logo
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಸಂಗಾತಿ ಆಯ್ಕೆಯಲ್ಲಿ ನೀವು ಎಡವಿದ್ದೀರಿ, ನಿಮ್ಮ ದಾಂಪತ್ಯ ಜೀವನ ಹಾಳಾಗಿದೆ ಎಂಬುದನ್ನು ಸೂಚಿಸುತ್ತೆ ಈ ಲಕ್ಷಣಗಳು

Relationship: ಸಂಗಾತಿ ಆಯ್ಕೆಯಲ್ಲಿ ನೀವು ಎಡವಿದ್ದೀರಿ, ನಿಮ್ಮ ದಾಂಪತ್ಯ ಜೀವನ ಹಾಳಾಗಿದೆ ಎಂಬುದನ್ನು ಸೂಚಿಸುತ್ತೆ ಈ ಲಕ್ಷಣಗಳು

HT Kannada Desk HT Kannada

Feb 22, 2024 08:38 PM IST

google News

ನಿಮ್ಮ ದಾಂಪತ್ಯ ಜೀವನ ಹಾಳಾಗಿದೆ ಎಂಬುದನ್ನು ಸೂಚಿಸುತ್ತೆ ಈ ಲಕ್ಷಣಗಳು

  • Relationship: ಮದುವೆಯ ಬಂಧವನ್ನು ಸಿಹಿಯಾಗಿ ಇರಿಸುವುದು ಅಥವಾ ಅದನ್ನು ಹಾಳು ಮಾಡಿಕೊಳ್ಳುವುದು ಎರಡೂ ಪತಿ - ಪತ್ನಿಯ ಕೈಯಲ್ಲೇ ಇರುತ್ತದೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ನೀವು ಎಡವಿದ್ದೀರೇ ಅಥವಾ ಯಶಸ್ವಿಯಾಗಿದ್ದೀರೇ ಎಂಬುದನ್ನು ತಿಳಿಸುತ್ತದೆ ಈ ಗುಣಗಳು.

ನಿಮ್ಮ ದಾಂಪತ್ಯ ಜೀವನ ಹಾಳಾಗಿದೆ ಎಂಬುದನ್ನು ಸೂಚಿಸುತ್ತೆ ಈ ಲಕ್ಷಣಗಳು
ನಿಮ್ಮ ದಾಂಪತ್ಯ ಜೀವನ ಹಾಳಾಗಿದೆ ಎಂಬುದನ್ನು ಸೂಚಿಸುತ್ತೆ ಈ ಲಕ್ಷಣಗಳು (PC: Unsplash)

Relationship: ಎಲ್ಲಾ ಸಂಬಂಧಗಳು ಹೊಸತರಲ್ಲಿ ಚೆನ್ನಾಗಿಯೇ ಇರುತ್ತದೆ. ಆದರೆ ಕಾಲ ಕಳೆದಂತೆ ಸಂಬಂಧಗಳು ಬೇರೆಯ ದಾರಿಯನ್ನೇ ಪಡೆದುಕೊಳ್ಳುತ್ತದೆ. ನಮ್ಮ ಸಂಬಂಧ ಹಳಸಿದೆ ಎಂಬುದು ಅರಿವಿಗೆ ಬಾರದಷ್ಟು ನಾವು ನಮ್ಮ ಜವಾಬ್ದಾರಿಗಳಲ್ಲಿ ಎಷ್ಟು ತಲ್ಲೀನರಾಗಿಬಿಡುತ್ತೇವೆ ಎಂದರೆ ಈ ಸಂಬಂಧವನ್ನು ಸುಧಾರಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂಬುದೂ ಸಹ ನಮ್ಮ ಗಮನಕ್ಕೆ ಬರುವುದಿಲ್ಲ.

ನಿಮ್ಮ ದಾಂಪತ್ಯ ಜೀವನವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂಬುದು ನಿಮಗೆ ತಿಳಿಯುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. ನಿಮ್ಮ ದಾಂಪತ್ಯದಲ್ಲಿ ಇಲ್ಲಿ ಹೇಳಲಾದ ಯಾವ ಲಕ್ಷಣಗಳಾದರೂ ಇದ್ದಲ್ಲಿ ಖಂಡಿತ ನೀವು ಬುದ್ಧಿವಂತಿಕೆಯ ನಡೆ ತೆಗೆದುಕೊಳ್ಳುವ ಸಮಯ ಬಂದಿದೆ ಎಂದೇ ಅರ್ಥ.

