ಹೆಣ್ಣುಮಕ್ಕಳ ಕಣ್ಣು ನೋಡಿ ಮಾತನಾಡಲು ಭಯವಾಗುತ್ತೆ, ನನಗೇನಾಗಿದೆ? ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ? -ಮನದ ಮಾತು
Sep 20, 2023 06:00 AM IST
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್
- Relationship Tips: 19ರ ಹರೆಯದ ಹುಡುಗನೊಬ್ಬ ಕೇಳಿರುವ ಸಹಜ ಪ್ರಶ್ನೆಯಿದು. ಅವನಿಗೆ ಹುಡುಗಿಯರೊಂದಿಗೆ ಮಾತನಾಡಲು ಭಯ, ಹಿಂಜರಿಕೆ. ಅದನ್ನು ಮೀರಿ ಆತ್ಮವಿಶ್ವಾಸ ರೂಢಿಸಿಕೊಳ್ಳುವುದು ಹೇಗೆ ಎಂದು ಈ ಬಾರಿಯ 'ಮನದ ಮಾತು' ಅಂಕಣದಲ್ಲಿ ವಿವರಿಸಿದ್ದಾರೆ ಆಪ್ತಸಮಾಲೋಚಕಿ ಮತ್ತು ಮನಃಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್.
ಪ್ರಶ್ನೆ: ನಮಸ್ತೆ, ನಾನು ಹತ್ತೊಂಬತ್ತು ವರ್ಷದ ಯುವಕ. ಹೆಣ್ಣುಮಕ್ಕಳ ಜತೆಗೆ ಮಾತನಾಡುವುದಕ್ಕೆ ಬಹಳ ಕಷ್ಟ ಆಗುತ್ತದೆ. ಮಾತನಾಡಲು ಆರಂಭಿಸುತ್ತಿದ್ದ ಹಾಗೆ ಎದೆಬಡಿತ ಜಾಸ್ತಿ ಆಗುತ್ತದೆ. ನನ್ನ ದೃಷ್ಟಿಯನ್ನು ಅವರು ತಪ್ಪಾಗಿ ತಿಳಿದುಕೊಂಡು ಬಿಡ್ತಾರಾ ಅನ್ನೋ ಭಯ ಶುರು ಆಗುತ್ತದೆ. ಆದ್ದರಿಂದ ಕಾಲೇಜು ಮುಗಿಸಿ ಮನೆಗೆ ಹೋದ ನಂತರ ಹೊರಗೆ ಬರುವುದೇ ಇಲ್ಲ. ಸಂಬಂಧಿಕರ ಮನೆಯ ಕಾರ್ಯಕ್ರಮಗಳಿಗೆ ಸಹ ಹೋಗುವುದಿಲ್ಲ. ಹೆಣ್ಣುಮಕ್ಕಳೊಂದಿಗೆ ಬೆರೆಯಲು ವಿಪರೀತ ಹಿಂಜರಿಕೆ ಇದೆ. ನನ್ನ ಈ ಸಮಸ್ಯೆಗೆ ದಯವಿಟ್ಟು ಪರಿಹಾರ ತಿಳಿಸಿ. - ಲಕ್ಷ್ಮಣ, ಅತ್ತಿಬೆಲೆ
ಉತ್ತರ: ಲಕ್ಷ್ಮಣ ಅವರೇ, ನಮಸ್ಕಾರ. ನಿಮ್ಮ ಮನಸ್ಸಿನಲ್ಲಿ ಏನೋ ನಡೆಯುತ್ತಿದೆ ಎನ್ನುವುದನ್ನು ಗುರುತಿಸಿಕೊಂಡು ಪ್ರಶ್ನೆ ಕೇಳಿದ್ದೀರಿ. ಅದಕ್ಕಾಗಿ ನಿಮಗೆ ಅಭಿನಂದನೆಗಳು. ನಿಮ್ಮ ಪ್ರಶ್ನೆಗೆ ಈ ಬರಹದಲ್ಲಿ ಉತ್ತರ ಕೊಡುತ್ತಿದ್ದೇನೆ. ಪೂರ್ತಿ ಬರಹ ಓದಿ.
