logo
ಕನ್ನಡ ಸುದ್ದಿ  /  ಜೀವನಶೈಲಿ  /  13 ವರ್ಷದ ಮಗ ಹೇಳಿದ ಮಾತು ಕೇಳಲ್ಲ, ಅವನನ್ನು ನಿಭಾಯಿಸೋದು ಹೇಗೆ? ಇಲ್ಲಿದೆ ಮನಃಶಾಸ್ತ್ರಜ್ಞರ ಉತ್ತರ - ಮನದ ಮಾತು

13 ವರ್ಷದ ಮಗ ಹೇಳಿದ ಮಾತು ಕೇಳಲ್ಲ, ಅವನನ್ನು ನಿಭಾಯಿಸೋದು ಹೇಗೆ? ಇಲ್ಲಿದೆ ಮನಃಶಾಸ್ತ್ರಜ್ಞರ ಉತ್ತರ - ಮನದ ಮಾತು

HT Kannada Desk HT Kannada

Jan 10, 2024 06:00 AM IST

google News

ಆಪ್ತಸಮಾಲೋಚಕಿ ಮತ್ತು ಮನಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್

    • Parenting Tips: ಮಕ್ಕಳು ಹರೆಯಕ್ಕೆ ಕಾಲಿಡುವುದೇ ತಡ "ನನಗೇ ಎಲ್ಲ ಗೊತ್ತು" ಎನ್ನುವಂತೆ ವರ್ತಿಸುತ್ತಾರೆ. ಎಷ್ಟೋ ಮನೆಗಳಲ್ಲಿ "ಮಕ್ಕಳು ಹೇಳಿದ ಮಾತು ಕೇಳಲ್ಲ" ಅನ್ನೋದೇ ದೊಡ್ಡ ಸಮಸ್ಯೆ. "ಇವನ್ನು ನಿಭಾಯಿಸೋದು ಹೇಗಮ್ಮಾ" ಎನ್ನುವ ಪೋಷಕರ ಪ್ರಶ್ನೆಗೆ ಈ ಸಂಚಿಕೆಯಲ್ಲಿ ಉತ್ತರಿಸಿದ್ದಾರೆ ಆಪ್ತಸಮಾಲೋಚಕಿ ಮತ್ತು ಮನಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್.
ಆಪ್ತಸಮಾಲೋಚಕಿ ಮತ್ತು ಮನಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್
ಆಪ್ತಸಮಾಲೋಚಕಿ ಮತ್ತು ಮನಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್

ಪ್ರಶ್ನೆ: ನನ್ನ ಮಗನಿಗೆ ಈಗ 13 ವರ್ಷ. ಬಹಳ ಎದುರುತ್ತರ ನೀಡುತ್ತಾನೆ. ಸ್ನೇಹಿತರ ಬಳಿಯೇ ಸದಾ ಇರುವುದಕ್ಕೆ ಬಯಸುತ್ತಾನೆ. ಅವರೇ ಅವನ ಪ್ರಪಂಚ. ಏನು ಹೇಳಿದರೂ "ನನಗೆ ಸ್ವಾತಂತ್ರ್ಯ ಇಲ್ವಾ? ನನಗೂ ಸ್ವಾತಂತ್ರ್ಯ ಕೊಡು" ಎನ್ನುತ್ತಾನೆ. ಮಕ್ಕಳಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕು? ಪೋಷಕರಾಗಿ ಅವನನ್ನು ನಾವು ನೋಡಿಕೊಂಡು, ನಾವು ಅವನ ಕುರಿತು ಎಲ್ಲಾ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳುವುದು ಸರಿಯಲ್ಲವೇ? ಅವನು ನಮ್ಮ ನಿಯಂತ್ರಣದಲ್ಲಿರುವುದು ಒಳ್ಳೆಯದಲ್ಲವೇ?

