Ramadan 2023: ರಂಜಾನ್ ಉಪವಾಸ; ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆ ಪಾಲಿಸಿ
Apr 06, 2023 10:44 AM IST
ರಂಜಾನ್ ಉಪವಾಸ ಹಾಗೂ ಆರೋಗ್ಯ
- Ramadan 2023: ಹೃದ್ರೋಗ ಸಮಸ್ಯೆ ಇರುವವರು, ಅಧಿಕ ರಕ್ತದೊತ್ತಡ, ಮಧುಮೇಹದಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಉಪವಾಸ ಸಮಯದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ ಎನ್ನುವುದು ತಜ್ಞರ ಅಭಿಪ್ರಾಯ.
ಶತ ಶತಮಾನಗಳಿಂದಲೂ ಪ್ರಪಂಚದಾದ್ಯಂತ ವಿವಿಧ ಜಾತಿ, ಧರ್ಮದವರು ತಮ್ಮ ಸಂಸ್ಕೃತಿ ಹಾಗೂ ಆಚರಣೆಯ ಭಾಗವಾಗಿ ಉಪವಾಸವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ನವರಾತ್ರಿ, ಏಕಾದಶಿ (ಹಿಂದೂ ಆಚರಣೆ), ರಂಜಾನ್ (ಮುಸ್ಲಿಮರ ಆಚರಣೆ), ಲೆಂಟ್ (ಕ್ರಿಶ್ಚಿಯನ್ನರ ಆಚರಣೆ) ಹೀಗೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ಉಪವಾಸ ಮಾಡುವುದು ವಾಡಿಕೆ. ಉಪವಾಸವು ತೂಕ ಕಡಿತ, ಇನ್ಸುಲಿನ್ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಪರಿಧಮನಿಯ ಕಾಯಿಲೆ ಪ್ರತಿರೋಧ ಹಾಗೂ ತಡೆಗಟ್ಟುವಿಕೆಗೂ ಇದು ಸಹಕಾರಿ.
ಆದರೆ ಹೃದ್ರೋಗ ಸಮಸ್ಯೆ ಇರುವವರು, ಅಧಿಕ ರಕ್ತದೊತ್ತಡ, ಮಧುಮೇಹದಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಉಪವಾಸ ಸಮಯದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ ಎನ್ನುತ್ತಾರೆ ಆರೋಗ್ಯ ತಜ್ಞರು. ಏಕೆಂದರೆ ಉಪವಾಸದಿಂದ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗಬಹುದು ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಉಲ್ಬಣವಾಗಬಹುದು.
ಹಿಂದೂಸ್ತಾನ್ ಟೈಮ್ಸ್ ಲೈಫ್‌ಸ್ಟೈಲ್ ವಿಭಾಗದೊಂದಿಗೆ ಮಾತನಾಡಿದ ಮುಂಬೈನ ಏಷ್ಯನ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಹೃದ್ರೋಗ ತಜ್ಞ ಡಾ. ಸಂತೋಷ್ ಕುಮಾರ್ ಡೋರಾ ಯಾವ ಸಮಸ್ಯೆ ಇರುವವರು ಉಪವಾಸ ಮಾಡಬಾರದು ಎಂಬ ಬಗ್ಗೆ ಈ ರೀತಿ ಹೇಳಿದ್ದಾರೆ. ʼಅಸ್ಥಿರ ಗಂಟಲೂತದ ಸಮಸ್ಯೆ ಇರುವವರು, ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾದವರು, ಕಳೆದ 4 ರಿಂದ 6 ವಾರಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದವರು ಉಪವಾಸ ಮಾಡದೇ ಇರುವುದು ಉತ್ತಮ. ಅದನ್ನು ಹೊರತು ಪಡಿಸಿ, ಅನಿಯಂತ್ರಿತ ರಕ್ತದೊತ್ತಡ ಅಥವಾ ಹೃದಯ ಬಡಿತದ ಸಮಸ್ಯೆ ಇರುವವರು ಉಪವಾಸ ಮಾಡಬಾರದುʼ.
