಲಿ ಬಹು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಾರುಕಟ್ಟೆಯಲ್ಲಿನ ಅವಕಾಶಗಳ ಲಾಭವನ್ನು ಪಡೆದುಕೊಳ್ಳುಬಹುದಾಗಿದೆ. ಅದು ನಿಮ್ಮ ಭವಿಷ್ಯದಲ್ಲಿ ಆರ್ಥಿಕ ಯಶಸ್ಸಿಗೆ ವೇದಿಕೆಯನ್ನು ನಿರ್ಮಿಸಿಕೊಡುತ್ತದೆ.