- ಈಶ್ವರಪ್ಪ, ನಾಗರಬಾವಿ, ಬೆಂಗಳೂರು

ಉತ್ತರ: ಪೋಷಕರಾಗಿ ನಿಮ್ಮ ಮಗನ ವರ್ತನೆಯಿಂದಾಗಿ ನೀವು ದುಗುಡ, ಆತಂಕ ಮತ್ತು ಗೊಂದಲ ಅನುಭವಿಸುತ್ತಿದ್ದೀರಿ. ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ. ಆದರೆ ನೀವು ಬಹಳ ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ಮಗ ಈಗಿನ್ನೂ 13 ನೇ ವಯಸ್ಸಿಗೆ ಕಾಲಿಟ್ಟಿದ್ದಾನೆ. ಅಂದರೆ ಅವನು ಈಗ ಬಾಲ್ಯಾವಸ್ಥೆ ದಾಟಿ, ‘ಟೀ ನೇಜ್’ (ಹದಿಹರೆಯದ ವಯಸ್ಸು) ಹುಡುಗನಾಗಿದ್ದಾನೆ. ಈ ಹಂತದಲ್ಲಿ ನಿಮ್ಮ ಮಗನಲ್ಲಿ ಗಮನಾರ್ಹ ದೈಹಿಕ ಬದಲಾವಣೆಗಳೊಂದಿಗೆ ಮಾನಸಿಕ ಬದಲಾವಣೆಗಳೂ ಕಂಡು ಬರುತ್ತವೆ.

ಮನುಷ್ಯರ ಮಿದುಳು 25ನೇ ವಯಸ್ಸಿನವರೆಗೂ ಬೆಳೆಯುತ್ತದೆ. ವ್ಯಕ್ತಿಯು 25 ವರ್ಷ ತಲುಪುವವರೆಗೂ ಅವರ ಮಿದುಳಿನ ಬೆಳವಣಿಗೆ, ಕಾರ್ಯನಿರ್ವಹಣೆ ಅಪೂರ್ಣವಾಗಿರುತ್ತದೆ. ವಿಶೇಷವಾಗಿ ತರ್ಕಕ್ಕೆ ಸಂಬಧಪಟ್ಟ ಮತ್ತು ನಿರ್ಧಾರ ತೆಗೆದುಕೊಳ್ಳುವ ಮಿದುಳಿನ ಭಾಗ ಇನ್ನೂ ಈ ವಯಸ್ಸಿನ ಮಕ್ಕಳಲ್ಲಿ ಬೆಳೆದಿರುವುದಿಲ್ಲ. ಆದರೆ ದೇಹ ಮಾತ್ರ ಬೆಳೆದು, ಅವರಿಗೆ ತಾವು ದೊಡ್ಡವರು ಎನಿಸುತ್ತಿರುತ್ತದೆ.

ಆದ್ದರಿಂದ ಮಕ್ಕಳಿಗೆ ವಿಚಾರಶಕ್ತಿಯುಳ್ಳ ಅಥವಾ ತರ್ಕಬದ್ಧವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುಗಿಲ್ಲ. ವಯಸ್ಕರು ಮತ್ತು ಹಿರಿಯರು ಪ್ರಬುದ್ಧತೆಯಿಂದ ಯೋಚಿಸುವಂತೆ ಈ ಮಕ್ಕಳಿಗೆ ಯೋಚಿಸಲು ಸಾಧ್ಯವಿಲ್ಲ. ವಯಸ್ಕರು ನಿರ್ಧಾರ ತೆಗೆದುಕೊಳ್ಳುವಾಗ ಅದರಿಂದಾಗುವ ಪರಿಣಾಮ, ಲಾಭ ನಷ್ಟದ ಬಗ್ಗೆ ಯೋಚಿಸುತ್ತಾರೆ. ಯಾಕೆಂದರೆ ಅವರಲ್ಲಿ ತರ್ಕ ಮತ್ತು ನಿರ್ಧಾರ ತೆಗೆದುಕೊಳ್ಳಲು ಅಗತ್ಯವಿರುವ ಮಿದುಳಿನ ಭಾಗ ಸಂಪೂರ್ಣವಾಗಿ ಬೆಳೆದಿರುತ್ತದೆ.