ಉಪವಾಸದ ಸಂಭವನೀಯ ಅಪಾಯಗಳನ್ನು ತಪ್ಪಿಸಲು ಹಾಗೂ ಆರೋಗ್ಯವು ರಾಜಿಯಾಗದಂತೆ ನೋಡಿಕೊಂಡು ಉಪವಾಸದ ಸಮಯದಲ್ಲಿ ಹೃದಯವನ್ನು ಆರೋಗ್ಯವಾಗಿಡಲು ಈ ಕೆಲವು ಸೂಚನೆಗಳನ್ನು ಪಾಲಿಸಬೇಕಾಗುತ್ತದೆ ಎನ್ನುತ್ತಾರೆ ಡಾ. ಸಂತೋಷ್ ಕುಮಾರ್.
ಅತಿಯಾಗಿ ತಿನ್ನುವುದು ಹಾರ್ಮೋನ್‌ಗಳು ವ್ಯತ್ಯಯಕ್ಕೆ ಕಾರಣವಾಗಬಹುದು
ಗ್ರೆಲಿನ್ ಹಾಗೂ ಲೆಪ್ಟಿನ್ ಎಂಬ ಎರಡು ಪ್ರಮುಖ ಹಾರ್ಮೋನುಗಳು ಹಸಿವಿನ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತವೆ. ಗ್ರೆಲಿನ್ ಹಸಿವನ್ನು ಉತ್ತೇಜಿಸುತ್ತದೆ ಹಾಗೂ ಲೆಪ್ಟಿನ್ ಹಸಿವನ್ನು ನಿಗ್ರಹಿಸುತ್ತದೆ. ಕೆಲ ಹೊತ್ತು ನಾವು ಆಹಾರ ಸೇವಿಸದೇ ಇದಾಗ ಗ್ರೆಲಿನ್ ಮಟ್ಟ ಹೆಚ್ಚಾಗುತ್ತದೆ. ಆಹಾರ ಸೇವಿಸಿದಾಗ ಲೆಪ್ಟಿನ್ ಮಟ್ಟ ದೇಹ ನಿಯಂತ್ರಣಕ್ಕೆ ಬರುತ್ತದೆ. ಅದೇನೆ ಇದ್ದರೂ, ಅತಿಯಾಗಿ ತಿನ್ನುವುದರಿಂದ ಅಸಮತೋಲನ ಉಂಟಾಗಬಹುದು. ಅಲ್ಲದೆ ಇದು ಶಾಶ್ವತವಾಗಿ ಅತಿಯಾಗಿ ತಿನ್ನುವುದನ್ನು ಉತ್ತೇಜಿಸಬಹುದು. ಇದರಿಂದ ತೂಕ ಹೆಚ್ಚಳವೂ ಉಂಟಾಗಬಹುದು. ಆದ್ದರಿಂದ ಒಮ್ಮೆಲೆ ಅತಿಯಾಗಿ ತಿನ್ನುವ ಮೂಲಕ ಉಪವಾಸವನ್ನು ಮುರಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ.