19ನೇ ವರ್ಷ ಎನ್ನುವುದು 'ಹದಿಹರೆಯ' ಅಂದರೆ 'ಟೀನೇಜ್'ನ ಪ್ರಮುಖ ಹಂತ. ಈ ವಯಸ್ಸಿನಲ್ಲಿ ದೈಹಿಕವಾಗಿ ಅನೇಕ ಬದಲಾವಣೆಗಳಾಗುವುದರಿಂದ ಮನಃಸ್ಥಿತಿಯೂ ಕೂಡ ಬದಲಾಗುತ್ತಿರುತ್ತದೆ. ಕೆಲವರಿಗೆ ಮೊದಲಿನ ತರಹ ಜನಗಳ ಹತ್ತಿರ ಮಾತನಾಡುವುದಕ್ಕೆ ಮತ್ತು ಬೆರೆಯುವುದಕ್ಕೆ ಕಷ್ಟವಾಗುತ್ತದೆ. ಇಂತಹ ಸಮಯದಲ್ಲಿ ಮುಜುಗರ, ನಾಚಿಕೆ, ಕಸಿವಿಸಿ ಎನ್ನಿಸಿ ಜನಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ. ಜನಗಳ ಪ್ರತಿಕ್ರಿಯೆ, ಅನಿಸಿಕೆಗಳನ್ನು ಮುಂಚೆಯೇ ಊಹಿಸಿಕೊಳ್ಳುತ್ತಾರೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ. ನನ್ನ ಬಗ್ಗೆಯೇ ಮಾತನಾಡುತ್ತಿದ್ದಾರೆಂದು ಭಾವಿಸಿಕೊಳ್ಳುತ್ತಾರೆ. ಇದರಲ್ಲಿ ಸಹಜ ಅಥವಾ ಅಸಹಜ ಎಂದೆಲ್ಲಾ ನೀವು ನಿಮ್ಮನ್ನು ಯಾರೊಂದಿಗೂ ಹೋಲಿಸಿಕೊಳ್ಳಲು ಹೋಗಬೇಡಿ.
ಕೇವಲ ಹುಡುಗರಿಗೆ ಮಾತ್ರವಲ್ಲ, ಕೆಲ ಹುಡುಗಿಯರೂ ಇಂಥದ್ದೇ ಮುಜುಗರ ಅನುಭವಿಸುತ್ತಾರೆ. ವಿರುದ್ಧ ಲಿಂಗದವರನ್ನು (Opposite Gender) ಎದುರಿಸುವ ವೇಳೆಯಲ್ಲಿ ಬಹಳ ಕಷ್ಟವಾಗುತ್ತದೆ. ಎದೆಬಡಿತ ಹೆಚ್ಚಾಗುವುದು, ಬೆವರುವುದು, ಕೈಕಾಲು ನಡುಗುವುದು ಸಾಮಾನ್ಯ. ಎದುರಿಗಿರುವ ವ್ಯಕ್ತಿಯ ಮುಖ ನೋಡಿ ಮಾತನಾಡಲು ಸಹ ಅಂಜುತ್ತಾರೆ. ಆತಂಕ, ಭಯದಿಂದ ನರಳುತ್ತಾರೆ.
ಮನಃಶಾಸ್ತ್ರದ ದೃಷ್ಟಿಯಿಂದ ಇಂತಹ ಒಂದು ಮನಸ್ಥಿತಿಯನ್ನು ಒಂದು ರೀತಿಯ ಸಾಮಾಜಿಕ ಆತಂಕವೆಂದು (Social Anxiety) ಕರೆಯಬಹುದು. ಸಾಮಾಜಿಕ ಆತಂಕವೆಂದರೆ ನಿಮಗೆ ಸಮಾಜದ ಮೇಲಿರುವ ಭಯ ಮತ್ತು ಆತಂಕ ಎಂದು ಅರ್ಥೈಸಬಹುದು. ನಿಮ್ಮ ಬಗ್ಗೆ ಸಮಾಜದಲ್ಲಿರುವ ಅನಿಸಿಕೆಗಳು ಮತ್ತು ಇತರರು ಕೊಡಬಹುದಾದ ತೀರ್ಪುಗಳನ್ನು ಕಲ್ಪಿಸಿಕೊಂಡು ನೀವು ಆತಂಕ ಅನುಭವಿಸುತ್ತಿದ್ದೀರಿ.
ಇಂಥ ಮನಃಸ್ಥಿತಿ ಇರುವುದರಿಂದಲೇ ವಿರುದ್ಧ ಲಿಂಗಕ್ಕೆ ಸೇರಿದವರನ್ನು ಅಂದರೆ ಹುಡುಗಿಯರನ್ನು ಸಮೀಪಿಸಲು ನಿಮಗೆ ಕಷ್ಟವಾಗಬಹುದು. ಏಕೆಂದರೆ ಅವರು ನಿಮ್ಮ ಅಂದವನ್ನು, ನಿಮ್ಮ ನೋಟವನ್ನು ಟೀಕಿಸಬಹುದು ಎಂದು ಭಯಪಡುತ್ತೀರಿ. ನೀವು ಹೇಗೆ ಕಾಣುತ್ತೀರಿ ಅಥವಾ ವರ್ತಿಸುತ್ತೀರಿ ಎಂಬುದರ ಕುರಿತು ನಿರ್ಣಯಿಸಲ್ಪಡುವ ಭಾವನೆಯು ನಿಮಗೆ ಅತ್ಯಂತ ಭಯಾನಕವಾಗಿರುತ್ತದೆ.