ಈ ಮಕ್ಕಳಲ್ಲಿ ಭಾವನೆಗಳಿಗೆ ಸಂಬಂಧಿಸಿದ ಮಿದುಳು ಬೆಳೆದಿರುತ್ತದೆ. ಇದು ಅವರ ಆಲೋಚನೆಗಳ ಮೇಲೆ ಅತಿಯಾದ ಪ್ರಾಬಲ್ಯ ಸಾಧಿಸುತ್ತದೆ. ಆದ್ದರಿಂದಲೇ ಇವರಿಗೆ ತಮ್ಮ ಭಾವನೆಗಳನ್ನು ಹತೋಟಿಗೆ ತೆಗೆದುಕೆೊಳ್ಳಲು ಸಾಧ್ಯವಾಗುವುದಿಲ್ಲ. ಅತಿ ಭಾವತ್ಮಕವಾಗಿ (ಸಿಟ್ಟಿನಿಂದ, ಸಂತೋಷದಿಂದ, ಭಯದಿಂದ, ದುಃಖದಿಂದ) ವರ್ತಿಸುತ್ತಾರೆ.

“ನನಗೆ ಎಲ್ಲವೂ ತಿಳಿದಿದೆ", “ನನಗೆ ಎಲ್ಲಾ ಗೊತ್ತು” (I know everything attitude) ಎಂಬ ಮನೋಭಾವನೆಯಲ್ಲಿರುತ್ತಾರೆ. ನಾನು ಯಾರ ಮೇಲೆಯೂ ಅವಲಂಬಿತಳಾಗಬಾರದು, ಸ್ವಾವಲಂಬಿಯಾಗಬೇಕು, ಸ್ವತಂತ್ರವಾಗಿರಬೇಕೆಂದು ಬಯಸುತ್ತಾರೆ. ಪೋಷಕರು ಸಹಾಯ ಮಾಡಲು ಮುಂದಾದರೆ ಅಥವಾ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೋದರೆ ವಿರೋಧಿಸುತ್ತಾರೆ.

ಯಾವುದೇ ಸಲಹೆ ಅಥವಾ ಬುದ್ಧಿವಾದ ಹೇಳಿದರೆ ಅದನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿರುವುದಿಲ್ಲ. ಬದಲು ನನ್ನ ಮನಸ್ಥಿತಿಯನ್ನು , ಅಗತ್ಯವನ್ನು ಪೋಷಕರು ಅರಿಯುತ್ತಿಲ್ಲ ಎಂದು ಭಾವಿಸುತ್ತಾರೆ. ಹರೆಯದ ಮಕ್ಕಳು ಸ್ನೇಹಿತರ ಬಗ್ಗೆ ವಿಶೇಷವಾದ ಒಲವು ಮತ್ತು ಸೆಳೆತವನ್ನು ಹೊಂದಿರುತ್ತಾರೆ. ಹಾಗೆಂದು ಪೋಷಕರು ಬೇಡ ಅಥವಾ ಪೋಷಕರ ಬದಲು ಸ್ನೇಹಿತರು ಎಂದು ಭಾವಿಸುವುದಿಲ್ಲ. ಈ ಸೆಳೆತ ಅಥವಾ ಒಲವು ಸಹ ವಯಸ್ಸಿನ ಒಂದು ಭಾಗವಷ್ಟೇ. ಹಾಗಾಗಿ ಪೋಷಕರು ಇದನ್ನು ತಪ್ಪಾಗಿ ತಿಳಿಯದೇ ಮಕ್ಕಳ ಮನಸ್ಥಿತಿಯನ್ಮು ಅರಿಯಬೇಕು.

