logo
ಕನ್ನಡ ಸುದ್ದಿ  /  ಜೀವನಶೈಲಿ  /  Lalit Khaitan: ಬೆಂಗಳೂರಿನ ಹಳೆ ವಿದ್ಯಾರ್ಥಿ 80 ವರ್ಷದ ಲಲಿತ್ ಖೇತಾನ್‌ ಭಾರತದ ಹೊಸ ಶತ ಕೋಟ್ಯಧಿಪತಿ, ಇಲ್ಲಿದೆ 5 ಅಂಶಗಳ ಕಿರುಪರಿಚಯ

Lalit Khaitan: ಬೆಂಗಳೂರಿನ ಹಳೆ ವಿದ್ಯಾರ್ಥಿ 80 ವರ್ಷದ ಲಲಿತ್ ಖೇತಾನ್‌ ಭಾರತದ ಹೊಸ ಶತ ಕೋಟ್ಯಧಿಪತಿ, ಇಲ್ಲಿದೆ 5 ಅಂಶಗಳ ಕಿರುಪರಿಚಯ

Umesh Kumar S HT Kannada

Dec 15, 2023 03:54 PM IST

google News

ಲಲಿತ್ ಖೇತಾನ್ - ರಾಡಿಕೋ ಖೈತಾನ್ ಕಂಪನಿಯ ಅಧ್ಯಕ್ಷ.

  • ಪರಿಶ್ರಮ, ವ್ಯವಹಾರ ಜಾಣ್ಮೆ ಇದ್ದರೆ ಶತಕೋಟ್ಯಧಿಪತಿ ಆಗುವುದು ಕಷ್ಟದ ಮಾತಲ್ಲ. ಅದಕ್ಕೆ ವಯಸ್ಸಿನ ಹಂಗಿಲ್ಲ. ಶತಕೋಟ್ಯಧಿಪತಿ ಯಾವಾಗ ಬೇಕಾದ್ರೂ ಆಗಬಹುದು. ಇದು 80ನೇ ವರ್ಷದಲ್ಲಿ ಶತಕೋಟ್ಯಧಿಪತಿಯಾದ ಲಲಿತ್ ಖೇತಾನ್ ಅವರ ಕಿರುಪರಿಚಯ. 

ಲಲಿತ್ ಖೇತಾನ್ - ರಾಡಿಕೋ ಖೈತಾನ್ ಕಂಪನಿಯ ಅಧ್ಯಕ್ಷ.
ಲಲಿತ್ ಖೇತಾನ್ - ರಾಡಿಕೋ ಖೈತಾನ್ ಕಂಪನಿಯ ಅಧ್ಯಕ್ಷ. (Radico Khaitan)

ಬೆಂಗಳೂರಲ್ಲಿ ಇಂಜಿನಿಯರಿಂಗ್ ಓದಿದ ದೇಶದ ಪ್ರಸಿದ್ಧ ಮದ್ಯಕಂಪನಿಯ ಮಾಲೀಕ 80 ವರ್ಷದ ಲಲಿತ್ ಖೇತಾನ್ ಈಗ ಭಾರತದ ಹೊಸ ಶತಕೋಟ್ಯಧಿಪತಿ!

ದೆಹಲಿ ಮೂಲದ ಲಲಿತ್ ಖೇತಾನ್‌ (ಲಲಿತ್ ಖೈತಾನ್‌) ದಿಢೀರ್ ಶತಕೋಟ್ಯಧಿಪತಿಯಾಗುವುದಕ್ಕೆ ಕಾರಣವಾಗಿದ್ದು, ಅವರ ಮದ್ಯಕಂಪನಿ ರಾಡಿಕೋ ಖೇತಾನ್ (ರಾಡಿಕೋ ಖೈತಾನ್‌) ನಡೆಸಿರುವ ಕ್ಷಿಪ್ರ ವಹಿವಾಟು. ಮದ್ಯ ಮಾರುಕಟ್ಟೆಯಲ್ಲಿ ದೆಹಲಿ ಮೂಲದ ರಾಡಿಕೋ ಖೇತಾನ್‌ 38 ಕೋಟಿ ಡಾಲರ್ ( ಅಂದಾಜು 3160 ಕೋಟಿ ರೂಪಾಯಿ) ವಹಿವಾಟಿನೊಂದಿಗೆ ಪ್ರಮುಖ ಕಂಪನಿಯಾಗಿ ಗುರುತಿಸಿಕೊಂಡಿತು ಎಂದಿ ಫೋರ್ಬ್ಸ್‌ ವರದಿ ಹೇಳಿದೆ.

