logo
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ನಿಮ್ಮ ಸಂಗಾತಿಯ ನಡವಳಿಕೆಯನ್ನು ತಿದ್ದಲು ಯತ್ನಿಸುವುದು ನಿಮ್ಮ ನಡುವಿನ ಸಂಬಂಧವನ್ನೇ ಹಾಳುಗೆಡವಬಹುದೇ..?

Relationship: ನಿಮ್ಮ ಸಂಗಾತಿಯ ನಡವಳಿಕೆಯನ್ನು ತಿದ್ದಲು ಯತ್ನಿಸುವುದು ನಿಮ್ಮ ನಡುವಿನ ಸಂಬಂಧವನ್ನೇ ಹಾಳುಗೆಡವಬಹುದೇ..?

HT Kannada Desk HT Kannada

Feb 17, 2024 11:00 AM IST

google News

ನಿಮ್ಮ ಸಂಗಾತಿಯನ್ನು ತಿದ್ದಲು ಯತ್ನಿಸುವುದು ನಿಮ್ಮ ಸಂಬಂಧವನ್ನೇ ಹಾಳುಗೆಡವಬಹುದೇ..?

  • Relationship: ನಿಮ್ಮ ಸಂಗಾತಿಯು ನಿಮ್ಮ ಪ್ರತಿಯೊಂದು ಕೆಲಸಗಳಿಗೂ ಅಸಮಾಧಾನ ತೋರುತ್ತಿದ್ದೀರಾ..? ನಿಮ್ಮ ಪ್ರತಿಯೊಂದು ನಡವಳಿಕೆಯಲ್ಲೂ ನಿಮ್ಮನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರಾ..? ಹಾಗಾದರೆ ನಿಮ್ಮ ಸಂಗಾತಿಯು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಎಂದಾದರೂ ಯೋಚಿಸಿದ್ದೀರೇ..?

ನಿಮ್ಮ ಸಂಗಾತಿಯನ್ನು ತಿದ್ದಲು ಯತ್ನಿಸುವುದು ನಿಮ್ಮ ಸಂಬಂಧವನ್ನೇ ಹಾಳುಗೆಡವಬಹುದೇ..?
ನಿಮ್ಮ ಸಂಗಾತಿಯನ್ನು ತಿದ್ದಲು ಯತ್ನಿಸುವುದು ನಿಮ್ಮ ಸಂಬಂಧವನ್ನೇ ಹಾಳುಗೆಡವಬಹುದೇ..? (PC: unsplash)

ಸಮಯಕ್ಕೆ ಸರಿಯಾಗಿ ಏಳಬೇಕು, ಚುರುಕಾಗಿ ಕೆಲಸಗಳನ್ನು ಮುಗಿಸಬೇಕು, ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು ಈ ರೀತಿಯ ವಿಚಾರಗಳನ್ನು ನೀವು ನಿಮ್ಮ ಸಂಗಾತಿಯ ಮೇಲೆ ಹೇರುತ್ತಿದ್ದೀರಾ..? ನೀವು ಈ ರೀತಿ ಮಾಡುತ್ತಿದ್ದೀರಿ ಎಂದರೆ ನಿಮಗೆ ತಿಳಿದೋ ತಿಳಿಯದೆಯೋ ನೀವು ಅವರ ಪೋಷಕರಾಗಲು ಯತ್ನಿಸುತ್ತಿದ್ದೀರಿ ಎಂದೇ ಅರ್ಥ. ಕೆಲವರು ಎಷ್ಟರ ಮಟ್ಟಿಗೆ ಎಂದರೆ ನಮ್ಮ ಸಂಗಾತಿ ಏನನ್ನು ತಿನ್ನಬೇಕು.? ಅವರ ದಿನಚರಿ ಹೇಗಿರಬೇಕು ಇವೆಲ್ಲವನ್ನೂ ನಿರ್ಧರಿಸಲು ಹೋಗುತ್ತಾರೆ.

ಅಂದಹಾಗೆ ನಿಮ್ಮ ಈ ಅತಿಯಾದ ಕಾಳಜಿಯು ನಮ್ಮ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಯು ದಟ್ಟವಾಗಿ ಇರುತ್ತದೆ. ಪದೇ ಪದೇ ನೀವು ಸಂಗಾತಿಯಲ್ಲಿ ದೋಷಗಳನ್ನು ಹುಡುಕಿ ಅದನ್ನು ಸರಿಪಡಿಸಲು ಹೋಗುವುದು ನಿಮ್ಮ ದಾಂಪತ್ಯದಲ್ಲಿ ಬಿರುಕು ಮೂಡಲೂ ಸಹ ಕಾರಣವಾಗಬಹುದು.