ಶೈಕ್ಷಣಿಕವಾಗಿ ಬುದ್ಧಿವಂತರಿದ್ದರೂ ಈ ಮಕ್ಕಳಲ್ಲಿ ಭಾವನಾತ್ಮಕ ಬುದ್ಧಿವಂತಿಕೆ ಇರುವುದಿಲ್ಲ. ಅಂದರೆ ತಮ್ಮ ಭಾವನೆಗಳನ್ನು ನಿಭಾಯಿಸುವ ಸಾಮರ್ಥ್ಯ ಇನ್ನೂ ಬಂದಿರುವುದಿಲ್ಲ. ಹಿರಿಯರು, ಆಪ್ತರು ಹೇಳುತ್ತಿರುವುದು ಅರ್ಥವಾದರೂ, ಅದನ್ನು ಗ್ರಹಿಸಿ, ಅನುಸರಿಸಿ ಕಾರ್ಯರೂಪಕ್ಕೆ ತರುವುದಕ್ಕೆ ಅಸಮರ್ಥರಿರುತ್ತಾರೆ. ತಮ್ಮ ಭಾವನೆಗಳನ್ನಾಗಲಿ, ಅನಿಸಿಕೆ ಅಭಿಪ್ರಾಯವನ್ನಾಗಲಿ ಸೂಕ್ತ ರೀತಿಯಲ್ಲಿ ವ್ಯಕ್ತಪಡಿಸುವುದಕ್ಕೆ ಬಹುತೇಕ ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಈ ಕಾರಣಗಳಿಂದಾಗಿ ಇಂತಹ ವೇಳೆಯಲ್ಲಿ ಅವರಿಗೆ ಪೋಷಕರ ಮಾನಸಿಕ ಬೆಂಬಲ ಮತ್ತು ಮಾರ್ಗದರ್ಶನ ಅಗತ್ಯವಿರುತ್ತದೆ.

ಈ ಕೆಳಕಂಡ 6 ಪ್ರಮುಖ ಅಂಶಗಳನ್ನು ಮರೆಯದೇ ಪಾಲಿಸಿ

1) ಉಪದೇಶ / ಬೋಧನೆಯನ್ನು ತಡೆಯಿರಿ: ಉಪದೇಶದ ಬದಲು ಪೋಷಕರು ಮತ್ತು ಶಿಕ್ಷಕರು ಸ್ವತಃ ಆದರ್ಶವಾಗಬೇಕು (Role Model). ನೀವು ಬಯಸಿದ್ದನ್ನು ನಿಮ್ಮ ನಡತೆ, ಕಾರ್ಯಗಳಲ್ಲಿ ಮಾಡಿ ತೋರಿಸಿದರೆ ಮಕ್ಕಳು ಅನುಸರಿಸುತ್ತಾರೆ.

2) ಅರ್ಥ ಮಾಡಿಕೊಳ್ಳಿ: ಮಕ್ಕಳ ಭಾವೋದ್ವೇಗ, ಕುತೂಹಲ ಮತ್ತು ದೃಷ್ಟಿಕೋನದ ಬಗ್ಗೆ ಏಕಾಏಕಿ ತೀರ್ಪುಗಾರರಾಗದಿರಿ (ಜಡ್ಜ್‌ಮೆಂಟ್ ಬೇಡ). ಅದರ ಬದಲು ಅವರ ಅಭಿಪ್ರಾಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

3) ಗೌರವಿಸಿ: ಮಕ್ಕಳಿಗೆ ಅವ ಭಾವನೆ, ಅನಿಸಿಕೆ ಅಭಿಪ್ರಾಯವನ್ನು ನಿಮ್ಮ ಬಳಿ ಹಂಚಿಕೊಳ್ಳುವುದಕ್ಕೆ ಅವಕಾಶ ನೀಡಿ. ನೀವು ಒಮ್ಮತದಿಂದ ಒಪ್ಪದಿದ್ದರೂ ಸರಿ, ಆದರೆ ಅವರ ಅಭಿಪ್ರಾಯಗಳನ್ನು ಗೌರವಿಸಿ. ಹೀಯಾಳಿಕೆ, ತೇಜೋವಧೆ, ಅಪಮಾನ, ಹಣೆಪಟ್ಟಿ ಹಚ್ಚುವುದನ್ನು ತಡೆಯಿರಿ.