ಈ ವರ್ಷ ಈ ಕಂಪನಿಯ ವಹಿವಾಟು ಶೇ.50 ಏರಿದೆ. ಇದರೊಂದಿಗೆ ಕಂಪನಿಯ ಮಾಲೀಕ ಲಲಿತ್ ಖೇತಾನ್ ಅವರ ಷೇರು ಸಂಪತ್ತು 100 ಕೋಟಿ ರೂಪಾಯಿ ದಾಟಿದೆ. ರಾಡಿಕೋ ಖೇತಾನ್ ಕಂಪನಿಯಲ್ಲಿ ಲಲಿತ್ ಅವರ ಪಾಲು ಶೇಕಡ 40 ಇದೆ.

ಅಂದ ಹಾಗೆ, ವಿಸ್ಕಿ, ವೋಡ್ಕಾ, ರಮ್‌, ಬ್ರಾಂಡಿ ಪ್ರಿಯರಿಗೆ ರಾಂಪುರ್ ವಿಸ್ಕಿ, 8ಪಿಎಂ ವಿಸ್ಕಿ, ಮ್ಯಾಜಿಕ್ ಮೊಮೆಂಟ್ಸ್ ವೋಡ್ಕಾ, ಕಾಂಟೆಸ್ಸಾ ರಮ್ ಮತ್ತು ಓಲ್ಡ್ ಅಡ್ಮಿರಲ್ ಬ್ರಾಂಡಿ ಖಚಿತವಾಗಿಯೂ ಗೊತ್ತಿರುತ್ತದೆ. ಇವುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಕಳುಹಿಸುತ್ತಿರುವ ಕಂಪನಿಯೇ ರಾಡಿಕೋ ಖೇತಾನ್‌.

ರಾಡಿಕೋ ಖೇತಾನ್ ಕಂಪನಿ ಆರಂಭವಾಗಿದ್ದು 1943ರಲ್ಲಿ. ಅಂದು ಈ ಕಂಪನಿಯ ಹೆಸರು ರಾಂಪುರ ಡಿಸ್ಟಿಲ್ಲರಿ ಆಂಡ್ ಕೆಮಿಕಲ್ ಕಂಪನಿ ಎಂದಾಗಿತ್ತು. ಇದು ಭಾರತದಲ್ಲಿ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ (ಐಎಂಎಫ್‌ಎಲ್‌) ತಯಾರಿಸುವ ಅತ್ಯಂತ ಹಳೆಯ ಮತ್ತು ದೊಡ್ಡ ಉತ್ಪಾದಕ ಸಂಸ್ಥೆ ಇದು. ಈ ಕಂಪನಿಯನ್ನು ಲಲಿತ್ ಖೇತಾನ್ ಅವರ ತಂದೆ ದಿವಂಗತ ಜಿ.ಎನ್‌.ಖೇತಾನ್‌ 1970ರ ದಶಕದಲ್ಲಿ ಖರೀದಿಸಿದರು.

ಲಲಿತ್ ಖೇತಾನ್ ಅವರು 1995ರಲ್ಲಿ ನಷ್ಟದಲ್ಲಿದ್ದ ರಾಂಪುರ ಡಿಸ್ಟಿಲ್ಲರಿಯನ್ನು ರಾಡಿಕೋ ಖೇತಾನ್ ಕಂಪನಿಯನ್ನಾಗಿ ಪರಿವರ್ತಿಸಿದರು. ಪ್ರಸ್ತುತ ರಾಡಿಕೋ ಖೇತಾನ್ ಕಂಪನಿಯನ್ನು ಅವರ ಪುತ್ರ ಅಭಿಷೇಕ್ ಖೇತಾನ್ ನೋಡಿಕೊಳ್ಳುತ್ತಿದ್ದಾರೆ. ಅಭಿಷೇಕ್ ಖೇತಾನ್ ಇಂಡಿಸ್ಟ್ರಿಯಲ್ ಇಂಜಿಯರ್‌.

ಲಲಿತ್‌ ಖೇತಾನ್ ಈ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥನಾಗಿ 1997ರಲ್ಲಿ ಕೆಲಸ ಶುರುಮಾಡಿದ್ದು, ಉದ್ಘಾಟನಾ ಬ್ರಾಂಡ್ ಆಗಿ 8ಪಿಎಂ ವಿಸ್ಕಿಯನ್ನು ಮಾರುಕಟ್ಟೆಗೆ ಪರಿಚಯಿಸಿದರು. ಇದು ಮಾರುಕಟ್ಟೆಗೆ ಪರಿಚಯಿಸಲ್ಪಟ್ಟ ಮೊದಲ ವರ್ಷವೇ 10 ಲಕ್ಷ ಕೇಸ್‌ಗಳು ಮಾರಾಟವಾಗಿ ಲಿಮ್ಕಾ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ನಲ್ಲಿ ದಾಖಲಾಗಿತ್ತು.