ನಿಮ್ಮ ಸಂಗಾತಿಯನ್ನು ನೀವು ಯಾವ ರೀತಿಯಲ್ಲಿ ಪೋಷಿಸುತ್ತಿದ್ದೀರಿ ಎನ್ನುವುದು ನಿಮ್ಮ ಸಂಬಂಧದಲ್ಲಿ ನಿಮ್ಮ ನಡವಳಿಕೆ ಹೇಗಿದೆ ಎನ್ನುವುದನ್ನು ತೋರಿಸುತ್ತದೆ. ಒಂದು ಸಂಬಂಧದಲ್ಲಿ ಒಬ್ಬರು ಪೋಷಕರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದರೆ ಅವರು ಎಲ್ಲೋ ಒಂದು ಕಡೆ ಇನ್ನೊಬ್ಬರ ಸ್ವಾತಂತ್ರ್ಯವನ್ನು ಕಸಿಯುತ್ತಿದ್ದಾರೆ , ಅವರಿಗೆ ಅವರಿಷ್ಟದಂತೆ ಬದುಕಲು ಅವಕಾಶ ಮಾಡಿಕೊಡುತ್ತಿಲ್ಲ ಎಂಬರ್ಥವನ್ನು ನೀಡುತ್ತದೆ.

ಈ ರೀತಿ ಸಂಗಾತಿಯನ್ನು ಪೋಷಿಸುವುದರಲ್ಲಿ 2 ರೀತಿ ಇರುತ್ತದೆ. ಮೊದಲನೆಯ ರೀತಿಗೆ ಸೇರಿದವರು ತಮ್ಮ ಸಂಗಾತಿಯ ದಿನಚರಿಯಲ್ಲಿ ಬದಲಾವಣೆಗಳನ್ನು ತರಲು ಇಚ್ಛಿಸುತ್ತಾರೆ. ಅವರು ಏನು ಮಾಡಬೇಕು. ಏನು ತಿನ್ನಬೇಕು ಇದೆಲ್ಲದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹೋಗುತ್ತಾರೆ. ಅಂದರೆ ಇಲ್ಲಿ ಒಬ್ಬ ವ್ಯಕ್ತಿಯು ತನ್ನ ಸಂಗಾತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಇನ್ನೊಬ್ಬ ಸಂಗಾತಿಗೆ ಒಂದು ಬೆಂಬಲ ಸಿಕ್ಕಂತೆ ಆಗುತ್ತದೆ. ಇನ್ನೂ ಕೆಲವರಿಗೆ ತಮ್ಮ ಸಂಗಾತಿಯು ತಮಗಿಂತ ಜಾಸ್ತಿ ಪ್ರಬುದ್ಧರಿರಬೇಕು ಎನ್ನುವ ನಿರೀಕ್ಷೆ ಇರುತ್ತದೆ. ಅಂದರೆ ಇವರು ತಮ್ಮ ಸಂಗಾತಿಗೆ ಪ್ರೇರಣೆ ನೀಡುತ್ತಿರುತ್ತಾರೆ. ಇದು ಒಂದು ರೀತಿಯಲ್ಲಿ ಧನಾತ್ಮಕ ಅಂಶಗಳನ್ನು ಹೊಂದಿರುತ್ತದೆ.

ಇನ್ನೊಂದು ರೀತಿಯ ದಾಂಪತ್ಯದಲ್ಲಿ ಸಂಗಾತಿಯು ನಕಾರಾತ್ಮಕ ಗುಣವನ್ನು ಹೊಂದಿರುತ್ತಾರೆ. ಇದು ಅವರ ಸಂಬಂಧದ ಮೇಲೂ ಋಣಾತ್ಮಕ ಪರಿಣಾಮವನ್ನೇ ಉಂಟು ಮಾಡುತ್ತದೆ. ಇಂತಹ ಪೋಷಣೆಯನ್ನು ಸಂಗಾತಿ ಎಂದಿಗೂ ಬಯಸುವುದಿಲ್ಲ. ಇದರಿಂದ ಒಬ್ಬ ವ್ಯಕ್ತಿಗೆ ತನ್ನ ಸಾಮರ್ಥ್ಯದ ಮೇಲೆಯೇ ಅನುಮಾನ ಮೂಡಬಹುದು. ನೀವು ಹೀಗೆಯೇ ಇರಬೇಕು. ಬ್ರ್ಯಾಂಡೆಡ್​ ಬಟ್ಟೆಗಳನ್ನೇ ಧರಿಸಬೇಕು. ಎಲ್ಲಿಗಾದರೂ ಹೊರಗೆ ಹೋಗುವಾಗ ಇವರಿಗೆ ಬೇಕಾದ ರೀತಿಯಲ್ಲಿಯೇ ತಯಾರಾಗಬೇಕು ಈ ರೀತಿಯ ಡಿಮ್ಯಾಂಡ್​ಗಳನ್ನು ಮಾಡುತ್ತಾರೆ. ಇದು ಒಂದು ರೀತಿಯಲ್ಲಿ ಹೇರಿಕೆ ಎನಿಸಲು ಶುರುವಾಗುತ್ತದೆ.