ದೇಹದಲ್ಲಿ ದ್ರವ ಸಮತೋಲನವಿರಲಿ
ಹೈಪೋವೊಲೆಮಿಯಾ (ನಿರ್ಜಲೀಕರಣ) ಸಮಸ್ಯೆಯನ್ನು ತಡೆಗಟ್ಟಲು ಉಪವಾಸ ನಿರತರಾಗಿಲ್ಲದ ಸಮಯದಲ್ಲಿ ಸಾಕಷ್ಟು ನೀರು ಹಾಗೂ ದ್ರವಾಹಾರಗಳನ್ನು ಸೇವಿಸುವುದು ಅವಶ್ಯ. ನಿರ್ಜಲೀಕರಣವನ್ನು ತಪ್ಪಿಸಲು ಕನಿಷ್ಠ 8 ಲೋಟಗಳಷ್ಟು ನೀರು ಕುಡಿಯುವುದು ಅಗತ್ಯ. ರೋಗಿಗಳು ಬೆಳಗಿನ ಬದಲು ಸಂಜೆ ಮೂತ್ರವರ್ಧಕಗಳನ್ನು ತೆಗೆದುಕೊಳ್ಳಬೇಕು. ಇದರಿಂದ ದೇಹದಲ್ಲಿ ಜಲಸಂಚಯನ ಸುಸೂತ್ರವಾಗುತ್ತದೆ. ಇದು ಶ್ವಾಸಕೋಶ ದಟ್ಟಣೆ, ಎಡಿಮಾ ಸಮಸ್ಯೆ ನಿವಾರಣೆ ಹಾಗೂ ದೇಹ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೆಫಿನ್ ಅಂಶಗಳಿಂದ ದೂರವಿರಿ
ಕೆಫಿನ್ ಅಂಶ ಹೆಚ್ಚಿರುವ ಕಾಫಿ, ಟೀ, ತಂಪು ಪಾನೀಯಗಳನ್ನು ಕಡಿಮೆ ಸೇವಿಸಿ. ಏಕೆಂದರೆ ಇದು ಕಬ್ಬಿಣಾಂಶದ ಹೀರಿಕೊಳ್ಳುವಿಕೆಯನ್ನು ನಿರ್ಬಂಧಿಸುತ್ತದೆ ಹಾಗೂ ಮೂತ್ರದ ಹರಿವಿನ ಪ್ರಮಾಣ ಹೆಚ್ಚಿ ನಿರ್ಜಲೀಕರಣ ಉಂಟಾಗುವ ಸಾಧ್ಯತೆ ಇದೆ. ಕೆಫಿನ್ ಹೃದಯ ಬಡಿತ ಹಾಗೂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಟೀ, ಕಾಫಿ ಬದಲು ಪುದಿನ ಅಥವಾ ಶುಂಠಿ ಟೀ ಕುಡಿಯಬಹುದು.
ಮೆಟಾಬಾಲಿಕ್ ಸಿಂಡ್ರೋಮ್ ಬಗ್ಗೆ ಎಚ್ಚರ ವಹಿಸಿ
ಹಬ್ಬ ಹರಿದಿನಗಳಲ್ಲಿ ಉಪವಾಸದ ನಂತರ ಜನರು ಹೆಚ್ಚು ಕರಿದ ಹಾಗೂ ಸಿಹಿ ಪದಾರ್ಥಗಳನ್ನು ಸೇವಿಸುತ್ತಾರೆ. ಇದು ಸ್ಥೂಲಕಾಯತೆ ಹಾಗೂ ಇನ್ಸುಲಿನ್ ಪ್ರತಿರೋಧವನ್ನು ಉತ್ತೇಜಿಸಬಹುದು. ಇವು ಮೆಟಾಬಾಲಿಕ್ ಸಿಂಡ್ರೋಮ್‌ಗೆ ಎರಡು ಪ್ರಮುಖ ಅಪಾಯಕಾರಿ ಅಂಶಗಳು. ಇದರಿಂದ ಹೃದ್ರೋಗ, ಪಾರ್ಶ್ವವಾಯು ಹಾಗೂ ಮಧುಮೇಹದ ಅಪಾಯ ಹೆಚ್ಚುವ ಸಾಧ್ಯತೆ ಇದೆ. ಆ ಕಾರಣಕ್ಕೆ ಸಮತೋಲಿನ ಆಹಾರ ಸೇವನೆ ಮುಖ್ಯವಾಗುತ್ತದೆ. ಹಣ್ಣು, ತರಕಾರಿ, ಧಾನ್ಯಗಳು, ಲೀನ್ ಪ್ರೊಟೀನ್ ಈ ಎಲ್ಲಾ ಅಂಶಗಳನ್ನು ಹೊಂದಿರುವ ಆಹಾರ ಸೇವನೆ ಉತ್ತಮ.
