logo
ಕನ್ನಡ ಸುದ್ದಿ  /  ಜೀವನಶೈಲಿ  /  ಮನದ ಮಾತು: ಹುಡುಗಿಗೆ ನಿಜ ಹೇಳ್ಲಾ? ನಂಗೆ ಡಯಾಬಿಟಿಸ್ ಅಂತ ಮದ್ವೆ ಸೆಟ್ ಆದ್ಮೇಲೆ ಗೊತ್ತಾಯ್ತು

ಮನದ ಮಾತು: ಹುಡುಗಿಗೆ ನಿಜ ಹೇಳ್ಲಾ? ನಂಗೆ ಡಯಾಬಿಟಿಸ್ ಅಂತ ಮದ್ವೆ ಸೆಟ್ ಆದ್ಮೇಲೆ ಗೊತ್ತಾಯ್ತು

HT Kannada Desk HT Kannada

Aug 19, 2023 06:06 AM IST

google News

ಭವ್ಯಾ ವಿಶ್ವನಾಥ್, ಆಪ್ತಸಮಾಲೋಚಕಿ

    • Pre Marriage Counseling: ಮದುವೆಯಾಗುವ ಹುಡುಗಿಗೆ ನಿಜ ಹೇಳುವುದು ಒಳ್ಳೆಯದಾ? ನಿಜ ಮುಚ್ಚಿಟ್ಟು ಮದುವೆಯಾಗುವುದು ಒಳ್ಳೆಯದಾ? ಅಕಸ್ಮಾತ್ ನಿಜ ಹೇಳಿ ಮದುವೆ ಕ್ಯಾನ್ಸಲ್ ಆಗಿಬಿಟ್ರೆ? ಹರೆಯದ ಯುವಕರನ್ನು ಕಾಡುವ ಇಂತ ಹಲವು ಪ್ರಶ್ನೆಗಳಿಗೆ ಈ ಸಂಚಿಕೆಯಲ್ಲಿ ಉತ್ತರಿಸಿದ್ದಾರೆ ಮನಃಶಾಸ್ತಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್.
ಭವ್ಯಾ ವಿಶ್ವನಾಥ್, ಆಪ್ತಸಮಾಲೋಚಕಿ
ಭವ್ಯಾ ವಿಶ್ವನಾಥ್, ಆಪ್ತಸಮಾಲೋಚಕಿ

ಪ್ರಶ್ನೆ: ನನಗೆ ಈಗ ಮೂವತ್ತೊಂದು ವರ್ಷ. ಆರು ತಿಂಗಳ ಹಿಂದೆ ಡಯಾಬಿಟೀಸ್ (ಸಕ್ಕರೆ ಕಾಯಿಲೆ) ಇದೆ ಅಂತ ಗೊತ್ತಾಯಿತು. ನನಗೆ ಇನ್ನೂ ಮದುವೆಯಾಗಿಲ್ಲ. ಈ ವಿಷಯವನ್ನು ಮದುವೆ ಆಗುವಂಥ ಹುಡುಗಿಗೆ ಹೇಗೆ ಹೇಳಲಿ? ಡಯಾಬಿಟಿಸ್‌ನಿಂದ ಕಣ್ಣು, ಕಿಡ್ನಿ, ಲೈಂಗಿಕ ಬದುಕು ಎಲ್ಲದರ ಮೇಲೂ ಪ್ರಭಾವ ಆಗುತ್ತದೆ ಅಂತ ಇಂಟರ್‌ನೆಟ್‌ನಲ್ಲಿ ಓದಿದೆ. ಮದುವೆ ಆಗುವುದೇ ಬೇಡ ಅಂತ ಅನ್ನಿಸಿತು. ಒಂದು ತಿಂಗಳಿಂದ ಈಚೆಗೆ ನನ್ನ ಕೆಲಸವನ್ನೂ ಗಮನವಿಟ್ಟು ಮಾಡುವುದಕ್ಕೆ ಆಗುತ್ತಿಲ್ಲ. ಇದಕ್ಕೆ ಪರಿಹಾರ ತಿಳಿಸಿ. -ವೆಂಕಟೇಶ, ಹೊಸಕೆರೆಹಳ್ಳಿ