ನೀವು ಯಾವಾಗಲೂ ದುಃಖದಲ್ಲಿ ಇರುವುದು : ಜೀವನದಲ್ಲಿ ಸಂತೋಷವಾಗಿ ಇರಬೇಕು ಎನ್ನವುದು ಎಲ್ಲರ ಬಯಕೆ. ಆದರೆ ನೀವು ಮದುವೆಯಾದ ಬಳಿಕ ಸಂತೋಷಕ್ಕಿಂತ ಜಾಸ್ತಿ ದುಃಖದಲ್ಲೇ ಇದ್ದೀರಿ ಎಂದರೆ ನಿಮ್ಮ ದಾಂಪತ್ಯ ಸರಿಯಿಲ್ಲ ಎಂದೇ ಅರ್ಥ. ಮೊದ ಮೊದಲು ಸಿಹಿ ಕನಸಿನಂತಿದ್ದ ದಾಂಪತ್ಯ ಜೀವನವು ಈಗ ದುಸ್ವಪ್ನದಂತೆ ಕಾಡುತ್ತಿದೆ ಎಂದರೆ ಈ ಸಮಸ್ಯೆಗೆ ನೀವು ಪರಿಹಾರ ಕಂಡುಕೊಳ್ಳುವುದು ಅನಿವಾರ್ಯ.

ಪದೇ ಪದೇ ಜಗಳ, ಮನಸ್ತಾಪ: ಪ್ರತಿಯೊಂದು ವಿಚಾರಕ್ಕೂ ನಿಮ್ಮ ಸಂಗಾತಿ ನಿಮ್ಮೊಂದಿಗೆ ವಾದಕ್ಕೆ ಇಳಿಯುತ್ತಿದ್ದಾರೆಯೇ..? ನಿಮ್ಮ ಸಂಬಂಧದಲ್ಲಿ ಮನಸ್ತಾಪ ಒಂದನ್ನು ಬಿಟ್ಟು ಇನ್ಯಾವುದಕ್ಕೂ ಜಾಗ ಇಲ್ಲವೇ..? ಹಾಗಾದರೆ ನಿಮ್ಮ ಸಂಬಂಧ ಹಳಸುತ್ತಿದೆ ಎಂದು ಹೇಳಲು ಇದಕ್ಕಿಂತ ಇನ್ನೊಂದು ಸಾಕ್ಷ್ಯ ಬೇಕಿಲ್ಲ.

ಆದ್ಯತೆಗಳಲ್ಲಿ ವ್ಯತ್ಯಾಸ : ಇಬ್ಬರು ಜೊತೆಯಾಗಿ ಜೀವನ ನಡೆಸುವಾಗ ಇಬ್ಬರ ಆದ್ಯತೆಗಳು ಒಂದಾಗಿದ್ದರೆ ಮಾತ್ರ ಸಂಸಾರದ ಬಂಡಿ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯವಿದೆ. ವ್ಯಯಕ್ತಿಕ ಜೀವನ, ವೃತ್ತಿ ಜೀವನ, ಭವಿಷ್ಯದ ಹೂಡಿಕೆಗಳು ಈ ಯಾವುದೇ ವಿಚಾರದಲ್ಲಿಯೂ ನಿಮಗೂ ಹಾಗೂ ನಿಮ್ಮ ಸಂಗಾತಿಗೂ ತಾಳ ಮೇಳ ಕೂಡುತ್ತಿಲ್ಲವೆಂದರೆ ನಿಮ್ಮ ಸಂಬಂಧದಲ್ಲಿ ಏನೋ ದೋಷವಿದೆ ಎಂದೇ ಅರ್ಥ.

ಪ್ರಾಮಾಣಿಕತೆ ಇಲ್ಲದಿರುವುದು: ಪ್ರಾಮಾಣಿಕತೆ ಎನ್ನುವುದು ಮದುವೆ ಎಂಬ ಸಂಬಂಧದ ಪ್ರಪ್ರಥಮ ತಳಹದಿ. ಪತಿ - ಪತ್ನಿ ನಡುವೆ ಪ್ರತಿಯೊಂದು ವಿಚಾರದಲ್ಲಿಯೂ ಪಾರದರ್ಶಕತೆ ಇರಬೇಕು. ಆದರೆ ನೀವು ಪ್ರತಿಯೊಂದು ವಿಚಾರದಲ್ಲೂ ನಿಮ್ಮ ಸಂಗಾತಿಗೆ ಸುಳ್ಳು ಹೇಳುತ್ತಿದ್ದೀರಿ, ಪ್ರತಿಯೊಂದು ವಿಚಾರವನ್ನೂ ಅವರಿಂದ ಮುಚ್ಚಿಡುವ ಪ್ರಯತ್ನದಲ್ಲಿದ್ದೀರಿ ಎಂದರೆ ನಿಮ್ಮ ದಾಂಪತ್ಯದ ಬುಡವೇ ಅಲುಗಾಡುತ್ತಿದೆ ಎಂದುಕೊಳ್ಳಬಹುದು.