4) ಪ್ರೋತ್ಸಾಹ: ಮಕ್ಕಳ ಪ್ರಯತ್ನಗಳಿಗೆ, ಆಶಾದಾಯಕ ಗುರಿಗಳಿಗೆ ನಿಮ್ಮ ಕೈಲಾದ ಉತ್ತೇಜನ ಮತ್ತು ಪ್ರೋತ್ಸಾಹ ನೀಡಿ.

5) ಸಹಾನುಭೂತಿ: ಮಕ್ಕಳಿಗೆ ನಿಮ್ಮ ಅನುಕಂಪ, ಪ್ರೀತಿಗಿಂತ ಹೆಚ್ಚಾಗಿ ನಿಮ್ಮ ಸಹಾನುಭೂತಿಯ ಅಗತ್ಯವಿದೆ. ಅವರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳನ್ನು ಅರ್ಥ ಮಾಡಿಕೊಳ್ಳಿ. ನೀವು ಅವರ ಸ್ಥಾನದಲ್ಲಿ ನಿಂತು ಆಲೋಚಿಸಿ. ಅವರ ಮನಸ್ಥಿತಿ ಮತ್ತು ದೃಷ್ಟಿಕೋನವನ್ನು ಅರಿಯಲು ಪ್ರಯತ್ನಿಸಿ.

6) ವಿಶ್ಲೇಷಿಸಿ: ಮಕ್ಕಳು ಸಮಸ್ಯೆ ಅಲ್ಲ. ಇದನ್ನು ಅರ್ಥ ಮಾಡಿಕೊಳ್ಳಿ. ಅವರ ಸಮಸ್ಯಾತ್ಮಕ ನಡವಳಿಕೆಗಳ ಬಗ್ಗೆಯಷ್ಟೇ ನಿಮ್ಮ ಗಮನಹರಿಸದೆ ಅವುಗಳ ಹಿಂದಿರುವ ಕಾರಣಗಳು ಮತ್ತು ಭಾವನೆಗಳ ಕುರಿತು ವಿಶ್ಲೇಷಣೆ ಮಾಡಿ.

7) ಭಾವನೆಗಳನ್ನು ಹಂಚಿಕೊಳ್ಳಿ: ಮಕ್ಕಳ ಬಗ್ಗೆ ನಿಮಗಿರುವ ಆತಂಕ, ಭಯ, ಕಳಕಳಿಯನ್ನು ಮುಕ್ತವಾಗಿ ಶಾಂತಿಯುತ ರೀತಿಯಲ್ಲಿ ಹಂಚಿಕೊಳ್ಳಿ. ಸಿಟ್ಟು, ಅಸಮಾಧಾನ, ಕುಹಕವಿಲ್ಲದೆ ಯಾವುದೇ ಸಂಘಷ೯ಣೆಗೆ ಗುರಿಯಾಗದಂತೆ ಈ ಸಂದರ್ಭದಲ್ಲಿ ಎಚ್ಚರವಹಿಸಿ.

ಮಕ್ಕಳ ತಪ್ಪು, ನ್ಯೂನತೆಗಳನ್ನು ಸರಿಪಡಿಸುವುದರ ಜೊತೆಗೆ ನಿಮ್ಮ ಭಾವನೆಗಳನ್ನು ಅಭಿವ್ಯಕ್ತಿಸುವ ರೀತಿಯ ಬಗ್ಗೆಯೂ ಗಮನವಿರಲಿ. ನಿಮ್ಮ ಭಾವನೆಗಳನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸುವುದು ಅತ್ಯಂತ ಮುಖ್ಯ. ಇಲ್ಲದಿದ್ದರೆ ನಿಮ್ಮ ವರ್ತನೆಯು ಮಕ್ಕಳ ಮನಸ್ಸಿನ ಮೇಲೆ ಭಾರಿ ಪ್ರಮಾಣ ಪರಿಣಾಮ ಉಂಟು ಮಾಡುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

---

ಗಮನಿಸಿ: ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