ಇದನ್ನು ಒಂದು ಸಣ್ಣ ಪ್ರಮಾಣದ ಭೀತಿಯೆಂದೆೇ (ಫೋಬಿಯ) ಹೇಳಬಹುದು. ಆದರೆ ನೀವು ಗಟ್ಟಿ ಮನಸ್ಸು ಮಾಡಿದರೆ, ಸ್ವಪ್ರಯತ್ನದಿಂದ ಖಂಡಿತವಾಗಿಯೂ ಇದರಿಂದ ಹೊರಬರಬಹುದು. ನೀವು ಈ ಟಿಪ್ಸ್ ಅನುಸರಿಸಿ.
ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಈ ಅಂಶಗಳನ್ನು ಅನುಸರಿಸಿ
1) ಅಕ್ಕ-ತಂಗಿಯರ ಜೊತೆಗೆ ಮಾತನಾಡಿ: ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುಲು ಪ್ರಯತ್ನ ಬೇಕು. ಸತತ ಅಭ್ಯಾಸ ಮತ್ತು ಪ್ರಯತ್ನಗಳಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಉದಾಹರಣೆಗೆ ಹತ್ತಿರದ ಆತ್ಮೀಯರಾದ ಅಕ್ಕ-ತಂಗಿಯರ ಜೊತೆ ಸಮಯ ಕಳೆಯಿರಿ. ಹೆಣ್ಣುಮಕ್ಕಳ ಜೊತೆ ದಿನಕ್ಕೆ 10 ನಿಮಿಷವಾದರೂ ಸರಿ ಮುಖ ನೋಡಿ ಮಾತನಾಡುವುದಕ್ಕೆ ಪ್ರಯತ್ನಿಸಿ.
2) ಆತ್ಮಗೌರವ ಹೆಚ್ಚಿಸಿಕೊಳ್ಳಿ: ಉದಾಹರಣೆಗೆ ಆಗಾಗ ಕನ್ನಡಿಯಲ್ಲಿ ನೋಡಿಕೊಂಡು ಮಾತನಾಡಿಕೊಳ್ಳಿ. ಸ್ವ-ಪ್ರಶಂಸೆ ಮಾಡಿಕೆೊಳ್ಳುವುದು. ನಿಮ್ಮ ದೇಹದ ಆಕಾರ, ಬಣ್ಣ, ಅಂದ ಚಂದವನ್ನು ಹೇಗಿದೆಯೋ ಹಾಗೆ ಗೌರವದಿಂದ ಒಪ್ಪಿಕೊಳ್ಳಲು ಪ್ರಯತ್ನಿಸಿ.
3) ಆತ್ಮವಿಮರ್ಶೆ, ಆತ್ಮಾವಲೋಕನ: ಬೇರೆಯವರು ನಿಮ್ಮ ಬಗ್ಗೆ ನೀಡಿರುವ ತೀರ್ಪು ಮತ್ತು ಅವರು ಇರಿಸಿಕೊಂಡಿರುವ ಅನಿಸಿಕೆ ನೀವು ಊಹಿಸಿಕೊಂಡಿರುವಂತೆಯೇ ಇದೆಯೇ? ಅದು ಎಷ್ಟರಮಟ್ಟಿಗೆ ನಿಜ? ಒಂದು ವೇಳೆ ಅದು ನಿಜವಾದರೆ ನಿಮಗೆ ಆಗುವ ಪ್ರಯೋಜನವೇನು? ಅಥವಾ ಅದು ಬರೀ ನಿಮ್ಮ ಊಹಾಪೋಹಗಳಿರಬಹುದೇ? ನಿಮ್ಮ ಅನಿಸಿಕೆಗಳಿಗೆ ಕಾರಣವೇನಿರಬಹುದು ? ಬಗೆಹರಿಸಿಕೊಳ್ಳಬಹುದೇ? ಆತ್ಮವಿಶ್ವಾಸದ ಕೊರತೆ ಇದೆಯೇ? ನನ್ನ ದೇಹ, ಸೌಂದರ್ಯದ ಬಗ್ಗೆ ನನಗೆ ಗೌರವ ಇದೇಯೇ? ಇಲ್ಲವೇ? ಹೀಗೆ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಸ್ವಜಾಗೃತಿಯ ಜೊತೆಗೆ ನಿಮ್ಮ ಸಮಸ್ಯೆಗೆ ಪರಿಹಾರವು ಸಿಗುತ್ತದೆ. ಆತ್ಮಗೌರವ ಮತ್ತು ಆತ್ಮವಿಶ್ವಾಸವೂ ಹೆಚ್ಚುತ್ತದೆ.
