logo
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಹೆಂಡತಿಗೆ ನಿಮ್ಮ ಮೇಲೆ ಕೆಂಡದಂಥ ಕೋಪ ಬಂದಿದ್ಯಾ; ಕೂಲ್‌ ಆಗಲು ಈ ಟಿಪ್ಸ್‌ ಪ್ರಯೋಗಿಸಿ

Relationship: ಹೆಂಡತಿಗೆ ನಿಮ್ಮ ಮೇಲೆ ಕೆಂಡದಂಥ ಕೋಪ ಬಂದಿದ್ಯಾ; ಕೂಲ್‌ ಆಗಲು ಈ ಟಿಪ್ಸ್‌ ಪ್ರಯೋಗಿಸಿ

HT Kannada Desk HT Kannada

Dec 06, 2023 09:00 PM IST

google News

ಹೆಂಡತಿಯ ಕೋಪ ಕಡಿಮೆ ಮಾಡಲು ಟಿಪ್ಸ್‌

  • Relationship: ನಿಮ್ಮ ಹೆಂಡತಿ ಕೋಪ ಮಾಡಿಕೊಂಡರೆ ಕೂಲ್‌ ಮಾಡಲು ಆಕೆ ಬಗ್ಗೆ ಒಂದೆರೆಡು ಒಳ್ಳೇ ಮಾತಾಡಿದ್ರೆ ನಿಮ್ಮ ಗಂಟೇನು ಹೋಗುತ್ತೆ? ಒಂದು ವೇಳೆ ಮನೆಗೆ ಯಾರಾದ್ರೂ ಬಂದ್ರೆ ಅವರ ಮುಂದೆ ಆಕೆಯನ್ನು ಹೊಗಳಲು ಮರೀಬೇಡಿ. ಬೆಳಗ್ಗೆ ನಿಮ್ಮವಳು ಮಾಡಿದ ತಿಂಡಿ ಚೆನ್ನಾಗಿತ್ತು ಅಂತಾನೋ, ಚೆನ್ನಾಗಿ ಅಡುಗೆ ಮಾಡ್ತಾಳೆ ಅಂತಾನೋ ಒಂದೆರಡು ಒಳ್ಳೆ ಮಾತಾಡಿ.

ಹೆಂಡತಿಯ ಕೋಪ ಕಡಿಮೆ ಮಾಡಲು ಟಿಪ್ಸ್‌
ಹೆಂಡತಿಯ ಕೋಪ ಕಡಿಮೆ ಮಾಡಲು ಟಿಪ್ಸ್‌ (PC: Unsplash)

Relationship: ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ, ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ. ಕೆಎಸ್‌ ನರಸಿಂಹಸ್ವಾಮಿ ವಿರಚಿತ ಈ ಹಾಡಿನ ಸಾಲುಗಳು ಕೇಳೋಕೆ ಎಷ್ಟು ಚೆಂದ ಅಲ್ವಾ? ಮನೆ ಮಂದಿಯ ಯೋಗಕ್ಷೇಮ ವಿಚಾರಿಸುತ್ತಾ, ತನ್ನ ಕಾಳಜಿ ಮಾಡಿಕೊಳ್ಳುವುದನ್ನೆ ಮರೆಯುವ ನಿಮ್ಮ ಹೆಂಡತಿ ಕೋಪಿಸಿಕೊಳ್ಳೋದು ಎಷ್ಟು ಸರಿ ಹೇಳಿ?

ನಿಮಗಾಗಿ ಇಷ್ಟೆಲ್ಲಾ ತ್ಯಾಗ ಮಾಡುವ ನಿಮ್ಮ ಮನದನ್ನೆ ಕೋಪ ಮಾಡಿಕೊಂಡ್ರೆ ಆಕೆಯ ಮನ ಓಲೈಸಲು ನೀವು ಏನು ಮಾಡಬೇಕು? ನಾವು ಅದಕ್ಕಿಂತ ಎರಡರಷ್ಟು ಕೋಪ ಮಾಡಿಕೊಂಡ್ರೆ ಸರಿ ಆಗ್ತಾಳೆ ಬಿಡಿ, ಅವಳಿಗೆ ತಿನ್ನಲು ಏನಾದ್ರೂ ತಂದುಕೊಟ್ರೆ ತಕ್ಷಣವೇ ಕೋಪ ಕಡಿಮೆಯಾಗುತ್ತೆ, ನಾನೂ ಸೈಲೆಂಟ್‌ ಆಗಿಬಿಡ್ತೀನಿ, ಅಂತ ಮಾತ್ರ ಅಂದ್ಕೊಬೇಡಿ. ಅದರ ಬದಲಿಗೆ ಹೀಗೆ ಮಾಡಿ.