ಇಬ್ಬರ ನಡುವೆ ಮಾತನಾಡಲು ವಿಷಯಗಳೇ ಇಲ್ಲದಿರುವುದು: ದಾಂಪತ್ಯ ಜೀವನದಲ್ಲಿ ಸಂವಹನ ತುಂಬಾನೇ ಮುಖ್ಯ. ಆದರೆ ಮದುವೆಯಾದ ಕೆಲವು ವರ್ಷಗಳ ಬಳಿಕ ಪತಿ - ಪತ್ನಿ ಮಾನಸಿಕವಾಗಿ ಎಷ್ಟು ದೂರಾಗಿ ಬಿಡುತ್ತಾರೆ ಎಂದರೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಸಹ ಇವರಿಬ್ಬರ ನಡುವೆ ಮಾತನಾಡಲು ವಿಷಯವೇ ಇಲ್ಲ ಎನಿಸತೊಡಗುತ್ತದೆ. ಒಂದು ಹೆಜ್ಜೆ ಹಿಂದೆ ಸರಿದು ನಿಮ್ಮ ದಾಂಪತ್ಯವನ್ನು ಸರಿಮಾಡಿಕೊಳ್ಳಬೇಕು ಎನ್ನುವುದಕ್ಕೆ ಇದೂ ಕೂಡ ಒಂದು ಚಿಹ್ನೆಯಾಗಿದೆ.

ಏಕಾಂಗಿ ಭಾವ : ಏಕಾಂಗಿತನವನ್ನು ಹೋಗಲಾಡಿಸಲೆಂದೇ ಮದುವೆಯಾಗುತ್ತೇವೆ. ಆದರೆ ಸಂಗಾತಿಯೊಂದಿಗೆ ಇರುವುದಕ್ಕಿಂತ ಏಕಾಂಗಿ ಭಾವವೇ ಹೆಚ್ಚು ಹಿತ ನೀಡಲು ಆರಂಭಿಸಿದೆ ಎಂದರೆ ನಿಮ್ಮ ಮದುವೆಯ ಬಂಧವನ್ನು ಮುಂದುವರಿಸುವ ಬಗ್ಗೆ ನೀವು ಇನ್ನೊಮ್ಮೆ ಯೋಚಿಸುವುದು ಉತ್ತಮ .

ಮತ್ತೊಬ್ಬರ ಮೇಲೆ ಒಲವು : ನಿಮ್ಮ ಸಂಬಂಧ ಸಂಪೂರ್ಣ ಹಾಳಾಗಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಇನ್ನೊಂದಿಲ್ಲ. ಸಂಗಾತಿ ಇದ್ದಾಗಲೂ ನಿಮಗೆ ಮತ್ತೊಬ್ಬರ ಮೇಲೆ ಪ್ರೇಮಾಂಕುರವಾಗಿದೆ. ಮನೆಯ ಹೊರಗೆ ಇನ್ನೊಂದು ಸಂಬಂಧ ಬೆಳೆಸಿದ್ದೀರಿ ಎಂದರೆ ಇದಕ್ಕಿಂತ ನಿಮ್ಮ ದಾಂಪತ್ಯ ಹಾಳಾಗಿದೆ ಎಂದು ಹೇಳಲು ಇನ್ನೊಂದು ಕಾರಣ ಬೇಕಿಲ್ಲ.

ಮದುವೆಯ ಮೊದಲ ವರ್ಷದಲ್ಲಿ ಇರುವ ಪ್ರೀತಿ, ಆಕರ್ಷಣೆ 10-20 ವರ್ಷ ಕಳೆದ ಮೇಲೆ ಕಡಿಮೆಯಾಗುತ್ತದೆ. ಹಾಗಂತ ಒಬ್ಬರ ಮುಖ ನೋಡಲು ಇನ್ನೊಬ್ಬರಿಗೆ ಆಗದಷ್ಟು ದೂರಾಗುವುದು ಸಹ ಒಳ್ಳೆಯದಲ್ಲ. ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಪ್ರಾಮಾಣಿಕತನವನ್ನು ಉಳಿಸಿಕೊಂಡರೆ ಖಂಡಿತವಾಗಿಯೂ ಮದುವೆಯಾಗಿ ಹಲವು ವರ್ಷ ಕಳೆದರೂ ನೀವು ಹೊಸ ಜೋಡಿಯಂತೆ ಬದುಕಿ ಬಾಳಲು ಸಾಧ್ಯವಿದೆ. ಪ್ರತಿ ಮನಸ್ತಾಪಗಳ ಬಳಿಕ ಅದನ್ನು ಮುಂದುವರಿಸುವುದನ್ನು ಬಿಟ್ಟು ಅದನ್ನು ಪರಿಹಾರ ಮಾಡುವ ಕಡೆಗೆ ಇಬ್ಬರೂ ಗಮನ ನೀಡಿದರೆ ನಿಮ್ಮ ದಾಂಪತ್ಯ ಸವಿ ಜೇನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