ಉತ್ತರ: ನಿಮ್ಮ ಜೀವನ ಶೈಲಿ, ಆಹಾರ ಪದ್ಧತಿ , ವ್ಯಾಯಾಮ ಸೇರಿದಂತೆ ನಿತ್ಯದ ಬದುಕನ್ನು ಶಿಸ್ತುಬದ್ದವಾಗಿ ಪಾಲಿಸಿಕೊಂಡು ಹೋದರೆ ಖಂಡಿತವಾಗಿಯೂ ನೀವು ನಿಮ್ಮ ಕಾಯಿಲೆಯನ್ನು (ಡಯಾಬಿಟೀಸ್) ನಿಯಂತ್ರಣದಲ್ಲಿ ಇರಿಸಿಕೊಳ್ಳಬಲ್ಲಿರಿ. ಆರೋಗ್ಯವನ್ನೂ ಕಾಪಾಡಿಕೊಳ್ಳುವಿರಿ. ವಿಜ್ಞಾನ ಇತ್ತೀಚೆಗೆ ಬಹಳ ಮುಂದುವರೆದಿದೆ. ಡಯಾಬಿಟಿಸ್ ರಿವರ್ಸ್ ಮಾಡಿಕೊಳ್ಳುವ ಟೆಕ್ನಿಕ್‌ಗಳು ಸಹ ಲಭ್ಯವಿದೆ. ಹಲವಾರು ಚಿಕಿತ್ಸಾಕ್ರಮಗಳಿಂದ ಹಾಗೂ ಔಷಧಗಳಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡರೆ ಡಯಾಬಿಟಿಸ್‌ನ ದುಷ್ಪರಿಣಾಮಗಳನ್ನು ತಡೆಯಬಹುದು. ಬೇರೆ ಕಾಯಿಲೆಗಳೂ ಸಹ ಬರದಂತೆ ನೋಡಿಕೊಳ್ಳಬಹುದು. ಕಾಯಿಲೆಯ ಬಗ್ಗೆಯೇ ತಲೆಕೆಡಿಸಿಕೊಂಡು, ಅತಿಯಾಗಿ ಚಿಂತೆ ಮಾಡಿ ಹೆಚ್ಚಿನ ಮಾಹಿತಿಗಾಗಿ ಮತ್ತು ಪರಿಹಾರಕ್ಕೆ ಸಮಯ ಸಿಕ್ಕಿದಾಗಲೆಲ್ಲಾ ಇಂಟರ್ನೆಟ್ ಹುಡುಕುತ್ತಾ ಹೋದರೆ, ನಿಮಗೆ ಅದರಿಂದ ಯಾವ ಲಾಭವೂ ಆಗುವುದಿಲ್ಲ. ಮುಂದೇನು ಮಾಡಬೇಕೆಂದು ಸರಿಯಾದ ಮಾರ್ಗದರ್ಶನ ದೊರೆಯುವ ಬದಲಿಗೆ ಇನಷ್ಟು ಗೊಂದಲ ಮತ್ತು ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಆರೋಗ್ಯವೂ ಮತ್ತಷ್ಟು ಕೆಡುತ್ತದೆ. ಮನಸ್ಸು ಭಾರವಾದಷ್ಟು ದೇಹವೂ ಬಳಲುತ್ತದೆ. ಮನಸ್ಸು ಹಗುರಾದಷ್ಟು , ದೇಹವೂ ಸಹ ಆರೋಗ್ಯದಿಂದಿರುತ್ತದೆ.