ಲಲಿತ್ ಖೇತಾನ್ (ಲಲಿತ್ ಖೈತಾನ್) ಯಾರು| ಪರಿಚಯಕ್ಕಾಗಿ 5 ಅಂಶಗಳು

1. ಲಲಿತ್ ಖೇತಾನ್ ಅವರ ಹುಟ್ಟೂರು ಕೋಲ್ಕತ್ತ. ತಂದೆ ಜಿ ಎನ್ ಖೇತಾನ್‌. ಲಲಿತ್ ಖೇತಾನ್ ಅವರು 2020ರಲ್ಲಿ ಫಾರ್ಚೂನ್‌ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ, “9 ನೇ ತರಗತಿಯಿಂದ, ನಾನು ಮದ್ಯದ ವ್ಯಾಪಾರದಲ್ಲಿರಲು ಬಯಸುತ್ತೇನೆ ಎಂದು ನನಗೆ ತುಂಬಾ ಸ್ಪಷ್ಟವಾಗಿತ್ತು. ನಮ್ಮ ಕಂಪನಿಯ ಮಾರುಕಟ್ಟೆ ಬಂಡವಾಳವು ಸುಮಾರು 5 ಕೋಟಿ ರೂಪಾಯಿ ಇತ್ತು. ಇಂದು ಅದು 5,000 ಕೋಟಿ ರೂಪಾಯಿ ಆಗಿದೆ” ಎಂದು ಹೇಳಿದ್ದರು.

2. ಲಲಿತ್ ಖೇತಾನ್ ಅವರು ಅಜ್ಮೇರ್‌ನ ಮಯೋ ಕಾಲೇಜ್‌, ಕೋಲ್ಕತ್ತದ ಸೇಂಟ್ ಕ್ಸೇವಿಯರ್ಸ್‌ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಅಮೆರಿಕದ ಹಾರ್ವರ್ಡ್‌ನಲ್ಲಿ ಮ್ಯಾನೇಜಿರಿಯಲ್ ಫೈನಾನ್ಸ್ ಮತ್ತು ಅಕೌಂಟಿಂಗ್ ಕೋರ್ಸ್ ಪೂರ್ಣಗೊಳಿಸಿದ್ದಾರೆ.

3. ‌ಜಿಎನ್‌ ಖೈತಾನ್ ಅವರು 1972 ರಲ್ಲಿ ರಾಮ್‌ಪುರ ಡಿಸ್ಟಿಲರಿ ವ್ಯವಹಾರವನ್ನು 16 ಲಕ್ಷ ರೂಪಾಯಿಗೆ ಖರೀದಿಸುವವರೆಗೂ ಖೇತಾನ್‌ ಎಂದಿಗೂ ಮದ್ಯದ ರುಚಿ ನೋಡಿರಲಿಲ್ಲ. ಖೈತಾನ್ ಅವರು ಸಾಂಪ್ರದಾಯಿಕ ಮಾರ್ವಾಡಿ ಕುಟುಂಬಕ್ಕೆ ಸೇರಿದವರು.

4. ರಾಂಪುರ ಡಿಸ್ಟಿಲರಿ ಕಂಪನಿ ರಾಡಿಕೋ ಖೇತಾನ್ ಆಗಿ ಬದಲಾದ ಬಳಿಕ ರಾಡಿಕೊ ಖೈತಾನ್ ಬಾಟಲಿಂಗ್ ಪ್ಲಾಂಟ್ ಆಗಿ ಕೆಲಸ ಶುರುಮಾಡಿತು. ನಂತರ ಅದು ಬೃಹತ್ ಆಲ್ಕೋಹಾಲ್ ಉತ್ಪಾದನಾ ಕಂಪನಿಯಾಯಿತು. 1998ರಲ್ಲಿ ಕಂಪನಿ ದಿವಾಳಿಯಾಗುವ ಅಂಚಿಗೆ ತಲುಪಿದಾಗ, ಲಲಿತ್ ಖೇತಾನ್ ಅವರು ತಮ್ಮ ಮಗ ಅಭಿಷೇಕ್ ನೆರವಿನೊಂದಿಗೆ 8ಪಿಎಂ ವಿಸ್ಕಿಯನ್ನು ಮಾರುಕಟ್ಟೆಗೆ ಪರಿಚಯಿಸಿದರು. ಆನಂತರದ್ದು ಇತಿಹಾಸ.

5. ರಾಡಿಕೋ ಕಂಪನಿ ಈಗ ಭಾರತದಲ್ಲಿ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ (ಐಎಂಎಫ್‌ಎಲ್‌) ತಯಾರಿಸುವ ಅತ್ಯಂತ ಹಳೆಯ ಮತ್ತು ದೊಡ್ಡ ಉತ್ಪಾದಕ ಕಂಪನಿಯಾಗಿದ್ದು 85 ದೇಶಗಳಲ್ಲಿ ವಹಿವಾಟನ್ನು ಹೊಂದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