ಊಟವಾದ ತಕ್ಷಣ ಪಾನೀಯಗಳನ್ನು ಸೇವಿಸುವುದು ಸರಿಯಲ್ಲ
ಒಂದೇ ಬಾರಿಗೆ ಹೊಟ್ಟೆ ತುಂಬಾ ತಿನ್ನುವುದು ಹಾಗೂ ದ್ರವಾಹಾರಗಳನ್ನು ಸೇವಿಸುವುದು ಸರಿಯಾದ ಕ್ರಮವಲ್ಲ. ಇದು ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಕಡಿಮೆ ಅಥವಾ ಸಮ ಪ್ರಮಾಣದ ಆಹಾರ ಸೇವನೆಯು ಹಾರ್ಮೋನ್ ಹಾಗೂ ಮೆಟಾಬಾಲಿಕ್ ಬದಲಾವಣೆಗಳಿಗೆ ಉತ್ತಮ. ಅದಲ್ಲದೆ ಇದರಿಂದ ದೇಹಕ್ಕೆ ಉತ್ತಮ ಎನ್ನಿಸುವ ಕೊಲೆಸ್ಟ್ರಾಲ್ ಉತ್ಪಾದನೆಯೂ ಸಾಧ್ಯ.
ದೈಹಿಕ ಚಟುವಟಿಕೆ
ಸಂಜೆ ಉಪವಾಸ ಮುಗಿದ 2 ರಿಂದ 3 ಗಂಟೆಯ ನಂತರ ವಾಕಿಂಗ್, ಯೋಗ ಅಥವಾ ಸ್ಟ್ರೆಚಿಂಗ್‌ನಂತಹ ಲಘು ವ್ಯಾಯಾಮಗಳನ್ನು ಮಾಡಿ. ಆದರೆ ಅತಿಯಾಗಿ ದೇಹ ದಂಡಿಸುವುದೂ ಸರಿಯಲ್ಲ. ಸಮಯವಲ್ಲದ ಸಮಯದಲ್ಲಿ ದೈಹಿಕ ಚಟುವಟಿಕೆಯಲ್ಲಿ ತೊಡಗುವುದರಿಂದ ಹೃದಯದ ಭಾರ ಹೆಚ್ಚುವುದು, ಮೂರ್ಛೆ ರೋಗ ಅಥವಾ ಪಾರ್ಶ್ವವಾಯುವಿನಂತಹ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು.
ಸಮರ್ಪಕ ನಿದ್ದೆ
ನಿದ್ದೆಯ ಕೊರತೆಯು ಕೋಪ, ತಲೆನೋವು ಹಾಗೂ ಒತ್ತಡಕ್ಕೆ ಕಾರಣವಾಗಬಹುದು. ಇದರಿಂದ ಹಸಿವಿನ ಪ್ರಮಾಣವೂ ಹೆಚ್ಚಬಹುದು. ಇದು ನೇರವಾಗಿ ಅಥವಾ ಪರೋಕ್ಷವಾಗಿ ಹೃದಯದ ತೊಂದರೆಗೆ ಕಾರಣವಾಗಬಹುದು.
ಈ ಮೇಲಿನ ಸಲಹೆಗಳು ಪ್ರಮಾಣಿತವಾಗಿದ್ದರೂ, ಹೃದ್ರೋಗಿಗಳು ಉಪವಾಸಕ್ಕೆ ಮುನ್ನ ವೈದ್ಯರನ್ನು ಸಂಪರ್ಕಿಸಿ ಆರೋಗ್ಯ ಸ್ಥಿತಿಯ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
ವಿಭಾಗ