4) ಸ್ವ ದೂಷಣೆ ಬೇಡ: ನಾನು ಯಾಕೆ ಹೀಗೆ? ನಾನು ಸರಿಯಿಲ್ಲ ಎಂದು ನಿಮ್ಮನ್ನು ನೀವೇ ದೂಷಿಸಿಕೊಳ್ಳಬೇಡಿ. ಇದರ ಬದಲು ನಿಮಗೆ ನೀವು ಸ್ವಲ್ಪ ಸಮಯ ಕೊಟ್ಟುಕೊಳ್ಳಿ. ಆಗುತ್ತಿರುವ ಬದಲಾವಣೆಗಳಿಗೆ ಹೊಂದಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಿ. ಕ್ರಮೇಣ ಸಮಸ್ಯೆ ಬಗೆಹರಿಸುತ್ತದೆ.
5) ಪೋಷಕರು ಮಕ್ಕಳಿಗೆ ಬೆಂಬಲವಾಗಿ ನಿಲ್ಲಬೇಕು: ಹದಿಹರೆಯದ ಈ ಸಮಯದಲ್ಲಿ ಪೋಷಕರ ಪಾತ್ರ ಬಹಳ ಮಹತ್ವವಾದುದು. ಮಕ್ಕಳ ಮಕ್ಕಳ ಈ ಬದಲಾವಣೆಯ ಹಂತದಲ್ಲಿ ಮಾನಸಿಕ ಬೆಂಬಲ ನೀಡಬೇಕು. ಬದಲಾವಣೆಗಳನ್ನು ಅರಿತು, ಗೌರವದಿಂದ ಒಪ್ಪಿಕೊಳ್ಳುವುದಕ್ಕೆ ಸ್ವಲ್ಪ ಸಮಯದ ಮತ್ತು ಮಾನಸಿಕ ಬೆಂಬಲದ ಅವಶ್ಯಕತೆವಿರುತ್ತದೆ. ಮಕ್ಕಳ ಮನಸ್ಸನ್ನು ಪರಿಪೂಣ೯ವಾಗಿ ಅಥ೯ಮಾಡಿಕೊಂಡು, ಯಾವುದೇ ನಕಾರಾತ್ಮತವಾದ ತೀಪು೯ಗಳನ್ನು ಹೇರದೆ, ಆತ್ಮ ವಿಶ್ವಾಸ ಮತ್ತು ಗೌರವ ಮೂಡಿಸಲು ಸಹಾಯ ನೀಡಬೇಕು. ಆಗಿರುವ ಬದಲಾವಣೆಗಳಿಗೆ ಆರೋಗ್ಯಕರವಾಗಿ ಹೊಂದಿಕೊಂಡುವುದಕ್ಕೆ ಉತ್ತೇಜನ ಮತ್ತು ಬೆಂಬಲ ನೀಡಿ. ಸಾಮಾಜಿಕವಾಗಿ ಎಲ್ಲರ ಜೊತೆ ಬೆರೆಯುವುದಕ್ಕೆ ಅವಕಾಶ ಒದಗಿಸಿ ಮತ್ತು ಪ್ರೋತ್ಸಾಹಿಸಿ.
6) ಸಹಾಯ ಪಡೆಯಿರಿ: ನಿಮಗೆ ಇದನ್ನು ವೈಯಕ್ತಿಕವಾಗಿ ನಿರ್ವಹಿಸಲು ಸಾಧ್ಯವಾಗದಿದ್ದರೆ ಆಪ್ತಸಮಾಲೋಚಕರನ್ನು ಸಂಪರ್ಕಿಸಿ, ಮಾರ್ಗದರ್ಶನ ಪಡೆದುಕೊಳ್ಳಿ.
(ರಿಲೇಷನ್‌ಶಿಪ್ ಟಿಪ್ಸ್, ಪೇರೆಂಟಿಂಗ್ ಟಿಪ್ಸ್, ಆರೋಗ್ಯ, ಫ್ಯಾಷನ್ ಕುರಿತ ಮಾಹಿತಿಗೆ kannada.hindustantimes.com ಜಾಲತಾಣಕ್ಕೆ ಭೇಟಿ ನೀಡಿ).
---
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 9945743542.
ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.