1. ಮನೆಕೆಲಸದಲ್ಲಿ ನಿಮ್ಮ ಸಂಗಾತಿಗೆ ಸಹಾಯ ಮಾಡಿ

ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ನಿಮ್ಮ ಪತ್ನಿ ಏನೆಲ್ಲಾ ಕೆಲಸ ಮಾಡುತ್ತಾರೆ ಅನ್ನೋದು ನಿಮ್ಮ ಗಮನಕ್ಕೆ ಇರಲಿ. ಬೆಳಗ್ಗೆ ತಿಂಡಿ ಮಾಡುವುದು, ಮನೆ ಕ್ಲೀನ್‌ ಮಾಡುವುದು, ಬಟ್ಟೆ ಒಗೆಯುವುದು, ಮಕ್ಕಳನ್ನು ಸ್ಕೂಲ್‌ಗೆ ರೆಡಿ ಮಾಡುವುದು, ಒಂದು ವೇಳೆ ನಿಮ್ಮ ಪತ್ನಿ ಕೂಡಾ ಆಫೀಸಿಗೆ ಹೋಗುವವರಾದರೆ ಎಲ್ಲಾ ಕೆಲಸವನ್ನು ಮುಗಿಸಿ ತಾವು ರೆಡಿ ಆಗುವುದು ನಿಜಕ್ಕೂ ಕಷ್ಟದ ಕೆಲಸ. ಆದ್ದರಿಂದ ನಿಮ್ಮ ಪತ್ನಿಯ ಕೆಲಸಕ್ಕೆ ನೀವೂ ಕೈ ಜೋಡಿಸಿ, ಅಡುಗೆ ಮಾಡುತ್ತಿದ್ರೆ ತರಕಾರಿ ಹೆಚ್ಚಿಕೊಡಿ, ಆಕೆ ಆಫೀಸಿಗೆ ರೆಡಿ ಆಗ್ತಿದ್ರೆ ನೀವು ಮಕ್ಕಳನ್ನು ರೆಡಿ ಮಾಡಿ. ಮಕ್ಕಳಿಗೆ ತಿನ್ನಿಸಿ. ಸಂಜೆ ನೀವು ಆಫೀಸಿನಿಂದ ಮೊದಲು ಮನೆಗೆ ಬಂದರೆ ನಿಮ್ಮ ಕೈಯ್ಯಾರೆ ಆಕೆಯನ್ನು ಪ್ರೀತಿಯಿಂದ ಮಾತನಾಡಿಡಿ ಒಂದು ಕಪ್‌ ಕಾಫಿ/ ಟೀ ಕೊಡಿ. ಹೀಗೆ ಮಾಡಿದರೆ ನಿಮ್ಮ ಹಾಗೂ ಆಕೆ ನಡುವೆ ಮನಸ್ತಾಪ ಮರೆಯಾಗಿ ನಿಮ್ಮ ನಡುವೆ ಮತ್ತಷ್ಟು ಪ್ರೀತಿ ಬೆಳೆಯುತ್ತದೆ.

2. ನಿಮ್ಮ ಪತ್ನಿ ಇಷ್ಟಪಡುವ ವಸ್ತುಗಳನ್ನು ಗಿಫ್ಟ್‌ ನೀಡಿ

ನಿಮ್ಮ ಪತ್ನಿ ಬಹಳ ಇಷ್ಟ ಪಡುವ ವಸ್ತುಗಳನ್ನು ಆಕೆಗೆ ನೀಡಿ ಸರ್‌ಪ್ರೈಸ್‌ ಕೊಡಿ. ಬಹಳ ದಿನಗಳಿಂದ ನಿಮ್ಮ ಪತ್ನಿಗೆ ಏನೂ ಒಂದು ಆಸೆ ಇರುತ್ತದೆ. ಯಾವುದೋ ಸೀರೆಯೋ, ಮೇಕಪ್‌ ವಸ್ತುಗಳು ಅಥವಾ ಅಡುಗೆಮನೆಗೆ ಸಂಬಂಧಿಸಿದ ಯಾವುದೋ ವಸ್ತುವನ್ನು ಕೊಂಡುಕೊಳ್ಳಬೇಕು ಎನಿಸಿರುತ್ತದೆ. ಆದರೆ ಕಾರಣಾಂತರಗಳಿಂದ ಅದನ್ನು ಕೊಂಡು ಕೊಳ್ಳಲು ಆಗುವುದಿಲ್ಲ. ಆ ಆಸೆಯನ್ನು ಖಂಡಿತ ನಿಮ್ಮ ಬಳಿ ಹೇಳಿಕೊಂಡಿರುತ್ತಾರೆ. ನಿಮ್ಮ ಪತ್ನಿ ನಿಮ್ಮ ಮೇಲೆ ಕೋಪಗೊಂಡಾಗ ಆ ಉಡುಗೊರೆಗಳನ್ನು ನೀಡಲು ಬೆಸ್ಟ್‌ ಟೈಮ್.‌ ನೀವು ಆಕೆಯನ್ನು ಎಷ್ಟು ಪ್ರೀತಿಸುತ್ತೀರಿ, ಆಕೆಯ ಭಾವನೆಗಳನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೀರಿ ಎಂಬುದಕ್ಕೆ ಇದು ಸೂಕ್ತ ಸಮಯ.