ಸಕ್ಕರೆ ಕಾಯಿಲೆ ಇರುವವರು ಮದುವೆಯನ್ನೇ ಆಗಬಾರದು ಎಂದೇನೂ ಇಲ್ಲ. ಒಂದು ಪಕ್ಷ ವಿವಾಹವಾದ ಮೇಲೆ ಗೊತ್ತಾಗಿದ್ದರೆ ಏನು ಮಾಡುತ್ತಿದ್ದೀರಿ? ಅಥವಾ ನಿಮ್ಮ ಸಂಗಾತಿಗೆ ಭವಿಷ್ಯದಲ್ಲಿ ಡಯಾಬಿಟಿಸ್ ಬಂದರೆ ನೀವೇನು ಮಾಡುತ್ತೀರಿ? ನಿಮ್ಮ ಬಂಧು ಬಳಗದಲ್ಲಿ, ಸ್ನೇಹಿತರಲ್ಲಿ, ವಿವಾಹಿತ ಗಂಡಸರು, ಮಹಿಳೆಯರು ಕಾಯಿಲೆ ಬಂದಮೇಲೆ ಹೇಗೆ ನಿಭಾಯಿಸುತಿದ್ದಾರೆ ಎಂದು ಕೇಳಿ ತಿಳಿದುಕೊಳ್ಳಿ. ಅಗತ್ಯ ಮಾರ್ಗದರ್ಶನ ಸಿಗುತ್ತದೆ. ನಿಮಗೆ ಧೈರ್ಯವೂ ಬರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ವೈದ್ಯರ ಬಳಿ ನಿಮ್ಮನ್ನು ಕಾಡುತ್ತಿರುವ ಆತಂಕದ ಬಗ್ಗೆ ಮುಕ್ತವಾಗಿ ಮಾತನಾಡಿ, ಸಲಹೆ ತೆಗೆದುಕೊಳ್ಳಿ. ನಿಮ್ಮ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಸ್ಪಷ್ಟತೆ ಸಿಗುತ್ತದೆ.

ನಿಮಗೆ ಮದುವೆ ಗೊತ್ತಾಗಿರುವ ಹುಡುಗಿಯ ಬಳಿ ಮುಕ್ತವಾಗಿ ಮಾತನಾಡಿದರೆ ಒಳ್ಳೆಯದು. ಡಯಾಬಿಟಿಸ್ ಬಂದಿರುವ ಹಿಂದೆ ನಿಮ್ಮ ಕೈವಾಡವಿಲ್ಲ, ನಿಮ್ಮ ತಪ್ಪು ಸಹ ಇಲ್ಲ. ಇದು ಯಾರಿಗಾದರೂ ಯಾವಾಗಬೇಕಾದರೂ ಬರಬಹುದು. ಆದ್ದರಿಂದ ನಿಮಗೆ ಸಂಕೋಚವಾಗಲಿ ಅಥವಾ ತಪ್ಪಿತಸ್ಥ ಭಾವನೆಯಾಗಲಿ ಬೇಡ. ಬಾಳ ಸಂಗಾತಿಯಾದವರು ಪರಸ್ಪರ ಸುಖವನ್ನು ಮಾತ್ರವಲ್ಲ, ದುಃಖವನ್ನೂ ಹಂಚಿಕೊಳ್ಳಬೇಕು. ಪರಸ್ಪರ ಅರ್ಥ ಮಾಡಿಕೊಂಡು ಬೆಂಬಲವನ್ನು ಕೊಟ್ಟು ಪ್ರೀತಿಯಿಂದ ಬಾಳಬೇಕು. ಇಂಥ ನಂಬಿಕೆಯುಳ್ಳ ಹುಡುಗಿಯರು ಸಮಾಜದಲ್ಲಿ ಇದ್ದಾರೆ. ಅದೇ ರೀತಿ ಕೆಲವರು ಇದೇ ವಿಚಾರವನ್ನು ದೊಡ್ಡದು ಮಾಡಿ ನಿರಾಕರಿಸಲೂಬಹುದು. ನೀವು ಪ್ರಾಮಾಣಿಕವಾಗಿ ಆಶಾದಾಯಕ ಪ್ರಯತ್ನ ಮುಂದುವರೆಸಿ. ನಿಮ್ಮನ್ನು ಗೌರವಿಸಿ, ನಿಮ್ಮ ಪರಿಸ್ಥಿತಿಯನ್ನು ಒಪ್ಪಿಕೊಂಡು ವಿವಾಹವಾಗುವ ಬಾಳ ಸಂಗಾತಿ ಆದಷ್ಟು ಬೇಗ ಸಿಗಲೆಂದು ಹಾರೈಸುವೆ.

---

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