ಯಾವ ವ್ಯಕ್ತಿಯು ತನ್ನ ಸಂಗಾತಿಯ ಗುಣಗಳ ಬಗ್ಗೆ ಹೆಚ್ಚು ಅಸಮಾಧಾನವನ್ನು ಹೊಂದಿರುತ್ತಾನೋ ಆ ವ್ಯಕ್ತಿಯೇ ದಾಂಪತ್ಯದಲ್ಲಿ ಪೋಷಕನ ಪಾತ್ರವನ್ನು ನಿರ್ವಹಿಸಲು ಯತ್ನಿಸುತ್ತಾನೆ. ತನಗೆ ಬೇಕಾದ ರೀತಿಯಲ್ಲಿ ತನ್ನ ಸಂಗಾತಿಯನ್ನು ಬದಲಾಯಿಸಲು ಈತ ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡುತ್ತಾನೆ.

ನಿಮ್ಮ ಸಂಗಾತಿಯು ನಿಮ್ಮ ಪೋಷಕರ ರೀತಿಯಲ್ಲಿ ವರ್ತಿಸಲು ಆರಂಭಿಸಿದ್ದಾರೆ ಎಂದು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಯಾವಾಗ ನಿಮ್ಮ ಸಂಗಾತಿಯು ನೀವು ಯಾವ ರೀತಿಯ ಬಟ್ಟೆಗಳನ್ನು ಧರಿಸುತ್ತೀರಿ ಎಂದು ತನಿಖೆ ನಡೆಸುವುದು ಅಥವಾ ನಿಮ್ಮ ಜೊತೆ ಕಾಲ ಕಳೆಯುತ್ತಿರುವಾಗ ಅವರು ನಿಮ್ಮ ಜೊತೆ ಯಾವ ರೀತಿ ವರ್ತಿಸುತ್ತಿದ್ದಾರೆ ಎಂಬುದರ ಮೇಲೆ ನೀವು ಇದನ್ನು ಅರ್ಥೈಸಿಕೊಳ್ಳಬಹುದಾಗಿದೆ.

ನಿಮ್ಮ ಸಂಗಾತಿಯಲ್ಲಿ ಈ ರೀತಿಯ ಗುಣಗಳು ಇವೆ ಎಂದು ನೀವು ಹೇಗೆ ತಿಳಿದುಕೊಳ್ಳಬಹುದು

  • ಪದೇ ಪದೇ ನಿಮ್ಮ ಕೆಲಸಗಳಿಗೆ ಟೀಕೆ ಮಾಡಿದಾಗ
  • ಎಲ್ಲಾ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳಲು ಆರಂಭಿಸುವುದು
  • ಅಗತ್ಯವಿಲ್ಲದಿದ್ದರೂ ನಿಮಗೆ ಬುದ್ಧಿವಾದ ಹೇಳಲು ಬರುವುದು
  • ನಿಮ್ಮ ವ್ಯಕ್ತಿತ್ವ ಬದಲಾಯಿಸಿಕೊಳ್ಳುವಂತೆ ಒತ್ತಡ ಹೇರುವುದು
  • ನಿಮ್ಮ ಸಂಗಾತಿಯು ನಿಮ್ಮ ಬಳಿ ಬಂದು ಕ್ಷಮೆ ಕೇಳುವವರೆಗೂ ಅವರಿಗೆ ಸೈಲೆಂಟ್​ ಟ್ರೀಟ್​ಮೆಂಟ್​ ನೀಡುವುದು
  • ಇನ್ನೊಬ್ಬರ ಜೊತೆ ನಿಮ್ಮ ಸಂಗಾತಿಯನ್ನು ಹೋಲಿಸುವುದು

ಇದನ್ನೂ ಓದಿ: ವಿವಾಹೇತರ ಸಂಬಂಧಗಳಲ್ಲಿ ಇದ್ಯಂತೆ 8 ವಿಧ: ವಿವಾಹಿತರ ಮನಸ್ಸೇಕೆ ಜಾರುತ್ತೆ, ತಿಳಿದಿರಬೇಕಾದ ವಿಷಯ ಇದು

ದಾಂಪತ್ಯದಲ್ಲಿ ಊಹಿಸಲೂ ಅಸಾಧ್ಯವಾದಂತಹ ನಿರೀಕ್ಷೆಗಳನ್ನು ಹೊಂದಿರುವವರು ಇಂಥಾ ಕೆಲಸಗಳನ್ನು ಮಾಡುತ್ತಾರೆ. ಇಂಥವರಿಗೆ ಅವರ ಸಂಬಂಧದಲ್ಲಿ ತೃಪ್ತಿ ಎನ್ನುವುದೇ ಇರುವುದಿಲ್ಲ. ಈ ರೀತಿ ನೀವು ನಿಮ್ಮ ಸಂಗಾತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೋಗುವುದು ನಿಮ್ಮ ಸಂಬಂಧವನ್ನು ಇನ್ನಷ್ಟು ಹದಗೆಡಿಬಹುದು. ಪ್ರೀತಿಯಿಂದ ಯಾರನ್ನು ಬೇಕಿದ್ದರೂ ಬದಲಾಯಿಸಬಹುದು. ಬಲವಂತದಿಂದ ಅಲ್ಲ ಎಂಬುದು ಗಮನದಲ್ಲಿ ಇರುವುದು ಒಳ್ಳೆಯದು .

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