3. ಮತ್ತೊಬ್ಬರ ಮುಂದೆ ನಿಮ್ಮ ಪತ್ನಿಯನ್ನು ಹೊಗಳಿ

ಹೊಗಳಿಸಿಕೊಳ್ಳೋದು ಅಂದ್ರೆ ಯಾರು ಬೇಡ ಅಂತಾರೆ ಹೇಳಿ? ನಿಮ್ಮ ಹೆಂಡತಿ ಕೋಪ ಮಾಡಿಕೊಂಡರೆ ಕೂಲ್‌ ಮಾಡಲು ಆಕೆ ಬಗ್ಗೆ ಒಂದೆರೆಡು ಒಳ್ಳೇ ಮಾತಾಡಿದ್ರೆ ನಿಮ್ಮ ಗಂಟೇನು ಹೋಗುತ್ತೆ? ಒಂದು ವೇಳೆ ಮನೆಗೆ ಯಾರಾದ್ರೂ ಬಂದ್ರೆ ಅವರ ಮುಂದೆ ಆಕೆಯನ್ನು ಹೊಗಳಲು ಮರೀಬೇಡಿ. ಬೆಳಗ್ಗೆ ನಿಮ್ಮವಳು ಮಾಡಿದ ತಿಂಡಿ ಚೆನ್ನಾಗಿತ್ತು ಅಂತಾನೋ, ಚೆನ್ನಾಗಿ ಅಡುಗೆ ಮಾಡ್ತಾಳೆ ಅಂತಾನೋ ಒಂದೆರಡು ಒಳ್ಳೆ ಮಾತಾಡಿ. ಒಂದು ವೇಳೆ ನಿಮಗೆ ಮಾತನಾಡಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಭಾವನೆಯನ್ನು, ನಿಮ್ಮ ಪ್ರೀತಿಯನ್ನು ಪತ್ರದ ಮುಖಾಂತರ ಆಕೆಗೆ ಬರೆದುಕೊಡಿ. ಅಥವಾ ಕನ್ನಡಿ, ರೆಫ್ರಿಜರೇಟರ್‌, ಕಿಚನ್‌ ಟೈಲ್ಸ್‌ ಮೇಲೆ ಸಣ್ಣ ಚೀಟಿಯಲ್ಲಿ ಸಾರಿ ಎಂದೋ, ಐ ಲವ್‌ ಯೂ ಎಂದೋ ಬರೆದು ಅಂಟಿಸಿ.

4. ಕೆಲಸ ಬದಿಗೊತ್ತಿ ನಿಮ್ಮವಳೊಂದಿಗೆ ಕಾಲ ಕಳೆಯಿರಿ

ಎಷ್ಟೇ ಬ್ಯುಸಿ ಕೆಲಸ ಇದ್ದರೂ ಕುಟುಂಬಕ್ಕಾಗಿ ಸ್ವಲ್ಪ ಸಮಯ ಮೀಸಲಿಡಿ. ನಿಮ್ಮ ಪತ್ನಿ, ನಿಮ್ಮೊಂದಿಗೆ ಸುಂದರ ಕ್ಷಣಗಳನ್ನು ಕಳೆಯಬೇಕೆಂದು ಆಸೆ ಪಟ್ಟರೆ ಅದನ್ನು ಈಡೇರಿಸಿ. ಆಕೆಯನ್ನು ಸಿನಿಮಾ, ಪಾರ್ಕ್‌, ಡಿನ್ನರ್‌ಗೆ ಕರೆದೊಯ್ಯಿರಿ. ಅಥವಾ ಒಂದು ದಿನದ ಟ್ರಿಪ್‌ ಪ್ಲಾನ್‌ ಮಾಡಿ. ಅಥವಾ ನೀವೇ ಆಕೆಯ ಇಷ್ಟದ ಅಡುಗೆ ಮಾಡಿ ಆಕೆಗೆ ಬಡಿಸಿ ಆಕೆಯೊಂದಿಗೆ ಊಟ ಮಾಡುತ್ತಾ ಕಷ್ಟ ಸುಖ ವಿಚಾರಿಸಿ.

ಜೀವನದಲ್ಲಿ ಕಷ್ಟ ಸುಖ ಇದ್ದೇ ಇರುತ್ತದೆ, ಗಂಡ ಹೆಂಡತಿ ಜಗಳ ಉಂಡು ಮಲಗುವತನಕ ಎಂಬ ಮಾತಿದೆ. ಆ ಗಾದೆ ಮಾತು ನಿಮ್ಮ ಗಮನಕ್ಕೆ ಇರಲಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